Saturday 22 November 2014

ವೇಶ್ಯಾವೃತ್ತಿಗೆ ಕಾಯ್ದೆಯ ಮುದ್ರೆ...!

ವೇಶ್ಯಾವಾಟಿಕೆಗೆ ಮೂಲ ಕಾರಣನೇ ಪುರುಷನಾದರೂ ಹೆಣ್ಣನ್ನೇ ಮಾತ್ರ ದೂಷಿಸುವುದು ಇಂದು ನಿನ್ನೆಯ ಪ್ರಶ್ನೆಯಲ್ಲ. ಸಂಸ್ಕೃತಿ ಹೆಸರಿನಲ್ಲಿ ಹೆಣ್ಣಿಗೆ ಶೋಷಣೆ ಮಾಡುವುದು ಹಿಂದಿನಿಂದ ನಡೆದು ಬಂದ ಪರಿಪಾಠ ಎಂಬಂತೆ ಮುಂದುವರಿಯುತ್ತಿದೆ.
ಈ ವೇಶ್ಯಾವೃತ್ತಿ ಎಂಬುದೇ ಸಮಾಜಕ್ಕೆ ಅಂಟಿರುವ ಮಹಾಕಳಂಕ. ಇಂತಹ ಕಳಂಕಿತ ವೃತ್ತಿ ನಡೆಸಲು ಕಾನೂನಿನ ಮನ್ನಣೆ ಬೇರೆ ಬೇಕೆ? ಪರಿಸ್ಥಿತಿಯ ಗುಲಾಮರಾಗಿ ಈ ವೃತ್ತಿಗೆ ದೂಡಲ್ಪಟ್ಟ ಅಮಾಯಕರ ಆಸರೆಗಾಗಿ ಮತ್ತು ಅಂತಹ ಹೀನ ವತ್ತಿಯ ವಿಮೋಚನೆಗಾಗಿ ಕಾನೂನು ಬೇಕೇ ಹೊರತು, ಆ ವೃತ್ತಿಯನ್ನೇ ಕಾನೂನುಬದ್ಧಗೊಳಿವುದು ಸರ್ವತಾ ಸರಿಯಾದ ಕ್ರಮವಾಗಲಾರದು. ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ನಿಯಂತ್ರಣಕ್ಕೆ ವೇಶ್ಯಾವೃತ್ತಿಗೆ ಅನುಮತಿ ನೀಡಬೇಕು ಎಂಬುದು ಯಾವ ಪ್ರಜ್ಞಾವಂತ ನಾಗರಿಕನೂ ಒಪ್ಪಲಾರ.
ಅತ್ಯಾಚಾರ ಎಂಬುದು ವಿಕೃತ ಮನಸ್ಥಿತಿಯ ಮನುಷ್ಯನ ಕೃತ್ಯವೇ ಹೊರತು ಲೈಂಗಿಕ ವಾಂಛೆ ಸರ್ವತಾ ಅಲ್ಲ. ವೇಶ್ಯಾವೃತ್ತಿಯೂ ಕೂಡ ಅತ್ಯಾಚಾರವೇ ಆಗಿದೆ. ಹಸಿವು ಬಡತನ, ನೆರೆಹೊರೆಯವರ ಕುಹಕದ ಮಾತಗಳು, ಸಮಾಜದ ನಿರ್ಲಕ್ಷ್ಯಕ್ಕೆ ಒಳಗಾಗಿ ವೇಶ್ಯಾವೃತ್ತಿಗೆ ಇಳಿಯುವ ನಮ್ಮ ಸಹೋದರಿಯರು, ಸಾಮಾನ್ಯರಂತೆ ಉತ್ತಮ ಜೀವನ ನಡೆಸಬೇಕು ಎಂಬ ಆಶಯ ವ್ಯಕ್ತವಾಗಬೇಕೇ ಹೊರತು, ಕಾನೂನುಬದ್ಧ ಮಾಡಿದರೆ ವೇಶ್ಯಯರ ಬದುಕು ಹಸನಾಗುತ್ತದೆ ಎಂದು ಭವಿಷ್ಯ ನುಡಿಯುವುದು ಕಾಲದ ವ್ಯಂಗ್ಯವಲ್ಲದೆ ಮತ್ತೇನಲ್ಲ.
ಕೆಂಪು ದೀಪದ ಪ್ರದೇಶಗಳಲ್ಲಿರುವ ಹೆಣ್ಣು ಮಕ್ಕಳೂ ನಮ್ಮಂತೆ ಬದುಕು ಸಾಗಿಸಬೇಕು ಎಂದು ನಮ್ಮ ಸಾಹಿತಿಗಳು ಅವರಲ್ಲಿ ಆತ್ಮ ವಿಶ್ವಾಸ ತುಂಬುವ ಕೆಲಸ ಮಾಡಬೇಕು. ಆದರೆ, ಅದೇ ವೃತ್ತಿಯಲ್ಲಿ ಮುಂದುವರಿಯಲು ವೃತ್ತಿಯನ್ನೇ ಕಾನೂನುಬದ್ಧಗೊಳಿಸಬೇಕೆ? ಒಂದು ಅಪರಾಧ ತಡೆಯಲು ಇನ್ನೊಂದು ಅಪರಾಧ ಮಾಡಲು ಕಾನೂನು ದಾರಿ ಮಾಡಿಕೊಟ್ಟಂತಾಗುವುದಿಲ್ಲವೇ?
ಇಲ್ಲಿಯೂ ನರಕಯಾತನೆ ಅನುಭವಿಸುವವಳು ಅದೇ ಹೆಣ್ಣೆ ಆಗಿರುತ್ತಾಳೆ ಎಂದರೆ ಪುರುಷ ಪ್ರಧಾನ ವ್ಯವಸ್ಥೆಯ ತಂತ್ರವಲ್ಲದೆ ಮತ್ತೇನು? ಪಾಶ್ಯಾತ್ಯ ರಾಷ್ಟ್ರಗಳಾದ ಯುರೊಪಿನ ಸ್ವಿಟನ್, ನಾರ್ವೆ, ಜರ್ಮನಿಯಲ್ಲಿ ವೇಶ್ಯಾವಾಟಿಕೆ ಕಾನೂನು ಬದ್ಧವಾಗಿದೆ. ಇಂಗ್ಲೆಂಡ್, ನೆದರ್‌ಲ್ಯಾಂಡ್ ಮತ್ತು ಬೆಲ್ಜಿಯಂಗಳಲ್ಲಿ ಕೆಲವು ನಿರ್ಬಂಧಗಳನ್ನು ವಿಧಿಸಿ ವೇಶ್ಯಾವೃತ್ತಿಯನ್ನು ಕಾಯ್ದೆಬದ್ಧಗೊಳಿಸಲಾಗಿದೆ. ಇನ್ನೂ ಏಷ್ಯಾಖಂಡದ ಥೈಲಾಂಡ್ ಮತ್ತು ಜಪಾನದೇಶದಲ್ಲಿ ವೇಶ್ಯಾವಾಟಿಕೆ ಮುಕ್ತವಾಗಿದ್ದರೂ ಹಲವು ಕಟ್ಟಳೆಗಳನ್ನು ವಿಧಿಸಲಾಗಿದೆ. ಆದರೂ ಅತ್ಯಾಚಾರದಂತಹ ಪ್ರಕರಣಗಳು ವರದಿಯಾಗುತ್ತಿರುವುದನ್ನು ಕಾನೂನುಬದ್ಧ ಪರ ಮಾತನಾಡುವವರು ಗಮನಿಸಬೇಕು.
ವೇಶ್ಯಾವೃತ್ತಿಯಲ್ಲಿ ತೊಡಗಿಕೊಂಡಿರುವ ಬಹುಪಾಲು ಜನ ಮಹಿಳೆಯರು ಶೋಷಿತ ಸಮಾಜದಿಂದ ಬಂದವರಾಗಿದ್ದಾರೆಯೇ ವಿನಹ ಉಚ್ಚ ವರ್ಗದವರಲ್ಲ. ಈ ಉಚ್ಚ ವರ್ಗದ ಮಹಿಳೆಯರು ಸ್ವಾಭಿಮಾನ, ಕುಲಗೌರವ ತಮ್ಮತನ ಎಂಬುದು ಎಷ್ಟೇ ಕಷ್ಟ ಬಂದರೂ ಬಿಟ್ಟುಕೊಡಲಾರರು. ಆದರೆ, ಶೋಷಿತ ಮಹಿಳೆಯರು ಸ್ವಾಭಿಮಾನ ಛಲದಂಕಮಲ್ಲರಾದರೂ ಪರಿಸ್ಥಿತಿಯ ಅನಿವಾರ್ಯತೆಗೆ ಸಿಲುಕಿ ಇಂತಹ ಹೀನ ವೃತ್ತಿಗೆ ಇಳಿಯಬೇಕಾಗುತ್ತದೆ.
ಕೆಲವು ಸಂದರ್ಭದಲ್ಲಿ ನಂಬಿಕಸ್ಥರೇ ಇಂತಹ ವೃತ್ತಿಗೆ ದೂಡಿಬಿಡುವುದು ಇದೆ. ಈ ವೃತ್ತಿಯ ನರಕದ ಕೂಪಕ್ಕೆ ಒಂದು ಬಾರಿ ಪ್ರವೇಶವಾದರೆ ಆಯಿತು, ಅವರ ಜೀವನ ಗಾಣದ ಬಾಯಿಗೆ ಕಬ್ಬು ಸಿಕ್ಕು ಸಿಪ್ಪೆಯಾದಂತೆಯೇ? ತುಂಬು ಸಂಸಾರ ನಡೆಸುವ ವ್ಯಕ್ತಿಯೊಬ್ಬ ಅಡ್ಡದಾರಿ ಹಿಡಿದು ಇನ್ನೊಂದು ಹೆಣ್ಣಿನೊಂದಿಗೆ ಸರಸವಾಡಿದರೆ ಅದು ಗಂಡಿಗೆ ಪ್ರತಿಷ್ಠೆ. ಆದರೆ ಹೆಣ್ಣು ಅಪ್ಪಿ ತಪ್ಪಿ ಅಂತಹ ಸಂದಿಗ್ಧ ಸ್ಥಿತಿಯಲ್ಲಿ ಸಿಕ್ಕಿ ಹಾಕೊಂಡರೆ ಮನೆಯಿಂದ ಹೊರಗಡೆ ಹೋಗಬೇಕಾದ ಅನಿವಾರ್ಯತೆ ಸಮಾಜವೇ ಸೃಷ್ಟಿಸಿಬಿಡುತ್ತದೆ.
ಆಧುನಿಕ ಸಮಾಜದಲ್ಲಿಯೂ ಕೂಡ ಉತ್ತರಕರ್ನಾಟಕ ಭಾಗದಲ್ಲಿ‘ಬಸವಿ’ ಬಿಡುವ ಪದ್ಧತಿ ಜೀವಂತವಾಗಿದೆ. ಈ ಪದ್ಧತಿ ವೇಶ್ಯಾವೃತ್ತಿ ಹೊಲುವುದಿಲ್ಲವಾದರೂ ಅಂತರ್ಯವಾಗಿ ಸಮಾಜ ಅವರನ್ನು ನೋಡುವ ದೃಷ್ಟಿ ಒಂದೇಯಾಗಿರುತ್ತದೆ. ವೇಶ್ಯಾವೃತ್ತಿಗೆ ಬರುವವರು ತಮ್ಮತನ ಮತ್ತು ಶೀಲದ ಬಗ್ಗೆ ಯಾವುದೇ ಯೋಚನೆ ಮಾಡುವುದಿಲ್ಲ. ಅವರಿಗೆ ಬೇಕಾಗಿರುವುದು ಬದುಕುವ ಮಾರ್ಗ.
ಹಾಗಾದರೆ ಬದುಕಲು ಈ ವೃತ್ತಿಯೇ ಬೇಕೆ? ವೇಶ್ಯಾವೃತ್ತಿಯಲ್ಲಿ ತೊಡಗಿಕೊಂಡರೆ ಜೀವನವೇ ನಿಕೃಷ್ಟವಾಗುತ್ತದೆ ಎಂದ ಮೇಲೆ ಸೂಳೆಯಾಗಿ ಸುಖಪಡುವುದೇನಿದೆ. ಕಾಯ್ದೆಯ ನೀತಿ, ನಿಯಮ, ಚೌಕಟ್ಟು ಎಲ್ಲವನ್ನು ಬದಿಗೆ ಸರಿಸಿ ಮೊದಲೆ ಹೇಳಿರುವಂತೆ ವೇಶ್ಯಾವೃತ್ತಿಯನ್ನು ಒಂದು ಸಾಮಾಜಿಕ ವಿದ್ಯಾಮಾನವಾಗಿ ವಿಶ್ಲೇಷಿಸಹುದಾದರೆ ಅನೈತಿಕ ಕೃತ್ಯ, ನಾಗರಿಕ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ. ಹಾಗಾದರೆ ಹಿಂದಿನ ಕಾಲದಲ್ಲಿ ಈ ವೃತ್ತಿ ಇರಲಿಲ್ಲ ಎಂದಲ್ಲ.
ಮೊದಲು ನಮ್ಮ ಜನಪರ ಜೀವಪರ ಕಾಳಜಿಯುಳ್ಳ ಸಾಹಿತಿಗಳು, ಚಿಂತಕರು ಮತ್ತು ಘನ ಸರ್ಕಾರಗಳು ಮಹಿಳೆಯರಿಗೆ ಆರ್ಥಿಕ, ಮಾನಸಿಕ, ಹಾಗೂ ನೈತಿಕ ಬಲವನ್ನು ತುಂಬುವ ಕೆಲಸ ಮಾಡಬೇಕು. ಮಹಿಳೆ ಆರ್ಥಿಕ ಸಬಲಳಾದರೆ ಮಾತ್ರ ಇಂತಹ ಹೀನವೃತ್ತಿ ನಿಯಂತ್ರಿಸಲು ಸಾಧ್ಯವಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಂಡಾಗ ಈ ವೃತ್ತಿಗೆ ಕಡಿವಾಣ ಹಾಕಬಹುದಾಗಿದೆ.
ಪರ, ವಿರೋಧ ಚರ್ಚೆಗಳು ಏನೇ ಇರಲಿ, ಒಂದು ವೇಳೆ ಸರ್ಕಾರ ವೇಶ್ಯಾವೃತ್ತಿಯನ್ನು ಕಾನೂನುಬದ್ಧಗೊಳಿಸಿತು ಎಂದಾದರೆ ಈ ವೃತ್ತಿ ಶುಲ್ಕದಲ್ಲಿಯೇ ಸರ್ಕಾರ ನಡೆಯಬೇಕಾಗುತ್ತದೆಯಲ್ಲವೇ? ಮುಂದೆ ವೃತ್ತಿ ವ್ಯಾಪಾರವಾಗುತ್ತದೆ. ವ್ಯಾಪಾರ ಉದ್ಯಮವಾಗಿಬಿಟ್ಟರೆ.? ಈ ಉದ್ದಿಮೆಯನ್ನು ಗುತ್ತಿಗೆ ಪಡೆಯಲು ನಮ್ಮ ಉದ್ದಿಮೆದಾರರು, ಹಲ್ಲು ಕಿರಿದು ಜೊಲ್ಲು ಸುರಿಸಿ ತಾಮುಂದು ನಾಮುಂದು ಎಂದು ಬಂದರೂ ಅಚ್ಚರಿಪಡಬೇಕಾಗಿಲ್ಲ! ಗುತ್ತಿಗೆ ಪಡೆದವರ ಗುರಿ ಲಾಭವೇ ಹೊರತು ಈ ವೃತ್ತಿಯಲ್ಲಿ ತೊಡಗಿಕೊಂಡಿರುವ ಮಹಿಳೆಯರಿಗೆ ನ್ಯಾಯ ಒದಗಿಸುವುದಲ್ಲ. ಹಾಗಾದರೆ, ವೃತ್ತಿಯಲ್ಲಿ ತೊಡಗಿರುವ ಮಹಿಳೆಯರಿಗೆ ಏನು ಲಾಭ? ಎಂಬ ಪ್ರಶ್ನೆ ಸಹಜವಾಗಿಎದುರಾಗುತ್ತದೆ.
ಅಂದ ಹಾಗೆ, ಗುತ್ತಿಗೆ ಪಡೆಯುವ ಗುತ್ತಿಗೆದಾರ ಈ ವೃತ್ತಿಗೆ ಬರುವ ಮಹಿಳೆಯರ ರೂಪ, ಲಾವಣ್ಯ, ಅಂದಚೆಂದ, ಮೈಮಾಟ, ವಯಸ್ಸು ಮತ್ತು ಗಿರಾಕಿಗಳಿಗೆ ಅವಳು ತೋರಿಸುವ ಉತ್ಸಾಹ ಎಲ್ಲವನ್ನು ಪರಿಗಣಿಸಿಯೇ ವೃತ್ತಿ ಬಳಗಕ್ಕೆ ಸೇರಿಸಿ ಕೊಳ್ಳಬಹುದಾದರೆ? ಅವಳ ಸೌಂದರ್ಯ ಮಾಸಿದ ಕಾಲಕ್ಕೆ ಎಲ್ಲಿಗೆ ಹೋಗಬೇಕು? ಮತ್ತೆ ಅದೇ ಬೀದಿ ಬದಿಯಲ್ಲಿ ನಿಂತು ಚಪ್ಪಾಳೆ ಹೊಡೆದು ಕರೆದರೂ ಕ್ಯಾರೇ ಎನ್ನದ ಪರಿಸ್ಥಿತಿ ಬರಬಹುದಲ್ಲವೇ? ಅನಿವಾರ್ಯತೆಗೆ ಸಿಲುಕಿ ವೇಶ್ಯಾವೃತ್ತಿಗೆ ಬರುವ ಮಹಿಳೆಯರಿಗೆ ಇದರ ಲಾಭ ಏನು? ಕಟುಮಸ್ತಾದ ಕಾಲೇಜ್ ಹುಡುಗಿಯರನ್ನೇ ಆ ಉದ್ಯಮಿ ಆಯ್ಕೆ ಮಾಡಿಕೊಳ್ಳಬಲ್ಲ ಎಂದಾದರೆ ಪರಿಸ್ಥಿತಿಯ ಒತ್ತಡಕ್ಕೆ ಮಣಿದು ಬಲುಪಶುವಾಗಿ ಹೀನ ವೃತ್ತಿಗೆ ಆಹುತಿಯಾದ ಆ ಅಬಲೆಯರ ಸಬಲತೆ ಕಾಯ್ದೆಯಿಂದ ಸಾಧ್ಯವೆ?