Friday 20 March 2015

ಸಿಬಿಐ ಅಂದ್ರೆ ಸಿಎಂಗೆ ಏಕೆ ಚಳಿ?

ದಕ್ಷ ಐಎಸ್ ಅಧಿಕಾರಿ ಡಿ.ಕೆ.ರವಿ ಅವರ ಅನುಮಾನಾಸ್ಪದ ಸಾವಿನ ತನಿಖೆಯನ್ನು ರಾಜ್ಯ ಸರ್ಕಾರ ರಾಜ್ಯದ ಜನತೆಯ ಬೇಡಿಕೆಯಂತೆ ಸಿಬಿಐಗೆ ವಹಿಸಲು ಹಿಂದೇಟು ಹಾಕುತ್ತಿರುವುದು ನೋಡಿದರೆ ಇದರಲ್ಲಿ ದೊಡ್ಡ ಕುಳಗಳ ಕೈವಾಡವಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. 
ವ್ಯವಸ್ಥೆ ವಿರುದ್ಧ ಈಜುವುದರ ಜತೆಗೆ ಶ್ರೀಸಾಮಾನ್ಯನ ಕಣ್ಣೀರು ಒರೆಸಲು ಧೈರ್ಯ ಮಾಡುವ ಪ್ರಾಮಾಣಿಕ ಅಧಿಕಾರಿಗಳೇ ನಿಗೂಢವಾಗಿ ಕೊಲೆಯಾಗುತ್ತಾರೆ ಎಂದರೆ ಈ ಭ್ರಷ್ಟ ವ್ಯವಸ್ಥೆಯನ್ನು ಸರಿಪಡಿಸಲು ಇನ್ಯಾವ ಅಧಿಕಾರಿ ಬೇಕು?
ಸರ್ಕಾರದ ಬೊಕ್ಕಸ ತುಂಬಲು ಹಗಲಿರುಳು ಶ್ರಮಿಸಿದ ಡಿ.ಕೆ.ರವಿಯಂತಹ ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ಇಲ್ಲ ಎಂದರೆ ಏನರ್ಥ? ಭೂಗಳ್ಳರ ವಿರುದ್ಧ ಸಮರವೇ ಸಾರಿದ್ದ ಡಿ.ಕೆ. ರವಿ ಅಧರ್ಯದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆಯೇ? ಹುಲಿ ಎಂದಾದರೂ ಆತ್ಮಹತ್ಯೆ ಮಾಡಿಕೊಂಡಿರುವುದು ಇತಿಹಾಸದಲ್ಲಿದೆಯೇ? ಡಿ.ಕೆ. ರವಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಸುದ್ದಿಯಾದಾಗಲೇ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿತ್ತು. ಆದರೆ ಈ ಪ್ರಕರಣವೂ ಹತ್ತರಲ್ಲಿ ಹನ್ನೊಂದು ಎಂದು ನಿರ್ಲಕ್ಷ್ಯ ವಹಿಸಿತು. 
ಇಷ್ಟೊಂದು ಗಂಭೀರತೆ ಪಡೆದುಕೊಳ್ಳುತ್ತದೆ ಎಂದು ಸ್ವತಃ ಮುಖ್ಯಮಂತ್ರಿಗಳೇ ಕನಸು ಮನಸ್ಸಿನಲ್ಲಿ ಅಂದುಕೊಂಡಿರಲಿಲ್ಲ ಏನೋ? 
ರವಿ ಪ್ರಕರಣವನ್ನು ಇಟ್ಟುಕೊಂಡು ಬಿಜೆಪಿ, ಜೆಡಿಎಸ್ ರಾಜಕಾರಣ ಮಾಡಲು ಹೊರಟಿರಬಹುದು. ಸರ್ಕಾರವನ್ನು ಇಕ್ಕಟ್ಟಿಗೂ ಸಿಲುಕಿಸಬಹುದು. ಆದರೆ ಶ್ರೀಸಾಮಾನ್ಯನಿಗೆ ಯಾವ ರಾಜಕಾರಣವಿದೆ?
ನಾಡಿನ ಒಕ್ಕೊರಲ ಬೇಡಿಕೆಯನ್ನೇ ತಳ್ಳಿ ಹಾಕುವಷ್ಟು ಕಟುಕರಾದರೆ ನೀವು ಯಾರ ಪರವಾಗಿ ಕೆಲಸ ಮಾಡುತ್ತಿದ್ದೀರಿ? ಜನತೆಯ ಹಿತ ಕಾಪಾಡಬೇಕಾದ ಸರ್ಕಾರ ಭೂಗಳ್ಳರ ಪರ ನಿಂತರೆ ಬೇಲಿಯೇ ಎದ್ದು ಹೊಲ ಮೆಯ್ದಂತೆ ಅಲ್ಲವೇ? ಪ್ರಾಮಾಣಿಕ ಅಧಿಕಾರಿಗಳ ಸಾವಿನಲ್ಲೂ ರಾಜಕೀಯ ಬೆರೆಸಿದರೆ ನಾಡಿನ ಜನ ಕ್ಷಮಿಸುತ್ತಾರೆಯೇ? ಜನರ ಬೇಡಿಕೆಯಂತೆ ಈ ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಸರ್ಕಾರ ಕಳೆದುಕೊಳ್ಳುವುದೇನಿದೆ? ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ ಹೊರತು ಸಿದ್ದರಾಮಯ್ಯನವರಿಗಲ್ಲ.

Friday 20 February 2015

ಕಾಂಗ್ರೆಸ್ ದಲಿತರ ಹಿತೈಷಿಯಾಗುವುದು ಯಾವಾಗ?

ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಕೇಳಿಬರುತ್ತಿದ್ದ ಕೂಗು ಬಹಿರಂಗ ವೇದಿಕೆಗೆ ಬಂದಿದೆ. ಇದರಿಂದಾಗಿ ಕಾಂಗ್ರೆಸ್ನಲ್ಲಿ ಮತ್ತೇ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ. ದಲಿತರಿಗೆ ಸಿಎಂ ಸ್ಥಾನ ಸಿಗಬೇಕು ಎಂಬ ವಾದಕ್ಕೆ ದಲಿತ ಸಂಘಟನೆಗಳು ಬಹಿರಂಗವಾಗಿಯೇ ಅಖಾಡಕ್ಕಿದಿವೆ.
ಖರ್ಗೆ ಸೇರಿದಂತೆ ದಲಿತರಲ್ಲಿ ಯಾರಾದರೊಬ್ಬರು ಮುಖ್ಯಮಂತ್ರಿ ಆಗಲಿ ಎಂದು ೨೦ಕ್ಕೂ ಹೆಚ್ಚು ದಲಿತಪರ ಸಂಘಟನೆಗಳು ಸಭೆ ಸೇರುವ ಮೂಲಕ ಕಾಂಗ್ರೆಸ್ ಹೈಕಮಾಂಡ್ಗೆ ಸೆಡ್ಡು ಹೊಡೆದಿವೆ.
ಎಲ್ಲ ಸಂಘಟನೆಗಳು ಒಂದೇ ವೇದಿಕೆಯಡಿ ಬಂದಿರುವುದು ಸ್ವಾಗತಾರ್ಹ ವಿಷಯವಾದರೂ ಕೆಲಸ ಎಂದೋ ಆಗ ಬೇಕಾಗಿತ್ತು. ತಡವಾಗಿಯಾದರೂ ಎಚ್ಚೆತ್ತುಕೊಂಡಿದ್ದಾರೆ ಎನ್ನುವುದೇ ಸಮಾಧಾನದ ಸಂಗತಿ.
೨೦೦೪ ಮತ್ತು ೨೦೦೮ರ ಚುನಾವಣೆಯ ವೇಳೆ ದಲಿತ ನಾಯಕರ ಪರ ಸಂಘಟಿತರಾಗಿ ಧ್ವನಿ ಎತ್ತಿದ್ದರೆ ಎಂದೋ ರಾಜ್ಯದ ಮುಖ್ಯಮಂತ್ರಿ ಆಗಿರುತ್ತಿದ್ದರು. ಆದರೆ ದಲಿತಪರ ಸಂಘಟನೆಗಳೇ ರಾಜಕೀಯ ನಾಯಕರ ಚೇಲಾಗಳಾಗಿದ್ದವು. ಅವರು ಕೊಡುವ ಎಂಜಲಿಗೆ ವಿನಮ್ರರಾಗಿ ಮನೆ ಬಾಗಿಲು ಬಡಿದರು. ಇದರಿಂದ ಸಂಘಟನೆಯ ಮಹತ್ವ ನಾಯಕರ ಬದ್ಧತೆ ಎಷ್ಟು ಎಂಬುದು ಅವರಿಗೆ ಅರ್ಥವಾಗಿ ಹೋಗಿತ್ತು. ಸಂಘಟಿತರಾಗಲು ಸಜ್ಜಾದರೆ ವಿಂಗಡಣೆಗೆ ಸೂತ್ರ ರೂಪಿಸುವ ರಾಜಕಾರಣಿಗಳ ಮುಂದೆ ಸಂಘಟನೆಗಳ ಸಂಘರ್ಷ ಕೆಲಸ ಮಾಡಲಿಲ್ಲ. ಸಂಘಟನೆಗಳನ್ನು ಹೇಗೆ ಬೇಕೋ ಹಾಗೇ ಬಳಸಿಕೊಂಡರು. ದಲಿತ ಸಿಎಂ ಅಂದಾಗ ಮಾತ್ರ ಕುತಂತ್ರದಿಂದ ಸಮುದಾಯಕ್ಕೆ ಸಿಗಬೇಕಾದ ಅವಕಾಶ ತಪ್ಪಿಸಿದರು.

Saturday 22 November 2014

ವೇಶ್ಯಾವೃತ್ತಿಗೆ ಕಾಯ್ದೆಯ ಮುದ್ರೆ...!

