Monday 18 February 2013

ಮಹಿಳಾ ಸ್ವಾತಂತ್ರ್ಯ ಘೋಷಣೆ : ನಿಂತಿಲ್ಲ ಶೋಷಣೆ

ಅನಾದಿ ಕಾಲದಿಂದ ಬಂದ ಆಚರಣೆಗಳಿಗೆ ತಲೆಬಾಗಬೇಕಾ? ಅಥವಾ ಬಯಸಿದ ರೀತಿಯಲ್ಲಿ ಬದುಕನ್ನು ರೂಪಿಸಿಕೊಳ್ಳಬೇಕಾ?  ಎನ್ನುವ ತ್ರಿಶಂಕು ಸ್ಥಿತಿಯಲ್ಲಿ ಇಂದಿನ ಮಹಿಳೆಯರು ಕೂಡ ಇದ್ದಾರೆ. ಸ್ವತಂತ್ರ ಭಾರತದಲ್ಲಿ ಮಹಿಳೆಯರು ಏನೆಲ್ಲಾ ಸಾಧಿಸಿದ್ದಾರೆ ಸಾಧಿ ಸುತ್ತಿದಾರೆ ಎಂದರೂ ಅವರ ಮೇಲೆ ನಡೆಯುತ್ತಿರುವ ದೌರ್ಜನ್ಯ ದಬ್ಬಾಳಿಕೆ ನಿರ್ಮೂಲನೆಯಾಗಿವೆಯೇ? ಕೂಲಂಕುಷವಾಗಿ ವಿಮರ್ಶೆ ಮಾಡಿದಾಗ ಮಹಿಳೆಯ ಬದುಕಿನಲ್ಲಿ ಅಂಥಹ ಬದಲಾವಣೆಯೇನೂ ಕಂಡು ಬರದೆ ಆಧುನಿಕ ಭಾರತದ ಮಹಿಳೆಯರು ದುರಂತಕ್ಕೆ ಕೊರಳೊಡ್ಡಿರುವ ನಿದರ್ಶನಗಳು ನಮ್ಮ ಕಣ್ಣಿಗೆ ರಾಚುತ್ತಲೇ ಇವೆ.
ಮಹಿಳೆ ಇಂದು ಮತದಾನದಂತಹ ಮೂಲಭೂತ ಹಕ್ಕಿನಿಂದ ಹಿಡಿದು ಕಾನೂನಿನ ರಕ್ಷಣೆ ಪಡೆಯುವ ಮಟ್ಟಕ್ಕೆ ಜಾಗೃತಳಾಗಿದ್ದರೂ ಕೂಡ ತನ್ನ ಮೇಲೆ ದ್ಯೌರ್ಜನ್ಯ, ಹಿಂಸಾ ಪ್ರಕರಣಗಳು ಜರುಗುತ್ತಲೇ ಇವೆ. ಮಹಿಳೆಯರ ಮೇಲಿನ ಹಿಂಸೆಗಳು ಸಮರ್ಥವಾಗಿ ತಡೆಯಲು ದೌರ್ಜನ್ಯ ತಡೆ ಕಾಯ್ದೆ ಇದ್ದರೂ ಅದರ ಫಲಿತಾಂಶ ಮಾತ್ರ ಗೌಣವೇ? 

ಗಂಡ, ಅತ್ತೆ, ಮಾವನ ವರದಕ್ಷಿಣೆ ಕಿರುಕುಳ ತಾಳದೆ ಅನೇಕ ಮಹಿಳೆಯರು ಆತ್ಮಹತ್ಯೆ ಶರಣಾಗುತ್ತಿರುವುದು ದಿನೇ ದಿನೇ ನೋಡುತ್ತಲೇ ಇದ್ದೇವೆ. ಗಂಡ ತೀರಿಕೊಂಡ ಮೇಲೆ ಸಮಾಜದ ಬಲಿಷ್ಠ (ನಿಂದನೆ) ವರ್ಗಕ್ಕೆ ತುತ್ತಾಗಿ ಜೀವ ಕೈಯಲ್ಲಿ ಹಿಡಿದು ಬದುಕುತ್ತಿರುವ ಮಹಿಳೆಯರು ಅದೆಷ್ಟು ಜನರಿದ್ದಾರೋ. ಮದುವೆಯಾಗದ ಯುವತಿಯರ ಕಾಣೆ ಪ್ರಕರಣಗಳಂತೂ ಲೆಕ್ಕವೇ ಇಲ್ಲ. ಇಂಥ ಸಂದಿಗ್ದ ಪರಿಸ್ಥಿತಿಯಲ್ಲಿ ಹೆಣ್ಣು ಭ್ರ್ರೂಣಹತ್ಯೆ ಪ್ರಕರಣಗಳು ಅವ್ಯವಹತವಾಗಿ ನಡೆಯುತ್ತಲೇ ಇವೆ. ಎಷ್ಟು ಕಾಯಿದೆಗಳು ಹುಟ್ಟಿಕೊಳ್ಳುತ್ತವೆಯೋ ಅಷ್ಟು ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ. ಕಾಯಿದೆ ಪಾಲಿಸಬೇಕಾದ ವೈದ್ಯರೆ ಕದ್ದುಮುಚ್ಚಿ ಭ್ರೂಣ ಹತ್ಯೆಗೆ ಮುಂದಾಗುತ್ತಾರೆ. ಇದು ಕೂಡ ಮಹಿಳೆಯರ ಮೇಲೆ ಮಡೆಯುತ್ತಿರುವ ದೌರ್ಜನ್ಯದ ಒಂದು ರೂಪ.
ಮಹಾತ್ಮ ಗಾಂಧಿಜಿಯವರ ಕಲ್ಪನೆಯ ಸ್ವಾತಂತ್ರ್ಯ ಮಹಿಳೆಯರಿಗೆ ಇನ್ನೂ ಕನಸಿನ ಮಾತಾಗೇ ಉಳಿದಿದೆ. ಸ್ವಾತಂತ್ರ್ಯ ಎಂಬುದರ ಸ್ವರೂಪವನ್ನು ಅರ್ಥಮಾಡಿಕೊಳ್ಳುವುದು ಸುಲಭವಾದರೂ ಅದಕ್ಕೆ ವಾಸ್ತವ ಉತ್ತರ ಕಂಡುಕೊಳ್ಳುವುದು ತುಂಬಾ ಕಷ್ಟದ ವಿಷಯವಾಗಿದೆ.
ಚಿಂತಕರ ವ್ಯಾಖ್ಯಾನದ ಪ್ರಕಾರ ಯಾರ ನಿಯಂತ್ರಣ, ಅಡೆತಡೆ ಮತ್ತು ದಬ್ಬಾಳಿಕೆಗಳಿಲ್ಲದೆ ಭೌತಿಕ ಹಾಗೂ ಸಾಮಾಜಿಕ ಪರಿಸ್ಥಿತಿಗಳನ್ನು ಬದುಕಿನ ಅಗತ್ಯಗಳನ್ನಾಗಿ ರೂಪಿಸಿಕೊಳ್ಳುವುದರ ಜತೆಗೆ ಜ್ಞಾನ ಮತ್ತು ಹಕ್ಕುಗಳ ಅನುಷ್ಠಾನವೇ ನಿಜವಾದ ಸ್ವಾತಂತ್ರ. ಎಂದು ವಿಶ್ಲೇಷಿಸಿದ್ದರು.
ಆದರೆ... ಸಮಾಜದ ವಿವಿಧ ಕ್ಷೇತ್ರಕ್ಕೆ ಬಂದಾಗ ಶಿಕ್ಷಣ, sಸಾಮಾಜಿಕ ಸ್ಥಾನಮಾನ, ಆರ್ಥಿಕ ಪರಿಸ್ಥಿತಿಗೆ ಸಂಬಂಧಿಸಿದಂತೆ ಅವರೆಲ್ಲ ಒಂದೇ ರೀತಿ ಇಲ್ಲ. ಅವರ ಚಿಂತನೆಗಳು, ಹೋರಾಟಗಳು, ಮಹಿಳೆಯರ ಸ್ವಾತಂತ್ರದ ಪ್ರಶ್ನೆಯನ್ನು ಪುರುಷ ವಿರೋಧಿ ಎಂಬಂತೆ ಬಿಂಬಿಸಲಾಗುತ್ತದೆ. ಆ ಮೂಲಕ ಸಮಾಜದ ಅಸಮಾನತೆ ಮತ್ತು ಶೋಷಣೆಯನ್ನು ಮುಚ್ಚಿಡಲು ಪ್ರಯತ್ನಿಸುತ್ತೇವೆ. ಹೆಣ್ಣಿನ ಶೋಷಣೆಯ ಮೂಲ ರಚನೆಯನ್ನು ಪರಿಗಣಿಸದೇ ಎಲ್ಲಿ ಸ್ತ್ರೀಯರಿಗೆ ಗೌರವವಿರುತ್ತದೆಯೋ ಅಲ್ಲಿ ದೇವತೆಗಳೂ ಕೂಡ ವಾಸಿಸುತ್ತವೆ ಎಂದು ಅವರನ್ನು ಹೊಗಳಿ ಅಟ್ಟಕ್ಕೇರಿಸಿ ದೇವರ ಹೆಸರಿನಲ್ಲಿ ಶೋಷಿಸಲಾಗುತ್ತದೆ.
ಶೋಷಿತರ ಗುಂಪಿನಲ್ಲಿ ಅನೇಕ ಮಹಿಳೆಯರು ತಮ್ಮ ರಕ್ಷಣೆಗೆ ಅಗತ್ಯ ಕಾನೂನುಗಳ ಬಗ್ಗೆ ಹೋರಾಟ ನಡೆಸಿ ಶೇ.೩೩ ರಷ್ಟು ಮೀಸಲಾತಿ ಗಳಿಸಲು ಯಶಸ್ವಿಯಾಗಿದ್ದಾರೆಯೇ ವಿನಹ ಅವುಗಳಿಂದ ರಕ್ಷಣೆ ಪಡೆಯುವುದು ಹೇಗೆ ಎಂಬುದು ತಿಳಿದುಕೊಂಡಿಲ್ಲ.
ಇದು ಭಾರತದ ಚಿತ್ರಣ ಮಾತ್ರವಲ್ಲ ಇಡೀ ವಿಶ್ವದ ಎಲ್ಲಾ ರಾಷ್ಟ್ರಗಳಲ್ಲೂ ಸ್ತ್ರೀಯರಿಗೆ ಸ್ಥಾನಮಾನ ನೀಡುವಲ್ಲಿ ಕಾನೂನುಗಳಿದ್ದರೂ ವಾಸ್ತವವಾಗಿ ಇದರ ಪರಿಪಾಲನೆ ಮರೀಚಿಕೆಯಾಗಿದೆ. ಅದರಲ್ಲಿ ಭಾರತ ಮೊದಲನೇ ಸ್ಥಾನದಲ್ಲಿದ್ದರೆ ಮುಂದುವರಿದ ರಾಷ್ಟ್ರಗಳು ಕೊನೆಯ ಸ್ಥಾನದಲ್ಲಿ ಇರಬಹುದು ಅಷ್ಟೆ. ಪೂರ್ವಜರ ಕಾಲದಲ್ಲಿ ಮಹಿಳೆಯರನ್ನು ಬಸವಿ, ದೇವದಾಸಿ, ಹೆಸರಿನಲ್ಲಿ ಶೋಷಣೆ ಮಾಡಲಾಗುತ್ತಿತ್ತು. ಈ ಪದ್ಧತಿಗಳೇ ಆಧುನಿಕರಣಕ್ಕೆ ಒಳಪಟ್ಟು ಸೆಕ್ಸ್ ವರ್ಕರ್ಸ್ ಎಂದು ಕರೆಯಲಾಗುತ್ತಿದೆ. ಸರ್ಕಾರಗಳು ಅನಿಷ್ಟ ಪದ್ಧತಿಗಳನ್ನು ಸಂಪೂರ್ಣವಾಗಿ ನಿಷೇಧ ಮಾಡಿದ್ದೇವೆ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿವೆ. ಈ ರೀತಿಯ ಮಹಿಳಾ ಶೋಷಣೆಯನ್ನು ಹೊಸ ವಿಧಾನಗಳ ಮೂಲಕ ಮುಂದುವರೆಸುತ್ತಿರುವ ನಾವುಗಳು ರಾಜಕೀಯ, ಆರ್ಥಿಕ, ಸಾಮಾಜಿಕ, ಮತ್ತು ಲಿಂಗ ಸಂಬಂಧಿ ಅಸಮಾನತೆ ಮಹಿಳೆಯರ ಶೋಷಣೆ ಮಾಡುತ್ತಿರುವ ನಾವು ಸ್ವಾತಂತ್ರ್ಯ ಕೊಟ್ಟಿದ್ದೇವೆಯೇ ಎಂಬುದು ನಮ್ಮ ಗ್ರಹಿಕೆಗೆ ಬಿಟ್ಟ ವಿಷಯವೇ ಹೊರತು ಎದೆ ತಟ್ಟಿ ಚಿಂತನೆ ಮಾಡುವ ವಿಷಯವಾಗಿ ಉಳಿದಿಲ್ಲ. 
ಇಂದಿನ ದಿನಗಳಲ್ಲಿ ಮಹಿಳೆ ಸ್ವಾವಲಂಬಿಯಾಗಿದ್ದಾಳೆ. ಯಾರ ಹಂಗಿಗೂ ಹಾತೊರೆಯುವದಿಲ್ಲ ಪ್ರಖ್ಯಾತ ಐಟಿ, ಬಿಟಿ, ಕಂಪನಿಗಳಲ್ಲಿ ದುಡಿಯುತ್ತಿದ್ದಾಳೆ ಎನ್ನುವುದು ಸಂತೋಷದಾಯಕವಾದರೂ ಮಹಿಳೆ ಕೆಲಸ ಮಾಡುವ ಕ್ಷೇತ್ರದಲ್ಲಿ ನೆಮ್ಮದಿಯಾಗಿ ಇದ್ದಾರೆ ಎಂದು ಹೇಳುವಂತಿಲ್ಲ ಎನ್ನುವುದಕ್ಕೆ ಹಲವು ಉದಾಹರಣೆಗಳನ್ನು ನೀಡಬಹುದಾಗಿದೆ.
ಖಾಸಗೀಕರಣ ಮಹಿಳೆಯರ ಮೇಲೆ ದೌರ್ಜನ್ಯಕ್ಕೆ ಪೂರಕವಾಗಿದೆ. ಕೆಲವರು ಅರೆಕಾಲಿಕ ಸಂಸ್ಥೆಗಳಲ್ಲಿ ದುಡಿಯುತ್ತಿದ್ದರೂ ಇದು ತಾತ್ಕಾಲಿಕ ಭದ್ರತೆ, ಮಾಲೀಕರ ಕಿರುಕುಳ ನಿಂದನೆಗಳಿಂದ ಬಳಲುತ್ತಿದ್ದಾರೆ. ಕನಿಷ್ಠ ಮಾನವೀಯವಾಗಿ ನಡೆಸಿಕೊಳ್ಳದ ಜೀವನ. ಶೋಷಣೆ ಮತ್ತು ತೀವ್ರ ಅವಮಾನಗಳನ್ನು ಒಡಲಲ್ಲಿ ಕಟ್ಟಿಕೊಂಡು ನಗರಗಳಲ್ಲಿ ಕಷ್ಟದ ಜೀವನ ನಡೆಸುತ್ತಿರುವ ಇವರು ಸ್ವಾತಂತ್ರ್ಯ ಸಿಕ್ಕಿರುವುದು ಅವಳು ಧರಿಸುವ ಉಡುಗೆಗೆ ಮಾತ್ರ ಎಂಬುದು ಎಲ್ಲರೂ ಒಪ್ಪಲೇಬೇಕಾದ ವಿಚಾರ.
ಇಂದು ಮಹಿಳೆ ಉದ್ಯಮದ ಸರಕಾಗಿದ್ದಾಳೆ ಕೆಲವು ವಾಹಿನಿಗಳಲ್ಲಿ ಮಹಿಳೆಯರನ್ನು ಯಾವ ರೀತಿ ಉಪಯೋಗಿಸಿಕೊಳ್ಳುತ್ತಾರೆ ಎಂದರೆ ಕಲ್ಪನೆ ಮಾಡಿಕೊಳ್ಳಲು ಸಾಧ್ಯವಾಗದಷ್ಟು ಹೀನವಾಗಿ ಬಿಂಬಿಸಲಾಗುತ್ತದೆ. ಪುರುಷರು ಉಡುವ ಅಂಡರ್‌ವೇರ್‌ಗಳಿಗೂ ಇವರೆ ಅಂಬಾಸಿಡರ್, ಇಷ್ಟೆ ಅಲ್ಲ ತಾವು ಹಾಕುವ ಒಳ ಉಡುಪುಗಳಿಗೂ ಅದೇ ಅರೆಬರೆ ಬೆತ್ತಲೆ ದೃಶ್ಯ ತೋರಿಸುತ್ತಾರೆ. ಸಿನಿಮಾಗಳಲ್ಲಿ ಮಹಿಳೆಯನ್ನು ಚಿತ್ರಿಸುವ ಪರಿಯಂತೂ ನಿಜಕ್ಕೂ ಹೇಸಿಗೆ ಹುಟ್ಟಿಸುತ್ತದೆ. ತಮ್ಮ ಮಾನ ಮರ್ಯಾದೆಗೂ ಮೀರಿ ಮಹಿಳೆಯನ್ನು ನಡೆಸಿಕೊಳ್ಳುತಿದ್ದಾರೆ. ಅವರಿಗೂ ಬೇಕಾಗಿರುವುದು ಇದನ್ನೇ..
ಒಂದು ಕಡೆ ಜಾಗತೀಕರಣ, ಖಾಸಗೀಕರಣದ ಕಬಂಧ ಬಾಹು, ಮತ್ತೊಂದೆಡೆ ಧಾವಂತದ ಬದುಕು ಅವರ ನೇರ ಶತೃಗಳು.
ಬೆಂಗಳೂರಿನ ಜ್ಞಾನ ಭಾರತೀ ಹೃದಯ ಭಾಗದಲ್ಲಿಯೇ ಎಂತೆಂಥ ನಂಬಿಕೆಗಳನ್ನು ಮಹಿಳೆಯರ ಮೇಲೆ ಹೇರಲಾಗುತ್ತಿದೆ ಎಂಬುದಕ್ಕೆ ಇತ್ತೀಚೆಗೆ ಬಾಣಂತಿಯ ಕುರಿತು ಪತ್ರಿಕೆಯಲ್ಲಿ ಪ್ರಕಟವಾದ ಲೇಖನವೇ ಸಾಕ್ಷಿಯಾಗಿದೆ. ಹೇರಿಗೆಯಾದ ದಿನವೆ ಅವಳನ್ನು ಕೊಟ್ಟಿಗೆಯಲ್ಲಿ ಕೂಡಿ ಹಾಕಲಾಗುತ್ತದೆ. ಹದಿನೈದು ದಿನಗಳ ಕಾಲ ಆ ತಾಯಿಯ ರೋಧನೆ ಏನಾಗಿರಬೇಡ ಇದು ಎಂಥ ಸಮಾಜ ಯಾವ ಪದ್ಧತಿ, ಯಾವ ಆಚರಣೆ ಇಂಥ ಮೂಢ ಆಚರಣೆಗಳಿಗೆ ಕಡಿವಾಣ ಹಾಕಬೇಕಾದ ಪ್ರಗತಿ ಪರರು ನೋಡಿ ನೋಡದಂತೆ ಇರುತ್ತಾರೆ. ಇದರ ವಿರುದ್ಧ ಧ್ವನಿ ಎತ್ತಬೇಕಾದ ಶಿಕ್ಷಿತ ಮಹಿಳೆಯರು ಕೂಡ ತಮ್ಮಷ್ಟಕ್ಕೆ ತಾವು ಎಂಬಂತಿರುತ್ತಾರೆ. ಇಂಥ ಘಟನೆಗಳು ಶೈಕ್ಷಣಿಕವಾಗಿ ಮುಂದುವರಿದ ಜಿಲ್ಲೆಗಳಲ್ಲಿಯೇ ನಡೆಯುತ್ತವೆ ಎಂದರೆ ಶಿಕ್ಷಣದ ಗಂಧಗಾಳಿ ಗೊತ್ತಿಲ್ಲದ ಜಿಲ್ಲೆಗಳಲ್ಲಿ ಇನ್ನೇನೂ ಇರಬಹುದು ಎಂಬುದು ಗಹನವಾಗಿ ವಿಚಾರಿಸಬೇಕಾದ ಸಂಗತಿ.
ಹೆರಿಗೆಯಾದ ತಾಯಿಯ ಸಹಾಯಕ್ಕಾದರೂ ಬರಬೇಕಲ್ಲವೇ ಅದು ಕೂಡ ಇಲ್ಲ ಹೆರಿಗೆ ನೋವಿನಿಂದ ಮುಕ್ತಿಯಾದ ನಂತರವೇ ಆ ತಾಯಿ ತನ್ನ ಮಾಸನ್ನು ಸ್ವತ ತಾನೇ ಅಗೆದು ಹುಳಬೇಕು ಎಂಬುದು ಎಷ್ಟು ವಿಪರ್ಯಾಸ ಇಂಥ ನಂಬಿಕೆಗಳಿಗೆ ಕೇವಲ ಅನಕ್ಷರಸ್ಥರಷ್ಟೆ ಬಲಿಯಾಗುವುದಿಲ್ಲ ಅಕ್ಷರಸ್ಥರೂ ಕೂಡ ಕುರಿಗಳು, ನಾವು ಮಾಡುತ್ತಿರುವುದು ತಪ್ಪು ಎಂದು ಆತ್ಮ ಸಾಕ್ಷಿಯಾಗಿದ್ದರೂ ಹಿರಿಯರ ಒತ್ತಡದಿಂದ ಇಂಥ ಹೀನ ಆಚರಣೆಗೆ ತಲೆದೂಗಬೇಕಾಗುತ್ತದೆ. ನಂಬಿಕೆ ಎಂಬ ಅಸ್ತ್ರವನ್ನು ಪ್ರಯೋಗಿಸುವ ಮೂಲಕ ಅಂಧಾನುಚರಣೆಗೆ ಬಲಿ ಮಾಡಿಬಿಡುತ್ತಾರೆ. ಇಂಥ ಕೆಟ್ಟ ಸಂಪ್ರದಾಯಗಳ ವಿರುದ್ಧ ದ್ವನಿ ಎತ್ತದ ಎಷ್ಟೋ ಮಹಿಳೆಯರು ಪ್ರೀತಿ ವಿಷಯದಲ್ಲಿ ಮಾತ್ರ ಹಿಂದೆ ಬಿಳುವುದಿಲ್ಲ. ಪ್ರೀತಿ ಎಂಬ ವ್ಯಾಮೋಹಕ್ಕೆ ಬಿದ್ದವರು ಮಾತ್ರ ಸಂಪ್ರದಾಯ ಜಾತಿ ಮತ್ತಿತರ ಅನಿಷ್ಠ ಪದ್ದತಿಗಳನ್ನು ವಿರೋಧಿಸುತ್ತಾರೆಯೇ ವಿನಹ ಅದರ ಆಳ ಅರಿವು ಮಾತ್ರ ಈ ಪ್ರೀತಿಗೆ ಕಾಣುವುದೇ ಇಲ್ಲ ಇಂಥವರನ್ನು ಸಮಾಜ ಸಹಿಸುತ್ತಾ ಮರ್ಯಾದೆ ಹತ್ಯೆದ ಹೆಸರಿನಲ್ಲಿ ಮಟಾಷ್  ಮಾಡಿಬಿಡುತ್ತಾರೆ.
ವಿದ್ಯಾವಂತ ಮಹಿಳಾ ಮಣಿಗಳೇ ಇಂಥ ಮೂಢ ಆಚರಣೆಗಳ ಸಮಾಜ ಕಂಠಕರ ವಿರುದ್ಧ ಧ್ವನಿ ಎತ್ತುವ ಮೂಲಕ ಅಂಧಾನುಚರಣೆಗಳಿಗೆ ತಡೆಯಲು ಮುಂದಾಗಿ ಇಲ್ಲ ಅಂದ್ರೆ ಧರ್ಮದ ಹೆಸರಿನಲ್ಲಿ ನಿಮ್ಮನ್ನೂ ಮೊದಲಿಗಿಂತ ನಿಕೃಷ್ಟವಾಗಿ ಕಾಣುವ ಸಂದರ್ಭವಂತೂ ಇದೆ.
ರಾಜಕೀಯವಾಗಿ ಮೀಸಲಾತಿ ಇರುವುದರಿಂದ ಈ ಕ್ಷೇತ್ರದಲ್ಲಿ ಕೆಲವು ಮಹಿಳೆಯರು ಮಂಚೂಣಿಯಲ್ಲಿದ್ದಾರೆ ಎಂಬುದು ಸತ್ಯವಾದರೂ ಅಧಿಕಾರ ಚಲಾವಣೆಯಲ್ಲಿ ಸ್ವತಂತ್ರವಾಗಿ ನಡೆದುಕೊಳ್ಳುತ್ತಾರೆ ಎಂಬುದು ನಿಗೂಢ ವಿಷಯ. ಎಷ್ಟೋ ಗಂಡಂದಿರು ತಮ್ಮ ಹೆಂಡತಿಯ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ತಮಗೆ ತೋಚಿದಂತೆ ಗೀಚಿಕೊಳ್ಳುವ ಪುರುಷಶಾಹಿಗಳಿಗೆ ತಕ್ಕ ಪಾಠ ಕಲಿಸಬೇಕಾದರೆ ಮಹಿಳೆಯರು ತಮ್ಮ ಹಕ್ಕು ಮತ್ತು ಕರ್ತವ್ಯದ ಬಗ್ಗೆ ಜಾಗೃತರಾಗಬೇಕಾಗಿದೆ.
ಇವೆಲ್ಲವುಗಳನ್ನು ಮನಗಂಡ ಮಹಿಳೆಯರ ಹೋರಾಟ ಅವರ ಹಕ್ಕುಗಳ ರಕ್ಷಣೆಗೆ ವಿಶ್ವಸಂಸ್ಥೆ ೧೯೭೫ರಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲು ಕರೆ ನೀಡಿತು.
ಅಲ್ಲಿಂದ ಇಲ್ಲಿಯವರೆಗೆ ಮಹಿಳಾ ದಿನಾಚರಣೆ ಆಚರಣೆ ಮಾಡುತ್ತಾ ಬಂದಿದ್ದೇವೆ. ಜಾಗತೀಕ ಮಟ್ಟದಲ್ಲಿ ಮಹಿಳೆಯರ ಶೋಷಣೆ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯಾದ ಉದಾಹರಣೆ ಇಲ್ಲ ಎಂದರೆ ನಾವು ಎಡವಿದೆಲ್ಲಿ!

6 comments:

  1. ನಿಮ್ಮ ಪೂರ್ತಿ ಮಾಹಿತಿ ಓದಿ ಖುಷಿಯಾಯಿತು ತಾವು ಬೆಳಿಯುವದರ ಜೊತೆಗೆ ನಿಮ್ಮನ್ನು ಹಿಂಬಾಲಿಸುವ ಚಿಕ್ಕವರಿಗೂ ಬೆಳಿಸಿ ನಿಮ್ಮ ಪತ್ರಿಕೆ ಸೇವೆ ಎಲ್ಲರಿಗೂ ಒಳಿತನ್ನು ಮಾಡಲಿ

    ಸರ್ ನಿಮ್ಮ ಬ್ಲಾಗ್ ನನ್ನ ಬ್ಲಾಗ್ ಗೆ ಲಿಂಕ ಮಾಡುತ್ತೇನೆ ನನ್ನದು ನಿಮ್ಮ ಬ್ಲಾಗ ಗೆ ಲಿಂಕ ಕೊಡುತ್ತೀರಾ

    ReplyDelete
  2. I really appreciate and hats of to you sir you published a excellent and mind blowing articles its really great of you sir. and thank you so much

    ReplyDelete
  3. sir nimmabagge kelidde adare nimma blog gothiralilla iga blog sikide santhosha nimma baravanige oduva avkash sikkiddakke

    ReplyDelete