Tuesday 1 April 2014

ಬೇಸಿಗೆಯ ಝಳದ ಜೊತೆಗೆ ಏರುತ್ತಿದೆ ರಾಜಕೀಯ ಬಿಸಿ

ಗುಲ್ಬರ್ಗ: ಬಿಸಿಲ ನಾಡು, ಬಹಮನಿ ಸಾಮ್ರಾಜ್ಯದ ಬೀಡಾದ ಗುಲ್ಬರ್ಗದಲ್ಲಿ ಬೇಸಿಗೆಯ ಬಿಸಿಲಿನ ಝಳದ ಜೊತೆಗೆ ರಾಜಕೀಯದ ಬಿಸಿ ಏರತೊಡಗಿದೆ. ಎಲ್ಲೆಲ್ಲೂ ಪಕ್ಷ, ಅಭ್ಯರ್ಥಿಗಳ ಸೋಲು ಗೆಲುವಿನ ಲೆಕ್ಕಾಚಾರದ್ದೇ ಮಾತುಗಳು. 
ಜಿಲ್ಲೆಯ ರಾಜಕೀಯ ವಲಯದ ದಿಗ್ಗಜ, ಸೋಲಿಲ್ಲದ ಸರದಾರ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್‌ನಿಂದ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ತೀವ್ರ ಪೈಪೋಟಿ ನೀಡಿದ್ದ ಮಾಜಿ ಸಚಿವ ರೇವೂನಾಯಕ ಬೆಳಮಗಿ ಈ ಬಾರಿ ಮತ್ತೆ ಖರ್ಗೆಯವರಿಗೆ ಎದುರಾಳಿಯಾಗಿದ್ದಾರೆ.
Add caption
ಹೇಗಾದರೂ ಮಾಡಿ ಕಾಂಗ್ರೆಸ್‌ನ ಭದ್ರಕೋಟೆಯನ್ನು ಛಿದ್ರ ಮಾಡಲು ಬಿಜೆಪಿ ಮತ್ತು ಜೆಡಿಎಸ್ ಹವಣಿಸುತ್ತಿರುವುದರಿಂದ ಗುಲ್ಬರ್ಗ ಪ್ರತಿಷ್ಠೆಯ ಕ್ಷೇತ್ರವಾಗಿ ಮಾರ್ಪಟ್ಟಿದೆ. ಮೊದಲಿನಿಂದಲೂ ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ಗುಲ್ಬರ್ಗ ೧೯೯೬ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಇಂದಿನ ರಾಜ್ಯ ಪೌರಕಾರ್ಮಿಕ ಸಚಿವ ಖಮರುಲ್ ಇಸ್ಲಾಂ ಜಯಭೇರಿ ಬಾರಿಸಿದ್ದರು. ೧೯೯೮ರಲ್ಲಿ ಬಿಜೆಪಿಯ ಬಸವರಾಜ್ ಪಾಟೀಲ್ ಸೇಡಂ ಗೆದ್ದಿದ್ದು ಬಿಟ್ಟರೆ ಉಳಿದೆಲ್ಲ ಅವಧಿಗೆ ಕಾಂಗ್ರೆಸ್ ಪರವಾಗಿದೆ. 
ಜೆಡಿಎಸ್‌ಗೆ ಹೇಳಿಕೊಳ್ಳುವಷ್ಟು ಸಂಘಟನೆ ಬಲ ಇಲ್ಲದಿರುವುದರಿಂದ ಕಣದಲ್ಲಿರುವ ಜೆಡಿಎಸ್ ಅಭ್ಯರ್ಥಿ ಡಿ.ಜಿ.ಸಾಗರ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ವಾತಾವರಣವಿದೆ. ಆದರೆ ಖರ್ಗೆಯವರ ಸುಮುದಾಯದವರೇ ಆದ ಡಿ.ಜಿ. ಸಾಗರ್ ಕಾಂಗ್ರೆಸ್‌ನ ಮತಬ್ಯಾಂಕ್‌ಗೆ ಕೈ ಹಾಕುವುದರಿಂದ ಖರ್ಗೆಯವರಿಗೆ ಹಿನ್ನಡೆಯಾಗಬಹುದು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದ್ದರೂ ಸಹ ಕಾಂಗ್ರೆಸ್, ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇತ್ತ ದೇಶಾದ್ಯಂತ ಅಲೆ ಸೃಷ್ಟಿಸಿರುವ ಆಪ್ ಅಭ್ಯರ್ಥಿಯಾಗಿ ಮಾಜಿ ಸಚಿವೆ ಬಿ.ಟಿ ಲಲಿಯಾ ನಾಯಕ್ ಕಣದಲ್ಲಿದ್ದು ಗಮನ ಸೆಳೆಯುತ್ತಿದ್ದಾರೆ. 
ಗುಲ್ಬರ್ಗ ಉತ್ತರ, ಗುಲ್ಬರ್ಗ ದಕ್ಷಿಣ, ಗುಲ್ಬರ್ಗಾ ಗ್ರಾಮೀಣ, ಜೇವರ್ಗಿ, ಅಪ್ಜಲ್‌ಪುರ, ಚಿತ್ತಾಪುರ, ಸೇಡಂ ಹಾಗೂ ಯಾದಗಿರಿ ಜಿಲ್ಲೆಯ ಗುರುಮಿಟ್ಕಲ್ ಕ್ಷೇತ್ರಗಳು ಗುಲ್ಬರ್ಗ ಲೋಕಸಭಾ ಕ್ಷೇತ್ರಕ್ಕೆ ಒಳಪಡಲಿವೆ. ಗುಲ್ಬರ್ಗ ದಕ್ಷಿಣ ವಿಧಾನಸಭಾ ಕ್ಷೇತ್ರವನ್ನು ಹೊರತುಪಡಿಸಿದರೆ ಉಳಿದ ಎಲ್ಲಾ
ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರೇ ಇರುವುದರಿಂದ ಖರ್ಗೆಯವರ ಪಾಲಿಗೆ ಹೆಚ್ಚಿನ ಅನುಕೂಲವಾಗಬಹುದು.
ಖರ್ಗೆಯವರು ಕೇಂದ್ರ ಸಚಿವರಾದ ನಂತರ ಹೈ.ಕ ಭಾಗದ ಅಭಿವೃದ್ಧಿಗೆ ೩೭೧(ಜೆ) ವಿಧಿ ತಿದ್ದುಪಡಿ, ವಿಶೇಷವಾಗಿ ಗುಲ್ಬರ್ಗಕ್ಕೆ ಅಂತಾರಾಷ್ಟ್ರೀಯ ಮಟ್ಟದ ಸುಸಜ್ಜಿತ ಇಎಸ್‌ಐ ಆಸ್ಪತ್ರೆ, ಕೇಂದ್ರೀಯ ವಿವಿ, ಹಲವು ದಶಕಗಳ ಬೇಡಿಕೆಯಾಗಿದ್ದ ರೈಲ್ವೆ ವಿಭಾಗ ಸ್ಥಾಪನೆ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳು ಖರ್ಗೆಯವರ ಪಾಲಿಗೆ ವರದಾನವಾಗಬಹುದು. 
ಇತ್ತ ಬಿಜೆಪಿ ಅಭ್ಯರ್ಥಿ ರೇವೂನಾಯಕ್ ಬೆಳಮಗಿಗೆ ಸಾಂಪ್ರದಾಯಿಕ ಮತಗಳ ಜೊತೆಗೆ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಯವರ ಅಲೆ ಕೆಲಸ ಮಾಡಬಹದು. ಯುವ ಮತದಾರರು ಮೋದಿ ಅಲೆಯಲ್ಲಿ ತೇಲುತ್ತಿರುವುದರಿಂದ ಬಿಜೆಪಿ ಅಭ್ಯರ್ಥಿಗೆ ಅಲ್ಪಮಟ್ಟದ ಲಾಭವಾಗುವುದರ ಜೊತೆಗೆ ಗುಲ್ಬರ್ಗ ಗ್ರಾಮೀಣ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ತಮ್ಮ ವಿರುದ್ಧವೇ ಸ್ಪರ್ಧಿಸಿದ್ದ ಮಾಜಿ ಸಚಿವ ಬಾಬುರಾವ್ ಚವ್ವಾಣ್ ಈಗ ಬಿಜೆಪಿ ಸೇರಿರುವುದರಿಂದ ರೇವೂ ನಾಯಕ ಬೆಳಮಗಿಗೆ ಆನೆ ಬಲ ಬಂದಂತಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತೆ ಬಿಜೆಪಿಗೆ ವಾಪಸ್ ಬಂದಿರುವುದರಿಂದ ಕೆಜೆಪಿಯ ಎಲ್ಲಾ ನಾಯಕರು ಬಿಜೆಪಿಗೆ ಮರಳಿದ್ದಾರೆ. ಇದು ರೇವೂನಾಯಕ ಬೆಳಮಗಿಯವರಿಗೆ ಪ್ಲಸ್ ಪಾಯಿಂಟ್. ಒಟ್ಟಾರೆ ಹೇಳುವುದಾದರೆ ಕಾಂಗ್ರೆಸ್, ಬಿಜೆಪಿ ನಡುವಿನ ಸ್ಪರ್ಧೆ ಎನ್ನುವುದಕ್ಕಿಂತ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ v/s ನರೇಂದ್ರ ಮೋದಿ ನಡುವಿನ ಸೆಣಸಾಟ ಎಂದರೆ ತಪ್ಪಾಗಲಾರದು.