Wednesday 24 October 2012

ಕತ್ತಿಗೆ ಕಸದ ಬುಟ್ಟಿಯೇ ಲೇಸು

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕೆಂದು ಸುವರ್ಣ ವಿಧಾನಸೌಧ ಲೋಕಾರ್ಪಣೆ ಸಮಯದಲ್ಲಿ ಹೇಳಿದ್ದ ಕೃಷಿ ಸಚಿವ ಉಮೇಶ್ ಕತ್ತಿ ಮತ್ತೇ ಅದನ್ನೇ ಪುನರುಚ್ಚರಿಸಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.
ಪ್ರಾದೇಶಿಕ ಅಸಮಾನತೆ ಹೋಗಲಾಡಿಸುವ ನಿಟ್ಟಿನಲ್ಲಿ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಿಸಿದ ಬಳಿಕವೂ ಉಮೇಶ್ ಕತ್ತಿ ಒಡಕಿನ ಮಾತು ಆಡುತ್ತಿರುವುದು ವಿಪರ್ಯಾಸದ ವಿಷಯವಾಗಿದೆ.
ಅಖಂಡ ಕರ್ನಾಟಕದ ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರನ್ನು ಮರೆತು ಕೇವಲ ರಾಜಕೀಯ ದೃಷ್ಟಿಯಿಂದ ಹೇಳಿಕೆ ನೀಡುತ್ತಿರುವುದು ಜವಾಬ್ದಾರಿಯುತ ಸ್ಥಾನದಲ್ಲಿರುವ ಕತ್ತಿಯವರಿಗೆ ತಕ್ಕುದಲ್ಲ. ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ಹಿಂದುಳಿದಿದೆ ಎಂದ ಮಾತ್ರಕ್ಕೆ ಪ್ರತ್ಯೇಕ ರಾಜ್ಯವೇ ಪರಿಹಾರವಲ್ಲ ಎಂಬುದನ್ನು ಕುತ್ಸಿತ ಮನಸ್ಸಿನ ಕತ್ತಿಯವರು ಅರ್ಥಮಾಡಿಕೊಳ್ಳಬೇಕಾಗಿದೆ.
ಕರ್ನಾಟಕದ ಅವಿಭಾಜ್ಯ ಅಂಗವಾಗಿರುವ ಬೆಳಗಾವಿಯನ್ನೇ ನಮ್ಮದು ಎಂದು ಅಬ್ಬರಿಸುತ್ತಿರುವ ಮರಾಠಿಗರ ಬಗ್ಗೆ ಸೊಲ್ಲೆತ್ತದೆ ಕುತ್ಸಿತ ಮನಸ್ಸಿನ ಕತ್ತಿಯವರು ಕನ್ನಡ ನಾಡನ್ನು ಹೊಡೆಯಲು ಮುಂದಾಗಿದ್ದಾರಲ್ಲ. ಮಾತೆತ್ತಿದರೆ ಬೆಳಗಾವಿ ನಮ್ಮದು ಎಂದು ಬೊಬ್ಬೆ ಹಾಕುತ್ತಿರುವ ಮರಾಠಿಗರ ವಿರುದ್ಧ ಸೆಟೆದು ನೊಲ್ಲಬೇಕಾದ ಕತ್ತಿಯವರು ಕನ್ನಡಿಗರ ವಿರುದ್ದ ನಿಂತಿರುವುದರ ಹಿಂದಿನ ಮರ್ಮವೇನು ಎಂಬುದು ಸಂಶೋಧನೆ ಮಾಡಿ ಹೇಳಬೇಕಾಗಿಲ್ಲ.
ಸಾಮಾನ್ಯ ಜ್ಞಾನ ಇದ್ದರೂ ಸಾಕು ಅವರ ಒಳ ಮರ್ಮವನ್ನು ಅರಿಯಲು. ತಿಳಿದುಕೊಳ್ಳದೆ ಮಹಾರಾಷ್ಟ್ರದ ಕೊಲ್ಲಾಪುರ, ಮತ್ತು ಗೋವಾ ರಾಜ್ಯದ ಜಿಲ್ಲೆಗಳನ್ನು ಸೇರಿಸಿಕೊಂಡು ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಟ್ಟಿರುವ ಕತ್ತಿಯವರಿಗೆ ಸಾಮಾನ್ಯ ಜ್ಞಾನ ಬೇಡವೇ?  ಇದಕ್ಕೆ ಸಮರ್ಥನೆ ನೀಡುತ್ತಿರುವ ದಾರಿ ನೋಡಿದರೆ ಎಂಥವರಿಗೂ ನಗು ಬಾರದೆ ಇರದು. ಬೀದರ್, ಗುಲ್ಬರ್ಗ ಸೇರಿದಂತೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕು. ೨೦೨೦ರ ವೇಳೆಗೆ ಜನಸಂಖ್ಯೆ ಆಧಾರದ ಮೇಲೆ ಇನ್ನು ೫೦ ರಾಜ್ಯಗಳನ್ನು ರಚಿಸಬೇಕಾಗಬಹುದು. ಆ ಸಂದರ್ಭಕ್ಕೆ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವಾಗಿ ಘೋಷಿಸಬೇಕು ಎಂದು ಬೆಳಗಾವಿಯಲ್ಲಿ ಸುವರ್ಣವಿಧಾನಸೌಧ ಉದ್ಘಾಟನೆ ಸಂದರ್ಭದಲ್ಲಿ ಹೇಳಿ ವೇದಿಕೆಯಲ್ಲಿಯೇ ಛೀ ಮಾರಿ ಹಾಕಿಸಿಕೊಂಡಿದ್ದರು ಅದನ್ನೇ ಮತ್ತೇ ಪುನರುಚ್ಚರಿಸಿದ್ದಾರೆ. ಯಾವ ಪುರುಷಾರ್ಥಕ್ಕಾಗಿ ಮತ್ತು ಯಾರನ್ನು ಸಂತಸಲು ಈ ಹೇಳಿಕೆ ನೀಡುತ್ತಿದ್ದಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ.