Saturday 18 January 2014

ಸಿಎಂಗೆ ಸಿಎಂ ಹುದ್ದೆ ಅಭದ್ರತೆ ಕಾಡುತ್ತಿದೆಯೇ?

ಕಾಂಗ್ರೆಸ್ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿ ಜನಸಂಖ್ಯೆಯಲ್ಲಿ ಪ್ರಬಲ ಸಮುದಾಯದ ಸಿದ್ದರಾಮಯ್ಯನವರನ್ನು ಮುಖ್ಯ ಮಂತ್ರಿಯನ್ನಾಗಿ ಕಾಂಗ್ರೆಸ್ ಹೈಕಮಾಂಡ್ ನೇಮಿಸಿತು. ಆದರೆ ಸಿದ್ದರಾಮಯ್ಯನವರಿಗೆ ಹೈಕಮಾಂಡ್ ಮೇಲೆ ಯಾಕೋ   ನಂಬಿಕೆ ಕಳೆದುಕೊಂಡಂತೆ ಭಾಸವಾಗುತ್ತಿದೆ. ಮುಖ್ಯಮಂತ್ರಿಗಳಿಗೆ ಹುದ್ದೆಯ ಭದ್ರತೆ ಕಾಡುತ್ತಿದೆ ಎನ್ನುವುದಕ್ಕೆ ಪರೋಕ್ಷ ಸಾಕ್ಷಿ ಇತ್ತೀಚೆಗೆ ನಡೆದ ಅಹಿಂದ ಸಮಾವೇಶ.
ಇದು ಹಿಂದುಳಿದ ವರ್ಗಗಳ ಸಮಾವೇಶ ಎನ್ನುವದಕ್ಕಿಂತ ತನ್ನ ಮುಖ್ಯಮಂತ್ರಿಗಳ ಕುರ್ಚಿ ಭದ್ರಪಡಿಸಿಕೊಳ್ಳಲು ನಡೆಸಿದ ಶಕ್ತಿ ಪ್ರದರ್ಶನ ಎಂದೇ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಈಗಾಗಲೇ ಕಾಂಗ್ರೆಸ್ ಸರ್ಕಾರದಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿದ ಅದೆಷ್ಟೋ ಹಿರಿಯ ಮುಖಂಡರನ್ನು ಕಡೆಗಣಿಸಿ ಸಿದ್ದರಾಮಯ್ಯನವರಿಗೆ ಮಣೆ ಹಾಕಲಾಗಿತ್ತು. ಆದರೆ ಸಿದ್ದರಾಮಯ್ಯನವರು ಪಕ್ಷದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡ ಉದಾಹರಣೆಗಳು ಸಾಕಷ್ಟಿವೆ. ಇದರಿಂದ ಬೇಸತ್ತ ಹಿರಿಯ ನಾಯಕರು ಹೈಕಮಾಂಡ್‌ಗೆ ಕಿವಿ ಊದಿದ್ದಾರೆ. ಅದು ಒಂದು ರೀತಿಯಲ್ಲಿ ವಾಸ್ತವವೂ ಕೂಡ. 
ಅದು ಹೋಗಲಿ ಈ ಸಮಾವೇಶ ಹಿಂದುಳಿದವರ ಸಮಾವೇಶವೇ ಹಾಗಿದ್ದರೆ ಕಾಂಗ್ರೆಸ್ ಪಕ್ಷದಲ್ಲಿ ಹಿಂದುಳಿದ ಘಟಕದ ಅಧ್ಯಕ್ಷರಿಗಾದರೂ ಆಹ್ವಾನ ಕೊಡಬಹುದಿತ್ತಲವೇ? ಖಾಸಗಿ ಸಮಾವೇಶವಾದರೂ ಸಿದ್ದರಾಮಯ್ಯನವರು ಸರ್ಕಾರದಿಂದ ೨೦ ಕೋಟಿ ರೂ. ಕೊಟ್ಟಿದ್ದಾರೆ ಏಕೆ ಎಂದು ಸ್ವಪಕ್ಷದವರೇ ಅಪಸ್ವರ ಎತ್ತಿದ್ದಾರೆ. ಆದರೆ ಇದನ್ನು ಬಹಿರಂಗವಾಗಿ ಮುಖ್ಯಮಂತ್ರಿಗಳಿಗೆ ಪ್ರಶ್ನಿಸುವ ನಾಯಕರು ಇಲ್ಲ ಎಂದೇ ಹೇಳಬೇಕಾದೀತು. ಮುಖ್ಯಮಂತ್ರಿಗಳು ಹಿಂದುಳಿದ ವರ್ಗದ ಸಮಾವೇಶ ಎಂದು ಹೇಳಿಕೊಳ್ಳುತ್ತಲೇ ಪಕ್ಷದ ಹಿಂದುಳಿದ ವರ್ಗದ ನಾಯಕರನ್ನು ಕಡೆಗಣಿಸುತ್ತಿರುವುದು ಏಕೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ.