Sunday 6 April 2014

ಅತ್ಯಾಚಾರ ಮತ್ತು ಮಾಧ್ಯಮ ಒಂದು ವಿಶ್ಲೇಷಣೆ

ಸಾಂಸ್ಕೃತಿಕ ಶ್ರೀಮಂತಿಕೆಯಲ್ಲಿ ಭಾರತಕ್ಕೆ ತನ್ನದೆಯಾದ ಮಹತ್ವವಿದೆ. ಪಾಶ್ಚಾತ್ಯ ರಾಷ್ಟ್ರಗಳು ಭಾರತೀಯ ಸಂಸ್ಕೃತಿಗೆ ಮಾರು ಹೋಗುತ್ತಿದ್ದರೆ, ನಾವು ಮಾತ್ರ ಕಳಾಹೀನ ಪಾಶ್ಚಾತ್ಯ ಸಂಸ್ಕೃತಿಯತ್ತ ಮುಖ ಮಾಡಿದ್ದೇವೆ. 
ಜಾಗತೀಕರಣಕ್ಕೆ ಸಿಲುಕಿರುವ ನಾವುಗಳು ಭಾರತೀಯ ಪರಂಪರೆ, ಸಂಸ್ಕೃತಿ, ಆಚಾರ- ವಿಚಾರ ಲೋಕ ರೂಢಿಗ ಳನ್ನು ಎಂದೋ ಮಣ್ಣುಪಾಲು ಮಾಡಿದ್ದೇವೆ. ಆಧುನಿಕತೆಯ ಭರಾಟೆಯಲ್ಲಿ ತೆಲಾಡುತ್ತಿರುವ ನಾವು ನಮ್ಮ ಪರಂಪರೆ, ಆಚಾರ-ವಿಚಾರಗಳಿಗೆ ತಿಲಾಂಜಲಿ ನೀಡುತ್ತಿದ್ದೇವೆ. 
‘ಯತ್ರ ನರ್‍ಯಾಸ್ತು ತತ್ರ ದೇವತಾ’ ಎಂಬ ಮಾತು ಪುರಾಣದ ಪುಟಕ್ಕೆ ಸಿಮೀತ ಮಾಡಿರುವುದರಿಂದ ಇಂದಿನ ದಿನಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಹೆಚ್ಚುತ್ತಿದೆ. ಇದು ಒಂದೆ ಕಾರಣ ಎಂದು ಹೇಳಿದರೆ ಮೂರ್ಖ ತನವಲ್ಲದೆ ಮತ್ತೇನಲ್ಲ. ಹಾಗಾದರೆ ಇಂದಿನ ಸಂದರ್ಭದಲ್ಲಿ ಮಹಿಳೆಯರ
ಮೇಲೆ ಅತ್ಯಾಚಾರ ಹೆಚ್ಚಾಗಲು ಕಾರಣವೇನು? ಕಾರಣಗಳು ಹಲವು ಇರಬಹುದು. ಅತ್ಯಾಚಾರ ಇಂದು -ನಿನ್ನೆಯ ಪ್ರಶ್ನೆಯೇ ಅಲ್ಲ. ಇದು ಅನಾದಿ ಕಾಲದಿಂದಲೂ ಮಹಿಳೆಯರ ಮೇಲೆ ನಡೆಯುತ್ತಲೆ ಇದೆ. ಅದು ಮುಂದುವರಿದಿದೆ ಅಷ್ಟೆ. 
ಪ್ರಸ್ತುತ ಸಂದರ್ಭದಲ್ಲಿ ಹೆಚ್ಚು ಚರ್ಚೆಗೆ ಒಳಗಾಗುತ್ತಿರುವುದು ಮಾತ್ರ ಅವರ ಊಡುಗೆ, ತೊಡುಗೆ, ನಡವಳಿಕೆ, ಇದನ್ನೆ ಚರ್ಚೆ ವಸ್ತುವಾಗಿಸಿಕೊಳ್ಳುವ ವಿತಂಡವಾದಿಗಳಿಗೆ ನಮ್ಮದೊಂದು ಪುಟ್ಟ ಪ್ರಶ್ನೆ ಇದೆ. ನಿನ್ನೆ ಹುಟ್ಟಿ ಇವತ್ತು ಕಣ್ಣು ತೆರೆದ ‘ಹಸುಗೂಸಿನ ಮೇಲೆ ಅತ್ಯಾಚಾರ ನಡೆಯುತ್ತದೆಯಲ್ಲ’ ಅದು ಯಾವ ಬಟ್ಟೆಯನ್ನು ಹಾಕಿಕೊಂಡು ನಿಮ್ಮನ್ನು ಪ್ರಚೋದಿಸುತ್ತದೆ.? ಕೇವಲ ಶಿಷ್ಠಾಚಾರದ ಬಗ್ಗೆ ಮಾತನಾಡಿದರೆ ಸಾಲದು, ಮಾತ ನಾಡುವವರ ಮನಸ್ಥಿತಿ ಏನೆಂಬುದು ಅರ್ಥವಾಗುತ್ತದೆಯೇ ಹೊರತು ಅತ್ಯಾಚಾರದ ಕಾರಣ ನಿಮ್ಮಿಂದ ನಿರೀಕ್ಷಿಸಲು ಅಸಾಧ್ಯದ ಮಾತು.  
ಕೆಲವು ಕಟ್ಟರ್ ಹಿಂದುತ್ವ ಪ್ರತಿಪಾದಕರು ಹೇಳುವ ಪ್ರಕಾರ ನಗರ ಪ್ರದೇಶಗಳಲ್ಲಿ ಮಹಿಳೆಯರು ಧರಿಸುವ ಊಡುಗೆ, ದೇಹದ ಅಂಗಾಂಗಳು ಅತ್ಯಾಚಾರಕ್ಕೆ ಆಹ್ವಾನ ನೀಡಿದಂತೆ ಎಂದು ವ್ಯಾಖ್ಯಾನಿಸಿದ್ದೂ ಉಂಟು. ಇವರ ವ್ಯಾಖ್ಯಾನದಲ್ಲಿಯೇ ವಕ್ರದೃಷ್ಟಿ ಇದೆ ಎಂದು ಬೆರೆ ಹೇಳಬೇಕಾದ ಅವಶ್ಯಕತೆಯೇ ಇಲ್ಲ. ಇದನ್ನೇ ನಂಬುವುದಾದರೆ ಗ್ರಾಮೀಣ ಮಹಿಳೆಯರ ಮೇಲು ಅತ್ಯಾಚಾರಗಳು ನಡೆಯುತ್ತಿವೆ. ಇವರು ಯಾವ ಅಂಗಾಂಗಳು ಪ್ರದರ್ಶಿಸುತ್ತಾರೆ.? 
ಅತ್ಯಾಚಾರವೆಸಗಿರುವ ಅಪರಾಧಿಗಳು ಒಂದಡೆಯಾದರೆ ಅವರ ಪರ ವಕ್ತಾರರಾಗಿ ಸಮರ್ಥಿಸಿಕೊಳ್ಳುವ ಹಿಂದು ಸಂಸ್ಕೃತಿ ಪರಿಪಾಲಕರು ಇನ್ನೊಂದು ಕಡೆ. ಇಬ್ಬರ ನಡುವೆ ಶೀಲ ಕಳೆದುಕೊಂಡ ‘ಸ್ತ್ರೀ’ ಜೀವನ ಮಣ್ಣು ಪಾಲಾಗಿರುತ್ತದೆ. ಜಾಗೃತಿ ಮೂಡಿಸಬೇಕಾದ ಮಾಧ್ಯಮ ತಾನೇ ವಕಾಲತ್ತು ವಹಿಸುತ್ತಿದೆ. 
ಗಂಡ ಹೆಂಡತಿಯರ ನಡುವಿನ ವೈಮನಸ್ಸು ಕೂಡ ದೃಶ್ಯ ಮಾಧ್ಯಮಕ್ಕೆ ಆಹಾರವಾಗಿ ಬಿಡುತ್ತದೆ. ಅದನ್ನೆ ಎಳೆದು ಎಳೆದು ತೋರಿಸಿ ಅವರ ಮಾನ ಹರಾಜು ಹಾಕುವುದಲ್ಲದೆ ಬಿಗ್ ಸುದ್ದಿಯಂತೆ ಬಿಂಬಿಸಿ ಕುಟುಂಬ ಕಲಹಕ್ಕೆ ಕಾರಣವಾಗುತ್ತಿದೆ. 
ಮಾಧ್ಯಮಗಳು ನೈತಿಕ ಮೌಲ್ಯಗಳನ್ನು ಕಳೆದುಕೊಂಡಿವೆ ಎಂದು ಬೇರೆ ಹೇಳಬೇಕಾಗಿಲ್ಲ. ಅಹಿತಕರ ಕೃತ್ಯಗಳನ್ನು ವೈಭವೀಕರಿಸಿ ತೋರಿಸುವುದರಲ್ಲಿಯೇ ಸಾರ್ಥಕತೆ ಕಾಣುತ್ತಿರುವ ಮಾಧ್ಯಮಗಳಿಗೆ ಸ್ವ ನಿಯಂ ತ್ರಣಕ್ಕೆ ಒಳಗಾಗಬೇಕಾದ ಅಗತ್ಯತೆ ಇದೆ.
ಅದರಲ್ಲಿ ಅತ್ಯಾಚಾರ ಪ್ರಕರಣಗಳಂತೂ ಅತೀಯಾಗಿ ವೈಭವೀಕರಿಸುತ್ತಿವೆ. ಮತ್ತೇ ಮತ್ತೇ ಅಂತಹ ಕೃತ್ಯ ವೆಸಗಲು ಪ್ರೇರಣೆ, ನೀಡುತ್ತಿವೆ. ಆದ ಕೃತ್ಯದಿಂದ ಮನನೊಂದ ಜೀವ ಕಾನೂನಿನಿಂದ ನ್ಯಾಯ ದೊರೆಯುತ್ತೆ ಎಂಬ ಆಸೆಯಿಂದ ಪೊಲೀಸ್ ಇಲಾಖೆ ಬಾಗಿಲು ಬಡಿದರೆ ಕಾನೂನು ಪಾಲನೆ ಮಾಡುವ ಪೊಲೀಸರ ವರಸೆಯೇ ಬೇರೆ!
ಮೊದಲೇ ಗಂಭೀರ ಗಾಯಕ್ಕೊಳಗಾದ ಆ ಮಹಿಳೆ, ಪ್ರಕರಣ ದಾಖಲು ಮಾಡುವಾಗ ಕೇಳುವ ಪ್ರಶ್ನೆ, ಯಾವ ಮಹಿಳೆಯೂ ಮತ್ತೊಮ್ಮೆ ಪೊಲೀಸ್ ಠಾಣೆ ಮೆಟ್ಟಿಲು ಹತ್ತದಂತೆ ಮಾಡುತ್ತದೆ. ಗಾಯದ ಮೇಲೆ ಬರೆ ಎಳೆದಂತೆ ಪ್ರಶ್ನಿಸುವ ಪೊಲೀಸರು ತಮ್ಮ ಕುಟುಂಬ ವರ್ಗದವರಿಗಾದರೆ ಈ ಪ್ರಶ್ನೆಗಳನ್ನೇ ಕೇಳುತ್ತಾರಾ? ವಿಧಿಯಿಲ್ಲದೆ ಹೇಳಲೇಬೇಕು. 
ಅತ್ಯಾಚಾರವೆಸಗಿದ ವ್ಯಕ್ತಿಗಿಂತ ಕೆಟ್ಟದಾಗಿ ನಡೆದುಕೊಂಡು ಬಿಡುತ್ತಾರೆ ಎಂಬ ಆರೋಪ ಸುಳ್ಳೇನಲ್ಲ. ಎಲ್ಲಿ ? ಯಾವಾಗ? ಸಮಯ? ಹೇಗೆ? ಎಷ್ಟು ಜನ? ಆ ಸಂದರ್ಭದಲ್ಲಿ ನಿನ್ನ ಪ್ರತಿ ಕ್ರಿಯೆ ಹೇಗಿತ್ತು? ಈಗಾಗಲೇ ಮನನೊಂದ ಜೀವ ಮಾನಸಿಕವಾಗಿ ಕುಗ್ಗಿ ಹೋಗುತ್ತದೆ. 
ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ದೆಹಲಿಯಲ್ಲಿ ನಿರ್ಭಯಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರಕ್ಕೆ ಇಡೀ ದೇಶವೇ ಆಕ್ರೋಶ ವ್ಯಕ್ತಪಡಿಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂಬ ಒತ್ತಡ ಎಲ್ಲೆಡೆ ಕೇಳಿ ಬಂತು. ಇದಕ್ಕೆ ಕಾರಣ ಮಾಧ್ಯಮ ಹೆಚ್ಚು ಒತ್ತು ನೀಡಿದವು. 
ಅದೇ ರೀತಿ ಮುಂಬೈಯಲ್ಲಿ ಛಾಯಾಗ್ರಾಹಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರಕ್ಕೆ ಕೊಟ್ಟಷ್ಟು ಮಹತ್ವ ಬೆಂಗಳೂರಿನ ವಿವಿಯಲ್ಲಿ ನಡೆದ ಕಾನೂನು ವಿದ್ಯಾರ್ಥಿ ಮೇಲಿನ ಅತ್ಯಾಚಾರ ರಾಷ್ಟ್ರೀಯ ಸುದ್ದಿ ಯಾಗಲಿಲ್ಲ, ಗ್ರಾಮೀಣ ಪ್ರದೇಶಗಳಲ್ಲಿ ದಿನವೊಂದಕ್ಕೆ ಇಂತಹ ಪ್ರಕರಣಗಳು ಎಷ್ಟು ನಡೆಯುತ್ತವೆಯೋ? ಒಂದು ವೇಳೆ ಗೊತ್ತಾದರೂ ಆ ಸುದ್ದಿಗೆ ಮಹತ್ವವೇ ನೀಡದೆ ಒನ್‌ಲೈನ್ ಸುದ್ದಿ ಮಾಡಿ ಕೈತೊಳೆದುಕೊಂಡು ಬಿಡುತ್ತವೆ.
ಮಾಧ್ಯಮಕ್ಕೆ ಸಾಮಾಜಿಕ ಜವಾಬ್ದಾರಿ ಹಿಂದೆಂದಿಗಂತ  ಇಂದು ಹೆಚ್ಚಿದೆ. ಅದನ್ನು ಪಾಲಿಸಬೇಕಾಗಿದೆ. ಕೇವಲ ವೈಭವೀಕರಣಕ್ಕೆ ಹೆಚ್ಚಿನ ಮಹತ್ವ ನೀಡಿ, ಟಿಆರ್‌ಪಿ ಹೆಚ್ಚಿಸಿಕೊಳ್ಳುವುದರಲ್ಲಿಯೇ ಕಾಲಹರಣ ಮಾಡದೆ ನೈತಿಕ ಮೌಲ್ಯಗಳನ್ನು ಪರಿಪಾಲಿಸುವಲ್ಲಿ ತಲ್ಲೀನರಾಗಬೇಕಾದ ಅಗತ್ಯವಿದೆ.
ನ್ಯಾಯಾಂಗವೂ ಕೂಡ ಇಂತಹ ಪ್ರಕರಣಗಳನ್ನು ಶೀಘ್ರ ಇತ್ಯರ್ಥ ಮಾಡುವತ್ತ ಗಮನಹರಿಸಬೇಕಾಗಿದೆ. ನ್ಯಾಯದಾನ ವಿಳಂಬದಿಂದಾಗಿ ಎಷ್ಟೋ ಪ್ರಕರಣಗಳು ಬಾಕಿ ಇವೆ. ಇದರಿಂದಾಗಿ ಆರೋಪಿಗಳಿಗೆ ಭಯ ಇಲ್ಲದಂತಾಗಿದೆ.
ಅತ್ಯಾಚಾರವೆಸಗಿದ ವ್ಯಕ್ತಿಗೆ ತಕ್ಕ ಶಿಕ್ಷೆ ವಿಧಿಸಬೇಕು. ಕೆಳಹಂತದ ನ್ಯಾಯಾಲಯದಲ್ಲಿ ಆತ ಅಪರಾಧಿ ಎಂದು ಸಾಬೀತಾದರೆ ಆದಷ್ಟು ಶೀಘ್ರ ಗಲ್ಲು ಶಿಕ್ಷೆಯಂತಹ ಕಠಿಣ ಶಿಕ್ಷೆಗೆ ಗುರಿಪಡಿಸಬೇಕಾದ ಅಗತ್ಯವಿದೆ. 
ದೆಹಲಿ ಯುವತಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಸಾಕೇತ್ ನ್ಯಾಯಾಲಯ ನೀಡಿದ ತೀರ್ಪು ನ್ಯಾಯಾ ಲಯದ ಮೇಲಿನ ಗೌರವ ಹೆಚ್ಚಿಸಿದೆ. ಆದರೆ ಅಪರಾಧಿಗಳಿಗೆ ಶಿಕ್ಷೆ ಎನ್ನುವುದು ವಿಳಂಬ ಮಾಡಿದರೆ ಕಾನೂನೇ ಅಪರಾಧಿಗೆ ದಾರಿ ತೋರಿದಂತಾಗುತ್ತದೆ. ಶಿಕ್ಷೆ ವಿಧಿಸಿದ ನಂತರ ಪುನಹ ಉನ್ನತ ನ್ಯಾಯಾಲಯಕ್ಕೆ ಅವಕಾಶ ನೀಡಬಾರದು. 
ಅಷ್ಟೇ ಅಲ್ಲ ಗಲ್ಲು ಶಿಕ್ಷೆಗೆ ಗುರಿಯಾದ ವ್ಯಕ್ತಿಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರೆ ಅಪರಾಧಿ ಮತ್ತೇ ಹೊರ ಬರುವ ದಾರಿ ಸಿಕ್ಕಂತಾಗುತ್ತದೆ. ನ್ಯಾಯಾಲಯ ನೀಡಿದ ತೀರ್ಪು ಅಂತಿಮ ಎನ್ನುವ ಭಯ ಆರೋಪಿಗಳಲ್ಲಿ ಸೃಷ್ಟಿಯಾಗಬೇಕು. ಅಂದಾಗ ಮಾತ್ರ ಇಂತಹ ತಪ್ಪು ಮರುಕಳಿಸಲು ಅಸಾಧ್ಯ. 

1 comment:

  1. ಡಿಯರ್ ಮಾಲಗತ್ತಿ, ನಿನ್ನ ಸಲಹೆ ಸೂಚನೆಗಳು ಚನ್ನಾಗಿವೆ ಇವುಗಳನ್ನು ಪಾಲಿಸುವ ನೈತಿಕತೆ ಅವರಿಗೆ ಬರಲಿ, ಜೊತೆಗೆ ವಕಿಲರ ಬಗ್ಗೆ ಸ್ವಲ್ಪ ಬರೆಯಬೇಕಾಗಿತ್ತು ಅನಿಸುತ್ತದೆ ಏಕೆಂದರೆ, ಅತ್ಯಾಚಾರಕ್ಕೆ ಒಳಗಾದ ಮಹಿಳೆಗೆ ನ್ಯಾಯ ಸಿಗದಿರಲು ಇವರುಗಳೆ ಮುಖ್ಯವಾಗಿರುತ್ತಾರೆ. ಇವರು ಕೇಳುವ ಪ್ರಶ್ನೆಗಳು ಕೂಡಾ ಮಾನಸಿಕ ಆಘಾತವನ್ನುಂಟು ಮಾಡುತ್ತವೆ. ಅವನು ಅತ್ಯಾಚಾರ ಮಾಡಿದ್ದಾನೆಂದು ಗೊತ್ತಿದ್ದರೂ ಅವನ ಪರವಾಗಿ ವಾದಿಸುತ್ತಾರೆ ಅವರ ಮನಸ್ಥಿತಿ ಕೂಡಾ ಬದಲಾಗಬೇಕು ಅಂಥವರ ಪರವಾಗಿ ವಾದಿಸಬಾರದು ಅನ್ನುವುದೆ ನನ್ನ ಅಬಿಪ್ರಾಯ..

    ReplyDelete