ವೇಶ್ಯಾವಾಟಿಕೆಗೆ ಮೂಲ ಕಾರಣನೇ ಪುರುಷನಾದರೂ ಹೆಣ್ಣನ್ನೇ ಮಾತ್ರ ದೂಷಿಸುವುದು ಇಂದು ನಿನ್ನೆಯ ಪ್ರಶ್ನೆಯಲ್ಲ. ಸಂಸ್ಕೃತಿ ಹೆಸರಿನಲ್ಲಿ ಹೆಣ್ಣಿಗೆ ಶೋಷಣೆ ಮಾಡುವುದು ಹಿಂದಿನಿಂದ ನಡೆದು ಬಂದ ಪರಿಪಾಠ ಎಂಬಂತೆ ಮುಂದುವರಿಯುತ್ತಿದೆ.
ಈ ವೇಶ್ಯಾವೃತ್ತಿ ಎಂಬುದೇ ಸಮಾಜಕ್ಕೆ ಅಂಟಿರುವ ಮಹಾಕಳಂಕ. ಇಂತಹ ಕಳಂಕಿತ ವೃತ್ತಿ ನಡೆಸಲು ಕಾನೂನಿನ ಮನ್ನಣೆ ಬೇರೆ ಬೇಕೆ? ಪರಿಸ್ಥಿತಿಯ ಗುಲಾಮರಾಗಿ ಈ ವೃತ್ತಿಗೆ ದೂಡಲ್ಪಟ್ಟ ಅಮಾಯಕರ ಆಸರೆಗಾಗಿ ಮತ್ತು ಅಂತಹ ಹೀನ ವತ್ತಿಯ ವಿಮೋಚನೆಗಾಗಿ ಕಾನೂನು ಬೇಕೇ ಹೊರತು, ಆ ವೃತ್ತಿಯನ್ನೇ ಕಾನೂನುಬದ್ಧಗೊಳಿವುದು ಸರ್ವತಾ ಸರಿಯಾದ ಕ್ರಮವಾಗಲಾರದು. ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ನಿಯಂತ್ರಣಕ್ಕೆ ವೇಶ್ಯಾವೃತ್ತಿಗೆ ಅನುಮತಿ ನೀಡಬೇಕು ಎಂಬುದು ಯಾವ ಪ್ರಜ್ಞಾವಂತ ನಾಗರಿಕನೂ ಒಪ್ಪಲಾರ.
ಅತ್ಯಾಚಾರ ಎಂಬುದು ವಿಕೃತ ಮನಸ್ಥಿತಿಯ ಮನುಷ್ಯನ ಕೃತ್ಯವೇ ಹೊರತು ಲೈಂಗಿಕ ವಾಂಛೆ ಸರ್ವತಾ ಅಲ್ಲ. ವೇಶ್ಯಾವೃತ್ತಿಯೂ ಕೂಡ ಅತ್ಯಾಚಾರವೇ ಆಗಿದೆ. ಹಸಿವು ಬಡತನ, ನೆರೆಹೊರೆಯವರ ಕುಹಕದ ಮಾತಗಳು, ಸಮಾಜದ ನಿರ್ಲಕ್ಷ್ಯಕ್ಕೆ ಒಳಗಾಗಿ ವೇಶ್ಯಾವೃತ್ತಿಗೆ ಇಳಿಯುವ ನಮ್ಮ ಸಹೋದರಿಯರು, ಸಾಮಾನ್ಯರಂತೆ ಉತ್ತಮ ಜೀವನ ನಡೆಸಬೇಕು ಎಂಬ ಆಶಯ ವ್ಯಕ್ತವಾಗಬೇಕೇ ಹೊರತು, ಕಾನೂನುಬದ್ಧ ಮಾಡಿದರೆ ವೇಶ್ಯಯರ ಬದುಕು ಹಸನಾಗುತ್ತದೆ ಎಂದು ಭವಿಷ್ಯ ನುಡಿಯುವುದು ಕಾಲದ ವ್ಯಂಗ್ಯವಲ್ಲದೆ ಮತ್ತೇನಲ್ಲ.
ಕೆಂಪು ದೀಪದ ಪ್ರದೇಶಗಳಲ್ಲಿರುವ ಹೆಣ್ಣು ಮಕ್ಕಳೂ ನಮ್ಮಂತೆ ಬದುಕು ಸಾಗಿಸಬೇಕು ಎಂದು ನಮ್ಮ ಸಾಹಿತಿಗಳು ಅವರಲ್ಲಿ ಆತ್ಮ ವಿಶ್ವಾಸ ತುಂಬುವ ಕೆಲಸ ಮಾಡಬೇಕು. ಆದರೆ, ಅದೇ ವೃತ್ತಿಯಲ್ಲಿ ಮುಂದುವರಿಯಲು ವೃತ್ತಿಯನ್ನೇ ಕಾನೂನುಬದ್ಧಗೊಳಿಸಬೇಕೆ? ಒಂದು ಅಪರಾಧ ತಡೆಯಲು ಇನ್ನೊಂದು ಅಪರಾಧ ಮಾಡಲು ಕಾನೂನು ದಾರಿ ಮಾಡಿಕೊಟ್ಟಂತಾಗುವುದಿಲ್ಲವೇ?
ಇಲ್ಲಿಯೂ ನರಕಯಾತನೆ ಅನುಭವಿಸುವವಳು ಅದೇ ಹೆಣ್ಣೆ ಆಗಿರುತ್ತಾಳೆ ಎಂದರೆ ಪುರುಷ ಪ್ರಧಾನ ವ್ಯವಸ್ಥೆಯ ತಂತ್ರವಲ್ಲದೆ ಮತ್ತೇನು? ಪಾಶ್ಯಾತ್ಯ ರಾಷ್ಟ್ರಗಳಾದ ಯುರೊಪಿನ ಸ್ವಿಟನ್, ನಾರ್ವೆ, ಜರ್ಮನಿಯಲ್ಲಿ ವೇಶ್ಯಾವಾಟಿಕೆ ಕಾನೂನು ಬದ್ಧವಾಗಿದೆ. ಇಂಗ್ಲೆಂಡ್, ನೆದರ್‌ಲ್ಯಾಂಡ್ ಮತ್ತು ಬೆಲ್ಜಿಯಂಗಳಲ್ಲಿ ಕೆಲವು ನಿರ್ಬಂಧಗಳನ್ನು ವಿಧಿಸಿ ವೇಶ್ಯಾವೃತ್ತಿಯನ್ನು ಕಾಯ್ದೆಬದ್ಧಗೊಳಿಸಲಾಗಿದೆ. ಇನ್ನೂ ಏಷ್ಯಾಖಂಡದ ಥೈಲಾಂಡ್ ಮತ್ತು ಜಪಾನದೇಶದಲ್ಲಿ ವೇಶ್ಯಾವಾಟಿಕೆ ಮುಕ್ತವಾಗಿದ್ದರೂ ಹಲವು ಕಟ್ಟಳೆಗಳನ್ನು ವಿಧಿಸಲಾಗಿದೆ. ಆದರೂ ಅತ್ಯಾಚಾರದಂತಹ ಪ್ರಕರಣಗಳು ವರದಿಯಾಗುತ್ತಿರುವುದನ್ನು ಕಾನೂನುಬದ್ಧ ಪರ ಮಾತನಾಡುವವರು ಗಮನಿಸಬೇಕು.
ವೇಶ್ಯಾವೃತ್ತಿಯಲ್ಲಿ ತೊಡಗಿಕೊಂಡಿರುವ ಬಹುಪಾಲು ಜನ ಮಹಿಳೆಯರು ಶೋಷಿತ ಸಮಾಜದಿಂದ ಬಂದವರಾಗಿದ್ದಾರೆಯೇ ವಿನಹ ಉಚ್ಚ ವರ್ಗದವರಲ್ಲ. ಈ ಉಚ್ಚ ವರ್ಗದ ಮಹಿಳೆಯರು ಸ್ವಾಭಿಮಾನ, ಕುಲಗೌರವ ತಮ್ಮತನ ಎಂಬುದು ಎಷ್ಟೇ ಕಷ್ಟ ಬಂದರೂ ಬಿಟ್ಟುಕೊಡಲಾರರು. ಆದರೆ, ಶೋಷಿತ ಮಹಿಳೆಯರು ಸ್ವಾಭಿಮಾನ ಛಲದಂಕಮಲ್ಲರಾದರೂ ಪರಿಸ್ಥಿತಿಯ ಅನಿವಾರ್ಯತೆಗೆ ಸಿಲುಕಿ ಇಂತಹ ಹೀನ ವೃತ್ತಿಗೆ ಇಳಿಯಬೇಕಾಗುತ್ತದೆ.
