Saturday 7 April 2012

ವಿವಾದದ ಸುಳಿಯಲ್ಲಿ ಭೀಮಾ ತೀರದ ಚಿತ್ರ

ಇಂತಹದ್ದೊಂದು ವಿವಾದ ಅನಗತ್ಯವಾಗಿತ್ತು. ಆದರೆ ಮನುಷ್ಯ ಎಂಬ ಜೀವಿಯ ತಹತಹಿಕೆಯೇ ಅಂತಹುದು. ಒಬ್ಬರು ಬೆಳೆಯುತ್ತಿರುವುದನ್ನು ಕಂಡರೆ ಕಣ್ಣು ಸೇರಿದಂತೆ ಎಲ್ಲೆಲ್ಲೋ ಉರಿ ಹತ್ತಿಕೊಳ್ಳುತ್ತೆ. ‘ಭೀಮಾ ತೀರದಲ್ಲಿ.. ಚಿತ್ರದ ಕುರಿತಾದ ವಿವಾದಕ್ಕೂ ಇಂತಹದ್ದೇ ಉರಿ ಕಾರಣ.
ಉತ್ತರ ಕರ್ನಾಟಕದ ಭಾಗದಲ್ಲಿ ಚಂದಪ್ಪ ಹರಿಜನ ಪ್ರಖ್ಯಾತಿ ಹಾಗೂ ಕುಖ್ಯಾತಿ ಎರಡನ್ನು ಹೊಂದಿರುವಾತ. ಆತನ ಜೀವನ ಗಾಥೆಯನ್ನೇ ಆಧರಿಸಿ ಓಂ ಪ್ರಕಾಶ್ ರಾವ್ ನಿರ್ದೇಶನದ ‘ಭೀಮಾ ತೀರದಲ್ಲಿ... ಚಿತ್ರ ಭರ್ಜರಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಆದರೆ ಇದನ್ನು ಸಹಿಸದ ಕೆಲವು ಕುತ್ಸಿತ ಕ್ರಿಮಿಗಳು ಈ ಚಿತ್ರವನ್ನು ವಿವಾದಕ್ಕೆ ಎಡೆಮಾಡಿದ್ದಾರೆ.
ಜಾತಿ ಹಾಗೂ ವರ್ಗ ಸಂಘರ್ಷಗಳ ಕಾರಣದಿಂದಾಗಿ ಭೀಮಾ ತೀರದಲ್ಲಿ ನೂರಾರು ಹೆಣಗಳೇ ಉರುಳಿ ಹೋದವು ಅವುಗಳಲ್ಲಿ ಚಂದಪ್ಪ ಹರಿಜನ ಕೂಡಾ ಒಬ್ಬ. ಇವತ್ತಿಗೂ ಅಲ್ಲಿನ ಬಹುತೇಕರು ಚಂದಪ್ಪನನ್ನು ಹಂತಕ, ಸಮಾಜದ್ರೋಹಿ ಎಂದರೆ ಸಿಟ್ಟಿಗೆಳುತ್ತಾರೆ.

ಚಂದಪ್ಪ ಶ್ರೀಮಂತರನ್ನು ಕೊಂದಿರಬಹುದು, ಅವರನ್ನು ದೋಚಿರಬಹುದು ಆದರೆ ಅದೆಲ್ಲವನ್ನು ಆತ ಬಡವರ ಏಳ್ಗೆಗಾಗಿ ಮಾಡಿದ್ದು ಎಂಬ ಸಮರ್ಥನೆಗಳು ಆ ಭಾಗದಲ್ಲಿ ಕೇಳಿಬರುತ್ತಿವೆ. ಒಳ್ಳೆಯವನಾಗಿದ್ದರೆ ಸಮಾಜದಲ್ಲಿ ಇದ್ದುಕೊಂಡು ತನ್ನ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದಿತ್ತಲ್ಲ? ಯಾಕೆ ಅಡ್ಡ ದಾರಿ ಹಿಡಿದ ಎಂಬ ವಾದವೂ ಒಪ್ಪುವಂತಹದ್ದೆ. ಆದರೆ ... ನ್ಯಾಯಯುತ ಬೇಡಿಕೆ ಒಪ್ಪುವವರೇ ಇಲ್ಲವಾದಾಗ ದಬ್ಬಾಳಿಕೆ ದೌರ್ಜನ್ಯ ಮೇರೆ ಮೀರಿದಾಗ ಅಟ್ಟಹಾಸ ಮೆಟ್ಟಿನಿಲ್ಲಬೇಕಾದ ಸಂದರ್ಭದಲ್ಲಿ ಸಹಜವಾಗಿಯೇ ಮನಷ್ಯನಲ್ಲಿನ ಮೃಗೀಯ ವ್ಯಕ್ತಿತ್ವ ಜಾಗೃತಗೊಳ್ಳುತ್ತೆ.  ಇಂತಹದ್ದೇ ಸನ್ನಿವೇಶ ಚಂದಪ್ಪ ಅವರಿಗೆ ಡಕಾಯಿತ, ಹಂತಕ ಎಂಬ ಪಟ್ಟ ಕಟ್ಟಿದ್ದು ಇತಿಹಾಸ. ನಿಜವಾಗಲೂ ಅವರು ಡಕಾಯಿತರೆ ಎಂದು ಅಲ್ಲಿನ ಜನರನ್ನು ಕೇಳಿದರೆ ಚಂದಪ್ಪ ಬಡವರ ಮೇಲಿನ ಕಾಳಜಿಯೇ ಅವರನ್ನು ಡಕಾಯಿತ ಎಂಬ ಪಟ್ಟ ಕಾರಣವಾಯಿತೇನೋ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಅಂದರೆ ಅವನನ್ನು ಕೆಟ್ಟವ ಎಂದು ಹೇಳಲು ಹೇಗೆ ಸಾಧ್ಯ. ಪತ್ರಿಕಾ ಮಾಧ್ಯಮಗಳ ವೈಭವಿಕರಣಕ್ಕೆ ಸಿಕ್ಕು ಸಮಾಜಘಾತುಕ ಎಂಬಂತೆ ಬಿಂಬಿಸಲಾಯಿತು ಅನ್ನೊದು ಚಂದಪ್ಪನ ಬೆಂಬಲಿಗರ ಆಕ್ರೋಶ. ಹಾಗಾದರೆ ಓಂ ಪ್ರಕಾಶ್‌ರಾವ್ ನಿರ್ದೇಶನದ ಭೀಮಾತೀರದ ಚಿತ್ರ ಏಕೆ ವಿವಾದಕ್ಕೆ ಎಡೆಯಾಗಿದೆ. ವಿವಾದಕ್ಕೆ ಆಸ್ಪದವಿದ್ದ ವಸ್ತು ಚರ್ಚೆಗೆ ಬಾರದೆ ಅನಾವಶ್ಯಕ ವ್ಯಕ್ತಿಯ (ರವಿಬೆಳಗೆರೆ) ಬಗ್ಗೆ ಚರ್ಚೆಯಾಗುತ್ತಿರುವುದು ದುರಂತದ ವಿಷಯವಾಗಿದೆ.
ಸಿನಿಮಾದ ವಸ್ತು ವಿಷಯದ ಬಗ್ಗೆ ವಿರೋಧ ಕೇಳಿಬಾರದೆ ಇದ್ದರೂ ಚಂದಪ್ಪ ಮತ್ತು ಕೇಶಪ್ಪ ಅವರ ಕುಟುಂಬದವರನ್ನು  ಎತ್ತಿಕಟ್ಟುವ ಮೂಲಕ  ಟಾಂಗ್ ಕೊಡಲು ಹೋಗಿ ತಾವೇ ಮುಖಭಂಗಕ್ಕೆ ಒಳಗಾದದ್ದು ನಾವೆಲ್ಲ ದೃಶ್ಯಮಾಧ್ಯಮಗಳಲ್ಲಿ ನೋಡಿದ್ದೇವೆ. ಇದಕ್ಕೆ ಮುಖ್ಯ ಕಾರಣ ತಾವು ಬರೆದ ಭೀಮಾ ತೀರದ ಹಂತಕರು ಪುಸ್ತಕದಿಂದ ವಿಷಯ ಕದ್ದಿದ್ದಾರೆ ಎಂಬುದು. ಹಾಗಾದರೆ ತಾವು ಮಾಡಿರುವುದೇನು? ಬೆಳಗೆರೆ ಪುಸ್ತಕ ಬರೆಯುವ ಮುಂಚೆ ಹಲವು ಟ್ಯಾಬ್ಲಾಯ್ಡ್ ಪತ್ರಿಕೆಗಳಲ್ಲಿ ಈ ಪುಸ್ತಕದ ಅಂಶಗಳು ಪ್ರಕಟವಾಗಿದ್ದವು. ಅವೆಲ್ಲವನ್ನು ಗಣನೆಗೆ ತೆಗೆದುಕೊಂಡು ಹೆಚ್ಚಿನ ಮಾಹಿತಿಗಾಗಿ ಚಂದಪ್ಪ ಅವರನ್ನು ಭೇಟಿ ಮಾಡಿರಬಹುದು. ಅಲ್ಲಿ ಸಿಕ್ಕ ಮಾಹಿತಿ ಮೊದಲು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾದದ್ದೆ. ಚಂದಪ್ಪನ ಛಾಯಾಚಿತ್ರ ಸಿಕ್ಕದ್ದು ಬಿಟ್ಟರೆ ಅಂತಹ ಮಾಹಿತಿ ಏನಿಲ್ಲ. ಇದಕ್ಕಾಗಿ ಬೀದಿಗೆ ಬರಬೇಕಾಗಿತ್ತೇ? ಆ ಕುಟಂಬವನ್ನು ಚಿತ್ರತಂಡದ ವಿರುದ್ಧ ಎತ್ತಿಕಟ್ಟುವ ಅವಶ್ಯಕತೆ ಇತ್ತೇ?
ಇಲ್ಲಿ ಚರ್ಚೆಯಾಗಬೇಕಾದ ವಿಷಯದ ಬಗ್ಗೆ ಮಾತನಾಡದೆ ಅನಾವಶ್ಯಕ ವ್ಯಕ್ತಿಯ ಬಗ್ಗೆ ಚರ್ಚೆ ಅವಶ್ಯವಿತ್ತೇ?    ವಿಷಯವನ್ನು ಕುರಿತು ಗಹನವಾಗಿ ಸಂಶೋಧನೆ ಮಾಡಿದ್ದೇನೆ ಆ ಕಾರಣಕ್ಕಾಗಿ ಸೌಜನ್ಯಕ್ಕಾದರೂ ಒಂದು ಮಾತು ಕೇಳಬಹುದಿತ್ತಲ್ಲ ಎಂಬುದು ಬೆಳೆಗೆರೆಯವರ ಬಡಬಡಿಕೆ.  ಸಂಶೋಧನೆ ಮಾಡಿದ ವಿಷಯ ಆಯ್ಕೆ  ಮಾಡಿಕೊಂಡರೆ ತಮ್ಮನ್ನು ಏಕೆ ಕೇಳಬೇಕು. ಒಂದೇ ವಿಷಯದ ಮೇಲೆ ಇನ್ನೂ ಆಳವಾದ ಸಂಶೋಧನೆ ಆಗಬಾರದು ಎಂದೇನೂ ಇಲ್ವಲ್ಲ. ಚಿತ್ರ ಮಾಡಬೇಕಾದರೆ ತಮ್ಮನ್ನು ಕೇಳಬೇಕು ಎಂದು ನಿರೀಕ್ಷೆ ಮಾಡುವುದು ಏಕೆ? ತಮ್ಮ ಪುಸ್ತಕ ಓದದೆ ಈ ಸಿನಿಮಾ ಮಾಡಲು ಹೇಗೆ ಸಾಧ್ಯ. ಓಂ ಪ್ರಕಾಶರಾವ್ ಅವರಿಗೆ  ಕನಸು ಬಿದ್ದಿತೆ ಎಂಬ ಬಾಲಿಶ ಹೇಳಿಕೆ ನೀಡುತ್ತಾರೆ. ಹಾಗಾದರೆ ಬೆಳೆಗೆರೆಗೆ ಚಂದಪ್ಪ ಡಕಾಯಿತ ಎಂದು ಕನಸು ಬಿದ್ದಿತ್ತೆ ? ಕಳೆದ ಒಂದು ವರ್ಷದಿಂದ ಸಿನಿಮಾದ ಬಗ್ಗೆ ವರದಿಗಳು, ಲೇಖನಗಳು ಬಂದಿವೆ. ಆ ಸಂದರ್ಭದಲ್ಲಿ ಚಕಾರ ಎತ್ತದ ಬೆಳಗೆರೆಯವರು ಏಕಾಏಕಿ ವಿವಾದ ಹುಟ್ಟುಹಾಕುವುದರ ಹಿಂದಿನ ಮರ್ಮವೇನು? 
ಚಂದಪ್ಪನನ್ನು ಆ ಭಾಗದ ಜಾನಪದ ಭಾಷೆಯಲ್ಲಿ ಚಂದ್ಯಾ ಮತ್ತು ಕೇಶಪ್ಪ ಅವರನ್ನು ಕೇಶ ಎಂದು ಕಮರ್ಷಿಯಲ್ ಆಗಿ ಬಳಸಿಕೊಂಡಿದ್ದಾರೆಯೇ ವಿನಹ ಅವರನ್ನು ಡಕಾಯಿತರು ಎಂದು ಎಲ್ಲಿಯೂ ಬಿಂಬಿಸಿಲ್ಲ. ಡಕಾಯಿತರಲ್ಲಿಯೂ ಮಾನವೀಯತೆ ಇರುತ್ತದೆ ಎಂಬುದನ್ನು ಚಿತ್ರ ಸಾರಿ ಸಾರಿ ಹೇಳುತ್ತದೆ. ಆದರೂ ಏಕೆ ಈ ಬೆಳಗೆರೆಯ ಗಂಟಲು ಹರಕೊಂಡು ಏದುಸಿರು ಬಿಡುತ್ತಿದ್ದಾರೋ ಗೊತ್ತಿಲ್ಲ. ಬಹುಶಃ ತಮ್ಮ ಮಾಮೂಲಿ ದಕ್ಕಲಿಲ್ಲ ಎಂಬ ಕೊರಗಿರಬಹುದೇನೋ? ಈ ಚಿತ್ರದಲ್ಲಿ ೩೦%ರಷ್ಟು ನೈಜತೆ, ೭೦ರಷ್ಟು ಕಾಲ್ಪನಿಕವಾಗಿ ಬಳಸಿಕೊಳ್ಳಲಾಗಿದೆ ಎಂದು ಚಿತ್ರದ ಪೀಠಿಕೆಯಲ್ಲಿ ಹೇಳಲಾಗಿದೆ. ಆದರೂ ವಿಷಯವನ್ನು ಬೀದಿಗೆ ತರಲು ಕಾರಣವೇನು?
ಚಿತ್ರ ಮಾಡಬೇಕಾದರೆ ಆ ವ್ಯಕ್ತಿಯ ಕುಟುಂಬದ ಮತ್ತು ಭೀಮಾ ತೀರದ ಜನರನ್ನು ಸಂಪರ್ಕಿಸಿ, ಮಾಹಿತಿ ಕಲೆ ಹಾಕಿದ್ದಲ್ಲದೆ ಅಲ್ಲಿನ ಪೊಲೀಸ್ ದಾಖಲೆಗಳು, ಸಾರ್ವಜನಿಕರು, ಪತ್ರಕರ್ತರನ್ನು ಅಲ್ಲದೆ ಕಥೆಗೆ ಸಂಬಂಧಪಟ್ಟ ಕೆಲ ಪ್ರತ್ಯಕ್ಷದರ್ಶಿಗಳನ್ನು  ಸಂಪರ್ಕಿಸಿ, ಅವರಿಂದ ಚಂದಪ್ಪನ ಬಗ್ಗೆ ತಿಳಿದುಕೊಂಡು ಸ್ಕ್ರಿಪ್ಟ್ ಸಿದ್ದಪಡಿಸಿದ್ದಾರೆ. ಇದರಲ್ಲಿ ೩೦ರಿಂದ ೪೦ ರಷ್ಟು ನೈಜ ಕಥೆ, ಉಳಿದದ್ದು ಕಾಲ್ಪನಿಕವೆ. ಅದೇ ಕಥೆಯನ್ನು ತೋರಿಸಿದರೆ ಡಾಕ್ಯಮೆಂಟರಿ ಆಗಬಹದು ಎಂದು ಬೇರೆ ಅಂಶಗಳನ್ನು ಅಳವಡಿಸಿಕೊಂಡಿದ್ದಾರೆ. ಒಂದಷ್ಟು ರೀಸರ್ಚ್ ಮಾಡಿಯಾದ ನಂತರವೇ ಅವರು ಭೀಮಾ ತೀರದಲಿ ಚಿತ್ರಕ್ಕೆ ಅಂತಿಮ ರೂಪ ಕೊಟ್ಟಿದ್ದು. ಹಾಗಾದರೆ ಚಂದಪ್ಪ ಮಾಡಿದ ಎಲ್ಲ ಸಮಾಜದ್ರೋಹಿ ಕೆಲಸಗಳನ್ನು ಸಿನಿಮಾ ಸಮರ್ಥನೆ ಮಾಡಿಲ್ಲ. ಆದರೆ ಅವನೊಳಗೂ ಒಂದು ಒಳ್ಳೆತನವಿತ್ತು. ಮಾನವೀಯತೆ ಇತ್ತು ಎನ್ನುವುದಕ್ಕೆ ಭೀಮಾ ತೀರದಲ್ಲಿ ಚಿತ್ರದ ಮೂಲಕ ಹೇಳಿದ್ದಾರೆ.  
ಚಂದಪ್ಪ ಹರಿಜನ ಯಾರು?
ಚಂದಪ್ಪ ಹರಿಜನ ಭೀಮಾ ತೀರದ ಜನರಿಗೆ ಸಿಂಹಸ್ವಪ್ನವಾಗಿದ್ದ ಹೆಸರು ೨೦೦೦ ಮೇ ತಿಂಗಳಿನಲ್ಲಿ ಈ ಹೆಸರು ಸಿಕ್ಕಾಪಟ್ಟೆ ಚಾಲ್ತಿಯಲ್ಲಿತ್ತು. ಏಕೆಂದರೆ ಚಂದಪ್ಪ ಹರಿಜನ ಪೊಲೀಸರ ಗುಂಡಿಗೆ ಬಲಿಯಾದ ದಿನ.
೧೯೮೫ರಿಂದ ೨೦೦೦ರ ಮಧ್ಯದಲ್ಲಿ ಚಂದಪ್ಪ ನಡೆಸಿದ ಅಟ್ಟಹಾಸ, ಸಿರಿವಂತ ಮತ್ತು ಜಾತಿವಾದಿಗಳ ಮೇಲೆ ನಡೆಸಿದ್ದ ದೌರ್ಜನ್ಯ ಇವೆಲ್ಲದರ ಜೊತೆ ಆತ ಅಲ್ಲಿಯ ಜನರ ಜೊತೆ ಇಟ್ಟುಕೊಂಡಿದ್ದ ಬಾಂಧವ್ಯ ಎಂಥದ್ದು.
ಚಂದಪ್ಪ ಹರಿಜನ ಒಬ್ಬ ನಟೋರಿಯಸ್ ಕ್ರಿಮಿನಲ್. ಹೈದ್ರಬಾದ್ ಕರ್ನಾಟಕದ ಗುಲ್ಬರ್ಗಾ, ಬಿಜಾಪುರ ಹಾಗೂ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಅನೇಕ ಕೊಲೆ, ಡಕಾಯಿತಿ ಸೇರಿದಂತೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸರ ಹಿಟ್ ಲಿಸ್ಟನಲ್ಲಿ ಕ್ರಿಮಿನಲ್ ಆಗಿದ್ದ.
ತನ್ನದೇ ಆದ ಗ್ಯಾಂಗ್ ಕಟ್ಟಿಕೊಂಡು ಅಟ್ಟಹಾಸ ಮೆರೆಯುತ್ತಿದ್ದ. ಮಾಡಬೇಕಾದ ಕೆಲಸದ ಬಗ್ಗೆ ಹಿಂದೆಮುಂದೆ ನೋಡದೆ ಮುಗಿಸಿಬಿಡುತ್ತಿದ್ದ  ಆತ ತನ್ನ ೩೪ ವಯಸ್ಸಿನಲ್ಲಿ ಪೊಲೀಸರ ಗುಂಡಿಗೆ ಬಲಿಯಾಗಿ ಬಿಟ್ಟ. ಇದು ನಡೆದದ್ದು  ಸುಮಾರು ಹನ್ನೊಂದು  ವರ್ಷದ ಹಿಂದೆ. ಆ ಹಿಂದಿನ ಕಥೆಗೆ ಬಣ್ಣ ಹಚ್ಚಿ ತೆರೆಮೇಲೆ ತರಲು ಅಣಜಿ ನಾಗರಾಜ್, ಓಂಪ್ರಕಾಶ್ ರಾವ್ ಹಾಗೂ ನಾಯಕ "ದುನಿಯಾ’ ವಿಜಯ್ ಯಶಸ್ವಿಯಾಗಿದ್ದಾರೆ.
