Saturday 18 January 2014

ಸಿಎಂಗೆ ಸಿಎಂ ಹುದ್ದೆ ಅಭದ್ರತೆ ಕಾಡುತ್ತಿದೆಯೇ?

ಕಾಂಗ್ರೆಸ್ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿ ಜನಸಂಖ್ಯೆಯಲ್ಲಿ ಪ್ರಬಲ ಸಮುದಾಯದ ಸಿದ್ದರಾಮಯ್ಯನವರನ್ನು ಮುಖ್ಯ ಮಂತ್ರಿಯನ್ನಾಗಿ ಕಾಂಗ್ರೆಸ್ ಹೈಕಮಾಂಡ್ ನೇಮಿಸಿತು. ಆದರೆ ಸಿದ್ದರಾಮಯ್ಯನವರಿಗೆ ಹೈಕಮಾಂಡ್ ಮೇಲೆ ಯಾಕೋ   ನಂಬಿಕೆ ಕಳೆದುಕೊಂಡಂತೆ ಭಾಸವಾಗುತ್ತಿದೆ. ಮುಖ್ಯಮಂತ್ರಿಗಳಿಗೆ ಹುದ್ದೆಯ ಭದ್ರತೆ ಕಾಡುತ್ತಿದೆ ಎನ್ನುವುದಕ್ಕೆ ಪರೋಕ್ಷ ಸಾಕ್ಷಿ ಇತ್ತೀಚೆಗೆ ನಡೆದ ಅಹಿಂದ ಸಮಾವೇಶ.
ಇದು ಹಿಂದುಳಿದ ವರ್ಗಗಳ ಸಮಾವೇಶ ಎನ್ನುವದಕ್ಕಿಂತ ತನ್ನ ಮುಖ್ಯಮಂತ್ರಿಗಳ ಕುರ್ಚಿ ಭದ್ರಪಡಿಸಿಕೊಳ್ಳಲು ನಡೆಸಿದ ಶಕ್ತಿ ಪ್ರದರ್ಶನ ಎಂದೇ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಈಗಾಗಲೇ ಕಾಂಗ್ರೆಸ್ ಸರ್ಕಾರದಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿದ ಅದೆಷ್ಟೋ ಹಿರಿಯ ಮುಖಂಡರನ್ನು ಕಡೆಗಣಿಸಿ ಸಿದ್ದರಾಮಯ್ಯನವರಿಗೆ ಮಣೆ ಹಾಕಲಾಗಿತ್ತು. ಆದರೆ ಸಿದ್ದರಾಮಯ್ಯನವರು ಪಕ್ಷದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡ ಉದಾಹರಣೆಗಳು ಸಾಕಷ್ಟಿವೆ. ಇದರಿಂದ ಬೇಸತ್ತ ಹಿರಿಯ ನಾಯಕರು ಹೈಕಮಾಂಡ್‌ಗೆ ಕಿವಿ ಊದಿದ್ದಾರೆ. ಅದು ಒಂದು ರೀತಿಯಲ್ಲಿ ವಾಸ್ತವವೂ ಕೂಡ. 
ಅದು ಹೋಗಲಿ ಈ ಸಮಾವೇಶ ಹಿಂದುಳಿದವರ ಸಮಾವೇಶವೇ ಹಾಗಿದ್ದರೆ ಕಾಂಗ್ರೆಸ್ ಪಕ್ಷದಲ್ಲಿ ಹಿಂದುಳಿದ ಘಟಕದ ಅಧ್ಯಕ್ಷರಿಗಾದರೂ ಆಹ್ವಾನ ಕೊಡಬಹುದಿತ್ತಲವೇ? ಖಾಸಗಿ ಸಮಾವೇಶವಾದರೂ ಸಿದ್ದರಾಮಯ್ಯನವರು ಸರ್ಕಾರದಿಂದ ೨೦ ಕೋಟಿ ರೂ. ಕೊಟ್ಟಿದ್ದಾರೆ ಏಕೆ ಎಂದು ಸ್ವಪಕ್ಷದವರೇ ಅಪಸ್ವರ ಎತ್ತಿದ್ದಾರೆ. ಆದರೆ ಇದನ್ನು ಬಹಿರಂಗವಾಗಿ ಮುಖ್ಯಮಂತ್ರಿಗಳಿಗೆ ಪ್ರಶ್ನಿಸುವ ನಾಯಕರು ಇಲ್ಲ ಎಂದೇ ಹೇಳಬೇಕಾದೀತು. ಮುಖ್ಯಮಂತ್ರಿಗಳು ಹಿಂದುಳಿದ ವರ್ಗದ ಸಮಾವೇಶ ಎಂದು ಹೇಳಿಕೊಳ್ಳುತ್ತಲೇ ಪಕ್ಷದ ಹಿಂದುಳಿದ ವರ್ಗದ ನಾಯಕರನ್ನು ಕಡೆಗಣಿಸುತ್ತಿರುವುದು ಏಕೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ.
ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯವರ ನಡೆ ಸೂಕ್ಷ್ಮವಾಗಿ ಗಮನಿಸುತ್ತಿದೆ. ಹಿರಿಯ ನಾಯಕರು ಕೂಡ ಸಿಎಂ ವಿರುದ್ಧ ಒಳಗೊಳಗೆ ಅಸಮಾಧಾನಗೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರನ್ನೇ ಗಣನೆಗೆ ತೆಗೆದುಕೊಳ್ಳದ ಸಿದ್ದರಾಮಯ್ಯ ಇನ್ನೂ ಶಾಸಕ, ಮುಖಂಡರನ್ನು ಗಮನಿಸುತ್ತಾರಾ ?
ಒಂದಂತು ಸತ್ಯ ಕಾಂಗ್ರೆಸ್ ಸಿದ್ದರಾಮಯ್ಯನವರಂತ ನಾಯಕರನ್ನು ಎಷ್ಟು ಬೇಕು ಅಷ್ಟನ್ನು ಮಾತ್ರ ಬಳಸಿಕೊಳ್ಳುತ್ತದೆ. ಇದಕ್ಕೆ ತಾಜಾ ಉದಾಹರಣೆ  ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ್ ಅರಸ್, ಹಾಗೂ ಎಸ್. ಬಂಗಾರಪ್ಪ.
ಲೋಕಸಭಾ ಚುನಾವಣೆ ನಂತರ ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಸಿ ಮೂಲೆಗುಂಪು ಮಾಡುತ್ತಾರೆ ಎಂಬ ಮಾತುಗಳು ಕೂಡ ಸಿಎಂ ಸಮುದಾಯದಿಂದಲೇ ಬರುತ್ತಿರುವುದರಿಂದ ಎಚ್ಚೆತ್ತ ಸಮುದಾಯದ ಹಿರಿಯ ಮುಖಂಡ ಎಚ್.ಎಂ ರೇವಣ್ಣ ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶ ಮಾಡುವುದರ ಮೂಲಕ ಹೈಕಮಾಂಡ್ ಮತ್ತು ಸಿದ್ದು ವಿರೋಧಿಗಳಿಗೆ ಎಚ್ಚರಿಕೆಯ ಘಂಟೆ ಭಾರಿಸಿದ್ದಾರೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಇರುವಾಗ ಸಿದ್ದರಾಮಯ್ಯನವರ ನಡೆ ಸಂಶಯಕ್ಕೆ ಎಡೆ ಮಾಡಿಕೊಡುತ್ತಿದೆ. ಜಾತಿ ಸಮಾವೇಶಗಳು ನಡೆಯಬೇಕು ಎಂದು ಪ್ರತಿಪಾದಿಸುತ್ತಿರುವ ಮುಖ್ಯಮಂತ್ರಿಗಳು ಇನ್ನೊಂದು ಕಡೆ ಜಾತಿ ತೊಲಗಬೇಕು. ಜಾತಿ ವ್ಯವಸ್ಥೆ ದೇಶದ ಅಭಿವೃದ್ಧಿಗೆ ಮಾರಕವಾಗಿದೆ ಎಂದು ವಿಶ್ಲೇಷಿಸುತ್ತಾರೆ. 
ಸಣ್ಣ ಸಮುದಾಯಗಳು ಸಂಘಟಿತರಾಗುವುದು ತಪ್ಪಲ್ಲ. ಆದರೆ ಜಾತಿ ಹೆಸರಿನಲ್ಲಿ ಸಂಘಟನೆ ಮಾಡುತ್ತಿರುವುದರಿಂದ ಸಮಾಜದಲ್ಲಿ ಜಿಡುಗಟ್ಟಿದ ಜಾತಿ ವ್ಯವಸ್ಥೆ ಅಳಿಯಲು ಸಾಧ್ಯವೇ ಎಂಬ ಪ್ರಶ್ನೆ ಕೂಡ ಧೂತ್ತನೆ ಬಂದೆರಗುತ್ತದೆ.
ಎಲ್ಲಾ ರಾಜಕೀಯ ಪಕ್ಷಗಳು ಮಾಡುತ್ತಿರುವ ತಂತ್ರಗಾರಿಕೆಯನ್ನೇ ಸಿಎಂ ಸಿದ್ದರಾಮಯ್ಯ ಅನುಸರಿಸುತ್ತಿದ್ದಾರೆ. ಅದರಲ್ಲಿ ವಿಶೇಷತೆ ಏನಿದೆ ಎಂದು ಪ್ರಶ್ನಿಸುವುದು ಸಹಜ. ಆದರೆ ಸಮಾವೇಶದ ಮೂಲಕ ಯುಪಿಎ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ಅಹಿಂದ ವರ್ಗಗಳಿಗೆ ನೀಡಿರುವ ಯೋಜನೆಗಳ ಬಗ್ಗೆ ಮತ್ತು ತಾವು ಮುಖ್ಯಮಂತ್ರಿಗಳಾದ ಮೇಲೆ ಹಿಂದುಳಿದ ಜಾತಿಗಳ ಅಭಿವೃದ್ಧಿಗಾಗಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಬಹುದಿತ್ತು. ಇಲ್ಲಿ ಅದನ್ನು ಮಾಡದೆ ಕೇವಲ ಜೆಡಿಎಸ್ ಪಕ್ಷ ಮತ್ತು ಮಾಜಿ ಪ್ರಧಾನಮಂತ್ರಿ ಎಚ್.ಡಿ ದೇವೇಗೌಡ ಅವರನ್ನು ಮಾತ್ರ ಟಾರ್ಗೆಟ್ ಮಾಡಿಕೊಂಡಿದ್ದಾರೆ. ಕೇವಲ ವಿಪಕ್ಷಗಳನ್ನು ಟೀಕಿಸುವಲ್ಲಿಯೇ ಸಾರ್ಥಕತೆ ಕಂಡುಕೊಂಡಂತಿದೆ.
ಬದಲಾಗಿ ವಿಪಕ್ಷಗಳನ್ನು ನಾಯಕರನ್ನು ಟೀಕಿಸಿ ತಮ್ಮನ್ನು ತಾವು ವೈಭವೀಕರಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದ ರಾಮಯ್ಯನವರ ಈ ನಡವಳಿಕೆ ಕಾಂಗ್ರೆಸ್ ಕಾರ್ಯಕರ್ತರಿಗೆ ರಾಜ್ಯದ ಜನತೆಗೆ ಪ್ರತಿಪಕ್ಷಗಳಿಗೆ ಮತ್ತು ಮಾಧಮಗಳಿಗೆ ಬೇರೆಯದೇ ಸಂದೇಶ ರವಾನಿಸಿದಂತಾಗುತ್ತದೆ ಎಂಬ ಚರ್ಚೆ ನಡೆಯುತ್ತಿದೆ. 
ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಇರುವಾಗ ಸಿದ್ದರಾಮಯ್ಯನವರು ಪಕ್ಷದ ಅಧ್ಯಕ್ಷರು ಮತ್ತು ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷರು ಸೇರಿದಂತೆ ಕಾಂಗ್ರೆಸ್‌ನ ಹಿರಿಯ ಮುಖಂಡರು ಮತ್ತು ಕೇಂದ್ರ ಪ್ರತಿನಿಧಿಸುವ ರಾಜ್ಯದ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಾವೇಶ ಮಾಡಿದ್ದರೆ ಪಕ್ಷಕ್ಕೆ ಹೆಚ್ಚಿನ ಲಾಭವಾವಾದರೂ ಆಗುತ್ತಿತ್ತು. ಆದರೆ ಇಲ್ಲಿ ಮುಖ್ಯಮಂತ್ರಿಗಳ ಜಾಣ ನಡೆ ಇರಬಹುದೇನೋ ಮುಂಬರುವ ಲೋಕಸಭಾ ಚುನಾವಣೆಯ ಟಿಕೆಟ್ ಹಂಚಿಕೆಯಲ್ಲಿ ಹೈಕಮಾಂಡ್ ಸಂಪೂರ್ಣವಾಗಿ ನನಗೆ ಮಣೆ ಹಾಕುವಂತಾಗಲಿ ಎಂಬ ಉದ್ದೇಶವೂ ಸಿದ್ದರಾಮಯ್ಯನವರಿಗಿದ್ದಂತಿದೆ. 
ಒಂದು ಕಡೆ ಹಿಂದುಳಿದವರ ಸಮಾವೇಶ ಇನ್ನೊಂದು ಕಡೆ ಕೆಪಿಸಿಸಿ ಅಧ್ಯಕ್ಷರೊಂದಿಗೆ ವೈಮನಸ್ಸನ್ನು ಬದಿಗೊತ್ತಿ ಅವರೊಂದಿಗೆ ತಮ್ಮ ಸಂಬಂಧ ವೃದ್ಧಿಸಿಕೊಳ್ಳುವುದರ ಮೂಲಕ ಸಚಿವ ಸಂಪುಟಕ್ಕೆ ಡಾ. ಈ ಪರಮೇಶ್ವರವರನ್ನು ಸೇರ್ಪಡೆ ಮಾಡಿಕೊಂಡರೆ ವಿರೋಧಿಗಳು ಯಾರು ಇಲ್ಲದಂತಾಗುತ್ತದೆ ಎಂಬ ದೂರದ ಆಲೋಚನೆಯಿಂದ ಸಿದ್ದರಾಮಯ್ಯನವರು ಹಿಂದುಳಿದ ವರ್ಗದ ಹಿರಿಯ ನಾಯಕರು ಹೈಕಮಾಂಡ್ ಮಟ್ಟದಲ್ಲಿ ಪ್ರಭಾವಿ ನಾಯಕರೂ ಆದ ರಾಜ್ಯಸಭಾ ಸದಸ್ಯ ಬಿ.ಕೆ ಹರಿಪ್ರಸಾದ್ ಅವರ ಜೊತೆಗೆ ಉತ್ತಮ ಬಾಂಧವ್ಯ ಬೆಸೆದುಕೊಳ್ಳುವತ್ತ ಪ್ರಯತ್ನಿಸುತ್ತಿದ್ದಾರೆ.
ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಸಚಿವ ಸ್ಥಾನದಿಂದ ನಿರ್ಗಮಿಸಿದ ನಂತರ ಸಹಜವಾಗಿ ರಾಜ್ಯ ರಾಜಕಾರಣದತ್ತ ವಾಲುವ ಎಲ್ಲಾ ಸಂಭವವಿದೆ. ಇದನ್ನೂ ಮನಗಂಡಿರುವ ಸಿಎಂ ಈಗಿನಿಂದಲೇ ಸ್ಥಾನ ಭದ್ರಪಡಿಸಿಕೊಳ್ಳಬೇಕಾದರೆ ದಲಿತ ಸಮುದಾಯದ ಡಾ. ಪರಮೇಶ್ವರ್ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡರೆ ಆ ಸಮುದಾಯದ ಕೂಗು ಕ್ಷೀಣಿಸಬಹುದು ನನ್ನ ಐದು ವರ್ಷದ ಆಡಳಿತಕ್ಕೆ ಯಾವುದೇ ಕುತ್ತು ಬಾರದಿರಲಿ ಎಂಬ ದೂರದ ಆಲೋಚನೆ ಸಿಎಂಗಿದೆ. ಆದರೆ ಲೋಕಸಭಾ ಚುನಾವಣೆ ನಂತರ ರಾಜ್ಯ ರಾಜಕಾಣದಲ್ಲಿ ಏನೆಲ್ಲಾ ಬದಲಾವಣೆಯಾಗುತ್ತವೆ ಎಂಬುದು ಕಾದು ನೋಡ ಬೇಕಾಗಿದೆ.



No comments:

Post a Comment