ಕೆಲವು ಸಂದರ್ಭದಲ್ಲಿ ನಂಬಿಕಸ್ಥರೇ ಇಂತಹ ವೃತ್ತಿಗೆ ದೂಡಿಬಿಡುವುದು ಇದೆ. ಈ ವೃತ್ತಿಯ ನರಕದ ಕೂಪಕ್ಕೆ ಒಂದು ಬಾರಿ ಪ್ರವೇಶವಾದರೆ ಆಯಿತು, ಅವರ ಜೀವನ ಗಾಣದ ಬಾಯಿಗೆ ಕಬ್ಬು ಸಿಕ್ಕು ಸಿಪ್ಪೆಯಾದಂತೆಯೇ? ತುಂಬು ಸಂಸಾರ ನಡೆಸುವ ವ್ಯಕ್ತಿಯೊಬ್ಬ ಅಡ್ಡದಾರಿ ಹಿಡಿದು ಇನ್ನೊಂದು ಹೆಣ್ಣಿನೊಂದಿಗೆ ಸರಸವಾಡಿದರೆ ಅದು ಗಂಡಿಗೆ ಪ್ರತಿಷ್ಠೆ. ಆದರೆ ಹೆಣ್ಣು ಅಪ್ಪಿ ತಪ್ಪಿ ಅಂತಹ ಸಂದಿಗ್ಧ ಸ್ಥಿತಿಯಲ್ಲಿ ಸಿಕ್ಕಿ ಹಾಕೊಂಡರೆ ಮನೆಯಿಂದ ಹೊರಗಡೆ ಹೋಗಬೇಕಾದ ಅನಿವಾರ್ಯತೆ ಸಮಾಜವೇ ಸೃಷ್ಟಿಸಿಬಿಡುತ್ತದೆ.
ಆಧುನಿಕ ಸಮಾಜದಲ್ಲಿಯೂ ಕೂಡ ಉತ್ತರಕರ್ನಾಟಕ ಭಾಗದಲ್ಲಿ‘ಬಸವಿ’ ಬಿಡುವ ಪದ್ಧತಿ ಜೀವಂತವಾಗಿದೆ. ಈ ಪದ್ಧತಿ ವೇಶ್ಯಾವೃತ್ತಿ ಹೊಲುವುದಿಲ್ಲವಾದರೂ ಅಂತರ್ಯವಾಗಿ ಸಮಾಜ ಅವರನ್ನು ನೋಡುವ ದೃಷ್ಟಿ ಒಂದೇಯಾಗಿರುತ್ತದೆ. ವೇಶ್ಯಾವೃತ್ತಿಗೆ ಬರುವವರು ತಮ್ಮತನ ಮತ್ತು ಶೀಲದ ಬಗ್ಗೆ ಯಾವುದೇ ಯೋಚನೆ ಮಾಡುವುದಿಲ್ಲ. ಅವರಿಗೆ ಬೇಕಾಗಿರುವುದು ಬದುಕುವ ಮಾರ್ಗ.
ಹಾಗಾದರೆ ಬದುಕಲು ಈ ವೃತ್ತಿಯೇ ಬೇಕೆ? ವೇಶ್ಯಾವೃತ್ತಿಯಲ್ಲಿ ತೊಡಗಿಕೊಂಡರೆ ಜೀವನವೇ ನಿಕೃಷ್ಟವಾಗುತ್ತದೆ ಎಂದ ಮೇಲೆ ಸೂಳೆಯಾಗಿ ಸುಖಪಡುವುದೇನಿದೆ. ಕಾಯ್ದೆಯ ನೀತಿ, ನಿಯಮ, ಚೌಕಟ್ಟು ಎಲ್ಲವನ್ನು ಬದಿಗೆ ಸರಿಸಿ ಮೊದಲೆ ಹೇಳಿರುವಂತೆ ವೇಶ್ಯಾವೃತ್ತಿಯನ್ನು ಒಂದು ಸಾಮಾಜಿಕ ವಿದ್ಯಾಮಾನವಾಗಿ ವಿಶ್ಲೇಷಿಸಹುದಾದರೆ ಅನೈತಿಕ ಕೃತ್ಯ, ನಾಗರಿಕ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ. ಹಾಗಾದರೆ ಹಿಂದಿನ ಕಾಲದಲ್ಲಿ ಈ ವೃತ್ತಿ ಇರಲಿಲ್ಲ ಎಂದಲ್ಲ.
ಮೊದಲು ನಮ್ಮ ಜನಪರ ಜೀವಪರ ಕಾಳಜಿಯುಳ್ಳ ಸಾಹಿತಿಗಳು, ಚಿಂತಕರು ಮತ್ತು ಘನ ಸರ್ಕಾರಗಳು ಮಹಿಳೆಯರಿಗೆ ಆರ್ಥಿಕ, ಮಾನಸಿಕ, ಹಾಗೂ ನೈತಿಕ ಬಲವನ್ನು ತುಂಬುವ ಕೆಲಸ ಮಾಡಬೇಕು. ಮಹಿಳೆ ಆರ್ಥಿಕ ಸಬಲಳಾದರೆ ಮಾತ್ರ ಇಂತಹ ಹೀನವೃತ್ತಿ ನಿಯಂತ್ರಿಸಲು ಸಾಧ್ಯವಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಂಡಾಗ ಈ ವೃತ್ತಿಗೆ ಕಡಿವಾಣ ಹಾಕಬಹುದಾಗಿದೆ.
ಪರ, ವಿರೋಧ ಚರ್ಚೆಗಳು ಏನೇ ಇರಲಿ, ಒಂದು ವೇಳೆ ಸರ್ಕಾರ ವೇಶ್ಯಾವೃತ್ತಿಯನ್ನು ಕಾನೂನುಬದ್ಧಗೊಳಿಸಿತು ಎಂದಾದರೆ ಈ ವೃತ್ತಿ ಶುಲ್ಕದಲ್ಲಿಯೇ ಸರ್ಕಾರ ನಡೆಯಬೇಕಾಗುತ್ತದೆಯಲ್ಲವೇ? ಮುಂದೆ ವೃತ್ತಿ ವ್ಯಾಪಾರವಾಗುತ್ತದೆ. ವ್ಯಾಪಾರ ಉದ್ಯಮವಾಗಿಬಿಟ್ಟರೆ.? ಈ ಉದ್ದಿಮೆಯನ್ನು ಗುತ್ತಿಗೆ ಪಡೆಯಲು ನಮ್ಮ ಉದ್ದಿಮೆದಾರರು, ಹಲ್ಲು ಕಿರಿದು ಜೊಲ್ಲು ಸುರಿಸಿ ತಾಮುಂದು ನಾಮುಂದು ಎಂದು ಬಂದರೂ ಅಚ್ಚರಿಪಡಬೇಕಾಗಿಲ್ಲ! ಗುತ್ತಿಗೆ ಪಡೆದವರ ಗುರಿ ಲಾಭವೇ ಹೊರತು ಈ ವೃತ್ತಿಯಲ್ಲಿ ತೊಡಗಿಕೊಂಡಿರುವ ಮಹಿಳೆಯರಿಗೆ ನ್ಯಾಯ ಒದಗಿಸುವುದಲ್ಲ. ಹಾಗಾದರೆ, ವೃತ್ತಿಯಲ್ಲಿ ತೊಡಗಿರುವ ಮಹಿಳೆಯರಿಗೆ ಏನು ಲಾಭ? ಎಂಬ ಪ್ರಶ್ನೆ ಸಹಜವಾಗಿಎದುರಾಗುತ್ತದೆ.
ಅಂದ ಹಾಗೆ, ಗುತ್ತಿಗೆ ಪಡೆಯುವ ಗುತ್ತಿಗೆದಾರ ಈ ವೃತ್ತಿಗೆ ಬರುವ ಮಹಿಳೆಯರ ರೂಪ, ಲಾವಣ್ಯ, ಅಂದಚೆಂದ, ಮೈಮಾಟ, ವಯಸ್ಸು ಮತ್ತು ಗಿರಾಕಿಗಳಿಗೆ ಅವಳು ತೋರಿಸುವ ಉತ್ಸಾಹ ಎಲ್ಲವನ್ನು ಪರಿಗಣಿಸಿಯೇ ವೃತ್ತಿ ಬಳಗಕ್ಕೆ ಸೇರಿಸಿ ಕೊಳ್ಳಬಹುದಾದರೆ? ಅವಳ ಸೌಂದರ್ಯ ಮಾಸಿದ ಕಾಲಕ್ಕೆ ಎಲ್ಲಿಗೆ ಹೋಗಬೇಕು? ಮತ್ತೆ ಅದೇ ಬೀದಿ ಬದಿಯಲ್ಲಿ ನಿಂತು ಚಪ್ಪಾಳೆ ಹೊಡೆದು ಕರೆದರೂ ಕ್ಯಾರೇ ಎನ್ನದ ಪರಿಸ್ಥಿತಿ ಬರಬಹುದಲ್ಲವೇ? ಅನಿವಾರ್ಯತೆಗೆ ಸಿಲುಕಿ ವೇಶ್ಯಾವೃತ್ತಿಗೆ ಬರುವ ಮಹಿಳೆಯರಿಗೆ ಇದರ ಲಾಭ ಏನು? ಕಟುಮಸ್ತಾದ ಕಾಲೇಜ್ ಹುಡುಗಿಯರನ್ನೇ ಆ ಉದ್ಯಮಿ ಆಯ್ಕೆ ಮಾಡಿಕೊಳ್ಳಬಲ್ಲ ಎಂದಾದರೆ ಪರಿಸ್ಥಿತಿಯ ಒತ್ತಡಕ್ಕೆ ಮಣಿದು ಬಲುಪಶುವಾಗಿ ಹೀನ ವೃತ್ತಿಗೆ ಆಹುತಿಯಾದ ಆ ಅಬಲೆಯರ ಸಬಲತೆ ಕಾಯ್ದೆಯಿಂದ ಸಾಧ್ಯವೆ?


Sunday 6 April 2014

ಅತ್ಯಾಚಾರಿಗಳಿಗೆ ಉಗ್ರ ಶಿಕ್ಷೆಯಾಗಲಿ

ದೂರದ ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ನಡೆಯುತ್ತಿದ್ದ ಅತ್ಯಾಚಾರಗಳಂತಹ ಹೇಯ ಕೃತ್ಯ. ಇಂದು ಸಿಲಿಕಾನ್ ಸಿಟಿಯ ಹೃದಯಭಾಗದಲ್ಲಿ ನಡೆದಿದೆ. ಪಾರ್ಟಿ ಮುಗಿಸಿಕೊಂಡು ಮಧ್ಯರಾತ್ರಿ ಮನೆಯ ಬಳಿ ತನ್ನ ಸ್ನೇಹಿತನ ಜೊತೆ ಕಾರಿನಲ್ಲಿ ಮಾತನಾಡುತ್ತಿದ್ದ ಯವತಿಯೊಬ್ಬಳನ್ನು ಪೊಲೀಸರ ಸೋಗಿನಲ್ಲಿ ಬಂದ ದುಷ್ಟರ್ಮಿಗಳ ತಂಡ, ಆ ಯುವತಿಯನ್ನು ಕಾರಿನಲ್ಲಿ ಎತ್ತಿಹಾಕಿಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ನಡೆಸಿರುವುದು ಅಕ್ಷಮ್ಯ ಅಪರಾಧವಾಗಿದೆ. 
ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಈ ಘಟನೆ ಉದ್ಯಾನನಗರಿಯಲ್ಲಿ ನಡೆದಿರುವುದು ನೋಡಿದರೆ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ಸರ್ಕಾರ ಎಚ್ಚೆತ್ತಕೊಳ್ಲಬೇಕಿದೆ. ಈ ಘಟನೆ ಕುರಿತು ಹೇಳುವುದಾದರೆ ಮಹಿಳಾ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಯ ಬಗ್ಗೆ ಮಾತನಾಡುತ್ತಿರುವ ನಮ್ಮ ಸರ್ಕಾರಗಳು ಯಾವ ಕ್ರಮ ಕೈಗೊಳ್ಳುತ್ತಿವೆ. ಏನು ಮಾಡುತ್ತಿವೆ ಎಂಬ ಪ್ರಶ್ನೆ ಎದುರಾಗುತ್ತಿದೆ.
ರಾಜ್ಯದಲ್ಲಿ ಅತ್ಯಾಚಾರದ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಸರ್ಕಾರ ಕೇವಲ ಕಾಗದದ ಹುಲಿಯಾದರೆ ಸಾಲದು. ಮಹಿಳಾ ರಕ್ಷಣೆಗೆ ಬದ್ಧ ಎಂದು ಹೇಳುವ ಸರ್ಕಾರ ಅದನ್ನು ಕಾರ್ಯಾರೂಪಕ್ಕೆ ತರಬೇಕು. ಆದರೆ ಅದು ಆಗುತ್ತಿಲ್ಲ. ಅತ್ಯಾಚಾರಕ್ಕೆ ಒಳಗಾದ ಆ ಯುವತಿ ಅಲ್ಲಿನ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾಳೆ.
 ತನ್ನ ಮೇಲೆ ಆಗಿರುವ ದೌರ್ಜ್ಯನ್ಯ ಮತ್ತು ಅತ್ಯಾಚಾರದಂತಹ ಕೃತ್ಯವನ್ನು ದೂರಿನಲ್ಲಿ ಸಾರಲೇಖವಾಗಿ ವಿವರಿಸಿದ್ದಾಳೆ. ಆದರೆ ಅಲ್ಲಿನ ಇನ್ಸ್‌ಪೇಕ್ಟರ್ ಮಹಾಶಯ ಅವರ ದೂರಿಗೆ ಅಷ್ಟೊಂದು ಮಹತ್ವವೇ ನೀಡಿಲ್ಲ. ಯುವತಿಯ ಮೇಲಿನ ನಡೆದಿರುವ ಸಾಮೂಹಿಕ ಅತ್ಯಾಚಾರ ಘಟನೆ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತ ಮೇಲಧಿಕಾರಿಗಳು ಆ ಇನ್ಸ್‌ಪೇಕ್ಟರ್ ರಫೀಕ್ ಎನ್ನುವವರನ್ನು ಅಮಾನತ ಮಾಡಿದ್ದಾರೆ. ಆದರೆ ಇದು ತೋರಿಕೆಯ ಶಿಕ್ಷೆಯಲ್ಲದೆ ಮತ್ತೇನಲ್ಲ!
 ಒಬ್ಬ ಅಧಿಕಾರಿಯನ್ನು ಅಮಾನತು ಮಾಡಿದ ಕೂಡಲೇ ಅತ್ಯಾಚಾರದಂತಹ ಕುಕೃತ್ಯಗಳು ನಡೆಯುವುದೇ ಇಲ್ಲವೇ ಎಂಬ ಮಾತು ಬರುವುದು ಸಹಜ. ಆದರೆ ಇಲ್ಲಿ ಸರ್ಕಾರ ತನ್ನನ್ನು ತಾನು ರಕ್ಷಿಸಿಕೊಳ್ಳಲು ಈ ಕ್ರಮ ಕೈಗೊಂಡಿರುತ್ತದೆ ವಿನಹ ಮತ್ತೇನಲ್ಲ. ನಾಗರಿಕ ಸಮಾಜದ ಪ್ರತಿರೋಧ ಎದುರಿಸಲಾಗದ ಸರ್ಕಾರ, ಈಗಾಗಲೇ ಘಟನೆ ಕುರಿತು ಕರ್ತವ್ಯ ಲೋಪ ಎಸಗಿದ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ ಎಂದು ಹೇಳಿಕೊಳ್ಳಲು ಅಮಾನತು ಶಿಕ್ಷೆ ನೀಡಲಾಗಿದೆ. ಈ ಸಾಮೂಹಿಕ ಅತ್ಯಚಾರದಂತಹ ಪ್ರಕರಣಗಳು ದೇಶದ ಒಂದಿಲ್ಲೊಂದು ಭಾಗದಲ್ಲಿ ದಿನನಿತ್ಯ ನಡೆಯುತ್ತಲೇ ಇವೆ. ಇದಕ್ಕೆ ಕಾರಣ ಅಂತಹ ಕೃತ್ಯದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ನೀಡದೆ ಇರುವುದು. ನ್ಯಾಯಾಲಯ ನೀಡುವ ಶಿಕ್ಷೆ ಕೂಡ ಅಪರಾಧಿಗಳ ನಡುಕ ಹುಟ್ಟಿಸಬೇಕು. ಆದರೆ ನಮ್ಮ ನ್ಯಾಯಾಲಯಗಳಲ್ಲಿ ಪ್ರಕರಣಗಳು ಇತ್ಯರ್ಥವಾಗುವುದೇ ವಿಳಂಬವಾಗುತ್ತಿರುವುದರಿಂದ ಅಪರಾಧಿಗಳಿಗೆ ಭಯವಿಲ್ಲದಂತಾಗಿದೆ. 

ಅತ್ಯಾಚಾರ ಮತ್ತು ಮಾಧ್ಯಮ ಒಂದು ವಿಶ್ಲೇಷಣೆ

ಸಾಂಸ್ಕೃತಿಕ ಶ್ರೀಮಂತಿಕೆಯಲ್ಲಿ ಭಾರತಕ್ಕೆ ತನ್ನದೆಯಾದ ಮಹತ್ವವಿದೆ. ಪಾಶ್ಚಾತ್ಯ ರಾಷ್ಟ್ರಗಳು ಭಾರತೀಯ ಸಂಸ್ಕೃತಿಗೆ ಮಾರು ಹೋಗುತ್ತಿದ್ದರೆ, ನಾವು ಮಾತ್ರ ಕಳಾಹೀನ ಪಾಶ್ಚಾತ್ಯ ಸಂಸ್ಕೃತಿಯತ್ತ ಮುಖ ಮಾಡಿದ್ದೇವೆ. 
ಜಾಗತೀಕರಣಕ್ಕೆ ಸಿಲುಕಿರುವ ನಾವುಗಳು ಭಾರತೀಯ ಪರಂಪರೆ, ಸಂಸ್ಕೃತಿ, ಆಚಾರ- ವಿಚಾರ ಲೋಕ ರೂಢಿಗ ಳನ್ನು ಎಂದೋ ಮಣ್ಣುಪಾಲು ಮಾಡಿದ್ದೇವೆ. ಆಧುನಿಕತೆಯ ಭರಾಟೆಯಲ್ಲಿ ತೆಲಾಡುತ್ತಿರುವ ನಾವು ನಮ್ಮ ಪರಂಪರೆ, ಆಚಾರ-ವಿಚಾರಗಳಿಗೆ ತಿಲಾಂಜಲಿ ನೀಡುತ್ತಿದ್ದೇವೆ. 
‘ಯತ್ರ ನರ್‍ಯಾಸ್ತು ತತ್ರ ದೇವತಾ’ ಎಂಬ ಮಾತು ಪುರಾಣದ ಪುಟಕ್ಕೆ ಸಿಮೀತ ಮಾಡಿರುವುದರಿಂದ ಇಂದಿನ ದಿನಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಹೆಚ್ಚುತ್ತಿದೆ. ಇದು ಒಂದೆ ಕಾರಣ ಎಂದು ಹೇಳಿದರೆ ಮೂರ್ಖ ತನವಲ್ಲದೆ ಮತ್ತೇನಲ್ಲ. ಹಾಗಾದರೆ ಇಂದಿನ ಸಂದರ್ಭದಲ್ಲಿ ಮಹಿಳೆಯರ

Tuesday 1 April 2014

ಬೇಸಿಗೆಯ ಝಳದ ಜೊತೆಗೆ ಏರುತ್ತಿದೆ ರಾಜಕೀಯ ಬಿಸಿ

ಗುಲ್ಬರ್ಗ: ಬಿಸಿಲ ನಾಡು, ಬಹಮನಿ ಸಾಮ್ರಾಜ್ಯದ ಬೀಡಾದ ಗುಲ್ಬರ್ಗದಲ್ಲಿ ಬೇಸಿಗೆಯ ಬಿಸಿಲಿನ ಝಳದ ಜೊತೆಗೆ ರಾಜಕೀಯದ ಬಿಸಿ ಏರತೊಡಗಿದೆ. ಎಲ್ಲೆಲ್ಲೂ ಪಕ್ಷ, ಅಭ್ಯರ್ಥಿಗಳ ಸೋಲು ಗೆಲುವಿನ ಲೆಕ್ಕಾಚಾರದ್ದೇ ಮಾತುಗಳು. 
ಜಿಲ್ಲೆಯ ರಾಜಕೀಯ ವಲಯದ ದಿಗ್ಗಜ, ಸೋಲಿಲ್ಲದ ಸರದಾರ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್‌ನಿಂದ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ತೀವ್ರ ಪೈಪೋಟಿ ನೀಡಿದ್ದ ಮಾಜಿ ಸಚಿವ ರೇವೂನಾಯಕ ಬೆಳಮಗಿ ಈ ಬಾರಿ ಮತ್ತೆ ಖರ್ಗೆಯವರಿಗೆ ಎದುರಾಳಿಯಾಗಿದ್ದಾರೆ.
Add caption
ಹೇಗಾದರೂ ಮಾಡಿ ಕಾಂಗ್ರೆಸ್‌ನ ಭದ್ರಕೋಟೆಯನ್ನು ಛಿದ್ರ ಮಾಡಲು ಬಿಜೆಪಿ ಮತ್ತು ಜೆಡಿಎಸ್ ಹವಣಿಸುತ್ತಿರುವುದರಿಂದ ಗುಲ್ಬರ್ಗ ಪ್ರತಿಷ್ಠೆಯ ಕ್ಷೇತ್ರವಾಗಿ ಮಾರ್ಪಟ್ಟಿದೆ. ಮೊದಲಿನಿಂದಲೂ ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ಗುಲ್ಬರ್ಗ ೧೯೯೬ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಇಂದಿನ ರಾಜ್ಯ ಪೌರಕಾರ್ಮಿಕ ಸಚಿವ ಖಮರುಲ್ ಇಸ್ಲಾಂ ಜಯಭೇರಿ ಬಾರಿಸಿದ್ದರು. ೧೯೯೮ರಲ್ಲಿ ಬಿಜೆಪಿಯ ಬಸವರಾಜ್ ಪಾಟೀಲ್ ಸೇಡಂ ಗೆದ್ದಿದ್ದು ಬಿಟ್ಟರೆ ಉಳಿದೆಲ್ಲ ಅವಧಿಗೆ ಕಾಂಗ್ರೆಸ್ ಪರವಾಗಿದೆ. 
ಜೆಡಿಎಸ್‌ಗೆ ಹೇಳಿಕೊಳ್ಳುವಷ್ಟು ಸಂಘಟನೆ ಬಲ ಇಲ್ಲದಿರುವುದರಿಂದ ಕಣದಲ್ಲಿರುವ ಜೆಡಿಎಸ್ ಅಭ್ಯರ್ಥಿ ಡಿ.ಜಿ.ಸಾಗರ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ವಾತಾವರಣವಿದೆ. ಆದರೆ ಖರ್ಗೆಯವರ ಸುಮುದಾಯದವರೇ ಆದ ಡಿ.ಜಿ. ಸಾಗರ್ ಕಾಂಗ್ರೆಸ್‌ನ ಮತಬ್ಯಾಂಕ್‌ಗೆ ಕೈ ಹಾಕುವುದರಿಂದ ಖರ್ಗೆಯವರಿಗೆ ಹಿನ್ನಡೆಯಾಗಬಹುದು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದ್ದರೂ ಸಹ ಕಾಂಗ್ರೆಸ್, ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇತ್ತ ದೇಶಾದ್ಯಂತ ಅಲೆ ಸೃಷ್ಟಿಸಿರುವ ಆಪ್ ಅಭ್ಯರ್ಥಿಯಾಗಿ ಮಾಜಿ ಸಚಿವೆ ಬಿ.ಟಿ ಲಲಿಯಾ ನಾಯಕ್ ಕಣದಲ್ಲಿದ್ದು ಗಮನ ಸೆಳೆಯುತ್ತಿದ್ದಾರೆ. 
ಗುಲ್ಬರ್ಗ ಉತ್ತರ, ಗುಲ್ಬರ್ಗ ದಕ್ಷಿಣ, ಗುಲ್ಬರ್ಗಾ ಗ್ರಾಮೀಣ, ಜೇವರ್ಗಿ, ಅಪ್ಜಲ್‌ಪುರ, ಚಿತ್ತಾಪುರ, ಸೇಡಂ ಹಾಗೂ ಯಾದಗಿರಿ ಜಿಲ್ಲೆಯ ಗುರುಮಿಟ್ಕಲ್ ಕ್ಷೇತ್ರಗಳು ಗುಲ್ಬರ್ಗ ಲೋಕಸಭಾ ಕ್ಷೇತ್ರಕ್ಕೆ ಒಳಪಡಲಿವೆ. ಗುಲ್ಬರ್ಗ ದಕ್ಷಿಣ ವಿಧಾನಸಭಾ ಕ್ಷೇತ್ರವನ್ನು ಹೊರತುಪಡಿಸಿದರೆ ಉಳಿದ ಎಲ್ಲಾ
ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರೇ ಇರುವುದರಿಂದ ಖರ್ಗೆಯವರ ಪಾಲಿಗೆ ಹೆಚ್ಚಿನ ಅನುಕೂಲವಾಗಬಹುದು.
ಖರ್ಗೆಯವರು ಕೇಂದ್ರ ಸಚಿವರಾದ ನಂತರ ಹೈ.ಕ ಭಾಗದ ಅಭಿವೃದ್ಧಿಗೆ ೩೭೧(ಜೆ) ವಿಧಿ ತಿದ್ದುಪಡಿ, ವಿಶೇಷವಾಗಿ ಗುಲ್ಬರ್ಗಕ್ಕೆ ಅಂತಾರಾಷ್ಟ್ರೀಯ ಮಟ್ಟದ ಸುಸಜ್ಜಿತ ಇಎಸ್‌ಐ ಆಸ್ಪತ್ರೆ, ಕೇಂದ್ರೀಯ ವಿವಿ, ಹಲವು ದಶಕಗಳ ಬೇಡಿಕೆಯಾಗಿದ್ದ ರೈಲ್ವೆ ವಿಭಾಗ ಸ್ಥಾಪನೆ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳು ಖರ್ಗೆಯವರ ಪಾಲಿಗೆ ವರದಾನವಾಗಬಹುದು. 
ಇತ್ತ ಬಿಜೆಪಿ ಅಭ್ಯರ್ಥಿ ರೇವೂನಾಯಕ್ ಬೆಳಮಗಿಗೆ ಸಾಂಪ್ರದಾಯಿಕ ಮತಗಳ ಜೊತೆಗೆ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಯವರ ಅಲೆ ಕೆಲಸ ಮಾಡಬಹದು. ಯುವ ಮತದಾರರು ಮೋದಿ ಅಲೆಯಲ್ಲಿ ತೇಲುತ್ತಿರುವುದರಿಂದ ಬಿಜೆಪಿ ಅಭ್ಯರ್ಥಿಗೆ ಅಲ್ಪಮಟ್ಟದ ಲಾಭವಾಗುವುದರ ಜೊತೆಗೆ ಗುಲ್ಬರ್ಗ ಗ್ರಾಮೀಣ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ತಮ್ಮ ವಿರುದ್ಧವೇ ಸ್ಪರ್ಧಿಸಿದ್ದ ಮಾಜಿ ಸಚಿವ ಬಾಬುರಾವ್ ಚವ್ವಾಣ್ ಈಗ ಬಿಜೆಪಿ ಸೇರಿರುವುದರಿಂದ ರೇವೂ ನಾಯಕ ಬೆಳಮಗಿಗೆ ಆನೆ ಬಲ ಬಂದಂತಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತೆ ಬಿಜೆಪಿಗೆ ವಾಪಸ್ ಬಂದಿರುವುದರಿಂದ ಕೆಜೆಪಿಯ ಎಲ್ಲಾ ನಾಯಕರು ಬಿಜೆಪಿಗೆ ಮರಳಿದ್ದಾರೆ. ಇದು ರೇವೂನಾಯಕ ಬೆಳಮಗಿಯವರಿಗೆ ಪ್ಲಸ್ ಪಾಯಿಂಟ್. ಒಟ್ಟಾರೆ ಹೇಳುವುದಾದರೆ ಕಾಂಗ್ರೆಸ್, ಬಿಜೆಪಿ ನಡುವಿನ ಸ್ಪರ್ಧೆ ಎನ್ನುವುದಕ್ಕಿಂತ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ v/s ನರೇಂದ್ರ ಮೋದಿ ನಡುವಿನ ಸೆಣಸಾಟ ಎಂದರೆ ತಪ್ಪಾಗಲಾರದು. 

Tuesday 11 February 2014

ಭ್ರಷ್ಟ ಅಧಿಕಾರಿಗಳ ಸಮರ್ಥನೆ ಸ್ವಾಮೀಜಿಗೆ ತಕ್ಕುದ್ದಲ್ಲ

ದಲಿತವರ್ಗ ಮತಾಂತರದಿಂದ ದುರ್ಬಲವಾಗುತ್ತಿದೆ. ಆಮಿಷ ಅಥವಾ ಬಲವಂತದ ಮತಾಂತರ ಎಂದಿಗೂ ಸಲ್ಲದು ಹಿಂದೂ ಧರ್ಮವನ್ನು ಒಗ್ಗೂಡಿಸಲು ಅರ್ಥಪೂರ್ಣವಾದ ‘ಸಾಮರಸ್ಯ ನಡಿಗೆ’ ಅವಶ್ಯಕ ಎಂದು ಹಿಂದೂ ಸಮಾಜದಲ್ಲಿನ ಜಾತಿ ಆಧಾರಿತ ಭೇದಭಾವವನ್ನು ಹೊಸಕಿ ಹಾಕುವುದಕ್ಕಾಗಿ ಈ ಹಿಂದೆ ಉಡುಪಿ ಮಠದ ಪೇಜಾವರ ಶ್ರೀಗಳು ದಲಿತ ಕೇರಿಯಲ್ಲಿ ಪಾದಯಾತ್ರೆ ನಡೆಸಿದ್ದು ಜನಮಾನಸದಲ್ಲಿ ಅಚ್ಚಾಗಿ ಉಳಿದಿದೆ.
     ಇದರಿಂದ ಪ್ರಭಾವಿತರಾದ ಚಿತ್ರದುರ್ಗದ ಮಾದಾರಚೆನ್ನಯ್ಯ ಗುರುಪೀಠದ ಮಾದಾರ ಚನ್ನಯ್ಯ ಸ್ವಾಮೀಜಿಗಳು ಅದೇ ಮೂಸೂರಿನ ಕೃಷ್ಣಮೂರ್ತಿಪುರಂನ ಬ್ರಾಹ್ಮಣರ ಕೇರಿಯಲ್ಲಿ ಸಾಮರಸ್ಯ ನಡಿಗೆ ಮಾಡುವ ಮೂಲಕ ಹೊಸ ಇತಿಹಾಸ ನಿರ್ಮಾಣಕ್ಕೆ ಕೈಹಾಕಿದ್ದರು.
ಒಂದು ಸಾಮಾಜಿಕಮುಖಿ ಕಾರ್ಯಕ್ರಮ ಎಂದ ಕೂಡಲೇ ಪರ-ವಿರೋಧ ಇದ್ದೇ ಇರುತ್ತವೆ. ಆದರೆ ಅಂದಿನ ಸಂದರ್ಭದಲ್ಲಿ ಸ್ವಾಮೀಜಿಗಳು ಮಾಡುವ ಸಾಮರಸ್ಯದ ನಡಿಗೆಗೆ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿತ್ತು. ದಲಿತ ಸಮುದಾಯವನ್ನು   ಬಲವಂತದ ಮತಾಂತರದಿಂದ ತಪ್ಪಿಸುವ ಉದ್ದೇಶದಿಂದ ಪೇಜಾವರ ಶ್ರೀಗಳು ಹಾಗೂ ಮಾದಾರ ಚನ್ನಯ್ಯ ಸ್ವಾಮಿಗಳು ಜಂಟಿ ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ದಲಿತಪರ ಚಿಂತಕರು ಟೀಕಿಸಿದ್ದೂ ಉಂಟು.ತುಳಿತಕ್ಕೆ ಒಳಗಾಗಿರುವ ಶೋಷಿತ ಸಮುದಾಯವನ್ನು ಕನಿಷ್ಠ  ಮಾನವೀಯ ದೃಷ್ಟಿ ಕೋನದಲ್ಲಿ ಕಾಣದ ಮೇಲ್ವರ್ಗದವರು, ಈ ಹೊಲೆಯ ಮಾದಿಗರು ಮತಾಂತರ ಹೊಂದಿ ಸನಾತನ ಸಂಸ್ಕೃತಿನ್ನು ನಾಶ ಮಾಡುತ್ತಾರೆ. ಅಥವಾ ಹಿಂದು ಧರ್ಮವೇ ಅಲ್ಪಸಂಖ್ಯಾತವಾಗಿ ಬಿಡುತ್ತದೆಯೋ ಎಂಬ ಭೀತಿಯಿಂದ ಈ ಕುತಂತ್ರ ರೂಪಿ ಸಲಾಗಿದೆ ಎಂಬ ವಾದವನ್ನೂ ಕೂಡ ದಲಿತಪರ ಸಾಹಿತಿಗಳು ಮತ್ತು ಸಂಘಟನೆಗಳು ಮುಂದಿಟ್ಟಿದ್ದರು. ಹೊಲೆಯ ಮಾದಿಗ ಸಮುದಾಯದ ನಡುವೆ ಕಂದಕ ಸೃಷ್ಟಿಸಲು ಮಾದಾರಚನ್ನಯ್ಯ ಸ್ವಾಮೀಜಿಯನ್ನು ಹರಕೆಯ ಕುರಿಯನ್ನಾಗಿ ಮಾಡಲಾಗುತ್ತಿದೆ ಎಂದು ಆಕ್ರೋಶ ಕೂಡ ವ್ಯಕ್ತಪಡಿಸಲಾಗಿತ್ತು.