ಆದರೆ ಬೆಳಗೆರೆ ಕಳೆದುಕೊಂಡಿದ್ದಾದರೂ ಏನು ಪಿತ್ರಾರ್ಜಿತ ಆಸ್ತೀನಾ ಅಥವಾ ದಕ್ಕ ಬೇಕಾದ ಮಾಮೂಲಿನಾ?
ಈಗ ಇಷ್ಟೆಲ್ಲಾ ತಕರಾರುಗಳನ್ನು ತೆಗೆಯುವ ಬೆಳೆಗೆರೆ ತಮ್ಮ ಕನಸಿನ ಪ್ರಾರ್ಥನಾ ಶಾಲೆಯನ್ನು ಬೆಂಗಳೂರಿನಲ್ಲಿ ಕಟ್ಟುವ ಬದಲು ಭೀಮಾ ತೀರದಲ್ಲೇ ತೆರೆದು ಉಚಿತ ಶಿಕ್ಷಣ ಕೊಡಬಹುದಿತ್ತು. ಅವರನ್ನು ಹಂತಕರು ಎಂದು ಕರೆದು, ಕೆಟ್ಟದ್ದನ್ನೇ ಬಿಂಬಿಸುವ ಬದಲು ಅವರಲ್ಲಿ ಮಾನವೀಯತೆ, ಉತ್ತಮ ಗುಣಗಳ ಬಗ್ಗೆ ಬೆಳಕು ಚೆಲ್ಲಿ ಅವರಲ್ಲೂ ಇನ್ನೂ ಮನುಷ್ಯ ಸತ್ತಿಲ್ಲ ಎಂಬುದನ್ನು ತೋರಬಹುದಿತ್ತು. ಆದರೆ ಬೆಳೆಗೆರೆ ಮಾಡಿದ್ದೇನು? ಭೀಮಾ ತೀರದ ಜನರನ್ನು ಹಂತಕರು ಎಂದು ಬಿಂಬಿಸಿ, ಕಳಪೆ ಕಾದಂಬರಿಗಳನ್ನು ಬರೆಯುವಂತೆ ಕ್ರೌರ್ಯವನ್ನೇ ಅತಿರಂಜಿತವಾಗಿ ಬರೆದು ತೆವಲು ತೀರಿಸಿಕೊಂಡದ್ದೇ ಅಲ್ಲದೆ, ಜೇಬು ತುಂಬಾ ಕಾಸು ಮಾಡಿಕೊಂಡರು. ಇದು ಅವರ ಬಗೆಗಿನ ನಿಜವಾದ ಕಳಕಳಿಯೇ?
ಇವರನ್ನು ಕೇಳಿ ಚಿತ್ರ ಮಾಡಿದ್ದರೆ, ಮಾಮೂಲಿ ಕೊಟ್ಟಿದ್ದರೆ ಬಹುಶಃ ‘ಭೀಮಾ ತೀರದಲ್ಲಿ... ಚಿತ್ರ ಜಗತ್ತಿನ ೭ ಅದ್ಭುತಗಳಲ್ಲಿ ಒಂದಾಗುತ್ತಿತ್ತೇನೋ!
ಇನ್ನಾದರೂ ಬೆಳೆಗರೆ ಇಂತಹ ಕುತ್ಸಿತ, ಕರುಬುವಿಕೆಯನ್ನು ಬಿಡಲಿ, ಇಲ್ಲವೇ ಅವರ ಮಾಸಿದ ಬದುಕು ಬೀದಿ ಪಾಲಾಗುವುದರಲ್ಲಿ ಸಂದೇಹವಿಲ್ಲ.

1 comment:

  1. ಅಮಾಯಕನ ಹೆಸರಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವುದು ಬೇಸರದ ಸಂಗತಿ ಚಿತ್ರದ ಬಗ್ಗೆ ವಿಮರ್ಶೆ ಮಾಡದೆ ಒಬ್ಬ ವ್ಯಕ್ತಿಯ ಬಗ್ಗೆ ಚರ್ಚೆಯಾಗುತ್ತಿರುವುದು ಬೇಸರದ ಸಂಗತಿ ಇನ್ನಾದರೂ ರವಿ ಬೆಳೆಗೆರೆಯವರು ಅಮಾಯಕರ ಜೊತೆಗಿನ ಚಲ್ಲಾಟ ನಿಲ್ಲಲಿ

    ReplyDelete