Saturday 23 April 2011

ಹಸಿವೆಂಬ ಹಕ್ಕಿ ಹಾರುತ್ತಿದೆ ನೋಡಿದಿರಾ....?

ಪ್ರಪಂಚದಲ್ಲಿ  ಎರಡು ಆಹಾರ ಪದ್ದತಿಗಳು ಜಾರಿಯಲ್ಲಿವೆ. ಒಂದು ಸಸ್ಯಹಾರವಾದರೆ  ಇನ್ನೊಂದು ಮಾಂಸಹಾರ, ಮಾಂಸಹಾರವನ್ನೆ ತೆಗೆದುಕೊಂಡರೆ ಶೇ ೮೦ರಷ್ಟು ಜನ ಈ ಆಹಾರವನ್ನು ಸೇವಿಸುತ್ತಿರುವುದು ಕಂಡುಬರುತ್ತಿದೆ. ಸಸ್ಯಹಾರ ಮಾಂಸಹಾರ ಎಂಬುವುದು ಅವರವರ ವೈಯಕ್ತಿಕ ವಿಚಾರವಾದರೂ ಇಂದಿನ ಸರ್ಕಾರಗಳು ಒಂದು ಸಮುದಾಯದ ಆಹಾರದ ಹಕ್ಕನ್ನು ಕಸಿದುಕೊಂಡು ಕಾನೂನು ಎಂಬ ಖಡ್ಗ ಝಳಪಿಸಿದ್ದು ನೋಡಿದರೆ ಇದು ಪ್ರಜಾಪ್ರಭುತ್ವ ರಾಷ್ಟ್ರವೋ ಅಥವಾ ಸರ್ವಾಧಿಕಾರವೋ? ಎಂಬ ಸಂಶಯ ಮೂಡಿಸುತ್ತದೆ. ಭಾರತ ದೇಶದಲ್ಲಿ ಬಹುಸಂಖ್ಯಾತರು ಮಾಂಸವನ್ನು ತಮ್ಮ ಆಹಾರವನ್ನಾಗಿ ಮಾಡಿಕೊಂಡು ಜೀವಿಸುತ್ತಾ ಬಂದಿದ್ದಾರೆ. ಅವರ ಹಿತಾಸಕ್ತಿಗೆ ಧಕ್ಕೆ ತರುವಂತ ಮಸೂದೆಯ ಅಗತ್ಯವಿದೆಯೇ? ಒಂದು ಸಮುದಾಯದ ಆಹಾರ ಪದ್ದತಿಯನ್ನು ನಿಷೇಧಿಸಲು ಇವರು ಯಾರು?
ಸಂಸ್ಕ್ರತಿ ಬಗ್ಗೆ ಮಾತನಾಡುವ ಡಂಬಾಚಾರಿಗಳೇ ಈ ಕಾಯ್ದೆಯಿಂದ ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆಯಾಗುವುದಿಲ್ಲವೇ? ಈ ಕಾಯಿದೆ ಜಾರಿಯಾದರೆ ಮಾಂಸಹಾರ ಸೇವಿಸುವುದು ಬೀಡುತ್ತಾರೆಯೇ? ಜಾರಿಯಾಗಿರುವ ಕಾಯ್ದೆಗಳು ಎಷ್ಟರ ಮಟ್ಟಿಗೆ ಸಫಲವಾಗಿವೆ ಎಂಬುವುದು ಬೇರೆ ಮಾತು. ಜನರ ವಿರೋಧದ ನಡುವೆ ಇಂಥಹ ಕಾನೂನುಗಳು ಜಾರಿಗೆ ತರುತ್ತಿರುವುದು ಯಾವ ಪುರುಷಾರ್ಥಕ್ಕಾಗಿ ? ಒಂದು ವರ್ಗವನ್ನು ಒಲೈಸಿಕೊಳ್ಳಲು ಇಡೀ ಬಹುಸಂಖ್ಯಾತ ಸಮುದಾಯದ ವಿರೋಧ ಕಟ್ಟಿಕೊಳ್ಳುವುದು ಸಮಂಜಸವೇ? ಗೋಹತ್ಯೆ, ಗೋ ಸಂರಕ್ಷಣೆ ನೆಪದಲ್ಲಿ ಅಲ್ಪ ಸಂಖ್ಯಾತರ ಮೇಲೆ ದಾಳಿ, ದಬ್ಬಾಳಿಕೆಗಳು ನಡೆಯುತ್ತಲೆ ಬಂದಿರುವುದು ಗೊತ್ತಿಲ್ಲವೇ? ಈ ಮಸೂದೆ ಅಂಗೀಕಾರವಾದರೆ ಶ್ರೀರಾಮ ಸೇನೆ , ಬಜರಂಗದಳ, ವಿಶ್ವಹಿಂದೂ ಪರಿಷತ್ ನಂಥಹ ಸಂಘಪರಿವಾರದ ಸಂಘಟನೆಗಳ ಕೃತ್ಯೆಗಳಿಗೆ ಕಾಯ್ದೆಯಿಂದ ಸಮರ್ಥನೆ ನೀಡಿದಂತಾಗುವುದಿಲ್ಲವೇ? ಇದು ಸಂಘ ಪರಿವಾರದ ಫ್ಯಾಸಿಷ್ಟ್ ಧೋರಣೆ ಅಲ್ಲದೆ ಮತ್ತೆನು ?ರಾಜ್ಯದ ಒಂದು ಕೋಟಿಗೂ ಅಧಿಕ ರೈತರು ಉಪಯೋಗಕ್ಕೆ ಬಾರದ ವಯಸ್ಸಾದ ಹಸು, ಎತ್ತು ಎಮ್ಮೆ ಕೋಣಗಳನ್ನು ಮಾರಾಟ ಮಾಡಿ ಇತರೆ ಜಾನುವಾರಗಳನ್ನು ಖರಿದಿಸುತ್ತದ್ದಾರೆ. ಸುಮಾರು ೧.೨೫ಕೋಟಿ ದಲಿತರು ಅಲ್ಪಸಂಖ್ಯಾತರು ಬುಡಕಟ್ಟು ಜನರು ಗೋಮಾಂಸವನ್ನು ಆಹಾರವಾಗಿ ಬಳಸುತ್ತಿದ್ದಾರೆ. ಕನಿಷ್ಠ ೨೦ಲಕ್ಷ ಜನರು ಮಾಂಸದ ಮಾರಾಟದಲ್ಲಿ ತೋಡಗಿ ಜೀವನ ನಡೆಸುತ್ತಿದ್ದಾರೆ. ಇಷ್ಟೊಂದು ಜನರ ಮೇಲೆ ಇಲ್ಲಿನ ಆರ್ಥಿಕತೆಯ ಮೇಲೆ ದೂರಗಾಮಿ ಪರಿಣಾಮ ಬೀರುವ ಗೋಹತ್ಯೆ ನಿಷೇಧ ಮಸೂದೆ ಚರ್ಚೆ ಇಲ್ಲದೆ ಸದನದಲ್ಲಿ ಅಂಗೀಕಾರ ಮಾಡಿರುವುದು ಯಾವ ಪುರುಷಾರ್ಥಕ್ಕಾಗಿ ಈ ವೃತ್ತಿಯಿಂದ ಬೀದಿ ಪಾಲಾಗುವ ನಿರುದ್ಯೋಗಿಗಳಿಗೆ ಪರ್ಯಾಯ ಮಾರ್ಗ ತೋರಿಸಿದ್ದಿರಾ? ರೈತವಿರೋಧಿ, ದಲಿತ ಮತ್ತು ಅಲ್ಪಸಂಖ್ಯಾತರ ಆಹಾರದ ಹಕ್ಕನು ಕಸಿಯುವ, ಕೋಮುಭಾವನೆ ಕೇರಳಿಸುವ ದುರುದ್ದೆಶದಿಂದ ಜಾರಿಗೆ ತರುತ್ತಿಲ್ಲವೇ? ಹಲವು ಕಡೆ ಜಾತ್ಯಾತೀತ ಪಕ್ಷಗಳು ಮೂಲಭೂತ ಅಸ್ತ್ರಗಳನ್ನು ವೋಟಿನ ರಾಜಕಾರಣಕ್ಕೆ ಬಳಸಲು ಯತ್ನಿಸುತ್ತಿರುವುದು ಸಹ ನಿರ್ಲಜ್ಜ ನಡುವಳಿಕೆಯ ಪರಮಾವಧಿಯೆ ಆಗಿದೆ. ಗೋಹತ್ಯೆ ನಿಷೇಧಿಸುವ ಕೂಗಿನಲ್ಲಿ ಇತ್ತೀಚೆಗೆ ಗಾಂಧೀಜಿ ಮತ್ತು ಡಾ. ಅಂಬೇಡ್ಕರ್ ಅವರ ಹೆಸರನ್ನು ಎಳೆದು ತರುತ್ತಿದ್ದಾರೆ. ಗಾಂಧೀಜಿಯವರು ಹೇಳಿದ್ದೆಲ್ಲವು ಸಾಧುವೆ ಅಸಾಧುವೆ ಎಂದು ಕೂಲಂಕುಶವಾಗಿ ಚರ್ಚಿಸದೆ ಒಪ್ಪಿಕೊಳ್ಳುವುದು ಪ್ರಜ್ಞಾವಂತಿಕೆಯ ಲಕ್ಷಣವೇ? ಗಾಂಧೀಜಿಯನ್ನು ವಿರೋಧಿಸುವ ಆತನ ಹಂತಕರನ್ನು ಸಮರ್ಥಿಸಿಕೊಳ್ಳುವ ಈ ಮೂಲಭುತವಾದಿಗಳು ಗೋವಿನ ವಿಷಯದಲ್ಲಿ ಗಾಂಧೀಜಿಯವರ ಹೆಸರು ಬಳಸುವುದು ಏಕೆ? ಹಾಗೇಯೆ ಅಂಬೇಡ್ಕರ್ ಅವರು ಸಂವಿಧಾನದ ೪೮ನೇ ವಿಧಿಯಲ್ಲಿ ಹಾಲು ಕರಿಯುವ ಹಸು, ರೈತ ಎತ್ತುಗಳ ಬಗ್ಗೆ ಹೇಳಿದ್ದಾರೆಯೇ ಹೊರತು ಮತ್ಯಾವ ಗೋಸಂರಕ್ಷಣೆ ಬಗ್ಗೆ ಮಾತನಾಡಿಲ್ಲ ಅದರೂ ಅವರ ಹೆಸರನ್ನು ಉದ್ದೇಶಪೂರ್ವಕವಾಗಿ ತರುತ್ತಿದ್ದಾರೆ ಗೋಹತ್ಯೆ ನಿಷೇಧ ಮಾಡಬೇಕೆಂದು ಒತ್ತಾಯ ಮಾಡುವವರಲ್ಲಿ ಸುಪ್ರಿಂ ಕೋರ್ಟ್‌ನ ನ್ಯಾಯಮೂರ್ತಿ ವೆಂಕಟಾಚಲಯ್ಯ , ಸಂಶೋಧಕ ಚಿದಾನಂದ ಮೂರ್ತಿ,ರಾಜ್ಯಸಭಾ ಸದಸ್ಯ ರಾಮಾಜೋಯಿಸ್ ಅವರು ಒತ್ತಾಯ ಮಾಡುತಿದ್ದಾರೆ. ಇವರ್‍ಯಾರಾದರೂ ಒಂದು ಹಸುವನ್ನಾದರೂ ಸಾಕಿದ್ದಾರಾ? ಯಾರೋ ಸಾಕಿದ ಗೋವುಗಳ ಹತ್ಯೆ ನಿಷೇಧಿಸಿ ಎಂದು ಒತ್ತಾಯಿಸುವುದು ಯೋಚಿತ ನ್ಯಾಯವೇ? 
ಅನ್ನದಲ್ಲಿ ವಿಷ ಬೆರೆಸುವ ತಂತ್ರ: ಮಾಂಸಹಾರ ಸೇವಿಸುವವರು ಕನಿಷ್ಠವೆಂದು ಗೋವುಗಳನ್ನು ಪವಿತ್ರವೆಂದು ಹೇಳಲಾಗುತ್ತಿದೆ. ಗೋವು ಒಂದೇ ಅತ್ಯ ಅಮುಲ್ಯ ಮತ್ತು ಆರಾಧ್ಯ ಪ್ರಾಣಿಯೇ ? ಹಾಗಾದರೆ ಹಂದಿಯನ್ನು ‘ವರಾಹ’ ಎಂದು ಕೋಣವನ್ನು ಯಮನ ವಾಹನವೆಂದು ನವಿಲನ್ನು  ಸರಸ್ವತಿ ವಾಹನವೆಂದು ಪೂಜಿಸುತ್ತಿಲ್ಲವೇ? ರಾಷ್ಟಿಯ ಪ್ರಾಣಿಯೆಂದು ಬಿಂಬಿತವಾಗಿರುವ ನವಿಲು ಸಂತತಿಯ ಬಗ್ಗೆ ಯಾವ ಸರ್ಕಾರಗಳು ಚಕಾರ ಎತ್ತುವುದಿಲ್ಲ  ಏಕೆ?  ಗ್ರಾಮೀಣ ಜನರು ಹಸುಗಳನ್ನು ಸಾಕುವುದು ಅವುಗಳ ಮೇಲಿನ ಭಕ್ತಿಯಿಂದಲ್ಲ  ನಮ್ಮ ಧರ್ಮ ಗ್ರಂಥಗಳು ಹೇಳಿವೆ ಎಂಬ ಆದೇಶದಿಂದಂತ್ತು ಅಲ್ಲವೇ ಅಲ್ಲ  ಅವುಗಳಿಂದ ರೈತನ ಕೃಷಿ ನಡೆಯುತ್ತದೆ. ಹೈನುಗಾರಿಕೆ ಬೇಳೆಯುತ್ತದೆ ಬಡವನ ಬದುಕು ಹಸನಾಗುತ್ತದೆ. ಎಂಬ ಉದ್ದೇಶದಿಂದ. ಆದರೆ ಈಗ ಸ್ವಹಿತಾಸಕ್ತಿ ಶಕ್ತಿಗಳು ಪವಿತ್ರ ಅಪವಿತ್ರ ಎಂಬ ನೆಪವೊಡ್ಡಿ ಬಹುಸಂಖ್ಯಾತರ ಅನ್ನದಲ್ಲಿ  ವಿಷ ಬೆರೆಸುವ ಯತ್ನ ನಡೆಸುತ್ತಿವೆ.
ಪೆಟೆಂಟ್‌ಗೆ ಲಾಭಿ:
ಗೋಹತ್ಯೆ ನಿಷೇಧಿಸುವುದರಿಂದ ಈ ದೇಶದ ಸಂಸ್ಕ್ರತಿ ಉಳಿಯುತ್ತದೆ ಎಂಬಂತೆ ಬಡಾಯಿ ಕೊಚ್ಚಿಕೊಳ್ಳುತ್ತಿರುವ ಮೂಲಭೂತವಾದಿಳು ದೇಶಿಯ ತಳಿಗಳಾದ ‘ಕೃಷ್ಣವೇಣಿ’ ಅಮೃತ ಮಹಲ್ ಪುಂಗನೂರು ದೇವಣಿ  ಒಂಗಲ್ ಮತ್ತು ಕಾಂಗಾಯಾಮ್‌ನಂಥಹ ಹಸುಗಳು ಸಂರಕ್ಷಿಸುವಲ್ಲಿ ಸರಕಾರಗಳು ಮತ್ತು ಪರಸಂಘಟನೆಗಳು ಏಕೆ ಆಸಕ್ತಿ ವಹಿಸಿಲ್ಲ . ಅವುಗಳ ಅವನತಿಗೆ  ಕಾರಣರು ಯಾರು? ಜಾಗತಿಕ ಕರಾಳ ಬಾಹುಗಳಿಗೆ ಸಿಲುಕಿ ಪ್ರಗತಿ ಸಾಧಿಸುವ ಹುಂಬತನಕ್ಕೆ ಮಾರು ಹೋಗಿ ನಮ್ಮತನವನ್ನೆ ಗಾಳಿಗೆ ತೂರಿ ಅನ್ಯರ ಗೋವುಗಳನ್ನು ಸಂರಕ್ಷಣೆ ಮಾಡುವುದರಲ್ಲಿ ಏನು ಸಫಲತೆ ಕಾಣುತ್ತೆವೆ.  ಗೋವು ಮೂತ್ರ ವೈದ್ಯಕೀಯ ಕ್ಷೇತ್ರಕ್ಕೆ ಬಳಕೆಯಾಗುತ್ತದೆ ಎಂಬ ಸಂತೋಷ ಒಂದೆಡೆಯಾದರೆ ಸಗಣೆಯಿಂದ ತಯಾರಿಸಲ್ಪಡುವ ವಿಭೂತಿ ಕೋಟ್ಯಂತರ ರೂಪಾಯಿ ವ್ಯವಹಾ ಕುದುರಿಸಿ ತಮ್ಮ ಕಬಂದ ಬಾಹು ಮತ್ತು ಹಿಂದೂ ಸಂಸ್ಕ್ರತಿಯನ್ನು ಹೇರಲು ರೂಪಿಸಿರುವ ಷಡ್ಯಂತ್ರವಲ್ಲವೇ? ಇದರಿಂದ ಸರ್ಕಾರ ಮತ್ತು ಮಠಗಳಿಗೆ ಪೂರಕವೇ ಹೋರತು ಅಲ್ಲಾ ಮುಲ್ಲಗಳಿಗಲ್ಲ ಬೌದ್ದ ಬಿಕ್ಕುಗಳಿಗಲ್ಲ ಕ್ರೈಸ್ತ ಪಾದ್ರಿಗಳಿಗಲ್ಲ ಜನಸಾಮಾನ್ಯರಿಗಂತು ಅಲ್ಲವೇ ಅಲ್ಲ.


Sunday 17 April 2011

ಗಾಳಿ ಬಿಟ್ಟಾಗ ತೂರಿಕೋ...

ಬಿಜೆಪಿ ಸರಕಾರ ಅಧಿಕಾರಕ್ಕೆ ಬರಬೇಕಾದರೆ ರಾಜ್ಯದ ಮತದಾರರ ಆಶೀರ್ವಾದವೇನು ಆಗಿರಲಿಲ್ಲ ಕಾಂಗ್ರೆಸ್ಸ್ ಮತ್ತು ಜೆಡಿಎಸ್ ಎಂಬ ಭಟ್ಟಂಗಿಗಳ ಸ್ವಾರ್ಥರಾಜಕಾರಣ ಬಿಜೆಪಿಯನ್ನು ಅಧಿಕಾರದ ಅಂಗಳಕ್ಕೆ ತಂದು ನಿಲ್ಲಿಸಿತು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಚನಭ್ರಷ್ಟತೆ ಆರು ದಶಕಗಳ ಕಾಲ ರಾಜಕೀಯ ಮಾಡಿದ ಕಾಂಗ್ರೆಸ್ ಪಕ್ಷದ ಕಾರ್ಯವೈಖರಿಗೆ ಬೆಸತ್ತ ಜನತೆ ಹೊಸಬರಿಗೆ ಅವಕಾಶ ನೀಡಿದರೆ ಅಭಿವೃದ್ಧಿ ಕೆಲಸಗಳು ಆದಾವು ಎಂಬ ಮುಂದಾಲೋಚನೆಯಿಂದ ಪ್ರಬುದ್ಧ ಮತದಾರರು ಬಿಜೆಪಿಯನ್ನು ಬೆಂಬಲಿಸಿದರು ಎನ್ನುವುದು ಸರ್ವವಿಧಿತ. ಬಿಜೆಪಿ ಆಡಳಿತದ ಚುಕ್ಕಾಣೆ ಹಿಡಿಯಬೇಕೆಂಬ ಹಂಬಲದಿಂದ ಆಡುತ್ತಿದ್ದ ಮಾತುಗಳು, ಕೋಡುತ್ತಿದ್ದ ಭರವಸೆಗಳು, ಜಾತ್ಯಾತೀತ ಸಮಾವೇಶಗಳು, ವಿಭಾಗವಾರು ಸಮಾವೇಶಗಳಲ್ಲಿ ಬಿಡುತ್ತಿದ್ದ ರೀಲುಗಳು, ಇವೆಲ್ಲವುಗಳಿಗೆ ಮಾರುಹೋದ ಮತದಾರರು ರಾಮರಾಜ್ಯದ ಕನಸುಗಳಿಗೆ ಹಂಬಲಿಸಿದ್ದ ಈ ಕನಸುಗಳ ಲೋಕದಲ್ಲಿ ತೇಲಾಡುತ್ತಿದ್ದ ಮತಭಾಂದವರು ಕೇವಲ ಆರು ತಿಂಗಳಲ್ಲಿಯೆ ತನ್ನ ತಪ್ಪಿನ ಅರಿವಾಗಿ ಭ್ರಮನಿರಸನಗೊಂಡ. ನಾಡಿನ ಮತದಾರರ ತೀರ್ಪಿನಂತೆ ಬಿಜೆಪಿ ಸರಕಾರ ಅಧಿಕಾರದ ಗದ್ದುಗೆ ಹಿಡಿಯಿತು ಚುನಾವಣೆಗಳಲ್ಲಿ ಕೊಟ್ಟ ಭರವಸೆಗಳನ್ನು ಈಡೆರಿಸುವ ಜನರ ವಿಶ್ವಾಸ ಗಳಿಸುವಲ್ಲಿ ವಿಫಲವಾಯಿತು. ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸರಕಾರ ಅವರ ಸಮಸ್ಯೆಗಳಿಗೆ ಮಾನವೀಯ ದೃಷ್ಟಿಯಿಂದ ಸ್ಪಂದಿಸದೆ ಹಾವೇರಿಯಲ್ಲಿ ಗೋಲಿಬಾರ್ ಮಾಡಲಾಯಿತು. ಇದು ಬಿಜೆಪಿ ಸರ್ಕಾರ ರೈತರಿಗೆ ಕೋಡಮಾಡಿದ ಮೊದಲ ವಿಶಿಷ್ಟ ಕೋಡುಗೆಯಾದರೆ ಇನ್ನೊಂದಡೆ ಫಲವತ್ತಾದ ಕೃಷಿ ಭೂಮಿಯನ್ನು ಅಭಿವೃದ್ಧಿ ಎಂಬ ಅಸ್ತ್ರಕ್ಕೆ ಬಳಸಿಕೊಳ್ಳುತ್ತ ರೈತನ್ನು ಬೀದಿ ಪಾಲು ಹೊರಟಿತು. ಇವು ಹಿಂದೆ ಆಡಳಿತ ನಡೆಸಿದ ಸರಕಾರಗಳು ಮಾಡಿರದ ಸಾಧನೆಯನ್ನು ಕೇವಲ ಎರಡು ವರ್ಷಗಳ ಅವಧಿಯಲ್ಲಿ ಮಾಡಿ ತೋರಿಸಿದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಾಧನೆಗಳು. ಎರಡು ವರ್ಷಗಳಲ್ಲಿ ಸಾಧಿಸಲು ಹೇಗೆ ಸಾಧ್ಯವಾಯಿತು ಅಂತಹ ಸಾಧನೆಗಳಾದರೂ ಏನು? ಕೇವಲ ಮಾಧ್ಯಮಗಳಲ್ಲಿ ಜಾಹಿರಾತು, ಬೀದಿ ನಾಟಕಗಳಲ್ಲಿ ಫ್ಲೆಕ್ಸ್ ಕಟೌಟ್‌ಗಳಲ್ಲಿ ರಾರಾಜಿಸಿದ್ದು ಸಾಧನೆಯೇ? ಅಥವಾ ಸರ್ಕಾರ ಹಾಕಿಕೊಂಡ ಯೋಜನೆಗಳನ್ನು ಬಿಂಬಿಸುವುದೇ ಸರ್ಕಾರದ ಸಾಧನೆಯೇ? ಕಾರ್ಯಗತ ಮಾಡಿದ ಯೋಜನೆಗಳು ಎಷ್ಟರ ಮಟ್ಟಿಗೆ ಜನರಿಗೆ ಉಪಯೋಗವಾಗಿವೆ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದ ಸೌಲಭ್ಯಗಳು ಧಕ್ಕಿವೇಯೇ? ಎನ್ನುವುದು ಮುಖ್ಯವೇ ಹೊರತು ಹಾಕೊಕೊಂಡ ಯೋಜನೆಗಳಲ್ಲ ಜಾಹಿರಾತಲ್ಲ ಬೀದಿ ನಾಟಕವಲ್ಲ.
ಹಾಗಂತ ಸರ್ಕಾರ ಹಾಕಿಕೊಂಡ ಎಲ್ಲ ಯೋಜನೆಗಳು ಅಪ್ರಯೋಜನ ಎಂದು ಹೇಳಲು ಸಾಧ್ಯವಿಲ್ಲ. ಹಲವು ಯೋಜನೆಗಳು ಜನರ ಮನದಲ್ಲಿ ಅಚ್ಚಳಿಯದೆ ಉಳಿದಿವೆ ಭಾಗ್ಯಲಕ್ಷೀ ಯೋಜನೆ, ಸಂಧ್ಯಾಸುರಕ್ಷೆ ಯೋಜನೆ, ವಾಜಪೇಯಿ ಆರೋಗ್ಯ ಶ್ರೀ ಯೋಜನೆ, ತುರ್ತು ಚಿಕಿತ್ಸೆಗಾಗಿ ಒದಗಿಸಿದ ೧೦೮ರ ಸೇವೆ ಜನರಿಗೆ ಮಹದುಪಕಾರ. ಇವೆಲ್ಲವುಗಳ ಹೊರತಾಗಿ ವಿಚಾರ ಮಾಡಿದಾಗ ಹಿಂದಿನ ಸರ್ಕಾರಗಳಿಗಿಂತ ವಿಭಿನ್ನ ಆಡಳಿತದ ಪರಿಕಲ್ಪನೆ ಮುಂದಿಟ್ಟುಕೊಂಡು ಅಧಿಕಾರಕ್ಕೆ ಬಂದ ಈ ಸರ್ಕಾರ, ನಾಡಿನಲ್ಲಿ ಹಿಂದೆಂದೂ ಕಂಡು ಕೇಳದಷ್ಟು ಅವ್ಯವಹಾರ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆಯುತ್ತಿದೆ. ಭ್ರಷ್ಟಚಾರ, ಸ್ವಜನಪಕ್ಷಪಾತತೆ ಮೀತಿಮೀರಿದೆ. ಸ್ವತ ಮುಖ್ಯಮಂತ್ರಿಗಳೆ ನಾನಾ ಹಗರಣಗಳಲ್ಲಿ ಸಿಲಿಕಿಕೊಂಡಿದ್ದಾರೆ ಸರ್ಕಾರದಲ್ಲಿ ಕಳ್ಳರು, ಸುಳ್ಳರು, ಬ್ಯಾಂಕ್ ವಂಚಕರು, ಭೂಗಳ್ಳರು, ಅತ್ಯಾಚಾರಿಗಳು, ಲಂಚಕೋರರು, ಕಳ್ಳಸಾಗಣೆದಾರರು ತುಂಬಿ ತುಳುಕುತಿದ್ದಾರೆ ಇವರೇನಾ? ವಿಭಿನ್ನ ಸರ್ಕಾರದ ಮಂತ್ರಿ ಮಹೋದಯರು ಇಂಥಹ ಸರ್ಕಾರವನ್ನು ಸಮರ್ಥಿಸಿಕೊಳ್ಳಲು ಕೆಲವು ಡೊಂಗಿ  ಮಠಾಧಿಶರು ತಮ್ಮ ಕೈಚಳಕ ತೊರಿಸುತಿದ್ದದ್ದು ಒಂದು ಕಡೆಯಾದರೆ ಸರ್ಕಾರದಿಂದ ಉದಾರ ಅನುದಾನ ಪಡೆದು ರಾಜಕೀಯ ಮಿಶ್ರಿತ ಧಾರ್ಮಿಕ ನಾಯಕರಾಗಿ ಫೊಸು ಕೊಡುತ್ತಿದ್ದಾರೆ. ಇವರ ಹಗರಣಗಳ ಬಗ್ಗೆ ಮಾಧ್ಯಮ ಹೊರ ಹಾಕಿದಾಗ ಅವರ ಮೇಲೆ ಹಲವು ಪ್ರಕರಣಗಳು ದಾಖಲಿಸುವಲ್ಲಿಯೂ ಹಿಂದೆ ಬಿದ್ದಿಲ್ಲ ಮಾಧ್ಯಮ ಹಿಂದೆಂದಿಗಿಂತಲೂ ಹೆಚ್ಚು ಚುರುಕಾಗಿ ಕೆಲಸ ಮಾಡುತ್ತಿದೆಯಾದರೂ ಸತ್ಯ ವರದಿಯನ್ನು ಪ್ರಕಟಿಸಿದಾಗ ಅದರಲ್ಲಿ ಸಿಲುಕಿದ ವ್ಯಕ್ತಿ ಮಾಧ್ಯಮದವರು ತಿರುಚಿ ಬರೆದಿದ್ದಾರೆ ಎಂದು ನುಣೆಚಿಕೊಳ್ಳುತ್ತಿದ್ದಾನೆಯೆ ಹೊರತು ಗುಂಡುರಾಯರಂತೆ ಪತ್ರಕರ್ತರನ್ನು ಅರಬ್ಬಿ ಸಮುದ್ರಕ್ಕೆ ಏಸೆಯಿರಿ ಎಂದು ಹೇಳದೆ ಇರುವುದೇ ಪತ್ರಕರ್ತರಿಗಿರುವ ದೊಡ್ಡ ಸಂತೋಷ. ಪಾಪ ಯಡಿಯೂರಪ್ಪ ಹೋರಾಟದ ಮೂಲಕ ರಾಜ್ಯದ ಆಡಳಿತ ಚುಕ್ಕಾಣೆ ಹಿಡಿದು ಹಗರಣಗಳ ಮೂಲಕ ಜನಪ್ರೀಯತೆ ಗಳಿಸಿದರವರು. ಸರ್ಕಾರವನ್ನು ಗಟ್ಟಿಗೋಳಿಸಲು ಹೋಗಿ ಹಲವರ ಕಂಗೆಣ್ಣೆಗೆ ಗುರಿಯಾಗಿ ಭಂಡಾಯದ ಬೀಸಿಯನ್ನು ಎದುರಿಸಿ ಅಸ್ಥಿರತೆಯಲ್ಲಿಯೆ ಕಾಲ ಕಳೆದು ಅಭಿವೃದ್ಧಿಯೇ ಆಡಳಿತದ ಮಂತ್ರ ಎಂದು ಜಪ ಮಾಡಿದ ಮುಖ್ಯಮಂತ್ರಿ ಸುಮಾರು ಶಾಸಕರನ್ನು ಖರಿದಿಸಿ ಉಪಚುನಾಣೆಗೆ ಕಾರಣರಾಗಿ ಪ್ರಜಾಪ್ರಭುತ್ವದ ಘನತೆಗೆ ಧಕ್ಕೆ ತಂದುದ್ದಲ್ಲದೆ ಅಂಥಹ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ನೈತಿಕತೆಯನ್ನೆ ಮರೆತರು. ದಂಡನಾಯಕನೆ ಹೀಗಿರುವಾಗ ಸಂಪುಟದ ಸಚಿವರು ಹೇಗಿರಬಹುದು. ಇಂತಹ ಹಗರಣಗಳು ಈಗ ಸಕರಾತ್ಮಕವಾಗಿ ಕಂಡರು ಮುಂದಾಗುವ ಅತಂತ್ರ ಸ್ಥಿತಿಗೆ ಸರ್ಕಾರವೇ ಭವಿಷ್ಯವನ್ನು ಬರೆದುಕೊಳ್ಳುತ್ತಿದೆ. ಅಧಿಕಾರದಿಂದ ಎಲ್ಲ ಹಗರಣಗಳನ್ನು ಮುಚ್ಚಿ ಹಾಕಬಹುದು ಎಂಬ ಅವರ ಭ್ರಮೆ  ಅವರಿಗೆ ಮುಳುವಾಗದೆ ಇರದು. ಶಿಸ್ತಿನ ಪಕ್ಷ ಎಂದು ಹೆಳಿಕೊಳ್ಳುತ್ತಿದ್ದ ನಾಯಕರ ಧ್ವನಿ ಕ್ಷೀಣಿಸಿದೆ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದು ಕೇವಲ ಹಗರಣಗಳ ಮೂಲಕವೇ ಜನಪ್ರೀಯವಾದ ಪಕ್ಷ ಎಂದರೆ ಬಿಜೆಪಿಯಾಗಿದೆ.