Friday 20 March 2015

ಸಿಬಿಐ ಅಂದ್ರೆ ಸಿಎಂಗೆ ಏಕೆ ಚಳಿ?

ದಕ್ಷ ಐಎಸ್ ಅಧಿಕಾರಿ ಡಿ.ಕೆ.ರವಿ ಅವರ ಅನುಮಾನಾಸ್ಪದ ಸಾವಿನ ತನಿಖೆಯನ್ನು ರಾಜ್ಯ ಸರ್ಕಾರ ರಾಜ್ಯದ ಜನತೆಯ ಬೇಡಿಕೆಯಂತೆ ಸಿಬಿಐಗೆ ವಹಿಸಲು ಹಿಂದೇಟು ಹಾಕುತ್ತಿರುವುದು ನೋಡಿದರೆ ಇದರಲ್ಲಿ ದೊಡ್ಡ ಕುಳಗಳ ಕೈವಾಡವಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. 
ವ್ಯವಸ್ಥೆ ವಿರುದ್ಧ ಈಜುವುದರ ಜತೆಗೆ ಶ್ರೀಸಾಮಾನ್ಯನ ಕಣ್ಣೀರು ಒರೆಸಲು ಧೈರ್ಯ ಮಾಡುವ ಪ್ರಾಮಾಣಿಕ ಅಧಿಕಾರಿಗಳೇ ನಿಗೂಢವಾಗಿ ಕೊಲೆಯಾಗುತ್ತಾರೆ ಎಂದರೆ ಈ ಭ್ರಷ್ಟ ವ್ಯವಸ್ಥೆಯನ್ನು ಸರಿಪಡಿಸಲು ಇನ್ಯಾವ ಅಧಿಕಾರಿ ಬೇಕು?
ಸರ್ಕಾರದ ಬೊಕ್ಕಸ ತುಂಬಲು ಹಗಲಿರುಳು ಶ್ರಮಿಸಿದ ಡಿ.ಕೆ.ರವಿಯಂತಹ ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ಇಲ್ಲ ಎಂದರೆ ಏನರ್ಥ? ಭೂಗಳ್ಳರ ವಿರುದ್ಧ ಸಮರವೇ ಸಾರಿದ್ದ ಡಿ.ಕೆ. ರವಿ ಅಧರ್ಯದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆಯೇ? ಹುಲಿ ಎಂದಾದರೂ ಆತ್ಮಹತ್ಯೆ ಮಾಡಿಕೊಂಡಿರುವುದು ಇತಿಹಾಸದಲ್ಲಿದೆಯೇ? ಡಿ.ಕೆ. ರವಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಸುದ್ದಿಯಾದಾಗಲೇ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿತ್ತು. ಆದರೆ ಈ ಪ್ರಕರಣವೂ ಹತ್ತರಲ್ಲಿ ಹನ್ನೊಂದು ಎಂದು ನಿರ್ಲಕ್ಷ್ಯ ವಹಿಸಿತು. 
ಇಷ್ಟೊಂದು ಗಂಭೀರತೆ ಪಡೆದುಕೊಳ್ಳುತ್ತದೆ ಎಂದು ಸ್ವತಃ ಮುಖ್ಯಮಂತ್ರಿಗಳೇ ಕನಸು ಮನಸ್ಸಿನಲ್ಲಿ ಅಂದುಕೊಂಡಿರಲಿಲ್ಲ ಏನೋ? 
ರವಿ ಪ್ರಕರಣವನ್ನು ಇಟ್ಟುಕೊಂಡು ಬಿಜೆಪಿ, ಜೆಡಿಎಸ್ ರಾಜಕಾರಣ ಮಾಡಲು ಹೊರಟಿರಬಹುದು. ಸರ್ಕಾರವನ್ನು ಇಕ್ಕಟ್ಟಿಗೂ ಸಿಲುಕಿಸಬಹುದು. ಆದರೆ ಶ್ರೀಸಾಮಾನ್ಯನಿಗೆ ಯಾವ ರಾಜಕಾರಣವಿದೆ?
ನಾಡಿನ ಒಕ್ಕೊರಲ ಬೇಡಿಕೆಯನ್ನೇ ತಳ್ಳಿ ಹಾಕುವಷ್ಟು ಕಟುಕರಾದರೆ ನೀವು ಯಾರ ಪರವಾಗಿ ಕೆಲಸ ಮಾಡುತ್ತಿದ್ದೀರಿ? ಜನತೆಯ ಹಿತ ಕಾಪಾಡಬೇಕಾದ ಸರ್ಕಾರ ಭೂಗಳ್ಳರ ಪರ ನಿಂತರೆ ಬೇಲಿಯೇ ಎದ್ದು ಹೊಲ ಮೆಯ್ದಂತೆ ಅಲ್ಲವೇ? ಪ್ರಾಮಾಣಿಕ ಅಧಿಕಾರಿಗಳ ಸಾವಿನಲ್ಲೂ ರಾಜಕೀಯ ಬೆರೆಸಿದರೆ ನಾಡಿನ ಜನ ಕ್ಷಮಿಸುತ್ತಾರೆಯೇ? ಜನರ ಬೇಡಿಕೆಯಂತೆ ಈ ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಸರ್ಕಾರ ಕಳೆದುಕೊಳ್ಳುವುದೇನಿದೆ? ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ ಹೊರತು ಸಿದ್ದರಾಮಯ್ಯನವರಿಗಲ್ಲ.