Wednesday 20 June 2012

ಕನ್ನಡ ವರ್ಸಸ್ ಇಂಗ್ಲಿಷ್ ಯಾವುದು ಸರಿ...

ಕನ್ನಡ ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತಿದಂತೆ ನಮ್ಮ ಸರ್ಕಾರ ಮತ್ತು ಕನ್ನಡ ಪರ ಸಂಘಟನೆ ಮತ್ತು ಸಾಹಿತಿಗಳು ಏಕಾಏಕಿ ಜಾಗೃತರಾಗಿದ್ದಾರೆ. ಸರ್ಕಾರದ ಎಡಬಿಡಂಗಿ ಆದೇಶಗಳು ಒಂದು ಕಡೆಯಾದರೆ ಇದನ್ನು ವಿರೋಧಿಸುವ ಸ್ವಯಂ ಘೋಷಿತ ಸಾಹಿತಿಗಳು ಇನ್ನೊಂದು ಕಡೆ.
ಸರ್ಕಾರಿ ಶಾಲೆಗಳನ್ನು ಮುಚ್ಚಬೇಕೆಂದು ಆದೇಶ ನೀಡಿದ್ದ ಸರ್ಕಾರ ಕನ್ನಡಪರ ಸಂಘಟನೆಗಳು ಮತ್ತು ಸಾಹಿತಿಗಳ ವಿರೋಧದಿಂದಾಗಿ ಕೈಬಿಟ್ಟಿತ್ತಾದರೂ ಇಂಗ್ಲಿಷ್ ಮಾಧ್ಯಮ ಜಾರಿಗೆ ತರುವ ಮೂಲಕ ಈಡೇರಿಸಿಕೊಳ್ಳಲು ಹೊರಟಿದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ. ೬ನೇ ತರಗತಿಯಿಂದ ಸರ್ಕಾರ ಇಂಗ್ಲಿಷ್ ಮಾಧ್ಯಮ ಜಾರಿಗೆ ತರುವುದು ಎಂದರೇ ಕನ್ನಡದ ಮೇಲೆ ಸವಾರಿ ಮಾಡಿದಂತೆ. ಇಂಥ ಆದೇಶವನ್ನು ಹಿಂಪಡೆಯದಿದ್ದರೆ ಕನ್ನಡ ಪರ ಚಳುವಳಿಗಾರರೊಂದಿಗೆ ಗೋಕಾಕ್ ಮಾದರಿಯಲ್ಲಿ ಹೋರಾಟ ನಡೆಸುವುದಾಗಿ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಪುಂಡಲಿಕ್ ಹಾಲಂಬಿ ಘೋಷಿಸಿದ್ದಾರೆ. ಇದಕ್ಕೆ ಪ್ರಗತಿಪರ ಚಿಂತಕರಾದ ಡಾ.ಮರುಳಸಿದ್ದಪ್ಪ, ಪ್ರೊ.ಚಂದ್ರಶೇಖರ್ ಪಾಟೀಲ್ ಚಂಪ, ಪ್ರೊ.ಬರಗೂರು ರಾಮಚಂದ್ರಪ್ಪ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ.