Saturday 2 March 2013

ಜಾತಿ ಮೀರಲು ನಾಗರಿಕ ಸಮಾಜವೇ ಅಡ್ಡಿ

ಜಾತಿವ್ಯವಸ್ಥೆ ನಾಶವಾಗಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಕನಸು ಕಂಡ ಮಹಾನ್ ವ್ಯಕ್ತಿಗಳು ದೇಶದಲ್ಲಿ ಬಹಳಷ್ಟು ಜನರಿದ್ದಾರೆ. ಅಂತವರ ಪಟ್ಟಿಯಲ್ಲಿ ಮೊದಲ ಹೆಸರು ಜ್ಯೋತಿಭಾ ಫುಲೆ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರದು. ಆದರೆ ಅವರ ಕನಸನ್ನು ನನಸು ಮಾಡಬೇಕಾದ ಆಧುನಿಕ ಶಿಕ್ಷಣವೂ ಇಂದು ಜಾತಿಯ ಕೇಂದ್ರೀಕೃತವಾಗಿಯೇ ಮುಂದುವರಿಯುತ್ತಿದೆ. ಆಧುನಿಕತೆ ಜಾತಿ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ. ಇಂದಿನ ವಿಶ್ವವಿದ್ಯಾಲಯಗಳು ಜಾತಿಯ ಕೇಂದ್ರಗಳಾಗಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿವೆ. ರಾಜ್ಯದ ಎಲ್ಲಾ ಭಾಗಗಳಲ್ಲಿ ಒಂದೊಂದು ಪ್ರಭಲ ಜಾತಿಯ ಕಪಿಮುಷ್ಟಿಯಲ್ಲಿ ವಿವಿಗಳಿವೆ.
ಗುಲಬರ್ಗಾದ ವಿವಿಯಲ್ಲಿ ದಲಿತರದೆ ಪ್ರಾಬಲ್ಯ, ಮೈಸೂರು ವಿವಿ ಒಕ್ಕಲಿಗರಿಗೆ ಮೀಸಲಾದಂತಿದೆ. ಹೀಗೆ ಅನೇಕ ಕಡೆ ಆಯಾ ಜಾತಿ ಪ್ರಾಭಲ್ಯಕ್ಕನುಗುಣವಾಗಿ ವಿವಿಗಳು ಕೂಡ ಒಗ್ಗಿಕೊಂಡಿವೆ. ಇದರಿಂದಾಗಿ ವಿವಿಗಳು ಜಾತಿಯ ಭೂತದಿಂದ ಹೊರಬರಲು ಸಾಧ್ಯವಾಗಿಲ್ಲ ಎಂದ ಮೇಲೆ ಜಾತ್ಯತೀತ ಶಿಕ್ಷಣ ನೀಡಲು ಹೇಗೆ ಸಾಧ್ಯ? ಜಾಗತೀಕರಣದಿಂದ ಸಂಸ್ಕೃತಿಗೆ ಧಕ್ಕೆಯಾಗಿದೆ ಎಂಬ ಮಾತುಗಳು ಅಪ್ಪಟ್ಟ ಸುಳ್ಳು, ಹಿಂದು ಧರ್ಮದ ಪ್ರಕಾರ ಸಂಸ್ಕೃತಿ ಎಂದರೆ ಜಾತಿ, ಮತ, ಪಂಥ ಉಚ್ಛ ನಿಚ ಬಡವ ಬಲ್ಲಿದ ಎಂಬದೇ ಆಗಿದೆ.

 ಹಾಗಾದರೆ ಆಧುನಿಕ ಸಮಾಜದಲ್ಲಿಯೂ ಜಾತಿ ವ್ಯವಸ್ಥೆ ಹೊಸ ರೂಪು ತಳೆದು ಮುಂದುವರಿಯುತ್ತಿದೆ. ದೇಶದಲ್ಲಿ ಜಾತಿ ಎಂಬುದು ಹುಟ್ಟಿನಿಂದಲೇ ಅಂಟಿ ಸತ್ತರೂ ಬಿಡದ ನಂಟು ಅಷ್ಟೊಂದು ಪ್ರಬಲ. ಅದನ್ನು ಬದಲಿಸಲು ಸಾಧ್ಯವಿಲ್ಲದ ವಿಷಯ. ಜಾತಿ ವ್ಯವಸ್ಥೆಯನ್ನು ದಿಕ್ಕರಿಸುವ ಪ್ರಯತ್ನ ನಡೆಯುವ ಈ ಸಂದರ್ಭದಲ್ಲಿಯೂ ಕೂಡ ಕೆಲವು ಕುತ್ಸಿತ ಕ್ರಿಮಿಗಳು ಅದನ್ನು ಸಮರ್ಥಿಸುವ ಮತ್ತು ಉಳಿಸಿಕೊಳ್ಳುವ ವ್ಯವಸ್ಥಿತ ಪಿತೂರಿ ಪ್ರಬಲವಾಗಿ ನಡೆಯುತ್ತಿದೆ. ಆದರೆ ಸಂವಾದ, ಕಾರ್ಯಗಾರಗಳಿಗೆ ಅಂಥವರನ್ನು ಆಹ್ವಾನಿಸಿದರೆ ಅಪ್ಪಟ್ಟ ಜಾತ್ಯತೀತ ಮುಖವಾಡ ಧರಿಸಿ ಮಾತನಾಡುತ್ತಲೇ ಜಾತಿಯ ಅಸ್ತ್ರವನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎಂದರೆ ಊಹಿಸಲು ಸಾಧ್ಯವಿಲ್ಲ.
ನಾನು ಗುಲಬರ್ಗಾ ವಿವಿಯಲ್ಲಿ ಓದುತ್ತಿರುವಾಗ ನನ್ನೂರಿನವರೇ ಮೇಲ್ವರ್ಗದ ಹುಡುಗನೊಬ್ಬ ಉತ್ತಮ ಗೆಳೆಯನಾಗಿದ್ದ ಒಂದೇ ರೂಮಿನಲ್ಲಿ ವಾಸ, ಊಟ ತಿಂಡಿಯೆಲ್ಲ ಒಟ್ಟಿಗೆ ಕೂತು ಒಂದೇ ಗಂಗಳದಲ್ಲಿ (ಜಾನಪದ ಭಾಷೆಯಲ್ಲಿ ಊಟ ಮಾಡುವ ಪ್ಲೇಟ್) ಮಾಡುತ್ತಿದ್ದೇವು. ಆದರೆ ಅದೇ ಗೆಳೆಯ ತನ್ನ ಮನೆಯಲ್ಲಿ ಕಾರ್ಯಕ್ರಮಕ್ಕೆ ಆಹ್ವಾನಿಸಿ ತನ್ನ ಹೊಲಸು ಮನಸ್ಸನ್ನು ಬಹಿರಂಗವಾಗಿಯೇ ತೋರ್ಪಡಿಸಿದ. ಅಲ್ಲಿದ್ದಾಗ ಮಾತ್ರ ಹಾಗೇ ಇಲ್ಲಿ ಹಳ್ಳಿಯಲ್ಲಿ ಹೇಗಿರಬೇಕು ಅಂಥ ಗೊತ್ತಲ್ಲ ಎಂದು ಸೂಚ್ಯವಾಗಿ ಹೇಳಿ ತಮ್ಮ ಎತ್ತು ಕಟ್ಟುವ ಕೊಟ್ಟಿಗೆಯಲ್ಲಿ ಕೂರಿಸಿ ನೆರೆಕೆಯಲ್ಲಿರುವ ಮಣ್ಣಿನ ಮಡಕೆಯನ್ನು ಕೊಟ್ಟು ನೀಡಲು ಪ್ರಾರಂಭಿಸಿದ, ಇದಕ್ಕೆ ಏನು ಉತ್ತರಿಸದೆ ಎದ್ದು ಬಂದೆ. ಇದು ಯಾರೋ ಅನಕ್ಷರಸ್ಥರು ಮಾಡಿದ ಆತ್ಮ ದ್ರೋಹವಲ್ಲ ಆಧುನಿಕ ಶಿಕ್ಷಣವನ್ನು ಪಡೆದುಕೊಂಡು ವಿವಿಗಳಿಗೆ ಪ್ರಥಮ ರ್‍ಯಾಂಕ್‌ಗಳಲ್ಲಿ ಪಾಸಾದವರ ಆಧುನಿಕ ಮುಖವಾಡ, ಹಾಗಾದರೆ ನಾವೆಂಥ ಶಿಕ್ಷಣವನ್ನು ಪಡೆದುಕೊಂಡಿದ್ದೇವೆ ಎಂಬ ಪ್ರಶ್ನೆ ಧೂತ್ತನೆ ಎದ್ದು ನಿಲ್ಲುತ್ತದೆ. ಜಾತಿಗೆ ಎಲ್ಲೇ ಅನ್ನೊದು ಇಲ್ಲ ಸ್ವಾಮಿ, ಅದು ಅನುಭವಿಸಿದವರಿಗೆ ಮಾತ್ರ ಗೊತ್ತು. ನಾನಾಗ ವಿವಿಯಲ್ಲಿ ಓದುತ್ತಿರುವಾಗ ಊರಿಗೆ ಹೋಗುವುದೇ ಅಪರೂಪ ಹೊಲದಲ್ಲಿ ಶೇಂಗಾ ರಾಶಿ ಇದೆ ಅನ್ನೋ ಕಾರಣಕ್ಕೆ ನನ್ನ ತಂದೆ ಬಂದು ಹೋಗುವಂತೆ ಹೇಳಿದ್ದರು. ಅವರ ಮಾತಿಗೆ ಓ ಗೊಟ್ಟು ಹೊಲಕ್ಕೆ ಹೋಗಿದ್ದೇ ಬೇಸಿಗೆ ಬಿಸಿಲು ಇರುವುದರಿಂದ ಬಾಯಾರಿಕೆಯಾಗಿತ್ತು. ಹೊಲಕ್ಕೆ ಕಾಲಿಡುತ್ತಿದ್ದಂತೆ ಅಲ್ಲಿನ ಕೊಡವೊಂದರಲ್ಲಿ ನೀರು ತೆಗೆದುಕೊಂಡು ಗಟಗಟನೆ ಕುಡಿದುಬಿಟ್ಟೆ. ಅದನ್ನು ಲಿಂಗಾಯಿತ ಮಹಿಳೆ ನೋಡಿ ಈಡೀ ಜನರನ್ನು ಕೂಡಿಸಿ ತನ್ನ ಬಾಯಿಗೆ ಬಂದದ್ದೆಲ್ಲ ಬೈಯ್ದುಬಿಟ್ಟಳು. ಆ ಕೊಡವನ್ನು ತೆಗೆದುಕೊಂಡು ಹೋಗಿ ಬೆಂಕಿಯಲ್ಲಿ ಸುಟ್ಟು ಉಜ್ಜಿದ ಮೇಲೆ ನೀರನ್ನು ಕುಡಿಯಲು ಪ್ರಾರಂಭಿಸಿದರು.
ಇದರಿಂದ ರೊಚ್ಚಿಗೆದ್ದ ನಾನು ಮಾರನೇ ದಿನವೇ ಮತ್ತೆ ಹೊಲಕ್ಕೆ ಹೋದೆ. ಅವರೆಲ್ಲರೂ ಕೆಲಸದಲ್ಲಿ ನಿರತರಾಗಿದ್ದರು. ಮತ್ತೇ ಅದೇ ತಪ್ಪನ್ನು ಮಾಡಿಬಿಟ್ಟೆ ಅವರ ಹಾಸಿಗೆಯನ್ನು (ಕೌದಿ) ತೆಗೆದುಕೊಂಡು ಅದರ ಮೇಲೆ ಕುಳಿತುಬಿಟ್ಟೆ ಅದನ್ನು ನೋಡಿದ ಮಹಿಳೆಯಿಂದ ಸಹಿಸಲಾಗಲಿಲ್ಲ. ಮತ್ತೇ ಅದೇ ಆವೇಶದಲ್ಲಿ ಬಂದಳು. ಏನು ಮಾಡಲಾಗದ ಅಸಹಾಯಕನಂತೆ ನಿಂತುಬಿಟ್ಟೆ. ಇದನ್ನು ಕೂಡ ಬೆಂಕಿಯಲ್ಲಿ ಹಾಕಿ ಉಜ್ಜಿ ಪವಿತ್ರವಾಗುತ್ತದೆ ಎಂದೆ. ಈ ಉದ್ಧಟತನದ ಮಾತಿಗೆ ಸಿಟ್ಟಾದ ಮಹಿಳೆ, ನನ್ನ ತಂದೆಗೆ ಬಾಯಿಗೆ ಬಂದಂತೆ ಮಾತನಾಡಿಬಿಟ್ಟಳು.
ಇದರಿಂದ ಸಿಟ್ಟಾದ ನನ್ನ ಸಹೋದರರು ಬಾಸುಂಡೆ ಬರುವ ಹಾಗೇ ಹೊಡೆದು ಮತ್ತೆ ಕಳಿಸಿಕೊಟ್ಟರು. ಇದು ಜಾತಿಯ ಮುಖವಾಡ, ಆದರೂ ಆ ಕುತ್ಸಿತ ಮನಸ್ಸು ಶುದ್ಧವಾಗಲಿಲ್ಲ. ಜಾತಿ ಎಂಬುದು ಇನ್ನು ತನ್ನ ಕಬಂಧ ಬಾಹುಗಳನ್ನು ವಿಸ್ತರಿಸಿಕೊಳ್ಳುತ್ತಿದೆಯೇ ವಿನಹ ಅದರ ಪ್ರಾಬಲ್ಯ ಕಡಿಮೆಯಾಗಿಲ್ಲ. ಜಾತಿಯನ್ನು ಮೀರಬೇಕೆಂಬ ಪ್ರಯತ್ನಕ್ಕೆ ನಾಗರಿಕ ಸಮಾಜವೇ ಅಡ್ಡಿಯಾಗಿದೆ.
ದಲಿತರು ಮತ್ತು ಸಂಪ್ರದಾಯವಾದಿಗಳ ನಡುವೆ ದೊಡ್ಡ ಕಂದಕವೇ ಏರ್ಪಟ್ಟಿದೆ. ಆಧುನಿಕತೆಯನ್ನು ಒಪ್ಪಿಕೊಳ್ಳುತ್ತಲೇ ಜಾತಿ ವ್ಯವಸ್ಥೆಯನ್ನು ಪೋಷಿಸುವ ವಿದ್ಯಮಾನ ವ್ಯವಸ್ಥಿತವಾಗಿ ಮುಂದುವರಿಯುತ್ತಿದೆ. ಜಾತಿ ನಾಶವಾದರೆ ನಮ್ಮ ಅಸ್ತಿತ್ವಕ್ಕೆ ಅಪಾಯವಿದೆ ಎಂಬ ಒಂದು ವರ್ಗದವರ ಅವ್ಯಕ್ತ ಭಯ ಜಾತಿ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಕಾರಣವೂ ಇರಬಹುದು.

4 comments:

  1. I cant imagine such things happen even now. So disgusting.

    ReplyDelete
  2. Gramen bhagad duranth samasseyagide.

    ReplyDelete
  3. ಎರಡನೇಯ ದಿನ ಹೊಲಕ್ಕೆ ಹೋದಾಗ ಮತ್ತದೇ ತಪ್ಪು ಮಾಡಿದೆ ಎಂದು ಬರೆದುಕೊಂಡಿದ್ದೀರಿ. ಆದರೆ ನೀವು ಮಾಡಿದ್ದು ತಪ್ಪಲ್ಲ , ಅದು ನಿಮ್ಮ ಆಕ್ರೋಶ ಮತ್ತು ಪ್ರತಿಭಟನೆ ಎಂಬುದು ನನ್ನ ಭಾವನೆ.

    ReplyDelete
  4. ಹೊಲಸು ಮನಸುಗಳು ಹಾಗೆ ಮಾಲಗತ್ತಿಯವರೆ, ಅದನ್ನು ಸಹಿಸಿಕೊಳ್ಳಲುಬಾರದು

    ReplyDelete