Friday 20 February 2015

ಕಾಂಗ್ರೆಸ್ ದಲಿತರ ಹಿತೈಷಿಯಾಗುವುದು ಯಾವಾಗ?

ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಕೇಳಿಬರುತ್ತಿದ್ದ ಕೂಗು ಬಹಿರಂಗ ವೇದಿಕೆಗೆ ಬಂದಿದೆ. ಇದರಿಂದಾಗಿ ಕಾಂಗ್ರೆಸ್ನಲ್ಲಿ ಮತ್ತೇ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ. ದಲಿತರಿಗೆ ಸಿಎಂ ಸ್ಥಾನ ಸಿಗಬೇಕು ಎಂಬ ವಾದಕ್ಕೆ ದಲಿತ ಸಂಘಟನೆಗಳು ಬಹಿರಂಗವಾಗಿಯೇ ಅಖಾಡಕ್ಕಿದಿವೆ.
ಖರ್ಗೆ ಸೇರಿದಂತೆ ದಲಿತರಲ್ಲಿ ಯಾರಾದರೊಬ್ಬರು ಮುಖ್ಯಮಂತ್ರಿ ಆಗಲಿ ಎಂದು ೨೦ಕ್ಕೂ ಹೆಚ್ಚು ದಲಿತಪರ ಸಂಘಟನೆಗಳು ಸಭೆ ಸೇರುವ ಮೂಲಕ ಕಾಂಗ್ರೆಸ್ ಹೈಕಮಾಂಡ್ಗೆ ಸೆಡ್ಡು ಹೊಡೆದಿವೆ.
ಎಲ್ಲ ಸಂಘಟನೆಗಳು ಒಂದೇ ವೇದಿಕೆಯಡಿ ಬಂದಿರುವುದು ಸ್ವಾಗತಾರ್ಹ ವಿಷಯವಾದರೂ ಕೆಲಸ ಎಂದೋ ಆಗ ಬೇಕಾಗಿತ್ತು. ತಡವಾಗಿಯಾದರೂ ಎಚ್ಚೆತ್ತುಕೊಂಡಿದ್ದಾರೆ ಎನ್ನುವುದೇ ಸಮಾಧಾನದ ಸಂಗತಿ.
೨೦೦೪ ಮತ್ತು ೨೦೦೮ರ ಚುನಾವಣೆಯ ವೇಳೆ ದಲಿತ ನಾಯಕರ ಪರ ಸಂಘಟಿತರಾಗಿ ಧ್ವನಿ ಎತ್ತಿದ್ದರೆ ಎಂದೋ ರಾಜ್ಯದ ಮುಖ್ಯಮಂತ್ರಿ ಆಗಿರುತ್ತಿದ್ದರು. ಆದರೆ ದಲಿತಪರ ಸಂಘಟನೆಗಳೇ ರಾಜಕೀಯ ನಾಯಕರ ಚೇಲಾಗಳಾಗಿದ್ದವು. ಅವರು ಕೊಡುವ ಎಂಜಲಿಗೆ ವಿನಮ್ರರಾಗಿ ಮನೆ ಬಾಗಿಲು ಬಡಿದರು. ಇದರಿಂದ ಸಂಘಟನೆಯ ಮಹತ್ವ ನಾಯಕರ ಬದ್ಧತೆ ಎಷ್ಟು ಎಂಬುದು ಅವರಿಗೆ ಅರ್ಥವಾಗಿ ಹೋಗಿತ್ತು. ಸಂಘಟಿತರಾಗಲು ಸಜ್ಜಾದರೆ ವಿಂಗಡಣೆಗೆ ಸೂತ್ರ ರೂಪಿಸುವ ರಾಜಕಾರಣಿಗಳ ಮುಂದೆ ಸಂಘಟನೆಗಳ ಸಂಘರ್ಷ ಕೆಲಸ ಮಾಡಲಿಲ್ಲ. ಸಂಘಟನೆಗಳನ್ನು ಹೇಗೆ ಬೇಕೋ ಹಾಗೇ ಬಳಸಿಕೊಂಡರು. ದಲಿತ ಸಿಎಂ ಅಂದಾಗ ಮಾತ್ರ ಕುತಂತ್ರದಿಂದ ಸಮುದಾಯಕ್ಕೆ ಸಿಗಬೇಕಾದ ಅವಕಾಶ ತಪ್ಪಿಸಿದರು.
೨೦೧೩ರ ಚುನಾವಣೆಯಲ್ಲಿ ದಲಿತರೊಬ್ಬರು ರಾಜ್ಯದ ಮುಖ್ಯಮಂತ್ರಿ ಆಗುವ ಅವಕಾಶವಿದೆ ಎಂದು ಕಾಂಗ್ರೆಸ್ ಬಿಂಬಿಸಿತು. ಇದರಿಂದ ಪುಳಕಿತರಾದ ದಲಿತ ಮತದಾರರು, ನಮ್ಮ ಖರ್ಗೆ ಸಾಬ್ ಚೀಪ್ ಮಿನಿಸ್ಟರ್ ಆಗ್ತಾರೆ, ನಮ್ಮ ಪರಮೇಶ್ವರ್ ಚೀಪ್ ಮಿನಿಸ್ಟರ್ ಆಗ್ತಾರೆ, ಇಬ್ಬರಿಗೂ ಕೈ ತಪ್ಪಿದರೆ ಹಿರಿಯ ನಾಯಕ ಕೆ.ಎಚ್. ಮುನಿಯಪ್ಪ ಸಿಎಂ ಆಗ್ತಾರೆ ಎಂದು ಈಡೀ ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಆಶೀರ್ವದಿಸಿದರು

ಆದರೆ ಆದುದ್ದೇ ಬೇರೆ! ದಲಿತರ ಭಾವನೆಗೆ ತಣ್ಣೀರೆರಚಿದ ಹೈಕಮಾಂಡ್ ಎಂಬ ದೂರದ ಬೆಟ್ಟ, ಆಗತಾನೆ ಬಂದ ಮಾಸ್ ಲೀಡರ್ ಹೆಸರಿನಲ್ಲಿ ಸಿದ್ದುಗೆ ಗದ್ದುಗೆಯಲ್ಲಿ ಪ್ರತಿಷ್ಠಾನೆ ಮಾಡುವ ಮೂಲಕ ದಲಿತ ವಿರೋಧಿ ನಿಲುವು ಪ್ರದರ್ಶಿಸಿ, ಮತ್ತೇ ಅವಕಾಶ ವಂಚಿತರನ್ನಾಗಿ ಮಾಡಿದರು. ದುರಾದೃಷ್ಟಾವಶಾತ್ ಕಾಂಗ್ರೆಸ್ ದಂಡನಾಯಕರೇ ಸೋತಾಗ ಸ್ವಾಭಿಮಾನಿ ದಲಿತರು ಕೈಕೈ ಹಿಸುಕಿಕೊಂಡು ಸುಮ್ಮನಾದರು. ಇನ್ನೂ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆ ಇದ್ದರೂ ಲಾಬಿ ರಾಜಕಾರಣದ ಮುಂದೆ ತೆರೆಗೆ ಸರಿಯಬೇಕಾಯಿತು.
ದಲಿತರೊಬ್ಬರು ಮುಖ್ಯಮಂತ್ರಿಯಾಗುವ ಅವಕಾಶ ಏನಾದರೂ ಇದ್ದರೆ ಅದು ನಮ್ಮ ಪಕ್ಷದಲ್ಲೇ ಎಂದೇಳುತ್ತಲೇ ಕಾಲ ದೂಡುತ್ತಿರುವ ಕಾಂಗ್ರೆಸ್ ವರಿಷ್ಠರು ನಿರೂಪಿಸಿ ತೋರಿಸಬೇಕಾದ ಜರೂರು ಹಿಂದೆಂದಿಗಿಂತ ಇಂದು ಹೆಚ್ಚಿದೆ.
ದಲಿತರ ಪಾಲಿಗೆ ಕಾಂಗ್ರೆಸ್ ಎಂಬ ಸಮುದ್ರ ಯಾವಾಗಲೂ ಉಪ್ಪು. ಅದಕ್ಕಾಗಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಕಾಂಗ್ರೆಸ್ ಎಂಬುದು ಉರಿಯುವ ಮನೆ ಅದರಲ್ಲಿ ಸಿಕ್ಕಿ ಹಾಕಿಕೊಂಡರೆ ದಹಿಸದೆ ಬಿಡುತ್ತಾ ಎಂದು ಮಾರ್ಮಿಕವಾಗಿ ನುಡಿದಿದ್ದರು. ಆದರೆ ಕಾಂಗ್ರೆಸ್ ಎಂಬ ಸಮುದ್ರ ಉಪ್ಪಾದರೂ ಸಿಹಿ ಕೊಡುಗೆಯನ್ನೇ ನೀಡುತ್ತ ಬಂದ ದಲಿತರಿಗೆ ಅದರ ರುಚಿ ಸಿಗಲೇ ಇಲ್ಲ.
ದೂರದ ಬೆಟ್ಟ ತೋರಿಸುತ್ತಲೇ ತಮ್ಮ ಆಸೆ ಈಡೇರಿಸಿಕೊಳ್ಳುತ್ತಿರುವ ವ್ಯವಸ್ಥಿತ ಸಂಚು ಬಹಳ ದಿನಗಳ ಕಾಲ ನಡೆಯದು ಎಂಬುದು ಕಾಂಗ್ರೆಸ್ ನಾಯಕರಿಗೆ ಅರ್ಥವಾಗಬೇಕಿದೆ. ಈಗಾಗಲೇ ರಾಷ್ಟ್ರಮಟ್ಟದಲ್ಲಿ ಸೋತು ಸೊರಗಿರುವ ಕಾಂಗ್ರೆಸ್ ರಾಜ್ಯದಲ್ಲಿಯೂ ಅಸ್ತಿತ್ವ ಇಲ್ಲದಂತಾಗುವ ಸಮಯ ದೂರವಿಲ್ಲ.
ಒಂದಂತೂ ಸತ್ಯ ದಲಿತರಿಗೆ ಸಿಎಂ ಪದವಿ ನೀಡದೆ ಹೋದರೆ ಸಮುದಾಯದ ಶಾಸಕರು, ಸಚಿವರು ರಾಜೀನಾಮೆ ನೀಡಿ ಹೊರಬರಬೇಕು ಎಂಬ ಕರೆ ಇದೆಯಲ್ಲ. ಇದಕ್ಕೆ ಯಾವ ಶಾಸಕನು ಬದ್ಧತೆ ತೋರಿಸಲಾರ. ಅಂತಹ ಬದ್ಧತೆ ತೋರಿಸುವ ಶಾಸಕರು ಬಹಳ ವಿರಳ. ದಲಿತ ಹೋರಾಟದ ಇತಿಹಾಸ, ಮತ್ತು ಬಾಹ್ಯ ಹೋರಾಟದ ಶಕ್ತಿ ಪ್ರದರ್ಶನದಿಂದಲೇ ಪದವಿ ಪಡೆಯಬೇಕೇ ವಿನಹ ರಾಜೀನಾಮೆ ನೀಡುವ ಮೂಲಕ ನಮ್ಮ ಆಸೆ ಈಡೇರಿಸಿಕೊಳ್ಳುತ್ತೇವೆ ಎಂಬುದುಬಡವನ ಸಿಟ್ಟು ದವಡೆಗೆ ಮೂಲಎಂಬಂತಾಗುತ್ತದೆ.
ದಲಿತರೊಬ್ಬರು ಮುಖ್ಯಮಂತ್ರಿಯಾಗಲಿ ಎಂದು ಬಹಿರಂಗವಾಗಿ ಹೇಳಿಕೆ ನೀಡುವುದೇ ಅಪರಾಧ ಎಂಬಂಥ ಸಂದರ್ಭದಲ್ಲಿ ಸಚಿವ ಸಂಪುಟದಲ್ಲಿದ್ದುಕೊಂಡೆ ಗಟ್ಟಿ ಮನಸ್ಸು ಮಾಡಿ ಹೇಳಿದ ಶ್ರೀನಿವಾಸ್ ಪ್ರಸಾದ್ ಅಂತ ನಾಯಕರಿಗೆ ಮೊದಲು ಥ್ಯಾಂಕ್ಸ್ ಹೇಳಬೇಕಾಗಿದೆ. ನಾಳೆ ರಾಜೀನಾಮೆ ಕೊಟ್ಟು ಹೊರಬರಬೇಕು ಎಂದು ಸಂಘಟನೆಗಳು ಒತ್ತಡ ಹೇರಿದರೆ ಅವರೇ  ರಾಜೀ ನಾಮೆ ಬೀಸಾಕಿ ಹೊರ ಬರುತ್ತಾರೆಯೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಬಂಡಾಯವೇಳುವ ದಾರ್ಷ್ಯ ತೋರಿಸುವ ನಾಯಕರು ಕಾಣಿಸುತ್ತಿಲ್ಲ. ಇನ್ನೂ ದಿನಕ್ಕೊಂದು ಹೇಳಿಕೆ ನೀಡುತ್ತಾ ಸದಾ ಸುದ್ದಿಯಲ್ಲಿರುವ ಆಂಜನೇಯವರ ಬಗ್ಗೆ ಹೇಳದೆ ಇರುವುದೇ ಒಳ್ಳೆಯದು.
ದಲಿತರ ವಿರುದ್ಧ ದಲಿತರನ್ನೇ ಎತ್ತಿಕಟ್ಟಲು ಈಗಾಗಲೇ ಸಿದ್ದು ಮುಂದಾಗಿದ್ದಾರೆ. ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರನ್ನು ದಲಿತರ ವಿರುದ್ಧವೇ ಛೂ ಬಿಟ್ಟಿದ್ದಾರೆ. ಪಾಪ ಆಂಜನೇಯದೇವರು ಸಮಾಜ ಕಲ್ಯಾಣದಲ್ಲಿ ತೊಡಗಿದ್ದಾರೆ. ಲೋಕದ ಪರಿವೇ ಇಲ್ಲದಂತೆ ಮಾತನಾಡುತ್ತಿದ್ದಾರೆ. ಸಭೆ ನಡೆಸಿದವರು ಕಾಂಗ್ರೆಸ್ ಪಕ್ಷದವರಲ್ಲ. ಅಂತಹ ಸಭೆಗಳಿಗೆ ಮಹತ್ವ ನೀಡಬೇಕಾದ ಅಗತ್ಯವಿಲ್ಲ ಎಂದು ಹೇಳುವ ಮೂಲಕ ಸಿಎಂ ಪರ ನಿಂತಿದ್ದಾರೆ.

ಸವಾಲ್ಗೆ ಪ್ರತಿ ಸವಾಲು ಒಡ್ಡುವ ಸಿಎಂ ಈಗಾಗಲೆ ತಮ್ಮ ಬೆಂಬಲಿಗರ ಸಂಖ್ಯೆ ಗಣನೆಗೆ ತೆಗೆದುಕೊಳ್ಳುವಲ್ಲಿ ತಲ್ಲೀನರಾಗಿದ್ದಾರೆ. ಜತೆಗೆ ತಮ್ಮ ಸಮಾಜದ ಮುಖಂಡರ ಸಭೆ ನಡೆಸಿ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜುಗೊಳಿಸಿಕೊಳ್ಳುವಂತೆ ಸೂಚಿಸಿದ್ದಾರೆ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಒಂದು ವೇಳೆ ಹೋರಾಟದ ಮೂಲಕ ಸಿಎಂ ಪದವಿ ಕಿತ್ತುಕೊಂಡರು ಮುಂದಿನ ದಿನಗಳಲ್ಲಿ ದಲಿತರಿಗೆ ಸಂಕಷ್ಟದ ಕಾಲವೇ. ಅಷ್ಟಕ್ಕೂ ಸಮುದಾಯದವರು ಸಿಎಂ ಆದ ಕೂಡಲೇ ಅವರ ಎಲ್ಲ ಸಮಸ್ಯೆಗಳು ಈಡೇರಿಬಿಡುತ್ತವೆ ಎಂಬ ಭ್ರಮೆ ಯಾವ ದಲಿತರಲ್ಲಿ ಇಲ್ಲ. ಸಭೆ ನಡೆಸಿದವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದವರಲ್ಲ ಎಂದು ಹೇಳುತ್ತಿರುವ ಮುಠ್ಠಾಳರು ತಮಗೆ ಬದ್ಧತೆ ಇದ್ದರೆ ಕಾಂಗ್ರೆಸ್ ಎಸ್ಸಿ,ಎಸ್ಟಿ ಘಟಕದ ಪದಾಧಿಕಾರಿಗಳು ಸಭೆ ನಡೆಸಿ ಬದ್ಧತೆ ಪ್ರದರ್ಶಿಸಲಿ. ಸಭೆ ನಡೆಸಿದವರು ಕಾಂಗ್ರೆಸ್ ಹಿತೈಷಿಗಳಲ್ಲದೆ ಇರಬಹುದು. ಆದರೆ ಕಾಂಗ್ರೆಸ್ ದಲಿತರ ಹಿತೈಷಿ ಆಗುವುದು ಯಾವಾಗ?

1 comment: