Thursday 14 April 2011

ಹೈಕ ಪ್ರದೇಶಕ್ಕೆ 371ನೇ ಕಲಂ ಪೂರಕವೇ...?

ಹೈದ್ರಬಾದ ಕರ್ನಾಟಕ ಸರ್ವತೋಮುಖ ಅಭಿವೃದ್ಧಿ ಕಾಣಬೇಕಾದರೆ ಸಂವಿಧಾನದ ೩೭೧ನೇ ವಿಧಿ ತಿದ್ದುಪಡಿಯಾಗಬೇಕು ಎಂಬ ಕೂಗು ಬಹಳ ದಿನಗಳಿಂದಲೂ ಕೇಳಿ ಬರುತ್ತಿದೆ ಈ ಬೇಡಿಕೆ ಪ್ರತ್ಯೇಕ ರಾಜ್ಯಕ್ಕೆ ಎಡೆ ಮಾಡಿಕೊಡುತ್ತಿದೆ. ಆದರೆ ನೈಜ ಕಾಳಜಿ ತೋರದ ಜನಪ್ರತಿನಿಧಿಗಳು ಚುನಾವಣೆಯ ಭರವಸೆಗಾಗಿಯೇ ಉಪಯೋಗಿಸಿಕೊಂಡಿದ್ದಾರೆಯೇ ವಿನಹ ರಚನಾತ್ಮಕವಾಗಿ ಸ್ಪಂದಿಸುವ ಧೈರ್ಯ ತೋರುತ್ತಿಲ್ಲ. ಈ ಭಾಗದ ಘಟಾನುಘಟಿ ನಾಯಕ ಮಣೆಗಳಾದ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದರೂ ಆದ ಎನ್. ಧರ್ಮಸಿಂಗ್ ಸಂಸತ್ತಿನಲ್ಲಿ ವಿಷಯ ಪ್ರಸ್ತಾಪಿಸದಿರುವುವುದು ಗೆಲ್ಲಿಸಿ ಕಳಿಸಿದ ಜನರಿಗೆ ಮಾಡಿದ ದ್ರೋಹವಲ್ಲದೆ ಮತ್ತೇನು? 
ಈ ವಿಷಯವನ್ನು ಕುರಿತು ಸಂಘಟಿತ ಹೋರಾಟ ಮಾಡಬೇಕಾದ ಸಂಘಟನೆಗಳು ಒಂದೊಂದು ರಾಜಕೀಯ ಪಕ್ಷದೊಂದಿಗೆ ಗುರಿತಿಸಿಕೊಂಡಿರುವುದರಿಂದ ಹೋರಾಟದ ರೂಪರೇಷೆ ರಾಜಕೀಕರಣಗೊಂಡಿದೆ. ಇದಕ್ಕೆ ಫಲಶೃತಿ ಎಂಬಂತೆ ಹೈಕ ಹೋರಾಟ ಸಮಿತಿಯ ಪ್ರಭಾವಿ ನಾಯಕರ ಪುತ್ರನನ್ನು ನಿಗಮ ಮಂಡಳಿಯ ಅಧ್ಯಕ್ಷಗಿರಿಗೆ ನೇಮಿಸಿದ ಕಾರಣ ಅವರು ಬಿಜೆಪಿಯನ್ನು ಬೆಂಬಲಿಸಿ ಹೋರಾಟ ಮಾಡುತ್ತಿದ್ದಾರೆ ಇಂಥಹ ಹೋರಾಟಗಾರರಿಂದ ಏನು ನೀರಿಕ್ಷಿಸಲು ಸಾಧ್ಯ? ಸಂದರ್ಭಕ್ಕೆ ತಕ್ಕಂತೆ ಬಣ್ಣ ಬದಲಾಯಿಸುವ ಈ ನಾಯಕರು ಬದ್ಧತೆ ಪ್ರದರ್ಶಿಸುವುದಾದರೂ ಯಾವಾಗ?
ಹೈದ್ರಬಾದ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷ ಹಾಗೂ ಮಾಜಿ ಸಚಿವ ವೈಜನಾಥ ಪಾಟೀಲ್ ೩೭೧ನೇ ವಿಧಿ ತಿದ್ದುಪಡಿಗೆ ಒತ್ತಾಯಿಸಿದರೆ ಯುವ ಹೋರಾಟ ಸಮಿತಿ ಅಧ್ಯಕ್ಷ ರಾಜು ಕುಳಗೇರಿ ೩೭೧(ಡಿ) ವಿಧಿಗೆ ತೆಲಂಗಾಣ ಮಾದರಿಯಲ್ಲಿ ತಿದ್ದುಪಡಿಯಾಗಬೇಕು ಎಂದು ಆಗ್ರಹಿಸುತ್ತಿದ್ದಾರೆ. ಈ ಎರಡು ಮಾದರಿ ತಿದ್ದುಪಡಿಗಳು ಜಾರಿಯಾದ ರಾಜ್ಯದಲ್ಲಿ ಎಷ್ಟರ ಮಟ್ಟಿಗೆ ಅಭಿವೃದ್ಧಿಗೆ ಪೂರಕವಾಗಿವೆ ಎಂಬುದನ್ನು ಹೋರಾಟಗಾರರು ಪ್ರಗತಿಪರ ಚಿಂತಕರು ಕಾನೂನು ತಜ್ಞರು ಗಮನಸಬೇಕಿದೆ.
ಸಂವಿಧಾನದ ೩೭೧ನೇ ಅಡಿಯಲ್ಲಿ ವಿದರ್ಭಕ್ಕೆ ಮತ್ತು (ಡಿ) ಅಡಿಯಲ್ಲಿ ಆಂಧ್ರಪ್ರದೇಶದ ತೆಲಂಗಾಣಕ್ಕೆ ಪ್ರತ್ಯೇಕ ಸ್ಥಾನಮಾನ ನೀಡಿದರೂ ಪ್ರಾದೇಶಿಕ ಅಸಮಾನತೆ ನಿವಾರಿಸುವ ನಿಟ್ಟಿನಲ್ಲಿ ನೀರಿಕ್ಷಿತ ಫಲ ಕಂಡಿಲ್ಲ ಎನ್ನುವುದು ಸಾರ್ವಕಾಲಿಕ ಸತ್ಯವಾಗಿದೆ.
ಇಂದು ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಗಾಗಿ ಹೋರಾಟ ನಡೆಯುತ್ತಿರುವುದು ನೋಡಿದರೆ ಈ ತಿದ್ದುಪಡಿಯಿಂದ ಎಷ್ಟರ ಮಟ್ಟಿಗೆ ನ್ಯಾಯ ದೊರಕಿದೆ ಎಂಬುದು ಮನದಟ್ಟಾಗುತ್ತದೆ. ಹಾಗಾದರೆ ಕೇಂದ್ರ ಸರಕಾರ ಸೂಕ್ತ ಅನುದಾನ ನೀಡಲಿಲ್ಲವೇ ಅಥವ ರಾಜ್ಯ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲವೇ? ಹಾಗಂತ ಪ್ರತ್ಯೇಕ ರಾಜ್ಯವೇ ಸೂಕ್ತ ಎಂದು ಹೇಳಿತ್ತಿಲ್ಲ ಈ  ಎರಡರಲ್ಲಿ ಯಾವುದೇ ವಿಧಿಯನ್ನು ತಿದ್ದುಪಡಿ ತರುವ ಪೂರ್ವದಲ್ಲಿ ಯಾವುದು ಸೂಕ್ತ ಎಂಬುದನ್ನು ಪ್ರಗತಿಪರರ ಹೋರಾಟಗಾರರು  ತಜ್ಞರ ಸಲಹೆ ಸೂಚನೆಗಳನ್ನು ಸ್ವೀಕರಿಸಿ ಮುನ್ನೆಡೆಯಬೇಕಾಗಿದೆ. ನಮ್ಮ ರಾಜಕೀಯ ನಾಯಕರು ಮಾತೆತ್ತಿದರೆ  ನಂಜುಂಡಪ್ಪ ವರದಿ ಅನುಷ್ಠಾನದ ಬಗ್ಗೆ ಮಾತನಾಡುತ್ತಾರೆ ಈ ವರದಿಯನ್ನಾದರೂ ಕಟ್ಟು ನಿಟ್ಟಾಗಿ ಜಾರಿಗೆ ತಂದಿದ್ದಾರೆಯೇ? ಅದೂ ಇಲ್ಲ ವರದಿಗೊಬ್ಬ ಅಧ್ಯಕ್ಷ, ಅಲ್ಲದೆ ಹೈದ್ರಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಗೊಬ್ಬ ಅಧ್ಯಕ್ಷರನ್ನು ನೇಮಿಸಿ  ಕೈತೊಳೆದುಕೊಂಡ ಸರ್ಕಾರ ಇದರಲ್ಲಿಯೇ ಕೃತಜ್ಞತಾ ಭಾವನೆ ಕಂಡಿದೆ. ಪ್ರದೇಶಾಭಿವೃದ್ಧಿ ನಿದಿಯಲ್ಲಿ ಕೋಟ್ಯಂತರ ರೂ. ಅನುದಾನ ನೀಡಿದರೂ ಅಭಿವೃದ್ಧಿ ಮಾತ್ರ ಪ್ರಶ್ನಾರ್ಥಕವಾಗಿ ಉಳಿದಿದೆ. 
೨೦೦೮ರ ಮಹಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರು ಈ ಭಾಗದ ಕೇಂದ್ರ ಸ್ಥಾನವಾದ ಗುಲಬರ್ಗಾಕ್ಕೆ ಬಂದಾಗ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಹುದಿನದ ಬೇಡಿಕೆಯಾದ ೩೭೧ ಕಲಂಗೆ ತಿದ್ದುಪಡಿ ತರುವುದಾಗಿ ಭರವಸೆ ನೀಡಿದ ಅವರು, ಈ ಬಗ್ಗೆ ಪ್ರಸ್ತಾಪವೇ ಮಾಡಿಲ್ಲ ಇದು ಅವರ ತಪ್ಪು ಅಲ್ಲ ಹೈಕ ಭಾಗದಿಂದ ಆಯ್ಕೆಯಾಗಿ ಹೋದ ಪ್ರತಿನಿಧಿಗಳ ಬೇಜವಬ್ದಾರಿಯಾಗಿದೆ.
ಇತ್ತ ಬಿಜೆಪಿ ಪಕ್ಷ ನಾವೇನು ಕಡಿಮೆ ಎನ್ನುವಂತೆ ಮಾಜಿ ಉಪ ಪ್ರಧಾನ ಮಂತ್ರಿಗಳಾದ ಎಲ್.ಕೆ ಅಡ್ವಾಣಿ ಅವರನ್ನು ಕರೆಯಿಸಿ ಅದೇ ಭರವಸೆ ಕೊಡಿಸಿತು. ಯಾವುದೇ ಪಕ್ಷ ಅಧಿಕಾರಕ್ಕೆ ಬರಲಿ ತಿದ್ದುಪಡಿ ತರುವ ವಿಷಯಕ್ಕೆ ಸಂಸತ್ತಿನಲ್ಲಿ ದ್ವನಿ ಎತ್ತುವುದಾಗಿ ಹೇಳಿಕೊಂಡರೆ ಹೊರತು ಪ್ರಸ್ತಾಪವೇ ಆಗಲಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡ್ಯೂರಪ್ಪ ಅವರು ತಮ್ಮ ಅವಧಿಯಲ್ಲಿ ಸರ್ವ ಪಕ್ಷದ ಸದಸ್ಯರ ನಿಯೋಗ  ಕೊಂಡ್ಯೊಯ್ದು ಕೇಂದ್ರ ಗೃಹ ಸಚಿವ ಪಿ. ಚಿದಂಬರಮ್ ಅವರನ್ನು ಭೇಟಿ ಮಾಡಿ ನಂಜುಂಡಪ್ಪ ವರದಿ ಪ್ರಕಾರ ತಿದ್ದುಪಡಿ ಅಗತ್ಯ ಎಂದು ಮನದಟ್ಟು ಮಾಡಿದಾಗ ನಂಜುಂಡಪ್ಪ ಅಂದ್ರೆ ಯಾರು? ಅದರಲ್ಲಿರುವ ವಿಷಯಗಳೇನು ಎಂದು ನಿಯೋಗವನ್ನೆ ಪ್ರಶ್ನಿಸಿದ್ದು ನೋಡಿದರೆ ನಮ್ಮ ಹೋರಾಟಗಾರರ ಕೂಗು ಕೇಂದ್ರಕ್ಕೆ ಮುಟ್ಟಿಲ್ಲವೆಂದೇ ಅರ್ಥ. ಏನೇ ಆಗಲಿ ನಮ್ಮ ನಾಯಕರಿಗೆ ಚುನಾವಣೆ ಬಂದಾಗ ಈ ವಿಷಯವೇ ಮುಂದಿಟ್ಟುಕೊಂಡು ಮತ ಪಡೆಯಲು ದಾರಿಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾದಿಂದ ಹೈಕ ಹೋರಾಟಕ್ಕೆ ಮನ್ನಣೆ ಸಿಗದೇ ಹೋದಾಗ ಈ ಭಾಗದ ಹೋರಾಟಗಾರರು ಪ್ರತ್ಯೇಕ ಧ್ವಜಾರೋಹಣ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ಧ್ವಜಾರೋಹಣದಿಂದ ಅಭಿವೃದ್ಧಿಯಾಗಲಾರದು ಎಂದು ಈ ಹೋರಾಟಗಾರರಿಗೆ ಗೊತ್ತು ಆದರೆ ಅನಿವಾರ್ಯವಾಗಿ ಬೇರೆ ದಾರಿ ಕಾಣದೇ ಈ ರೀತಿ ಮಾಡಿದರು. ಆದರೆ ಇದಕ್ಕೆ ಏನು ಫಲಶೃತಿ ದೊರೆಯಲಿಲ್ಲ. ಒಂದು ವಿಶೇಷ ಎಂದರೆ ತೆಲಂಗಾಣ ಹೋರಾಟಕ್ಕಿಂತಲೂ ಮೊದಲೇ ವಿಶೇಷ ಸ್ಥಾನಮಾನಕ್ಕಾಗಿ ಆಗ್ರಹಿಸುತ್ತಲೇ ಬಂದಿದ್ದೇವೇಯೆ ಹೊರತು ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಲೇ ಇಲ್ಲ ಹಾಗಂತ ಅದು ನಮ್ಮ ದೌರ್ಭಾಗ್ಯವಂತೂ ಅಲ್ಲವೇ ಅಲ್ಲ ನಮಗೆ ಬೇಕಾದದ್ದೂ ವಿಶೇಷ ಸ್ಥಾನಮಾನ ಹೊರತು ಪ್ರತ್ಯೇಕ ರಾಜ್ಯವಲ್ಲ. ಪ್ರತ್ಯೇಕ ರಾಜ್ಯದಿಂದ ಸ್ವರ್ಗವೇ ಸೃಷ್ಠಯಾಗಿ ಬಿಡುತ್ತದೆ ಎಂಬ ಕಲ್ಪನೆಯೂ ಈ ಭಾಗಕ್ಕಿಲ್ಲ ನ್ಯಾಯಯುತ ಬೇಡಿಕೆ ಈಡೇರಿಸದಿದ್ದರೆ ತೆಲಂಗಾಣ ಮಾದರಿಯಲ್ಲಿ ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಚಾಲನೆ ನೀಡಬೇಕಾಗುತ್ತದೆ ಎಂಬ ಸಂದೇಶವನ್ನು ಎಲ್ಲಾ ಹೋರಾಟಗಾರರು ನೀಡುತ್ತಿದ್ದಾರೆ. ಆದರೆ ಪ್ರತ್ಯೇಕ ರಾಜ್ಯದಿಂದ ಎಲ್ಲವನ್ನು ಪಡೆದುಕೊಳ್ಳುತ್ತೇವೆ ಎಂಬುದು ಕೇವಲ ಭ್ರಮೆ ಒಂದು ಪ್ರದೇಶ ಹಿಂದುಳಿದಿದೆ ಎಂಬ ಕಾರಣಕ್ಕೆ ಸಂವಿಧಾನಕ್ಕೆ ತಿದ್ದುಪಡಿ ತರುವುದು ಅಸಾಧ್ಯ ತಿದ್ದುಪಡಿ ತರುವುದೇ ಎಲ್ಲಕ್ಕೂ ಪರಿಹಾರವಲ್ಲ ಅಲ್ಲಿನ ಅಭಿವೃದ್ಧಿಗೆ ರಾಜಕೀಯ ಇಚ್ಛಾಶಕ್ತಿ ಅಗತ್ಯ ಎಂಬ ನೀತಿ ಪಾಠವನ್ನು ಕೇಂದ್ರ ಸಚಿವ ಪಿ. ಚಿದಂಬರಂ ನಿಯೋಗಕ್ಕೆ ಹೇಳಿ ಕಳಿಸಿದ್ದರು. ಅವರ ಹೇಳಿಕೆಗೆ ತಲೆದೂಗಿದ ನಿಯೋಗ ಹೊರಗೆ ಬರುತ್ತಿದ್ದಂತೆ ತಮ್ಮ ಹೋರಾಟ ಮುಂದುವರಿಸಿತು. ಹೈಕ ಪ್ರದೇಶದ ಜಿಲ್ಲೆಗಳಾದ ಬಿದರ್, ಗುಲಬರ್ಗಾ, ರಾಯಚೂರು, ಯಾದಗಿರಿ, ಕೊಪ್ಪಳದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದೇ ಆಯಿತೇ ಹೋರತು  ಹೋರಾಟದ ರೂಪರೇಷೆ ಮಾತ್ರ ಬದಲಾಗಲೇ ಇಲ್ಲ ರಚನಾತ್ಮಕ ಹೋರಾಟ ಅಂದ್ರೆ ಬಸ್‌ಗೆ ಕಲ್ಲು ಹೊಡೆಯುವುದು ಸಾರ್ವಜನಿಕರ ಆಸ್ತಿ ಪಾಸ್ತಿ ನಾಶ ಮಾಡುವುದು ಎಂಬಂತೆ ಘೋಷ ವಾಕ್ಯ ಕೂಗಲಾಯಿತು. ಮತ್ತೆ ಅದೇ ರಾಗ ಅದೇ ಹಾಡು ಪ್ರತ್ಯೇಕ ರಾಜ್ಯವೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದ ಈ ಹೋರಾಟಗಾರರು ಪ್ರತ್ಯೇಕ ರಾಜ್ಯದ ಮಾತನಾಡುತ್ತಿದ್ದಾರೆ ಹೋರಾಟದಲ್ಲಿ ಒಮ್ಮತವಿಲ್ಲದೇ ಇರುವದೇ ಇದಕ್ಕೆ ಕಾರಣ ಎಂಬ ಮಾತು ಕೇಳಿಬರುತ್ತಿವೆ. ಕೇವಲ ಒಬ್ಬ ಹೋರಾಟಗಾಗರರಿಂದ ಏನೂ ಮಾಡಲು ಸಾಧ್ಯವಿಲ್ಲ ಎಂಬುದನ್ನು ತಿಳಿದುಕೊಂಡು ಗ್ರಾಮೀಣ ಮಟ್ಟದಿಂದ ಜನರಿಗೆ ತಿಳುವಳಿಕೆ ನೀಡಬೇಕು. ತಿಳುವಳಿಕೆ ನೀಡಿದರೆ ಸಾಲದು ಅವರನ್ನು ಹೋರಾಟದಲ್ಲಿ ಪಾಲ್ಗೊಳ್ಳುವಂತೆ   ಹುರಿದುಂಬಿಸಬೇಕಾಗಿದೆ.
ಯಾವುದೇ ಹೋರಾಟ ಯಶಸ್ವಿಯಾಗಬೇಕಾದರೆ ಅದರ ಹಿಂದೆ ಯುವ ಶಕ್ತಿ ಅಗತ್ಯ ಆದರೆ ಈ ಹೋರಾಟಕ್ಕೆ ಯುವ ಶಕ್ತಿಯ ಕೊರತೆ ಎದ್ದು ಕಾಣಿಸುತ್ತದೆ. ಇಂದು ತೆಲಂಗಾಣ ಹೋರಾಟ ಯಶಸ್ವಿಯಾಗಬೇಕಾದರೆ ಅಲ್ಲಿನ ವಿದ್ಯಾರ್ಥಿ ಸಮೂಹ ಕೈ ಜೋಡಿಸಿದ ಪರಿಣಾಮವೇ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿದೆ. ಅದರಂತೆ ಹೈಕ ಪ್ರದೇಶದಲ್ಲಿ ವಿದ್ಯಾರ್ಥಿಗಳನ್ನು ಚಳವಳಿಯಲ್ಲಿ ತೊಡಗಿಸಿಕೊಳ್ಳಬೇಕಾಗಿದೆ. ಹೋರಾಟಗಾರರು ಪ್ರಗತಿಪರ ವಿಚಾರವಾದಿಗಳು ವಾಸ್ತವ ಸ್ಥಿತಿ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಬೇಕಾಗಿದೆ ನಿನ್ನೆ ಹೈದ್ರಬಾದ್ ಕರ್ನಾಟಕ ಬಂದ್ ಸ್ವಲ್ಪ ಮಟ್ಟಗೆ ಯಶಸ್ಸು ಆಗಿದೆಯಾದರೂ ಎಲ್ಲಾ ರಾಜಕೀಯ ಪಕ್ಷಗಳು ಭಾಗವಹಿಸಿದ್ದು ಮಾತ್ರ ವಿರಳವಾಗಿ ಕಂಡು ಬಂದಿದೆ. ಎಲ್ಲ ರಾಜಕೀಯ ಪಕ್ಷಗಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಚನಾತ್ಮಕ ಹೋರಾಟದತ್ತ ಹೆಜ್ಜೆ ಇಡಬೇಕಾಗಿದೆ.ನಿಜಾಮರ ಆಳ್ವಿಕೆಯಲ್ಲಿದ್ದ ಹೈದ್ರಬಾದ್ ಕರ್ನಾಟಕವನ್ನು ೧೯೫೬ರಲ್ಲಿ ಭಾಷಾವಾರು ವಿಂಗಡಣೆಯಲ್ಲಿ ಈ ಪ್ರದೇಶವನ್ನು ಅಖಂಡ ಕರ್ನಾಟಕಕ್ಕೆ ಸೇರಿಸಲಾಯಿತು. ಸೇರಿದ್ದೇ ಕನ್ನಡಿಗರಿಗೆ ಸಂತೋಷವಾಯಿತು. ಆದರೆ ಕರ್ನಾಟಕದ ಭಾಗವಾಗಿ ಕಂಡಿಲ್ಲ ಕರೆಯುವಾಗಲೂ ಈ ಭಾಗವನ್ನು ಹೈದ್ರಬಾದ ಕರ್ನಾಟಕ ಎಂದೇ ಕರೆಯಲಾಗುತ್ತದೆ. ಕೇವಲ ಈ ಭಾಗದ ಹೋರಾಟಗಾರರಿಗೆ ಸಂಬಂಧಿಸಿದ್ದು ಎನ್ನುವಂತೆ ಹಳೆ ಮೈಸೂರು ಭಾಗದ ನಾಯಕರು ಇದರ ಬಗ್ಗೆ ಧ್ವನಿ ಎತ್ತುತ್ತಿಲ್ಲ ಈ ಧೋರಣೆ ಬಿಟ್ಟು ಅಖಂಡ ಕರ್ನಾಟಕದತ್ತ ಹೆಜ್ಜೆ ಇಡೋಣ.
ಸಾರ್ವಜನಿಕರು, ವರ್ತಕರು, ಪ್ರಗತಿಪರ ಚಿಂತಕರು ಸ್ವ ಇಚ್ಚೆಯಿಂದ ಭಾಗವಹಿಸುವಂತ ಸೂಕ್ತ ವಾತವರಣ ರೂಪಿಸಿ ಒಟ್ಟಿನಲ್ಲಿ ಜನಾಂದೋಲನವಾಗಿ ಮಾರ್ಪಾಡಿಸುವ ಹೊಸ ಹೆಜ್ಜೆ ಇಡಬೇಕಾಗಿದೆ. ಪ್ರತ್ಯೇಕ ರಾಜ್ಯಕ್ಕಾಗಿ ಏಳುತ್ತಿರುವ ಕೂಗುಗಳಿಗೆ ಸೊಪ್ಪು ಹಾಕದೆ ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ ಮಹನಿಯರನ್ನು ಸ್ಮರಿಸುತ್ತ ಅಖಂಡ ಕರ್ನಾಟಕದತ್ತ ದಿಟ್ಟ ಹೆಜ್ಜೆ ಇಡಬೇಕಾಗಿದೆ.

ಬದಲಾಗುತ್ತಿದೇಯೇ ಮಾಧ್ಯಮಗಳ ದೃಷ್ಠಿ ?

ಭಾರತದಲ್ಲಿ ಮಾಧ್ಯಮ ಸರ್ವವ್ಯಾಪಿಯಾಗಿ ಬೆಳೆದಿದೆ. ಆಧುನಿಕ ತಂತ್ರಜ್ಞಾನದ ಬದಲಾವಣೆ ಮಾಧ್ಯಮ ಬೆಳೆವಣಿಗೆಗೆ ಸಹಾಯಕವಾಗಿದೆ. ಜೊತೆಗೆ ಮಾಧ್ಯಮಗಳ ಸ್ವರೂಪ ಕಾಲಕ್ಕೆ ತಕ್ಕಂತೆ ಬದಲಾವಣಿಯಾಗುತ್ತಿದೆ. ಈ ಬೆಳವಣಿಗೆಗೆ ರಾಜಕೀಯ, ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ರಂಗಗಳಲ್ಲಿನ ಅಭಿವೃದ್ದಿ ಪ್ರಮುಖ ಕಾರಣವೆನ್ನಬಹುದು. ಸ್ವಾತಂತ್ರ್ಯ ನಂತರ ರಾಷ್ಟ್ರದ ಅಭಿವೃದ್ದಿಗಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದ ಮಾಧ್ಯಮ ನಂತರದ ದಿನಗಳಲ್ಲಿ ಉದ್ಯಮವಾಗಿ ಬೆಳೆದಿದೆ. ಈಗ ಇದು ಪ್ರಭಾವಶಾಲಿಯಾಗಿ ಬೆಳೆದಿದೆಯಲ್ಲದೆ. ಇವುಗಳ ಮೇಲೆ ಜನರ ಅವಲಂಬನೆ ಹೆಚ್ಚಿದೆ. ಇದರಿಂದಾಗಿಯೇ ಎನೂ ತೋರಿಸಿದರು ನೋಡುತ್ತಾರೆ ಎಂಬ ತಪ್ಪು ಕಲ್ಪನೆ ಇಂದು ಮಾಧ್ಯಮದಲ್ಲಿ ಇದ್ದಂತೆ ಕಂಡುಬರುತ್ತಿದೆ. ಮಾಹಿತಿ, ಮನೋರಂಜನೆ ಮತ್ತು ಶಿಕ್ಷಣ ಎಂಬ ಪಂಚ್‌ಲೈನ್ ಹಾಕಿಕೊಂಡು ಪ್ರಚಾರಕ್ಕೆ ಇಳಿದ ಮಾಧ್ಯಮಗಳು ಇಂದು ಈ ಗುರಿಗಳತ್ತ ಎಷ್ಟು ವೈಜ್ಞಾನಿಕವಾಗಿ ವೈಚಾರಿಕತೆಯ ಆಧಾರದ ಮೇಲೆ ಮತ್ತು ಪ್ರಾಮಾಣಿಕವಾಗಿ ಮಾಹಿತಿ ನೀಡುತ್ತವೆ ಎಂಬುದು ವಿಮರ್ಶಿಸಬೇಕಾಗಿದೆ.
ವಿಜ್ಞಾನದ ಕೂಸಾದ ಮಾಧ್ಯಮ ಮೂಢನಂಬಿಕೆಯ ತಾಣವಾಗುತ್ತಿದೆಯೇ? ಎಂಬ ಮೂಲ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಪ್ರಜಾಪ್ರಭುತ್ವದ ನಾಲ್ಕನೆ ಸ್ಥಂಭವಾದ ಮಾಧ್ಯಮಕ್ಕೆ ಸಾಮಾಜಿಕ ಜವಾಬ್ದಾರಿ ಇದೆಯೇ? ಇತ್ತೀಚಿನ ದಿನಗಳಲ್ಲಿ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವುದು ಅವೈಜ್ಞಾನಿಕ ಮತ್ತು ಮೂಢನಂಬಿಕೆಗಳಿಗೆ ಉತ್ತೇಜನ ನೀಡುವಂತಹ ಕಾರ್ಯಕ್ರಮಗಳನ್ನು ವೈಭವಕರಿಸಿ ಪ್ರಸಾರ ಮಾಡುತ್ತಿರುವುದೆ ಇದಕ್ಕೆ ಕಾರಣವೆನ್ನಬಹುದು. ಕಳೆದ ವರ್ಷದಲ್ಲಿ ಕರ್ನಾಟಕ ಆಂಧ್ರಪ್ರದೇಶದಲ್ಲಿ ಆದ ಪ್ರಕೃತಿ ವಿಕೋಪಗಳನ್ನು ಯಥಾವತ್ ವರದಿ ಮಾಡಿ ಕೈ ತೊಳೆದುಕೊಂಡವೇ ಹೊರತು ಯಾವ ಮಾಧ್ಯಮಗಳು ಕೂಡ ಈ ವಿಕೋಪ ಯಾಕೇ ಆಗುತ್ತಿದೆ? ಇದಕ್ಕೆ ಕಾರಣಗಳೇನು? ಇದನ್ನು ತಡೆಗಟ್ಟುವುದು ಹೇಗೆ? ಜಾಗತಿಕ ತಾಪಮಾನ ಸೃಷ್ಟಿಸುತ್ತಿರುವ ಬಹುರಾಷ್ಟ್ರಿಯ ಕಂಪನಿಗಳ ಒಡೆಯರಾದ ಬಂಡವಾಳಶಾಹಿಗಳ ಬಗ್ಗೆ ಸೊಲ್ಲೆತ್ತಲಿಲ್ಲ. ಏಕೆಂದರೆ ಇದಕ್ಕೆ ಪ್ರಮುಖ ಕಾರಣ ಮಾಧ್ಯಮಗಳು ಬಂಡವಾಳಶಾಹಿಗಳ ಕೈಗೊಂಬೆಯಾಗಿರುವುದೆ ಎಂದು ಹೇಳಲಾಗುತ್ತಿದೆ.
ಪ್ರಸಕ್ತ ವರ್ಷದ ಜನೇವರಿ ೧೫ ರಂದು ಕಂಕಣ ಗ್ರಹಣ ಸಂಭವಿಸಿದಾಗ ದೃಶ್ಯ ಮಾಧ್ಯಮಗಳು ನೇರಪ್ರಸಾರ ಮಾಡಿದವು. ಒಂದು ವಾರವಿಡಿ ಗ್ರಹಣ ಕುರಿತು ಜ್ಯೋತಿಷಿಗಳ ಜೊತೆಗೆ ಮಾತುಕತೆ ನಡೆಸಿದವು. ಒಂದು ದೂರದರ್ಶನ ವಾಹಿನಿ ಖಗೋಳ ಶಾಸ್ತ್ರಜ್ಞನೊಬ್ಬನನ್ನು ಜೊತೆಗಿಟ್ಟುಕೊಂಡಿತು. ಆದರೂ ಗ್ರಹಣದ ಸಂದರ್ಭದಲ್ಲಿ ಮಹಿಳೆಯರು ಯಾವುದೇ ಕೆಲಸ ಮಾಡಬಾರದು ಅದರಲ್ಲಿಯೂ ಗರ್ಭಿಣಿಯರಿಗಂತು ಸೂರ್ಯನ ಕಿರಣಗಳು ಸಹ ಬಿಳಬಾರದು ಎಂಬ ಮೂಢನಂಬಿಕೆಗೆ ಪ್ರತ್ಯಕ್ಷವಾಗಿ ಅಲ್ಲದೆ ಇದ್ದರು ಪರೋಕ್ಷವಾಗಿ ಜ್ಯೋತಿಷಿಗಳ ವಾದಕ್ಕೆ ಮಣೆ ಹಾಕಿತು. ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ನಡೆದ ಸೂರ್ಯಗ್ರಹಣ ಸಂದರ್ಭದಲ್ಲಿ ಗುಲಬರ್ಗ ನಗರದಲ್ಲಿ ವಿಕಲಾಂಗ ಮಕ್ಕಳನ್ನು ಮಣ್ಣಲ್ಲಿ ಹೂತಿದ್ದನ್ನು ದೃಶ್ಯ ಮಾಧ್ಯಮಗಳು ಭಯಾನಕವಾಗಿ ಬಿತ್ತರಿಸಿದವೇ ವಿನಃ ಕನಿಷ್ಠ ವೈಚಾರಿಕತೆ ಮೂಡಿಸಲಿಲ್ಲ.
ಸಾಮಾಜಿಕ ಬದಲಾವಣೆಗೆ ಉತ್ತಮ ಮಾಧ್ಯಮವಾಗಬಹುದಾಗಿದ್ದ ಸಿನಿಮಾ, ಭಾರತದಲ್ಲಿ ಒಂದು ಮನರಂಜನೆ ಮಾರ್ಗವಾಗಿಯೇ ಬೆಳೆಯುತ್ತಿದೆ. ಕೆಲವೆ ಕೆಲವು ಸಿದ್ದ ಸೂತ್ರಗಳ ಗಂಭೀರ ಚಿತ್ರಗಳು ಬಂದರು ಜನರನ್ನು ತಲುಪುವಲ್ಲಿ ಅವು ವಿಫಲವಾಗುತ್ತಿವೆ. ಇಂದಿಗೂ ಅತಿರಂಜಿತ ಎನಿಸುವ ಚಿತ್ರಗಳೇ ಜನಪ್ರಿಯವಾಗಿದ್ದು ಕಂಡುಬರುತ್ತಿವೆ. ಹಾಗಾದರೆ ಸಿನಿಮಾ ತಯಾರಿಕೆಗೆ ಸಾಮಾಜಿಕ ಹೊಣೆಗಾರಿಕೆ ಅಪ್ರಸ್ತುತವೆ? ಮಾಧ್ಯಮ ಶೋತೃಗಳಿಗೆ ಒಂದು ಕಾರ್ಯಕ್ರಮ ಹಿಡಿಸಿದೆ ಎಂದ ಕೂಡಲೆ ಅವಾಸ್ತವಿಕವಾದುದನ್ನು ವೈಭವಿಕರಿಸಿ ಆ ಕಾರ್ಯಕ್ರಮಗಳನ್ನು ವಿಕ್ಷಕರ ಮೇಲೆ ಹೇರುವದು ಸರಿಯೇ? ಇದು ದೃಶ್ಯ ಮಾಧ್ಯಮದ ಒಂದು ಭಾಗವಾದರೆ ಮುದ್ರಣ ಮಾಧ್ಯಮದ ಮುಖವಾಡವೇ ಬೇರೆ.
ಸ್ಪರ್ಧೆಯ ಬರದಲ್ಲಿ ಮುದ್ರಣ ಮಾಧ್ಯಮಗಳು ಗುಣಮಟ್ಟ ಕಳೆದುಕೊಳ್ಳುತ್ತಿವೆ. ಪತ್ರಿಕೆಯಲ್ಲಿ ಸುದ್ದಿ ಪ್ರಸಾರವಾಗಬೇಕಾದರೆ ಜಾಹಿರಾತು ರೂಪದಲ್ಲಿ ಹಣಕ್ಕಾಗಿ ಸುದ್ದಿಗಳನ್ನು ಮಾರಾಟ ಮಾಡಲಾಗುತ್ತಿದೆ. ಕಳೆದ ಚುನಾವಣೆಯಲ್ಲಿ ಇದು ಸಾಬಿತಾಗಿದೆ. ಜಾಹಿರಾತು ನೀಡುವ ನೆಪದಲ್ಲಿ ಖಾಸು ಕೊಟ್ಟ ಬಾಸ್‌ಗಳು ತಮ್ಮ ಪರ ಸುದ್ದಿ ಬರೆಸುವದು ಇತ್ತಿಚಿಗೆ ಹೆಚ್ಚಾಗುತ್ತಿದೆ. ಮಾಧ್ಯಮಗಳ ಮೇಲೆ ನಂಬಿಕೆ ಇಟ್ಟ ಸಾಮಾನ್ಯ ನಾಗರಿಕನಿಗೂ ಸಂಶಯ ಪಡುವಂತೆ ಮಾಡಿದೆ.
 ಸಮಾಜದ ವಿವಿಧ ಸ್ಥರದಲ್ಲಿ ನಡೆಯುವ ಭ್ರಷ್ಟಚಾರವನ್ನು ಬಯಲಿಗೆಳೆಯಬೇಕಾದ ಈ ಅಂಗ, ಭ್ರಷ್ಟಚಾರಕ್ಕೆ ಅಂಟಿಕೊಂಡರೆ ಬೇಲಿಯೆ ಎದ್ದು ಹೊಲ ಮೆಯ್ದಂತೆ ಆಗುವುದಿಲ್ಲವೆ? ಇಂತಹ ವಿವಾದಗಳು ನಮ್ಮ ಮಾಧಮ ಹೊಣೆಗಾರಿಕೆಯನ್ನು ಬುಡಮೇಲು ಮಾಡುತ್ತವೆ. ಪತ್ರಕರ್ತರೆ ತಮ್ಮ ವೃತ್ತಿ ಗೌರವಕ್ಕೆ ಕಳಂಕ ಕಟ್ಟಿಕೊಂಡಿರುವಾಗ ಪ್ರಜಾಪ್ರಭುತ್ವದ ಇತರ ಅಂಗಗಳ ಕೊಳಕನ್ನು ತೊಳೆಯಲು ಇವರಿಂದ ಸಾಧ್ಯವೇ ಎಂಬ ಪ್ರಶ್ನೆ ಸಾರ್ವಜನಿಕರದ್ದು. ಮಾಧ್ಯಮದವರು ಎಂದರೆ ತೋಚಿದ್ದನ್ನು ಗಿಚಿಕೊಂಡು ಹೊಗುವರು ಎಂಬ ಸತ್ಯ ಹೆಚ್ಚಾಗುತ್ತಿದೆ. ಮಾಧ್ಯಮಕ್ಕೆ ಎದುರಾಗಿರುವ ಸಾಂಸ್ಥಿಕ ಭ್ರಷ್ಟಚಾರದ ಸಮಸ್ಯೆಯನ್ನು ಹೊಗಲಾಡಿಸಬೇಕಾಗಿದೆ ಮಾತ್ರವಲ್ಲದೆ ಕಳೆದುಕೊಂಡ ನಂಬಿಕೆ ಪುನಃ ಪಡೆಯಬೇಕಾಗಿದೆ.
ಇಂದು ನಾಗರಿಕ ಸಮಾಜದಲ್ಲಿ ಮೌಲ್ಯಗಳ ಕುಸಿತ ಸಮಾಜ ಕಂಟಕವಾಗಿ ಪರಿಣಮಿಸಿವೆ. ಒಟ್ಟಾರೆ ಮಾಧ್ಯಮಗಳು ಕನಿಷ್ಠ ಮಟ್ಟದ ವೈಚಾರಿಕತೆಯನ್ನು ನಾಗರಿಕರಲ್ಲಿ ತುಂಬಲು ಪ್ರಯತ್ನಿಸುತ್ತಿಲ್ಲ. ಜನರ ದೌರ್ಬಲ್ಯವೆ ಬಂಡವಾಳ ಮಾಡಿಕೊಂಡು ಪರಸ್ಪರ ಸ್ವಾರ್ಥತೆಯಲ್ಲಿ ತೊಡಗಿವೆ. ಮೌಲ್ಯಗಳನ್ನು ಕಡೆಗಣಿಸಿ ಸಮಾಜದ ಸ್ವಾಸ್ಥವನ್ನು ಕೆಡಿಸುತ್ತಿರುವ ಇಂದಿನ ಮಾಧ್ಯಮಗಳಿಗೆ ಜನಪ್ರಿಯತೆಯ ಜೊತೆಗೆ ಹಣದ ಅಮಲೆರಿದೆಯಲ್ಲವೇ?