Wednesday 22 August 2012

ಶಾಲೆಗಳ ವಿಲೀನ ಮಕ್ಕಳ ಭವಿಷ್ಯ ಹಾಳಾಗದಿರಲಿ

ಕನಿಷ್ಟ ಹಾಜರಾತಿ ಇರುವ ಕನ್ನಡ ಶಾಲೆಗಳನ್ನು ಮುಚ್ಚಲು ನೀಡಿದ್ದ ಸರಕಾರದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ರೀಟ್‌ನ್ನು ಕೋರ್ಟ್ ತಳ್ಳಿ ಹಾಕಿದೆ. ಈ ತೀರ್ಪಿನಿಂದ ಸರ್ಕಾರಕ್ಕೆ ಆನೆ ಬಲ ಬಂದಂತಾಗಿದೆ.
ಕನ್ನಡ ಶಾಲೆಗಳನ್ನು ಮುಚ್ಚಲು ಹೈಕೋರ್ಟ್ ಆದೇಶ ನೀಡಿರುವುದರಿಂದ ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದೆ. ಕಡ್ಡಾಯ ಶಿಕ್ಷಣ ಎನ್ನುವ ಘೋಷ ವಾಕ್ಯ ಒಂದಡೆಯಾದರೆ ಶಾಲೆಗಳನ್ನು ಮುಚ್ಚುವ ಸರ್ಕಾರದ ಆದೇಶ ಇನ್ನೊಂದಡೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನತೆಗೆ ಮಾಡುವ ಮೋಸವಲ್ಲವೇ?
ಸ್ಥಳೀಯವಾಗಿ ಇದ್ದ ಶಾಲೆಗಳನ್ನು ಮುಚ್ಚಿ ಸಮೀಪದ ಶಾಲೆಗಳಿಗೆ ವಿಲೀನ ಮಾಡಿರುವುದರಿಂದ ಆ ಮಕ್ಕಳು ಶಾಲೆಯಿಂದ ವಂಚಿತರಾಗುತ್ತವೆ ವಿನಃ ವಿಲೀನವಾದ ಶಾಲೆಗಳಿಗೆ ಮಕ್ಕಳು ವಿಲೀನವಾಗುತ್ತಾರೇಯೇ ಎಂಬ ಪ್ರಶ್ನೆ ಉದ್ಬವವಾಗುತ್ತದೆ. ಪಾಲಕರು ಕೂಡ ಚಿಕ್ಕ ಮಕ್ಕಳನ್ನು ಶಾಲೆಗೆ ಕಳಿಸಬೇಕಾದರೆ ಇಂದುಮುಂದು ನೋಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಗ್ರಾಮೀಣರು ಮಕ್ಕಳನ್ನು ದೂರದ ಶಾಲೆಗಳಿಗೆ ಕಳಿಸದೇ ಮನೆಯಲ್ಲಿ ಸಣ್ಣಪುಟ್ಟ ಕೆಲಸ ಮಾಡಿದರೆ ಸಾಕು ಎಂಬ ಮನೋಭಾವನೆ ಬೆಳೆಯುತ್ತದೆ.

ಶೆಟ್ಟರ್ ಮತ್ತೊಬ್ಬ ಡಿವಿ ಆಗುವುವರೇ?

ಕಳಂಕ ರಹಿತ ಆಡಳಿತ ನೀಡುವ, ದಕ್ಷ ನಾಯಕತ್ವಕ್ಕೆ ಉಳಿಗಾಲವಿಲ್ಲ ಎಂದು ಮುಖ್ಯಮಂತ್ರಿ ಡಿ.ವಿ ಸದಾನಂದಗೌಡರ ಪದಚ್ಯುತಿಯಿಂದ ಋಜುವಾತಾಗಿದೆ. ಶಿಸ್ತಿನ ಪಕ್ಷ ಎಂದು ಬಾಯಿಬಿಡುತ್ತಿದ್ದ ಬಿಜೆಪಿಯಲ್ಲಿ ಜಾತಿರಾಜಕಾರಣ ಮಿತಿ ಮೀರಿದೆ. ಹಿಂದುತ್ವ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಮಂದಿಯ ಮುಖವಾಡ ಕಳಚಿ ಬಿದ್ದಿದೆ. ಇಷ್ಟೆಲ್ಲಾ ಹೇಳಿದ ಮೇಲೆ ಸದಾನಂದಗೌಡರನ್ನು ಏಕೆ ಬದಲಾಯಿಸಲಾಗುತ್ತದೆ ಎಂದು ಸಾರಿ ಹೇಳುವ ನೈತಿಕತೆ ಪಕ್ಷ ಮತ್ತು ಸಂಘ ಪರಿವಾರಕ್ಕೆಲ್ಲಿದೆ. 
ಹನ್ನೊಂದು ತಿಂಗಳ ಹಿಂದಷ್ಟೇ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡು ಅಧಿಕಾರ ನಡೆಸಿದ ಡಿ.ವಿ.ಸದಾನಂದಗೌಡರ ಕಾರ್ಯವೈಖರಿಯಿಂದ ಯಡಿಯೂರಪ್ಪನವರಿಗೆ ಸಹಿಸಲು ಸಾಧ್ಯವಾಗಿರಲಿಲ್ಲ ತಾನಂದುಕೊಂಡ ಕೆಲಸ ಆಗದೆ ಹೋದಾಗ ಕೆಟ್ಟ ವಿಚಾರಗಳಿಂದ ಪಟ್ಟದಿಂದ ಕೆಳಗಿಳಿಸಬೇಕು ಎಂದು ಹಟ ತೊಟ್ಟರು. ಇದರ ಭಾಗವಾಗಿ ತಮ್ಮ ವೈಯಕ್ತಿಕ ವಕ್ತಾರರಾದ ಬಿಪಿ ಹರೀಶ್ ಮತ್ತು ರೇಣುಕಾಚಾರ್‍ಯ ಎಂಬ ಬಾಯಿ ಬಡುಕರನ್ನು ಮುಂದೆ ಬಿಟ್ಟು ನಿಕಟಪೂರ್ವ ಸಿಎಂ ಸದಾನಂದಗೌಡರನ್ನು ಹಿಗ್ಗಾಮುಗ್ಗಾ ಹಿಯಾಳಿಸಲು ಮುಂದಾದರು.

ಕರುಳ ಕುಡಿ ಕತ್ತರಿಸಿದ ಕಟುಕನಿಗೆ ಶಿಕ್ಷೆಯಾಗಲಿ

ಆಗ ತಾನೇ ಜನಿಸಿ ಮಾಂಸದ ಮುದ್ದೆಯಂತಿರುವ ಮಗು ತಂದೆಯಿಂದಲೇ ಹತ್ಯೆಯಾಗುತ್ತೇನೆ ಎಂದು ಭಾವಿಸಿರಲಿಕ್ಕಿಲ್ಲ. ಮಾನವೀಯತೆ ಇಲ್ಲದ ಮನಷ್ಯರಿಂದ ಏನೆಲ್ಲಾ ಆಗುತ್ತವೆ ಎನ್ನುವುದಕ್ಕೆ ತನ್ನ ಕರುಳ ಕುಡಿಯನ್ನೇ ಹಾಲಿನಲ್ಲಿ ವಿಷ ಬೆರೆಸಿ ಕುಡಿಸಿ ಸಾಯಿಸಿದ್ದೇ ಸಾಕ್ಷಿ.ಅಷ್ಟಕ್ಕೂ ಕಾರಣ ಏನು ? ಮಗುವಿನ ಜನ್ಮಜಾತಕ ದೋಷದಿಂದ ತಂದೆಗೆ ಆಪತ್ತು ಕಾದಿದೆ ಎಂದು ಹೇಳಿದ ಜ್ಯೋತಿಷ್ಯಿಯೊಬ್ಬರ ಮಾತು ಕೇಳಿದ ತಂದೆಯೊಬ್ಬ ತನ್ನ ಕರುಳ ಕುಡಿಯನ್ನೇ ಕತ್ತರಿಸಿ ಹಾಕಿದ್ದಾನೆ. ಈ ಹೃದಯ ವಿದ್ರಾವಕ ಘಟನೆ ನಡೆದಿರುವುದು ರಾಜ್ಯಧಾನಿಯ ಸಮೀಪವಿರುವ ನೆಲಮಂಗಲದಲ್ಲಿ. ಮೂಢನಂಬಿಕೆ ಎಷ್ಟೊಂದು ಹಾಸುಹೊಕ್ಕಾಗಿದೆ ಎಂದರೆ ಹುಟ್ಟಿದ ಮಗುವನ್ನೇ ದೂರ ಮಾಡುತ್ತೇವೆ ಹೊರತು ಈ ಅನಿಷ್ಠ ಪದ್ಧತಿಗಳಿಂದ ದೂರವಾಗುವುದಿಲ್ಲ ಎಂಬುದು ಮತ್ತೊಂದು ಬಾರಿ ಸಾಬೀತಾಗಿದೆ.

ನೈತಿಕ ಪೊಲೀಸರ ಸಮರ್ಥನೆ ಸಲ್ಲ

ಮಂಗಳೂರಿನ ಹೋಂ ಸ್ಟೇ ಮೇಲಿನ ದಾಳಿ ಪ್ರಕರಣ ಕುರಿತು ತಾವು ಸರ್ಕಾರಕ್ಕೆ ನೀಡಿದ ವರದಿಗೆ ಈಗಲೂ ಬದ್ಧ ಎಂದು  ಮಹಿಳಾ ಆಯೋಗದ ಅಧ್ಯಕ್ಷೆ ಸಿ. ಮಂಜುಳಾ ಸವಾಲು ಹಾಕುತ್ತಿರುವುದು ನೋಡಿದರೆ ಮಹಿಳೆಯರ ಬಗ್ಗೆ ಎಷ್ಟು ಗೌರವ ಇದೆ ಎಂಬುದು ಗೊತ್ತಾಗುತ್ತದೆ.
ನೈತಿಕ ಪೊಲೀಸರ ಗೂಂಡಾಗಿರಿ, ಹಿಂದೂ ಜಾಗರಣ ವೇದಿಕೆಯವರ ಚಾರಿತ್ರಿಕ ಹಿನ್ನೆಲೆ ಬಗ್ಗೆ ಮಾತನಾಡದ ಸಿ. ಮಂಜುಳಾ ಹಲ್ಲೆಗೊಳಗಾದವರ ಚರಿತ್ರೆ ಕೆದಕುತ್ತಿರುವುದು ನೀಚತನದ ಪರಮಾವಧಿ ಅಲ್ಲದೇ ಮತ್ತೇನು?
ದಾಳಿಯ ವೇಳೆ ೮ ಜನ ಯುವಕರಿದ್ದರು. ಮಾಧ್ಯಮಗಳಲ್ಲಿ ಒಬ್ಬನನ್ನು ಮಾತ್ರ ತೋರಿಸಿ ಇತರೆ ಏಳು ಜನರನ್ನು ಚಿತ್ರೀಕರಣ ಮಾಡಿದರೂ ಪ್ರಸಾರ ಮಾಡಿಲ್ಲ ಏಕೆ ಎಂದೆಲ್ಲ ಸಂಶಯ ವ್ಯಕ್ತಪಡಿಸಿದ್ದಾರೆ. ಆದರೆ ಈ ಅಧ್ಯಕ್ಷರಿಗೆ ಪೊಲೀಸರು ನೀಡಿದ ವರದಿಯಲ್ಲಿ ಎಲ್ಲಾ ಅಂಶಗಳು ಇದ್ದರು ಅದರ ಬಗ್ಗೆ ಏಕೆ ಮಾತನಾಡುತ್ತಿಲ್ಲ. ಗೃಹ ಇಲಾಖೆ ವರದಿ  ಪ್ರಕಾರ ರೇವ್ ಪಾರ್ಟಿ ಅಲ್ಲ ಎಂದು ಪೊಲೀಸ್
 ತನಿಖೆಯಿಂದ ಸಾಬೀತಾದರೂ ಈ ಮಂಜುಳಮ್ಮಗೆ ಏಕೆ ಅರ್ಥವಾಗುತ್ತಿಲ್ಲ.  ೮ ಜನ ಯುವಕರಲ್ಲಿ ಮದ್ಯಪಾನ ಮತ್ತು ಗಾಂಜಾ ಸೇವನೆ ಮಾಡಿದ್ದರು. ಅಲ್ಲಿ ಮಾದಕ ವಸ್ತುಗಳು ದೊರಕಿವೆ ಎಂದೆಲ್ಲಾ ಹಸಿ ಸುಳ್ಳು ಹೇಳುತ್ತಿರುವುದರ ಹಿಂದೆ ಕಾಣದ ಕೈಗಳ ಷಡ್ಯಂತ್ರವಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಹೋಂ ಸ್ಟೇ ಮಾಲೀಕರ ವಿರುದ್ಧ ತನಿಖೆಗೆ ಆಗ್ರಹಿಸುವ ಈ ಅಧ್ಯಕ್ಷರು ಸರ್ಕಾರವೇ ನಡೆಸುವ ಮಲ್ಪೆಯ ರೇವ್ ಪಾರ್ಟಿಯ ನಗ್ನತೆಯ ಬಗ್ಗೆ ಏಕೆ ಚಕಾರವೆತ್ತುವುದಿಲ್ಲ. ಸರ್ಕಾರ ಮತ್ತು ಹಿಂದೂ ಜಾಗರಣಾ ವೇದಿಕೆಯ ವಕ್ತಾರರಂತೆ ವರ್ತಿಸುತ್ತಿರುವ ಅಧ್ಯಕ್ಷರು ತನ್ನತನವನ್ನೇ ಮರೆತಿರುವುದು ವಿಷಾದನೀಯ ಸಂಗತಿ. ದಾಳಿಗೆ ಒಳಗಾದ ಯುವಕನ ತಾಯಿಯನ್ನು ಮಸಾಜ್ ಕೇಂದ್ರದಲ್ಲಿ ಕಾನೂನುಬಾಹಿರ ಕೃತ್ಯದಲ್ಲಿ ತೊಡಗಿದ್ದರಿಂದ   ಬಂಧಿಸಲಾಗಿತ್ತು. ಅವರ ಮನೆಗೆ ಹೆಣ್ಣುಮಕ್ಕಳು ರಾತ್ರಿ ಬಂದು ಬೆಳಿಗ್ಗೆ ಹೋಗುತ್ತಿದ್ದರು ಎಂದು ಅಪವಾದ ಮಾಡುವ ಈ ಅಧ್ಯಕ್ಷರಿಗೆ ತಾನು ಹೆಣ್ಣು ಎಂಬುದನ್ನು ಮರೆತಂತಿದೆ.
ಪಾರ್ಟಿಯಲ್ಲಿ ಮಾದಕ ವಸ್ತುಗಳಿರಲಿಲ್ಲ ಎಂದು ಪೊಲೀಸರೇ ಹೇಳಿದರೂ ಕೂಡ ತನಿಖಾ ವರದಿಗೆ ಅವಮಾನ ಮಾಡುತ್ತಿರುವ ಮಂಜುಳಾರನ್ನು ಸರ್ಕಾರ ತಕ್ಷಣವೇ ಆಯೋಗದ ಅಧ್ಯಕ್ಷತೆಯಿಂದ ಕಿತ್ತು ಹಾಕಬೇಕು. ತಾವು ಹೇಳಿದ್ದೇ ವೇದವಾಕ್ಯ ಎನ್ನುತ್ತಿರುವ ಅಧ್ಯಕ್ಷರ ವರದಿಯನ್ನು ರದ್ದುಪಡಿಸಿ, ನಿಷ್ಪಕ್ಷಪಾತ ವರದಿ ತರಿಸಿಕೊಂಡು ವಿಳಂಬ ನೀತಿ ಅನುಸರಿಸದೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಗೃಹ ಇಲಾಖೆ ಹೊತ್ತವರು ಕೂಡಲೇ ಕಠಿಣ ಕ್ರಮ ಕೈಗೊಳ್ಳುವತ್ತ ಗಮನ ಹರಿಸಬೇಕು.


ಭಾವೈಕ್ಯತೆಗೆ ಭಂಗ ತರುತ್ತಿರುವ ಕಿಡಿಗೆಡಿಗಳು

ಕಾಡ್ಗಿಚ್ಚಿನಂತೆ ಹರಡುತ್ತಿರುವ ಗಾಳಿಸುದ್ದಿಯಿಂದಾಗಿ ಇಶಾನ್ಯ ರಾಜ್ಯದ ಜನತೆ ಜೀವ ಭಯದಿಂದ ರಾಜ್ಯ ತೊರೆಯುತ್ತಿದ್ದಾರೆ. ಮೂಲ ಸ್ಥಾನಕ್ಕೆ ಹೋಗುತ್ತಿರುವ ಜನತೆಯನ್ನು ಒಲೈಸುವಲ್ಲಿ ನಿರತವಾಗಿರುವ ಸರ್ಕಾರ ಇಂತ ಸುಳ್ಳು ಸುದ್ದಿ ಹಬ್ಬಿಸಿ ಜನರನ್ನು ಆತಂಕದ ಮಡುವಿನಲ್ಲಿ ಜೀವ ಕಳೆಯುವಂತೆ ಮಾಡಿದೆ. ಇಂತ ವದಂತಿಗಳಿಗೆಲ್ಲ ಸಂಯಮ ಜೀವಿಗಳಾದ ಆಸ್ಸಾಮಿಗರು ಭಾವಾವೇಶದಿಂದ ಪ್ರತಿಕ್ರಿಯಿಸುವ ಸಂದರ್ಭ ಸೃಷ್ಟಿಯಾಗಿದೆ.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿ ಹೇಳಿಕೊಳ್ಳುವಷ್ಟು ಹತೋಟಿಯಲ್ಲಿ ಇಲ್ಲದಿರುವುದು ಅವರನ್ನು ಇನ್ನಷ್ಟು ಆತಂಕಕ್ಕೆ ದೂಡಿದೆ. ಇತ್ತೀಚೆಗೆ ಬೆಂಗಳೂರಿನ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ಓದುತ್ತಿದ್ದ ಮಣಿಪುರದ ವಿದ್ಯಾರ್ಥಿಯೊಬ್ಬ  ಸಂಶಯಾಸ್ಪ ಸಾವಿಗಿಡಾಗಿರುವುದು ಇಂತ ವದಂತಿಗಳಿಗೆ ಪುಷ್ಟಿ ನೀಡಿದೆ. ಆ ಸಾವಿನ ತನಿಖೆ ನಡೆಸುತ್ತಿರುವ ನಮ್ಮ ಪೊಲೀಸರಿಗೆ ರಹಸ್ಯೆ ಭೇದಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದರಿಂದ ನಮಗೇನು ರಕ್ಷಣೆ ನೀಡುತ್ತಾರೆ ಎಂಬುದು ಕೂಡ ಅವರ ಆತಂಕಕ್ಕೆ ಕಾರಣವಾಗಿರಬಹುದು.
ಬೆಂಕಿ ಇದ್ದಲ್ಲಿ ಮಾತ್ರ ಹೊಗೆ ಬರಲು ಸಾಧ್ಯ ಅಂಥ ಕೆಲಸ ನಗರದಲ್ಲಿ ಕೆಲವು ಕಿಡಿಗೆಡಿಗಳಿಂದ ಆಗಿದೆ. ಇಂಥ ಗಾಳಿ ಸುದ್ದಿ ಹಬ್ಬಿಸಿ ವಲಸಿಗರ ನೆಮ್ಮದಿಗೆ ಭಂಗ ಮಾಡುತ್ತಿರುವ ಇಂತಹ ಕಿಡಿಗೆಡಿಗಳನ್ನು ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಕ್ಷಮಿಸಬಾರದು.
ತವರು ನೆಲಕ್ಕೆ ಮರಳುತ್ತಿರುವ ವಲಸಿಗರನ್ನು ರೇಲ್ವೇ ಸ್ಟೇಶನ್‌ಗೆ ಹೋಗಿ ತಡೆದರೆ ಸಾಲದು ಅವರ ರಕ್ಷಣೆ ಜವಾಬ್ದಾರಿ ಸರ್ಕಾರದ ಆದ್ಯ ಕರ್ತವ್ಯ ಎಂಬುದು ಮೊದಲು ತಿಳಿದುಕೊಳ್ಳಲಿ.  ಈಶಾನ್ಯ ರಾಜ್ಯದ ವಲಸಿಗರನ್ನು ಉಳಿಸಿಕೊಳ್ಳುವಲ್ಲಿಯೂ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಷಯವಾಗಿದೆ. ರಾಜಕೀಯ ವಕಾಲತ್ತು ವಹಿಸುವ ಕೆಲವು ಸಂಘಟನೆಗಳು ತಮ್ಮ ಸಂಘಟನೆಯ ನಾಮಫಲಕ ಹಾಕಿಕೊಂಡು ಸಾಂತ್ವನ ಹೇಳುತ್ತಿರುವುದು ಏಕೆ ಎಂಬ ಪ್ರಶ್ನೆ ಉದ್ಬವಿಸುತ್ತದೆ. ಈಶಾನ್ಯ ರಾಜ್ಯದ ಜನರ ವಿರುದ್ಧ ಮುಸ್ಲಿಂ ಸಮುದಾಯವನ್ನು ಎತ್ತಿಕಟ್ಟಿ ಭಾವೈಕ್ಯತೆ ಭಂಗ ತರುತ್ತಿರುವುದರ ಹಿಂದೆ ಏನೋ ಷಡ್ಯಂತ್ರ ಅಡಗಿದೆ ಎಂದು ಬೇರೇನೂ ಹೇಳಬೇಕಾಗಿಲ್ಲ.
ಬೆಂಗಳೂರಿನಲ್ಲಿ ನೆಲೆಸಿರುವ ಹೆಚ್ಚು ಜನರು ಬುಡಕಟ್ಟು ಜನಾಂಗಕ್ಕೆ ಸೇರದವರು ಶ್ರಮಜೀವಿಗಳು ಬಸವಣ್ಣನವರ ಮೂಲಮಂತ್ರವಾದ ಕಾಯಕವೇ ಕೈಲಾಸ ಎಂಬುದು ಈ ಸಮುದಾಯದಲ್ಲಿ ಕಾಣಬಹದು ಯಾರಿಗೂ ತೊಂದರೆ ಮಾಡದೆ ತಮ್ಮ ಕೆಲಸವಾಯಿತು ತಾವಾಯಿತು ಎಂದು ಇದ್ದ ಸೌಮ್ಯವಾದಿಗಳಿಗೆ ಭಯ ಹುಟ್ಟಿಸುತ್ತಿರುವುದು ಏಕೆ? ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಹರಸಿ ಬಂದ ಅಸ್ಸಾಂ, ಮಣಿಪುರ ರಾಜ್ಯಗಳಿಂದ ಬಂದು ನೆಲೆಸಿದ್ದ ಲಕ್ಷಾಂತರ ಜನರಿಗೆ ಬೆಂಗಳೂರು ತ್ಯಜಿಸಲು ಹಬ್ಬಿಸಿದ ವದಂತಿಗಳಲ್ಲದೆ ಬೇರೆ ಕಾರಣಳಿದ್ದರೆ ತನಿಖೆಗೊಳಪಡಿಸಬೇಕು.
ಭಾವೈಕ್ಯತೆಗೆ ಹೆಸರಾದ ಕರ್ನಾಟಕದಲ್ಲಿ ವಿಭಿನ್ನ ಸಂಸ್ಕೃತಿ. ಕನ್ನಡಿಗರ ಹೃದಯ ಶ್ರೀಮಂತಿಕೆ, ಹಂಚಿ ತಿನ್ನುವ ದೊಡ್ಡ ಭಾವನೆಗೆ ಇಂತ ಘಟನೆಗಳಿಂದ ಕಪ್ಪುಚುಕ್ಕೆ ಬರುವುದು ಗ್ಯಾರಂಟಿ. ಸಾಂಸ್ಕೃತಿಕ ಅನನ್ಯತೆಯ ತಾಣವಾಗಿರುವ ನಗರ ಇಂದು ಕಿಡಿಗೆಡಿಗಳ ತಾಣವಾಗುತ್ತಿದೆ. ಇದಕ್ಕೆ ಆಸ್ಪದ ಮಾಡಿಕೊಡದೆ ಎಲ್ಲರಿಗೂ ರಕ್ಷಣೆ ನೀಡುವತ್ತ ಸರ್ಕಾರ ದಿಟ್ಟ ಕ್ರಮಕೈಗೊಳ್ಳಲಿ.





ಪ್ರವಾಸದ ಮೋಜಿನಲ್ಲಿ ಮೈಮರೆಯುತ್ತಿರುವ ಶಾಸಕರು

ನಮ್ಮ ಶಾಸಕರಿಗೆ ಯಾಕೋ ವಿದೇಶ ನೋಡುವ ಆಸೆ ಸ್ವದೇಶದಲ್ಲಿ ಜನರು ಸತ್ತರು ಪರವಾಗಿಲ್ಲ. ಅದೇ ಅವರಿಗೆ ಅಧ್ಯಯನಕ್ಕೆ ವಸ್ತು ವಿಷಯವಾದಿತು. ಎಷ್ಟೇ ಪ್ರತಿರೋಧ ವ್ಯಕ್ತವಾದರೂ ಕೂಡ ವಿದೇಶ ಪ್ರವಾಸದಿಂದ ಹಿಂದೆ ಸರಿಯದೇ ತಮ್ಮ ಮೂಗಿನ ನೇರಕ್ಕೆ ಸೂಕ್ತವಾದ ಉತ್ತರಗಳನ್ನು ನೀಡುವುದರ ಮೂಲಕ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.
ವಿದೇಶ ಪ್ರವಾಸ ಮಾಡಬಾರದು ಎಂದೇನು ಇಲ್ಲ ಆದರೆ ಪರಿಸ್ಥಿತಿ ಹೇಳಿಕೊಳ್ಳುವಷ್ಟು ಸುಧಾರಣೆ ಇಲ್ಲ್ಲದಿರುವುದಕ್ಕೆ ಸಾಮಾನ್ಯವಾಗಿ ಪ್ರತಿರೋಧ ವ್ಯಕ್ತವಾಗುತ್ತಿದೆ. ಯಾವುದೇ ಅಧ್ಯಯನ ವಸ್ತು ಸ್ಥಿತಿಗೆ ಪೂರಕವಾಗಿರಬೇಕು. ಒತ್ತಡ ಹಾಗೂ ರಾಜ್ಯ ಕಷ್ಟದಲ್ಲಿ ಇದ್ದಾಗ ಹೋಗುವುದು ಸಮಂಜಸವಲ್ಲ. ಜನ ಜಾನುವಾರುಗಳು ಕುಡಿಯುವ ನೀರು, ಮೇವಿಗಾಗಿ ಹಾಹಾಕಾರ ಪಡುತ್ತಿರಬೇಕಾದರೆ ಅಧ್ಯಯನದ ನೆಪದಲ್ಲಿ ಮೋಜಿಗಾಗಿ ವಿದೇಶಕ್ಕೆ ಹೋಗುವುದು ಯಾವ ಪುರುಷಾರ್ಥಕ್ಕಾಗಿ? ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ರೈತರ ಹೊಲಗಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಳ್ಳಲಿ ಸಂದರ್ಭದಲ್ಲಿ ತಮ್ಮ ಕ್ಷೇತ್ರಗಳಲ್ಲಿ ಇದ್ದು ಅಭಿವೃದ್ಧಿ ಕಾರ್ಯಗಳಿಗೆ ವೇಗ ಹೆಚ್ಚಿಸುವುದು ಉತ್ತಮವಾದೀತು. ಬರದ ಕರಿ ಛಾಯೆಯಿಂದ ಬರಡಾದ ರೈತರಿಗೆ ಆತ್ಮ ವಿಶ್ವಾಸ ತುಂಬುವ ಕೆಲಸ ಮಾಡುವುದು ಬಿಟ್ಟು ವಿದೇಶ ಪ್ರವಾಸದ ಮೋಜಿನಲ್ಲಿ ಮೈಮರೆಯುತ್ತಿರುವುದು ನೋಡಿದರೆ ಶಾಸಕರಿಗೆ ರೈತಪರ ಕಾಳಜಿ ಎಷ್ಟಿದೆ ಎಂದು ಗೊತ್ತಾಗುತ್ತಿದೆ.
ರಾಜ್ಯದ ಜನತೆಗೆ ನೈತಿಕ ಶಕ್ತಿ ತುಂಬುವತ್ತ ಕೆಲಸ ಮಾಡಬೇಕಾದ ಶಾಸಕರು ಸಾರ್ವಜನಿಕರ ಹಣ ಎಂದ ಕೂಡಲೇ ವಿದೇಶ ಯಾತ್ರೆ ಕೈಗೊಳ್ಳುವುದೇ? ವಾಸ್ತವ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಕಷ್ಟದ ಸಂದರ್ಭದಲ್ಲಿ ನಮ್ಮ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ ಎಂದ ಮೇಲೆ ಇಂತ ಜನಪ್ರತಿನಿಧಿಗಳಿಂದ ಏನು ನಿರೀಕ್ಷಿಸಲು ಸಾಧ್ಯವಿಲ್ಲ. ಸಾರ್ವಜನಿಕರು ಈಗಾಗಲೇ ಜನಪ್ರತಿನಿಧಿಗಳಿಗೆ ಕಿಂಚಿತ್ತೂ ಗೌರವ ಕೊಡುವುದಿಲ್ಲ. ಮುಂದೆ ಮತ್ತಷ್ಟು ಕಠಿಣವಾಗಿ ನಡೆದುಕೊಳ್ಳುತ್ತಾರೆ. ಬರ ಹಾಗೂ ಪ್ರವಾಹದಂತಹ ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ಜನರ ಜತೆ ಇದ್ದು ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕಾದದ್ದು ಅವರ ಆದ್ಯ ಕರ್ತವ್ಯ.
ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಗೋಶಾಲೆಗಳನ್ನು ತೆರೆಯಲಾಗಿದೆ ಎಂದು ಹೇಳಿಕೊಳ್ಳುವ ಸರ್ಕಾರ ಗೋಶಾಲೆಗಳಿಗೆ ಮೇವು ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಹೆಸರಿಗೆ ಮಾತ್ರ ತೆರೆಯಲಾದ ಗೋಶಾಲೆಗಳಲ್ಲಿಯೂ ರಾಜಕೀಯ ನುಸುಳಿದೆ ಎಂಬುವುದು ವಿಪರ್ಯಾಸ. ಆಯಾ ಕ್ಷೇತ್ರದ ಶಾಸಕರ ಹಿಂದಿರುವ ಪುಡಿ ರಾಜಕೀಯ ನಾಯಕರು ತಮ್ಮ ಬೆಂಬಲಿಗ ರೈತರಿಗಷ್ಟೇ ಮೇವು ನೀಡಿ ತಾರತಮ್ಯ ಎಸಗುತ್ತಿದ್ದಾರೆ ಎಂದು ದೂರುಗಳು ಕೇಳಿಬರುತ್ತಿವೆ. ಸರ್ಕಾರ ನಿಜವಾದ ಫಲಾನುಭವಿಗಳಿಗೆ ಸಮರ್ಪಕವಾಗಿ ವಿತರಣೆಯಾಗುವಂತೆ ನೋಡಿಕೊಳ್ಳುವತ್ತ ಕ್ರಮಕೈಗೊಳ್ಳಲಿ.

ಸ್ವಾರ್ಥ ಸಾಧನೆಗೆ ಬಲಿಯಾಗುತ್ತಿರುವ ಸಂಘಟನೆಗಳು

ರಾಜ್ಯದಲ್ಲಿ ದಿನಕ್ಕೊಂದು ಸಂಘಟನೆಗಳು ಹುಟ್ಟಿಕೊಳ್ಳುತ್ತವೆ. ಸಂಘಟನೆಗಳನ್ನು ಹುಟ್ಟು ಹಾಕುವ ನಾಯಕರ ವಾಂಛೆ ಧ್ವನಿ ಇಲ್ಲದ ಧ್ವನಿಯಾಗಿ ಮತ್ತು ಶೋಷಿತರ ಹಕ್ಕುಗಳನ್ನು ಒದಗಿಸಿ ಕೊಡುವಲ್ಲಿ ರಚನಾತ್ಮಕ ಹೋರಾಟ ಮಾಡುವುದೇ ಮೂಲ ಗುರಿ ಎಂದು ಅಬ್ಬರಿಸುತ್ತಾರೆ.
ಯಾವುದೇ ಸ್ವಾರ್ಥ, ಪ್ರತಿಷ್ಠೆ, ಅಹಂಕಾರ, ಅಧಿಕಾರದ ದಾಹ ಎವೆಲ್ಲವನ್ನು ಮೀರಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಶೋಷಿತರಿಗೆ ನ್ಯಾಯ ಒದಗಿಸಿ ಕೊಡಲು ಸಾಧ್ಯ ಆದರೆ ಮೂಲ ಉದ್ದೇಶವನ್ನು ಬಿಟ್ಟು ಸ್ವಾರ್ಥ ಸಾಧನೆಗೆ ಸಂಘಟನೆಗಳನ್ನು ಬಲಿ ಕೊಡುತ್ತಾ ನಡೆದಿರುವುದರಿಂದ ಸಂಘಟನೆಗಳ ಸಂಖ್ಯೆ ಹೆಚ್ಚುತ್ತಲೆ ಇದೆ ಹೊರತು ಸಮಾಜಿಕ ನ್ಯಾಯ ಮರೀಚಿಕೆಯಾಗಿದೆ.
ಇದಕ್ಕೆ ಸೂಕ್ತ ಉದಾಹರಣೆ ಎಂದರೆ ೧೯೭೦ರ ದಶಕದಲ್ಲಿ ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿ ಹುಟ್ಟಿದಾಗ ಆ ಸಮುದಾಯದ ಏಳೆಗೆಗಾಗಿ ಕೆಲಸ ಮಾಡಿತು.
ಸಮಾಜದಲ್ಲಿನ ಅನಿಷ್ಠ ಪದ್ಧತಿಗಳ ವಿರುದ್ಧ ವೈಜ್ಞಾನಿಕ ಪ್ರಜ್ಞೆ ಮೂಡಿಸುವಲ್ಲಿ ಮತ್ತು ಸರ್ಕಾರದ ಮೇಲೆ ಒತ್ತಡ ಹಾಕಿದ ಫಲವಾಗಿ ಮಲ ಹೊರುವ ಪದ್ಧತಿ ನಿಷೇಧವಾಯಿತು. ಹಾಗೇಯೆ ರೈತ ಸಂಘ ಕೂಡ ರೈತರ ಏಳಿಗೆಗಾಗಿ ಅವಿರತ ಶ್ರಮಿಸಿತು. ಈ ಎರಡು ಸಂಘಟನೆಗಳು ಚಳುವಳಿಗೆ ಧುಮುಕಿದರೆ ವಿಧಾನಸೌಧದಲ್ಲಿರುವ ಮುಖ್ಯಸ್ಥರು ಉಸಿರು ಬಿಗಿಹಿಡಿದುಕೊಂಡೆ ಕುಳಿತುಕೊಳ್ಳಬೇಕಾಗಿತ್ತು ಅಷ್ಟೊಂದು ಅಂದಿನ ಹೋರಾಟದಲ್ಲಿ ಗಟ್ಟಿತನವಿತ್ತು. ಆದರೆ ಇಂದಿನ ಸಂದರ್ಭದಲ್ಲಿ ಸಂಘಟನೆಗಳು ಒಡೆದು ಹೋಗಿದ್ದಲ್ಲದೆ ಮನಸ್ಸುಗಳು ಕೂಡ ಒಡೆದು ಹೋಗಿರುವುದರಿಂದ ರಚನಾತ್ಮಕ ಹೋರಾಟ ಎಂಬುದು ಪುಸ್ತಕದಲ್ಲಿ ಓದಿ ತಿಳಿಯುವ ಸನ್ನಿವೇಶ ಸೃಷ್ಟಿಯಾಗಿದೆ.
ಇತ್ತೀಚಿನ ದಿನಗಳಲ್ಲಂತೂ ಸಂಘಟನೆಗಳು ತಮ್ಮ ಸ್ವಾರ್ಥ ಚಿಂತನೆಗಳತ್ತ ಮನಸ್ಸು ಮಾಡಿರುವುದರಿಂದ ಸಾಮಾಜಿಕ ಬದ್ಧತೆ ಬಗ್ಗೆ ಚಿಂತಿಸದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಾಮಾಣಿಕ ಕಾಳಜಿಯನ್ನು ಬದಿಗೊತ್ತಿದಾಗ ಸಂಘಟನೆಗಳು ಛಿದ್ರವಾಗಿ ಹೋಗುತ್ತವೆ ಎಂಬುದಕ್ಕೆ ಇಂದು ಹುಟ್ಟಿಕೊಳ್ಳುತ್ತಿರುವ ಸಂಘಟನೆಗಳ ಸಂಖ್ಯೆ ನೋಡಿದರೆ ಗೊತ್ತಾಗುತ್ತದೆ.
ಗೊತ್ತು ಗುರಿ ಇಲ್ಲದೆ ಹುಟ್ಟಿಕೊಳ್ಳುತ್ತಿರುವ ಸಂಘಟನೆಗಳಿಗೆ ಸ್ವಹಿತದ ಬಗ್ಗೆ ಹೆಚ್ಚಿನ ಕಾಳಜಿ ಇರುವುದರಿಂದ ಚಳವಳಿಗಳು   ನೀರ ಮೇಲಿನ ಗುಳ್ಳೆಯಂತಾಗಿವೆ. ಈ ಗುಳ್ಳೆ ಸಂಘಟನೆಗಳನ್ನು ನಮ್ಮ ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕೆ ಉಪ ಯೋಗಿಸಿಕೊಂಡು ಕೆಲಸ ಮುಗಿಸಿದ ಕೂಡಲೇ ಸಿಪ್ಪೆಯಂತೆ ಹೋಗೆದು ಬಿಡುತ್ತಾರೆ ಅವಾಗ ಮತ್ತೇ ಬೀದಿಗೆ ಬಂದ ನಾಯಕರು ಬೇಕೇ ಬೇಕು ನ್ಯಾಯ ಬೇಕು ಎಂದು ಕೂಗುವುದು ಮಾತ್ರ ಬಿಡುವುದಿಲ್ಲ. ಇಂಥ ಸಂಘಟನೆಗಳ ಬೆಂಬಲ ಪಡೆದ ನಮ್ಮ ರಾಜಕೀಯ ನಾಯಕರಿಂದ ಉತ್ತಮ ಪ್ರಜಾಪ್ರಭುತ್ವ ನಿರೀಕ್ಷಿಸಬಹುದೇ? ಸಂಘಟನೆಗಳು ಸಮಾಜದ ಆಸ್ತಿಯಾಗಬೇಕು ಆದರೆ ಅವುಗಳನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿರುವುದರಿಂದ ಸಂಘಟನೆಗಳ ನೈತಿಕ ಮೌಲ್ಯ ಕುಸಿಯುತ್ತಿದೆ.
ತತ್ವ ಸಿದ್ಧಾಂತಗಳೊಂದಿಗೆ ಜನ್ಮ ತಾಳುವ ಸಂಘಟನೆಗಳು ಸ್ವಾರ್ಥಪ್ರಜ್ಞೆ ಮೂಡಿದರೆ ಸಾಕು ಛಿದ್ರವಾಗುತ್ತವೆ ಎನ್ನುವುದಕ್ಕೆ ಇಂದಿನ ದಲಿತ ಸಂಘರ್ಷ ಸಮಿತಿಗಳು ಮತ್ತು ರೈತ ಸಂಘಗಳೇ ಜ್ವಲಂತ ಉದಾರಹಣೆ ನೀಡಬಹುದಾಗಿದೆ.
ಸಮುದಾಯದ ಅಭಿವ್ರದ್ದಿಗೆ ಯಾರು ಕೆಲಸ ಮಾಡದೆ ಹಿಂದುಳಿದ, ದಲಿತರನ್ನು ನಿರಂತರವಾಗಿ ತುಳಿಯುವ ಕೆಲಸ ನಡೆಯುತ್ತಿದೆ  ಎಂದು ಭಾಷಣ ಬಿಗಿಯುವ ಈ ನಾಯಕರಿಂದಲೇ ಅನ್ಯಾಯ ನಡೆಯುತ್ತಿದೆ. ಇಂತಹ ಕೆಲವೇ ನಾಯಕರನ್ನು ಉಪಯೋಗಿಸಿಕೊಂಡು ದುಷ್ಟ ಶಕ್ತಿಗಳು ತಾಂಡವ ನೃತ್ಯವಾಡುತ್ತಿದ್ದಾರೆ. ಸಮಾಜದಲ್ಲಿರುವ ಜನತೆ ಕಾಡು ಮೃಗಗಳಂತೆ        ವರ್ತಿಸುತ್ತಿದ್ದಾರೆ. ಮಾನವೀಯತೆ ಮರೆಯಾಗುತ್ತಿದೆ ನಾವು ನಮ್ಮವರು ಎನ್ನುವ ಭಾವನೆ ವಿನಾಶದ ಅಂಚಿನಲ್ಲಿದೆ.