Wednesday 9 January 2013

ಜಾನಪದ ಸಂಗೀತ ಸಾಮ್ರಾಟ್ ಡಾ.ಬಾನಂದೂರು ಕೆಂಪಯ್ಯ

 ಧರ್ಮ, ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಮುಂತಾದ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆಗೈದು ತಮ್ಮ ಪ್ರತಿಭೆಯಿಂದ ನಾಡಿನ ಕೀರ್ತಿ ಪತಾಕೆಯನ್ನು ದೇಶ ವಿದೇಶಗಳಿಗೆ ಹರಡಿದ ವ್ಯಕ್ತಿಗಳು, ಕವಿಗಳು ಕಲಾವಿದರು ಸಂಗೀತಗಾರರು ಬಹಳಷ್ಟು ಜನರಿದ್ದಾರೆ. ಕನ್ನಡ ನಾಡು ಇಂತಹ ಕೀರ್ತಿವಂತರಿಗೆ ವಾಸಸ್ಥಾನ, ಸಂಗೀತ ಕಲಾರತ್ನಗಳಿಗೆ ತವರು ಮನೆ.
ಕರ್ನಾಟಕ ಜಾನಪದ ಸಂಗೀತ ಲೋಕಕ್ಕೆ ಅಪೂರ್ವ ಕೊಡುಗೆ ನೀಡಿದ ನಾಡಿನ ಪ್ರಮುಖ ಜನಪದ ಸಂಗೀತ ಶ್ರೇಷ್ಠರಲ್ಲಿ ಡಾ. ಬಾನಂದೂರು ಕೆಂಪಯ್ಯ ಒಬ್ಬರಾಗಿದ್ದಾರೆ. ಕೆಂಪಯ್ಯನವರು ರಾಮನಗರ ಜಿಲ್ಲೆಯ ಬಿಡದಿ ಸಮೀಪದ ಬಾನಂದೂರಿನಲ್ಲಿ ವೆಂಕಯ್ಯ ಮತ್ತು ಹುಚ್ಚಮ್ಮ ದಂಪತಿಯ ಮಗನಾಗಿ ೧೯೫೧ರ ಜೂನ್ ೧೪ರಂದು ಜನಿಸಿದರು.
ಇವರದು ಜನಪದ ಗಾಯಕ ಮನೆತನ. ಇದು ಕೆಂಪಯ್ಯನವರಿಗೆ ಈ ಕ್ಷೇತ್ರದಲ್ಲಿ ಆಸಕ್ತಿ ಮೂಡಲು ಕಾರಣವಾಗಿರಬಹುದು. ಇವರ ಹಿರಿಯ ಸಹೋದರ ಆರು ನಗಾರಿ ಬಾರಿಸುವ ಪರಿಣತಿ ಪಡೆದಿದ್ದರಿಂದ ನಗಾರಿ ಸಿದ್ದಯ್ಯನೆಂದೇ ಖ್ಯಾತರಾದವರು. ಮೇಲ್ವರ್ಗದ ಕಲಾವಿದರು ಜಾನಪದ ಸಂಗೀತವೆಂದರೆ ಬಿರುಗಣ್ಣಿನಿಂದ ನೋಡುವ ಕಾಲವದು.
ಅದರಲ್ಲೇನಿದೆ ಆಡುವ ಭಾಷೆಯನ್ನು ನುಡಿಸುವ ಸಂಗೀತಕ್ಕೆ ಅಳವಡಿಸಿದರಾಯ್ತು ಎಂದು ಗೇಲಿ ಮಾಡುತ್ತಿದ್ದ ದಿನಗಳಲ್ಲಿ ಹಳ್ಳಿ ಹಳ್ಳಿಗೆ ಅಲೆದು ಜಾನಪದಗಳನ್ನು ಸಂಗ್ರಹ ಮಾಡಿ ತನ್ನ ಸುಮಧುರ ಕಂಠದಿಂದ ಹಾಡಿ ಕನ್ನಡ ನಾಡಿನ ಕಲಾರಸಿಕರನ್ನು ಮೋಡಿ ಮಾಡಿದ ಮಹಾನ್ ಸಂಗೀತಗಾರ.

ಉತ್ತರ ಕರ್ನಾಟಕದ ಸಂಗೀತಗಾರ ಬಾಳಪ್ಪ ಹುಕ್ಕೆರಿ, ದಕ್ಷಿಣ ಕರ್ನಾಟಕದ ಕಾಳಿಂಗರಾವ್ ಅವರ ನಂತರ ಸೋತು ಸೊರಗಿ ಸುಣ್ಣವಾಗಿದ್ದ ಕ್ಷೇತ್ರವನ್ನು ಬಾನಂದೂರು ಕೆಂಪಯ್ಯನವರು ಮರುಜೀವ ನೀಡಿದರು ಎಂದರೆ ತಪ್ಪಾಗಲಾರದು.
ಜಾನಪದ ಸಾಹಿತ್ಯ ನಿರ್ದಿಷ್ಟ ವ್ಯಕ್ತಿಯಿಂದ ರಚನೆಯಾದುದಲ್ಲ. ಅದು ಸಮೂಹ ಜನ್ಯವಾದುದು. ತಲೆಮಾರಿನಿಂದ ತಲೆಮಾರಿಗೆ ವಾಕ್ ಪರಂಪರೆಯಲ್ಲಿ ಬೆಳೆದು ಬಂದಿರುವಂತದ್ದು. ಅಂತಹ ಅಸಂಖ್ಯ ಜಾನಪದ ಹಾಡುಗಳನ್ನು ಗ್ರಾಮೀಣರ ನಡುವೇ ಇದ್ದು ಕರಗತ ಮಾಡಿಕೊಂಡು ಹಾಡಿದವರು.
ಬಾನಂದೂರು ಅವರು ತಮ್ಮ ಅಭ್ಯಾಸದ ಜೊತೆಗೆ ಶಾಲಾ ಕಾಲೇಜುಗಳಲ್ಲಿ ಏರ್ಪಡಿಸುತ್ತಿದ್ದ ನಾನಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಭಕ್ತಿಗೀತೆ, ಭಾವಗೀತೆ, ಜಾನಪದ ಗೀತೆ ಹಾಡುತ್ತಿದ್ದರು. ಈ ಸ್ಪರ್ಧೆಗಳೇ ಅವರನ್ನು ಸಂಗೀತಗಾರ ಎಂದು ಗುರುತಿಸಲು ಸಹಾಯಕವಾದವು.
ಗಣರಾಜ್ಯೋತ್ಸವದ ನಿಮಿತ್ತ ಹೊಸದಿಲ್ಲಿಯಲ್ಲಿ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದ ಡಾ. ಬಾನಂದೂರು ಅಲ್ಲಿ ಜಾನಪದ ಹಾಡನ್ನೇ ಹಾಡಿದೆ ಎಂದು ಮೆಲುಕು ಹಾಕುತ್ತಾರೆ.
ಡಾ. ಬಾನಂದೂರು ಕೆಂಪಯ್ಯ ಮಾಧ್ಯಮಿಕ ಶಾಲೆಯ ಶಿಕ್ಷಕರಾಗಿ, ನ್ಯಾಯಾಂಗ ಇಲಾಖೆಯಲ್ಲಿ ಪ್ರಥಮ ದರ್ಜೆ ಗುಮಾಸ್ತರಾಗಿ ಕೆಲಸ ಮಾಡಿದ್ದರಲ್ಲದೆ ೧೯೮೦ರಲ್ಲಿ ಮೈಸೂರು ಆಕಾಶವಾಣಿ ಕೇಂದ್ರದಲ್ಲಿ ಉದ್ಘೋಷಕರಾಗಿ ಸೇವೆಗೆ ಸೇರಿದರು. ಅನಂತರ ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ ವಿಶೇಷ ಜಾನಪದ ಸಂಗೀತ ನಿರ್ಮಾಪಕರಾಗಿ ಸೇವೆ ಗೈದರು. ಗುಲಬರ್ಗಾ ಮಂಗಳೂರು, ಕೇರಳದ ತಿರುವನಂತಪುರಂ ಆಕಾಶವಾಣಿ ಕೇಂದ್ರದಲ್ಲಿ ಕೇಂದ್ರ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು.
ಡಾ. ಬಾನಂದೂರು ಅವರು ಕೇವಲ ಜಾನಪದ ಹಾಡುಗಳನ್ನು ಹಾಡುವುದರಲ್ಲೇ ತಲ್ಲೀನರಾಗದೆ ಜಾನಪದ ಸಂಗ್ರಹಕಾರರೂ ಹೌದು. ಸಾಹಿತ್ಯದಲ್ಲಿಯೂ ತೊಡಗಿಸಿಕೊಂಡವರು. ಅನೇಕ ಮೂಲ ಜಾನಪದ ಗೀತೆಗಳನ್ನು ಸಂಗ್ರಹಿಸಿ ಎರಡು ಮತ್ತು ಮೂರನೇ ತಲೆಮಾರಿಗೆ ಕೊಡುಗೆಯಾಗಿ ನೀಡಿದ ಮೊದಲಿಗರು.
ಬಯಲು ಸಿಮೇಯ ಜಾನಪದ ಕಥೆಗಳ ಸಂಕಲನ ಹೊರತಂದಿದ್ದು ‘ಚಂದುಳ್ಳಿ ಪದವ ಕಲಸವ್ವ ಹಾಗೂ ಮೊಗ್ಗಾಗಿ ಬಾರೋ ತುರುಬಿಗೆ’ ಹೆಸರಿನ ಜಾನಪದ ಕಲಾವಿದರನ್ನು ಹಾಗೂ ಅವರ ಜಾನಪದ ಸಾಹಿತ್ಯವನ್ನು ಪತ್ರಿಕೆಗಳ ಮೂಲಕ ನಾಡಿಗೆ ಪರಿಚಯಿಸಿದ್ದಾರೆ.
“ಜೋಗಿ ಚಿತ್ರದ ‘ಎಲ್ಲೋ ಜೋಗಪ್ಪ ನಿನ್ನ ಅರಮನೆ’ ಎಂಬ ಜಾನಪದ ಗೀತೆ ನಾನು ಸಂಗ್ರಹಿಸಿದ್ದು. ಆದರೆ ಸೌಜನ್ಯಕ್ಕಾದರೂ ನನ್ನ ಅನುಮತಿ ಕೇಳದೆ ಬಳಸಿಕೊಂಡ ಹಾಡಿಗೆ ಆಧುನಿಕ ಸಂಗೀತದ ಮೆರಗು ನೀಡಿದ ಚಿತ್ರ ತಂಡದವರು ನಾವು ರಚಿಸಿದ್ದೇವೆ ಎನ್ನುವುದು ಅತೀವ ಬೇಸರದ ಸಂಗತಿ” ಎನ್ನುತ್ತಾರೆ ಡಾ. ಬಾನಂದೂರು.
೧೯೮೪ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದ ಅವರಿಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಕರ್ನಾಟಕ ಜಾನಪದ ಸಂಗೀತದ ಬಗ್ಗೆ ರಚಿಸಿದ ಮಹಾಪ್ರಬಂಧಕ್ಕೆ ‘ಡಾಕ್ಟರ್ ಆಫ್ ಲಿಟರೇಚರ್’ ಪದವಿ ನೀಡಿ ಗೌರವಿಸಿದೆ.
ಜಾನಪದ ಸಂಗೀತಗಾರರಾಗಿ ಪ್ರಸಿದ್ಧರಾಗಿರುವ ಡಾ. ಬಾನಂದೂರು ಕೆಂಪಯ್ಯನವರಿಗೆ ಹಲವು ಪ್ರಶಸ್ತಿಗಳು ತಮ್ಮನ್ನು ಹರಸಿ ಬಂದವು. ರಾಜ್ಯ ಹಾಗೂ ರಾಷ್ಟ್ರೀಯ ಸಮ್ಮೇಳನಗಳಲ್ಲಿ ಹಲವು ಗೌರವ ಪುರಸ್ಕಾರಗಳು ಲಭಿಸಿವೆ. ೧೯೮೫ರಲ್ಲಿ ಕರ್ನಾಟಕ ಸರ್ಕಾರದ ಅತ್ಯುನ್ನತ ರಾಜ್ಯೋತ್ಸವ ಪ್ರಶಸ್ತಿ, ೧೯೯೬ರಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಕೊಡಮಾಡುವ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ವಜ್ರಮಹೋತ್ಸವ ಪ್ರಶಸ್ತಿ, ಮೈಸೂರಿನ ಜೀಸಸ್ ಸಂಸ್ಥೆಯ ಪ್ರತಿಭಾವಂತ ಯುವ ಗಾಯಕ ಪ್ರಶಸ್ತಿ, ಶಿವರಾಮ ಕಾರಂತ ದೀಪ ಪ್ರಶಸ್ತಿ, ಬೆಂಗಳೂರು ಮಹಾನಗರ ಪಾಲಿಕೆಯ ಕೆಂಪೇಗೌಡ ಪ್ರಶಸ್ತಿ, ಪಂಡಿತ ಪುಟ್ಟರಾಜ ಗವಾಯಿಗಳಿಂದ ‘ಸಂಗೀತ ಲೋಕದ ಧ್ರುವತಾರೆ ಎನ್ನುವ ಬಿರುದು ತಮ್ಮದಾಗಿಸಿಕೊಂಡಿದ್ದಾರೆ.
೧೯೮೦ರಲ್ಲಿ ಬೆಂಗಳೂರಿನ ಸುಚಿತ್ರ ಅವರ ಜೋತೆ ಮದುವೆಯಾದರು. ಡಾ. ಬಾನಂದೂರು ಅವರ ಹಿಂದಿನ ಶ್ರೇಯಸ್ಸು ಸುಚಿತ್ರ ಅವರದು ಎಂದರೆ ತಪ್ಪಾಗಲಾರದು. ಡಾ. ಕೆಂಪಯ್ಯನವರಿಗೆ ಚೇತನ ಬಾನಂದೂರು, ಸಚಿನ್ ಬಾನಂದೂರು ಮತ್ತು ಸ್ನೇಹ ಬಾನಂದೂರು ಎಂಬ ಮೂವರು ಮಕ್ಕಳಿದ್ದಾರೆ. ಇವರು ತಮ್ಮ ತಂದೆಯ ಸಂಗೀತ ಸೇವೆಯನ್ನು ಸದಾ ಪ್ರೋತ್ಸಾಹಿಸುತ್ತಾ ಬರುತ್ತಿದ್ದಾರೆ.  ಪ್ರಸ್ತುತ ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿ ಹೊಂದಿದ್ದಾರೆ. ಡಾ. ಬಾನಂದೂರು ಕೆಂಪಯ್ಯನವರು ಕಳೆದ ಮೂವತ್ತು ವರ್ಷಗಳಿಂದ ಜಾನಪದ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ರಾಜ್ಯ ಸರ್ಕಾರ ಮೂರು ವರ್ಷದ ಅವಧಿಗೆ ಜಾನಪದ ಅಕಾಡೆಮಿಗೆ ಅಧ್ಯಕ್ಷರನ್ನಾಗಿ ನೇಮಿಸಿರುವುದು ಜಾನಪದ ಲೋಕಕ್ಕೆ ಸಂದ ಗೌರವವಾಗಿದೆ.
ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಕೆಂಪಯ್ಯನವರು ಎಲ್ಲಾ ತರಹದ ಜಾನಪದ ಸಂಗೀತಗಾರರಿಗೆ ಅಕಾಡೆಮಿಯಿಂದ ಮಾಸಾ ಶನವನ್ನು ಕೊಡುವುದಾಗಿ ಘೋಷಿಸಿದ್ದಾರೆ. ಹಾಗೆಯೇ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾದರೆ ಅಕಾಡೆಮಿಗೆ ಹೆಚ್ಚಿನ ಅನುದಾನದ ಬೇಡಿಕೆಯನ್ನು ಇಟ್ಟಿದ್ದಾರೆ.  ಸರ್ಕಾರ ಇಂದು ಅಕಾಡೆಮಿಗೆ ಕೊಡುತ್ತಿರುವ ಅನುದಾನ ಏತಕ್ಕೂ ಸಾಲದು ಎಂದು ಮಾರ್ಮಿಕವಾಗಿ ಹೇಳುವ ಬಾನಂದೂರು, ಜಾನಪದ ಅಕಾಡೆಮಿಯಿಂದ ಹಲವು ಕಾರ್ಯಕ್ರಮಗಳನ್ನು ಹಾಕಿ ಕೊಳ್ಳಲಾಗಿದೆ. ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾದರೂ ಅದಕ್ಕೆ ಸೂಕ್ತ ಹಣಕಾಸಿನ ವ್ಯವಸ್ಥೆ ಇರಬೇಕಾಗುತ್ತದೆ. ನಾಡಿನ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಜಾನಪದ ಅಕಾಡೆಮಿ ಉತ್ತುಂಗಕ್ಕೆರಬೇಕಾದರೆ ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಎಲ್ಲಾ ರೀತಿಯ ಜಾನಪದ ಕಲಾವಿದರನ್ನು ಸರ್ಕಾರ ಗುರುತಿಸಿ ಪ್ರೋತ್ಸಾಹಿಸಬೇಕು ಎಂಬುದು ಕೆಂಪಯ್ಯನವರ ಅಪೇಕ್ಷೆ. ಕೇವಲ ಆಸೆಪಟ್ಟರೆ ಸಾಲದು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಆಧುನಿಕ ಕಲೆಯ ಪ್ರಭಾವಗಳಿಂದ ಸಾಂಪ್ರದಾಯಿಕ ಕಲೆಗಳು ನಶಿಸಿ ಹೋಗುತ್ತಿವೆ. ಅವುಗಳನ್ನು ಗುರುತಿಸುವತ್ತ ಹೆಜ್ಜೆ ಇಡಬೇಕಾಗಿದೆ.
ಪ್ರತಿಯೊಬ್ಬರು ತಮ್ಮ ಪ್ರದೇಶದಲ್ಲಿರುವ ವಿವಿಧ ಕಲಾಪ್ರಕಾರಗಳಲ್ಲಿ ತೊಡಗಿಕೊಂಡಿರುವ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಹೇಳುತ್ತಾರೆ ಬಾನಂದೂರು.
ನಮ್ಮೆಲ್ಲರ ನಡುವೆ ಇದ್ದು ಯಾವುದೇ ಬಿಂಕ ಬಿನ್ನಾಣಗಳಿಲ್ಲದೆ ಸರಳ, ಸಜ್ಜನ ವ್ಯಕ್ತಿಯಾಗಿ ನಾಲ್ಕು ದಶಕಗಳಿಂದ ಜಾನಪದ ಸಂಗೀತದಲ್ಲಿ ತೊಡಗಿ ಜಾನಪದ ಲೋಕವನ್ನು ಶ್ರೀಮಂತ ಮಾಡಲಿ. ಬಹುಮುಖ ಪ್ರತಿಭೆಯ ಕಲಾವಿದನ ಸಂಗೀತ ಸೇವೆ ನಾಡಿನ ಜನತೆಗೆ ತಲುಪಲಿ ಎಂದು ಹಾರೈಸೋಣ.


2 comments: