Tuesday 6 August 2013

ಸಿದ್ದು ಸೇಡಿನ ರಾಜಕಾರಣ ಇತಿಹಾಸ ಕೆದಕಿ ಪಡೆದದ್ದು ಏನು?

ಕೇಂದ್ರ ಸರ್ಕಾರದ ಯುಪಿಎ ಅವಧಿ ಕೇವಲ ಒಂಭತ್ತು ತಿಂಗಳು ಇರುವಾಗಲೇ ಕೇಂದ್ರ ಚುನಾವಣಾ ಆಯೋಗ ಉಪ ಚುನಾವಣೆಗೆ ಅಧಿಸೂಚನೆ ಹೊರಡಿಸಿದೆ. ಒಲ್ಲದ ಮನಸ್ಸಿನಿಂದ ಚುನಾವಣಾ ಸಮರಕ್ಕೆ ಸಿದ್ಧವಾಗುತ್ತಿರುವ ಎಲ್ಲಾ ರಾಜಕೀಯ ಪಕ್ಷಗಳಿಗೆ ಇದು ಅಗ್ನಿ ಪರೀಕ್ಷೆಯೇ. ಯಾಕೆಂದರೆ ಈ ಉಪ ಚುನಾವಣೆ ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿ. 
ಕಳೆದ ಮೇನಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸಾಧಿಸಿದ ಅಭೂತಪೂರ್ವ ಗೆಲುವಿನಲ್ಲಿ ಮೈ ಮರೆಯುತ್ತಿ ರುವಾಗಲೇ ಧೂತ್ತನೆ ಚುನಾವಣೆ ಎದುರಾಗಿರುವುದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಪಾಲಿಗೆ ಅಗ್ನಿ ಪರೀಕ್ಷೆ.
ಯಾವುದೇ ಚುನಾವಣೆ ನಡೆದರೂ ಕೂಡ ಆ ಪಕ್ಷದ ಅಧ್ಯಕ್ಷರ ಮೇಲೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿರುವುದರಿಂದ ಚುನಾವಣೆಯ ಹೊಣೆಗಾರಿಕೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಮೇಲೂ ಇದೆ. ಈಗಾಗಲೇ ಸಚಿವ ಸ್ಥಾನ ಸಿಗದೆ ಇರುವ ಪಕ್ಷ ನಿಷ್ಠ ಮುಖಂಡರು ಒಳಗೊಳಗೆ ಸಿದ್ದು ಮೇಲೆ ಸಿಟ್ಟಿದೆ.
       ಹಲವು ನಾಯಕರು ಒಳಗೊಳಗೆ ಬುಸು ಗುಟ್ಟು ತ್ತಿದ್ದರೆ ಇನ್ನೂ ಕೆಲವರು ಬಹಿರಂಗವಾಗಿ ಕೋಪ ಪ್ರದರ್ಶಿಸುತ್ತಿದ್ದಾರೆ. ಇದು ಆಡಳಿತ ಪಕ್ಷದ ಆಂತರಿಕ ವಿಚಾರ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಒಕ್ಕಲಿಗ ಜಾತಿಯ ಅಧಿಕಾರಿಗಳನ್ನು ಗುರಿಯಾಗಿಟ್ಟುಕೊಂಡು ದೂರದ ಜಿಲ್ಲೆಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಎಚ್‌ಡಿಕೆ ಆ ಜನಾಂಗದ ಸಮಾವೇಶವೊಂದರಲ್ಲಿ ಗುಡುಗುತ್ತಾರೆ.