Saturday 2 March 2013

ಜಾತಿ ಮೀರಲು ನಾಗರಿಕ ಸಮಾಜವೇ ಅಡ್ಡಿ

ಜಾತಿವ್ಯವಸ್ಥೆ ನಾಶವಾಗಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಕನಸು ಕಂಡ ಮಹಾನ್ ವ್ಯಕ್ತಿಗಳು ದೇಶದಲ್ಲಿ ಬಹಳಷ್ಟು ಜನರಿದ್ದಾರೆ. ಅಂತವರ ಪಟ್ಟಿಯಲ್ಲಿ ಮೊದಲ ಹೆಸರು ಜ್ಯೋತಿಭಾ ಫುಲೆ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರದು. ಆದರೆ ಅವರ ಕನಸನ್ನು ನನಸು ಮಾಡಬೇಕಾದ ಆಧುನಿಕ ಶಿಕ್ಷಣವೂ ಇಂದು ಜಾತಿಯ ಕೇಂದ್ರೀಕೃತವಾಗಿಯೇ ಮುಂದುವರಿಯುತ್ತಿದೆ. ಆಧುನಿಕತೆ ಜಾತಿ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ. ಇಂದಿನ ವಿಶ್ವವಿದ್ಯಾಲಯಗಳು ಜಾತಿಯ ಕೇಂದ್ರಗಳಾಗಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿವೆ. ರಾಜ್ಯದ ಎಲ್ಲಾ ಭಾಗಗಳಲ್ಲಿ ಒಂದೊಂದು ಪ್ರಭಲ ಜಾತಿಯ ಕಪಿಮುಷ್ಟಿಯಲ್ಲಿ ವಿವಿಗಳಿವೆ.
ಗುಲಬರ್ಗಾದ ವಿವಿಯಲ್ಲಿ ದಲಿತರದೆ ಪ್ರಾಬಲ್ಯ, ಮೈಸೂರು ವಿವಿ ಒಕ್ಕಲಿಗರಿಗೆ ಮೀಸಲಾದಂತಿದೆ. ಹೀಗೆ ಅನೇಕ ಕಡೆ ಆಯಾ ಜಾತಿ ಪ್ರಾಭಲ್ಯಕ್ಕನುಗುಣವಾಗಿ ವಿವಿಗಳು ಕೂಡ ಒಗ್ಗಿಕೊಂಡಿವೆ. ಇದರಿಂದಾಗಿ ವಿವಿಗಳು ಜಾತಿಯ ಭೂತದಿಂದ ಹೊರಬರಲು ಸಾಧ್ಯವಾಗಿಲ್ಲ ಎಂದ ಮೇಲೆ ಜಾತ್ಯತೀತ ಶಿಕ್ಷಣ ನೀಡಲು ಹೇಗೆ ಸಾಧ್ಯ? ಜಾಗತೀಕರಣದಿಂದ ಸಂಸ್ಕೃತಿಗೆ ಧಕ್ಕೆಯಾಗಿದೆ ಎಂಬ ಮಾತುಗಳು ಅಪ್ಪಟ್ಟ ಸುಳ್ಳು, ಹಿಂದು ಧರ್ಮದ ಪ್ರಕಾರ ಸಂಸ್ಕೃತಿ ಎಂದರೆ ಜಾತಿ, ಮತ, ಪಂಥ ಉಚ್ಛ ನಿಚ ಬಡವ ಬಲ್ಲಿದ ಎಂಬದೇ ಆಗಿದೆ.