Saturday 18 January 2014

ಸಿಎಂಗೆ ಸಿಎಂ ಹುದ್ದೆ ಅಭದ್ರತೆ ಕಾಡುತ್ತಿದೆಯೇ?

ಕಾಂಗ್ರೆಸ್ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿ ಜನಸಂಖ್ಯೆಯಲ್ಲಿ ಪ್ರಬಲ ಸಮುದಾಯದ ಸಿದ್ದರಾಮಯ್ಯನವರನ್ನು ಮುಖ್ಯ ಮಂತ್ರಿಯನ್ನಾಗಿ ಕಾಂಗ್ರೆಸ್ ಹೈಕಮಾಂಡ್ ನೇಮಿಸಿತು. ಆದರೆ ಸಿದ್ದರಾಮಯ್ಯನವರಿಗೆ ಹೈಕಮಾಂಡ್ ಮೇಲೆ ಯಾಕೋ   ನಂಬಿಕೆ ಕಳೆದುಕೊಂಡಂತೆ ಭಾಸವಾಗುತ್ತಿದೆ. ಮುಖ್ಯಮಂತ್ರಿಗಳಿಗೆ ಹುದ್ದೆಯ ಭದ್ರತೆ ಕಾಡುತ್ತಿದೆ ಎನ್ನುವುದಕ್ಕೆ ಪರೋಕ್ಷ ಸಾಕ್ಷಿ ಇತ್ತೀಚೆಗೆ ನಡೆದ ಅಹಿಂದ ಸಮಾವೇಶ.
ಇದು ಹಿಂದುಳಿದ ವರ್ಗಗಳ ಸಮಾವೇಶ ಎನ್ನುವದಕ್ಕಿಂತ ತನ್ನ ಮುಖ್ಯಮಂತ್ರಿಗಳ ಕುರ್ಚಿ ಭದ್ರಪಡಿಸಿಕೊಳ್ಳಲು ನಡೆಸಿದ ಶಕ್ತಿ ಪ್ರದರ್ಶನ ಎಂದೇ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಈಗಾಗಲೇ ಕಾಂಗ್ರೆಸ್ ಸರ್ಕಾರದಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿದ ಅದೆಷ್ಟೋ ಹಿರಿಯ ಮುಖಂಡರನ್ನು ಕಡೆಗಣಿಸಿ ಸಿದ್ದರಾಮಯ್ಯನವರಿಗೆ ಮಣೆ ಹಾಕಲಾಗಿತ್ತು. ಆದರೆ ಸಿದ್ದರಾಮಯ್ಯನವರು ಪಕ್ಷದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡ ಉದಾಹರಣೆಗಳು ಸಾಕಷ್ಟಿವೆ. ಇದರಿಂದ ಬೇಸತ್ತ ಹಿರಿಯ ನಾಯಕರು ಹೈಕಮಾಂಡ್‌ಗೆ ಕಿವಿ ಊದಿದ್ದಾರೆ. ಅದು ಒಂದು ರೀತಿಯಲ್ಲಿ ವಾಸ್ತವವೂ ಕೂಡ. 
ಅದು ಹೋಗಲಿ ಈ ಸಮಾವೇಶ ಹಿಂದುಳಿದವರ ಸಮಾವೇಶವೇ ಹಾಗಿದ್ದರೆ ಕಾಂಗ್ರೆಸ್ ಪಕ್ಷದಲ್ಲಿ ಹಿಂದುಳಿದ ಘಟಕದ ಅಧ್ಯಕ್ಷರಿಗಾದರೂ ಆಹ್ವಾನ ಕೊಡಬಹುದಿತ್ತಲವೇ? ಖಾಸಗಿ ಸಮಾವೇಶವಾದರೂ ಸಿದ್ದರಾಮಯ್ಯನವರು ಸರ್ಕಾರದಿಂದ ೨೦ ಕೋಟಿ ರೂ. ಕೊಟ್ಟಿದ್ದಾರೆ ಏಕೆ ಎಂದು ಸ್ವಪಕ್ಷದವರೇ ಅಪಸ್ವರ ಎತ್ತಿದ್ದಾರೆ. ಆದರೆ ಇದನ್ನು ಬಹಿರಂಗವಾಗಿ ಮುಖ್ಯಮಂತ್ರಿಗಳಿಗೆ ಪ್ರಶ್ನಿಸುವ ನಾಯಕರು ಇಲ್ಲ ಎಂದೇ ಹೇಳಬೇಕಾದೀತು. ಮುಖ್ಯಮಂತ್ರಿಗಳು ಹಿಂದುಳಿದ ವರ್ಗದ ಸಮಾವೇಶ ಎಂದು ಹೇಳಿಕೊಳ್ಳುತ್ತಲೇ ಪಕ್ಷದ ಹಿಂದುಳಿದ ವರ್ಗದ ನಾಯಕರನ್ನು ಕಡೆಗಣಿಸುತ್ತಿರುವುದು ಏಕೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ.