Friday 20 March 2015

ಸಿಬಿಐ ಅಂದ್ರೆ ಸಿಎಂಗೆ ಏಕೆ ಚಳಿ?

ದಕ್ಷ ಐಎಸ್ ಅಧಿಕಾರಿ ಡಿ.ಕೆ.ರವಿ ಅವರ ಅನುಮಾನಾಸ್ಪದ ಸಾವಿನ ತನಿಖೆಯನ್ನು ರಾಜ್ಯ ಸರ್ಕಾರ ರಾಜ್ಯದ ಜನತೆಯ ಬೇಡಿಕೆಯಂತೆ ಸಿಬಿಐಗೆ ವಹಿಸಲು ಹಿಂದೇಟು ಹಾಕುತ್ತಿರುವುದು ನೋಡಿದರೆ ಇದರಲ್ಲಿ ದೊಡ್ಡ ಕುಳಗಳ ಕೈವಾಡವಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. 
ವ್ಯವಸ್ಥೆ ವಿರುದ್ಧ ಈಜುವುದರ ಜತೆಗೆ ಶ್ರೀಸಾಮಾನ್ಯನ ಕಣ್ಣೀರು ಒರೆಸಲು ಧೈರ್ಯ ಮಾಡುವ ಪ್ರಾಮಾಣಿಕ ಅಧಿಕಾರಿಗಳೇ ನಿಗೂಢವಾಗಿ ಕೊಲೆಯಾಗುತ್ತಾರೆ ಎಂದರೆ ಈ ಭ್ರಷ್ಟ ವ್ಯವಸ್ಥೆಯನ್ನು ಸರಿಪಡಿಸಲು ಇನ್ಯಾವ ಅಧಿಕಾರಿ ಬೇಕು?
ಸರ್ಕಾರದ ಬೊಕ್ಕಸ ತುಂಬಲು ಹಗಲಿರುಳು ಶ್ರಮಿಸಿದ ಡಿ.ಕೆ.ರವಿಯಂತಹ ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ಇಲ್ಲ ಎಂದರೆ ಏನರ್ಥ? ಭೂಗಳ್ಳರ ವಿರುದ್ಧ ಸಮರವೇ ಸಾರಿದ್ದ ಡಿ.ಕೆ. ರವಿ ಅಧರ್ಯದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆಯೇ? ಹುಲಿ ಎಂದಾದರೂ ಆತ್ಮಹತ್ಯೆ ಮಾಡಿಕೊಂಡಿರುವುದು ಇತಿಹಾಸದಲ್ಲಿದೆಯೇ? ಡಿ.ಕೆ. ರವಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಸುದ್ದಿಯಾದಾಗಲೇ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿತ್ತು. ಆದರೆ ಈ ಪ್ರಕರಣವೂ ಹತ್ತರಲ್ಲಿ ಹನ್ನೊಂದು ಎಂದು ನಿರ್ಲಕ್ಷ್ಯ ವಹಿಸಿತು. 
ಇಷ್ಟೊಂದು ಗಂಭೀರತೆ ಪಡೆದುಕೊಳ್ಳುತ್ತದೆ ಎಂದು ಸ್ವತಃ ಮುಖ್ಯಮಂತ್ರಿಗಳೇ ಕನಸು ಮನಸ್ಸಿನಲ್ಲಿ ಅಂದುಕೊಂಡಿರಲಿಲ್ಲ ಏನೋ? 
ರವಿ ಪ್ರಕರಣವನ್ನು ಇಟ್ಟುಕೊಂಡು ಬಿಜೆಪಿ, ಜೆಡಿಎಸ್ ರಾಜಕಾರಣ ಮಾಡಲು ಹೊರಟಿರಬಹುದು. ಸರ್ಕಾರವನ್ನು ಇಕ್ಕಟ್ಟಿಗೂ ಸಿಲುಕಿಸಬಹುದು. ಆದರೆ ಶ್ರೀಸಾಮಾನ್ಯನಿಗೆ ಯಾವ ರಾಜಕಾರಣವಿದೆ?
ನಾಡಿನ ಒಕ್ಕೊರಲ ಬೇಡಿಕೆಯನ್ನೇ ತಳ್ಳಿ ಹಾಕುವಷ್ಟು ಕಟುಕರಾದರೆ ನೀವು ಯಾರ ಪರವಾಗಿ ಕೆಲಸ ಮಾಡುತ್ತಿದ್ದೀರಿ? ಜನತೆಯ ಹಿತ ಕಾಪಾಡಬೇಕಾದ ಸರ್ಕಾರ ಭೂಗಳ್ಳರ ಪರ ನಿಂತರೆ ಬೇಲಿಯೇ ಎದ್ದು ಹೊಲ ಮೆಯ್ದಂತೆ ಅಲ್ಲವೇ? ಪ್ರಾಮಾಣಿಕ ಅಧಿಕಾರಿಗಳ ಸಾವಿನಲ್ಲೂ ರಾಜಕೀಯ ಬೆರೆಸಿದರೆ ನಾಡಿನ ಜನ ಕ್ಷಮಿಸುತ್ತಾರೆಯೇ? ಜನರ ಬೇಡಿಕೆಯಂತೆ ಈ ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಸರ್ಕಾರ ಕಳೆದುಕೊಳ್ಳುವುದೇನಿದೆ? ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ ಹೊರತು ಸಿದ್ದರಾಮಯ್ಯನವರಿಗಲ್ಲ.
ಸಿಬಿಐ ಎಂಬ ಸಂಸ್ಥೆ ಕೇಂದ್ರ ಸರ್ಕಾರದ ಕೈಗೊಂಬೆ ಎಂಬುದೇ ಕಾರಣವೇ?. ಕೇಂದ್ರ ಸಿಬಿಐಯನ್ನು ಹೇಗೆ ಬೇಕೊ ಹಾಗೆ ಬಳಸಿಕೊಂಡರೆ ಹೇಗೆ ಎಂಬ ಆತಂಕ ಸಿದ್ದರಾಮಯ್ಯರನ್ನು ಕಾಡುತ್ತಿರಬಹುದೇ?. ಇದರಿಂದಾಗಿಯೇ ತನಿಖೆಯ ಮೇಲೆ ಪ್ರಭಾವ ಬೀರಲು ಇಲ್ಲದ ಹೇಳಿಕೆ ನೀಡುತ್ತಿರ ಬಹುದಲ್ಲವೇ? ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ತಿಳಿದುಬಂದಿದೆ ಎಂದು ಪದೇ ಪದೇ ಹೇಳುತ್ತಿರುವ ಸಿಎಂ, ಏನನ್ನು ನಿರೂಪಿಸಲು ಹೊರಟಿದ್ದಾರೆ. ಇನ್ನೂ ತನಿಖಾ ವರದಿಯೇ ಸರ್ಕಾರದ ಕೈಸೇರಿಲ್ಲ ಎಂದ ಮೇಲೆ ಆತ್ಮಹತ್ಯೆ ಎಂದು ಯಾವ ಆಧಾರದ ಮೇಲೆ ಹೇಳುತ್ತಿದ್ದಾರೆ? ‘ನಿನ್ನನ್ನು ಎಲಿಮಿನೇಟ್ ಮಾಡುತ್ತೇನೆಂದು ರವಿಗೆ ದೂರವಾಣಿ ಕರೆ ಮಾಡಿ ಪ್ರಾಣ ಬೆದರಿಕೆ ಹಾಕಿದ್ದರು ಎಂಬ ಸಂಗತಿ ಬಗ್ಗೆ ಸಿಎಂ ಏಕೆ ಚಕಾರ ಎತ್ತುತ್ತಿಲ್ಲ. ಮಂಡ್ಯ ಜಿ.ಪಂ. ಸಿಇಓ ರೋಹಿಣಿ ಸಿಂಧೂರಿ ರವಿಗೆ ೪೪ ಬಾರಿ ಕರೆ ಮಾಡಿದ್ದರು ಎಂಬ ವಿಚಾರ ಗೊತ್ತಾಗುತ್ತದೆ. ಆದರೆ ಪ್ರಾಣ ಬೆದರಿಕೆ ಹಾಕಿದವರ ಬಗ್ಗೆ ಮಾಹಿತಿ ಇಲ್ಲವೇ? ರವಿ ಅವರಿಗೆ ೩ ತಿಂಗಳಿನಿಂದ ಯಾರು ಕರೆ ಮಾಡಿದ್ದರು. ಏಕೆ ಕರೆ ಮಾಡಿದ್ದರು ಎನ್ನುವುದರ ಬಗ್ಗೆ ತನಿಖೆ ನಡೆಯಬೇಕು. ಆದರೆ ಸಿಂಧೂರಿ ಅವರಿಂದ ಬಲವಂತವಾಗಿ ಸಾಕ್ಷ್ಯ ಸಂಗ್ರಹಿಸಿದ ಹಿಂದಿರುವ ಮರ್ಮವೇನು? ಸಾಕ್ಷ್ಯ ಸಂಗ್ರಹ ಮಾಡುವ ಸಂದರ್ಭವನ್ನು ಚಿತ್ರೀಕರಣ ಮಾಡಿ ಕೊಂಡಿರುವುದೇಕೆ? ಮತ್ತೋರ್ವ ಪ್ರಾಮಾಣಿಕ ಅಧಿಕಾರಿಯ ಸಾವಿಗೆ ಮುನ್ನುಡಿ ಬರೆದುಕೊಳ್ಳುತ್ತಿದೆಯೇ? ಉತ್ತಮ ಮಹಿಳಾ ಅಧಿಕಾರಿಯ ಮೇಲೆ ಅಪಪ್ರಚಾರ ನಡೆಸುವ ಮೂಲಕ ಪ್ರಕರಣ ಮುಚ್ಚಿ ಹಾಕುವ ಹುನ್ನಾರವಲ್ಲವೇ? ಮಂಡ್ಯ ಬಿಟ್ಟು ಹೋಗದಿದ್ದರೆ ಜನ ಜೀವಂತವಾಗಿ ಸುಟ್ಟುಬಿಡುತ್ತಾರೆ ಎಂದು ಕೆಲವರು ಬೆದರಿಕೆ ಹಾಕುತ್ತಿದ್ದರೂ ಸರ್ಕಾರ ಅಂಥವರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳದೆ ಬೆಂಬಲವಾಗಿ ನಿಂತಿರುವುದೇಕೆ? ರವಿ ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಿಂಬಿಸಲು ಹೊರಟಿರುವುದು ಪ್ರಕರಣ ಮುಚ್ಚಿ ಹಾಕುವ ಸಂಚಲ್ಲವೇ? ಸಿಐಡಿ ತನಿಖೆ ಪ್ರಗತಿಯಲ್ಲಿರುವಾಗಲೇ ಸಿಎಂ ಆಡಿರುವ ಮಾತು ಏನನ್ನು ಸೂಚಿಸುತ್ತದೆ? ಸಿಐಡಿ ಯಾವ ರೀತಿಯ ವರದಿ ನೀಡಬೇಕು ಎಂಬುವ ಸಂದೇಶ ಸಿದ್ದರಾಮಯ್ಯ ತಮ್ಮ ಹೇಳಿಕೆ ಮೂಲಕ ರವಾನಿಸುತ್ತಿದ್ದಾರೆ ಎಂಬ ಸಂಶಯ ಸಾರ್ವಜನಿಕರಿಗೆ ಕಾಡುತ್ತಿದೆ. ಆದರೆ ಸಿಎಂಗೆ ಬೇರೆ ಚಳಿಯೇ ಶುರುವಾಗಿದೆ. ಇದಕ್ಕೆ ಕಾರಣವೂ ಇದೆ. ವಕೀಲ ರಶೀದ್ ಹತ್ಯೆ ಪ್ರಕರಣದಲ್ಲಿ ಜಾಲಪ್ಪಗಾದ ಸ್ಥಿತಿ ಬಂದರೆ ಏನು ಮಾಡೋದು? ವಿನಾಕಾರಣ ಅನೇಕ ರೀತಿಯ ತೊಂದರೆ ಎದುರಿಸಬೇಕಾಗುತ್ತದೆ ಎಂಬ ಆತಂಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇದ್ದಂತಿದೆ. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದರೆ ಡಿ.ಕೆ.ರವಿ ಅಧಿಕಾರ ನಿರ್ವಹಿಸಿದ ಸ್ಥಳಗಳಲ್ಲಿ ಏನೇನು ಕೆಲಸ ಮಾಡಿದ್ದರು? ಯಾರ್‍ಯಾರ ಮೇಲೆ ದಾಳಿ ನಡೆಸಿದ್ದರು ಎಂಬುದು ಸಹಜವಾಗಿಯೇ ತನಿಖೆಗೊಳಪಡುತ್ತದೆ. ಈಗಿರುವ ಮಾಹಿತಿಯ ಪ್ರಕಾರ ಸಿದ್ದರಾಮಯ್ಯ ಸಂಪುಟದ ಪ್ರಭಾವಿಯೊಬ್ಬರಿಗೆ ಸಂಬಂಧಿಸಿದ ಕಂಪೆನಿಯಿಂದ ಹಿಡಿದು ಹಲವು ರಿಯಲ್ ಎಸ್ಟೇಟ್ ಕಂಪನಿಗಳು, ಉದ್ಯಮಗಳ ಪ್ರಭಾವಿಗಳು ತನಿಖೆಯ ವ್ಯಾಪ್ತಿಗೆ ಒಳಪಡುವುದು ನಿಶ್ಚಿತ. ಒಂದು ಸಲ ಸಿಬಿಐ ಆ ಕೆಲಸಕ್ಕೆ ಮುಂದಾದರೆ ತಮ್ಮ ಆಪ್ತರಾದ ಸಚಿವರು ರಾಜೀನಾಮೆ ನೀಡುವ ಅನಿವಾರ್ಯತೆ ಎದುರಾಗಬಹುದಲ್ಲದೇ ಹಲಮಂದಿ ಜನಪ್ರತಿನಿಧಿಗಳು, ಉದ್ಯಮಿಗಳು ಗಂಡಾಂತರಕ್ಕೆ ಸಿಲುಕುತ್ತಾರೆ. ಇದರಿಂದ ಸರ್ಕಾರ ಪತನವಾದರೆ ಎಂಬ ಭಯ. ಸಿಬಿಐ ತನಗೆ ಸಿಗುವ ಒಂದೊಂದು ಎಳೆಯನ್ನೂ ವಿವರವಾಗಿ ಬಗೆದು ನೋಡುವುದರ ಪರಿಣಾಮವಾಗಿ ಹಲಮಂತ್ರಿಗಳು, ಶಾಸಕರು, ಉದ್ಯಮಿಗಳು ಸಹಜವಾಗಿಯೇ ತನಿಖೆಯ ವ್ಯಾಪ್ತಿಗೆ ಒಳಪಡುತ್ತಾರೆ. ಒಂದು ವೇಳೆ ಇಂತವರ ಪೈಕಿ ಯಾರಾದರೂ ತಮಗೆ ಹತ್ತಿರವಿದ್ದರೆ ತನಿಖೆಯ ಬಳ್ಳಿ ತಮ್ಮನ್ನೂ ಸುತ್ತುವರಿಯಬಹುದು. ಹೀಗಾಗಿ ಪ್ರಕರಣ ಸಿಬಿಐ ತನಿಖೆಗೆ ವಹಿಸಿದರೆ ಹಗ್ಗ ಕೊಟ್ಟು ಕೈಕಟ್ಟಿಸಿಕೊಂಡಂತೆ ಎಂಬ ಭಯ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಡುತ್ತಿದೆ. 



No comments:

Post a Comment