Tuesday 6 March 2012

ಪ್ರಜಾಪ್ರಭುತ್ವದ ದೇಗುಲ ಅಪರಾಧಿಗಳ ಕೇಂದ್ರವಾಗುತ್ತಿದೆಯೇ?

ಎಂತೆಂಥ ಚಪಲ ಚನ್ನಿಗ ರಾಜಕಾರಣಿಗಳು ನಮ್ಮನ್ನು ಆಳು ತ್ತಿದ್ದಾರೆ. ವಾಹ್ ಕನ್ನಡ ತಾಯೇ ನೀನೇ ಧನ್ಯ.
ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಕುರಿತ ಗಹನ ವಿಚಾರಗಳಿಗೆ ವೇದಿಕೆ ಯಾಗಬೇಕಾದ ವಿಧಾನ ಸೌಧ, ಇಂದು ಅಪರಾಧಗಳ ಕೇಂದ್ರ ವಾಗುತ್ತಿದೆ. ರಾಜಕೀಯ ನೈತಿಕ ಮೌಲ್ಯಗಳ ಬೀಡಾಗಬೇಕಾಗಿದ್ದ ಶಕ್ತಿ ಕೇಂದ್ರದಲ್ಲಿ ಅತ್ಯಾ ಚಾರಿಗಳು, ಭ್ರಷ್ಟರು, ಗಣಿ ಲೂಟಿಕೋರರು, ಧನ ದಾಹಿಗಳೇ ತುಂಬಿ ತುಳುಕುತ್ತಿದ್ದಾರೆ. ಮಾನ ಮರ್ಯಾದೆ ಎಂಬುದು ಯಾವುದೋ ಪುಸ್ತಕದಲ್ಲಿ ಓದಿದಂತೆ ಭಾಸವಾಗುತ್ತಿದೆ. ಹಿಂದುತ್ವ, ವಿಭಿನ್ನ ಆಡಳಿತ, ಮರ್ಯಾದಾ ಪುರುಷೋತ್ತಮ ಶ್ರೀರಾಮನ ಹೆಸರಿನಲ್ಲಿ ಅಧಿಕಾರ ಗಿಟ್ಟಿಸಿಕೊಂಡ ರಾಮನ ಭಕ್ತರ ಕಾಮಪುರಾಣ ರಾಜ್ಯದ ಆರು ಕೋಟಿ ಜನರ ಮಾನ-ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಹಾಕಿದೆ. ಈ ಕಳಂಕಿತರು ಬಿಎಸ್‌ವೈ, ರೆಡ್ಡಿ, ಸಂಪಂಗಿ, ಹಾಲಪ್ಪ, ರೇಣುಕಾಚಾರ್ಯ, ಕೃಷ್ಣಯ್ಯಶೆಟ್ಟಿ, ಕಟ್ಟಾ ಅಂಡ್ ಸನ್ಸ್, ಮೊದಲಾದವರ ಸಾಲಿಗೆ ಕೃಷ್ಣ ಪಾಲೇಮಾರ್, ಲಕ್ಷ್ಮಣ ಸವದಿ, ಸಿ.ಸಿ. ಪಾಟೀಲ್ ಸೇರ್ಪಡೆಯಾಗಿದ್ದಾರೆ. ಅನಾಗರಿಕರಿಗೆ ಅಧಿಕಾರ ಸಿಕ್ಕರೆ ಏನಾಗುತ್ತದೆ ಎಂಬುದಕ್ಕೆ ನಾಡಿನ ಜನತೆಯ ಮಾನ ಹರಾಜಾದದ್ದೇ ಸಾಕ್ಷಿಯಾಗಿದೆ.
ಹಗ್ಗ ಕೊಟ್ಟು ಕೈಕಟ್ಟಿಸಿಕೊಂಡ ಜನತೆಗೆ ನೋಡಬಾರದುದೆಲ್ಲವನ್ನೂ ನೋಡಬೇಕಾದ ಅನಿವಾರ್ಯ ಪರಿಸ್ಥಿತಿ ಒದಗಿ ಬಂದಿದೆ. ಎಲ್ಲಾ ನೀತಿ ನಿಯಮಗಳನ್ನು ಗಾಳಿಗೆ ತೂರಿ ಮನಬಂದಂತೆ ವರ್ತಿಸುತ್ತಿರುವ ಬ್ಲೂಜೆಪಿ ಸದಸ್ಯರ ಕೊಳಕುತನದ ತನಿಖೆ ಯಾವ ಪುರುಷಾರ್ಥಕ್ಕಾಗಿ? ಪಕ್ಷೇತರರ ವಿಚಾರದಲ್ಲಿ ಒಂದು ಕ್ಷಣವೂ ಅವಕಾಶ ನೀಡದೆ ಸಂವಿಧಾನ ವಿರೋಧಿ ನೀತಿ ನಿಲುವು ತೆಗೆದುಕೊಳ್ಳುವುದರ ಮೂಲಕ ಐವರು ಪಕ್ಷೇತರರನ್ನು ಅನರ್ಹಗೊಳಿಸಿದ ಸಭಾಧ್ಯಕ್ಷರು, ಕರ್ನಾಟಕದ ಮಾನ ಮರ್ಯಾದೆಯನ್ನು ಹರಾಜು ಹಾಕಿದ ಮಹಾಶಯರ ಬೆಂಬಲಕ್ಕೆ ನಿಂತದ್ದು ಪಕ್ಷಪಾತಿಯಲ್ಲವೇ? ಸಂವಿಧಾನ ಬದ್ಧ ಹುದ್ದೆಗೆ ಮಾಡುತ್ತಿರುವ ಘೋರ ಕೃತ್ಯವಲ್ಲದೆ ಮತ್ತೇನು? ಸಭಾಧ್ಯಕ್ಷರು ಸಂವಿಧಾನ ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಗೌರವವಿದ್ದರೆ ಕ್ಷಣ ಮಾತ್ರವೂ ಅವರು ಆ ಹುದ್ದೆಯಲ್ಲಿರಬಾರದು. ಪಕ್ಷೇತರ ಶಾಸಕರ ವಿಷಯದಲ್ಲಿ ಸುಪ್ರೀಂಕೋರ್ಟ್ ಛೀಮಾರಿ ಹಾಕಿದೆ. ಆದರೆ ಡರ್ಟಿಪಿಕ್ಚರ್ ವಿಷಯದಲ್ಲಿ ನಾಡಿನ ಜನ ಛೀಮಾರಿ ಹಾಕುವುದಲ್ಲ. ಪೊರಕೆ ಸೇವೆ ಮಾಡುತ್ತಾರೆ. ಬಹುಮತ ಕಳೆದುಕೊಂಡಿದ್ದ ಬಿಜೆಪಿ ಸರ್ಕಾರವನ್ನು ಉಳಿಸುವ ಕಾರಣಕ್ಕಾಗಿ ತಮ್ಮ ಸ್ಥಾನಕ್ಕೆ ತಕ್ಕುದಲ್ಲದ ನಿಲುವನ್ನು ತೆಗೆದುಕೊಂಡು ಪಕ್ಷೇತರರನ್ನು ಸದಸ್ಯತ್ವದಿಂದ ಅನರ್ಹಗೊಳಿಸಿದ್ದೀರೆಂದು ಸುಪ್ರೀಂಕೋರ್ಟ್ ಟೀಕೆಗೆ ಗುರಿಯಾಗಿದ್ದ ಸ್ಪೀಕರ್ ಅವರಿಂದ ಕಾನೂನು ಪ್ರಕಾರ ಕ್ರಮ ನಿರಿಕ್ಷೀಸಲು ಸಾಧ್ಯವೇ? ಎಂಬ ಪ್ರಶ್ನೆ ಕಾಡದೆ ಇರದು. ಐವರು ಪಕ್ಷೇತರರು ಮತ್ತು ಹನ್ನೊಂದು ಬಿಜೆಪಿ ಸದಸ್ಯರನ್ನು ಏಕಾಏಕಿ ಸದಸ್ಯತ್ವದಿಂದ ಅನರ್ಹಗೊಳಿಸುವ ಮೂಲಕ ಬಿ.ಎಸ್.ವೈ ನೇತೃತ್ವದ ಬಿಜೆಪಿ ಸರ್ಕಾರವನ್ನು ಉಳಿಸುವ ಕೆಲಸವನ್ನು ಮಾಡಿದರು. ಯಾವುದೇ ಶಾಸಕರನ್ನು ಸಭಾಧ್ಯಕ್ಷರು ಅನರ್ಹಗೊಳಿಸಬೇಕಾದರೆ ೧೪ ದಿನಗಳ ಕಾಲಾವಕಾಶ ಕೊಡಬೇಕು ಎಂಬ ನಿಯಮವಿದೆ. ಈ ಅವಧಿಯಲ್ಲಿ ಶಾಸಕರು  ನೋಟಿಸ್‌ಗೆ ಉತ್ತರಿಸುವಲ್ಲಿ ವಿಫಲವಾದರೆ ಅವರ ಸದಸ್ಯತ್ವವನ್ನು ಅನರ್ಹಗೊಳಿಸಬಹುದಾಗಿದೆ.
ಆದರೆ ತಾವು ಆಯ್ಕೆಯಾಗಿ ಬಂದ ಪಕ್ಷದ ಋಣ ತಿರಿಸಲು ಸರ್ಕಾರವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು ಎಂಬ ಒಂದೇ ಕಾರಣದಿಂದ ರಾತ್ರೋರಾತ್ರಿ ಐವರು ಪಕ್ಷೇತರ ಶಾಸಕರು ಸೇರಿದಂತೆ ೧೧ ಬಿಜೆಪಿ ಪಕ್ಷದ ಶಾಸಕರ ಮನೆಯ ಗೋಡೆಯ ಮೇಲೆ ನೋಟಿಸ್ ಅಂಟಿಸಿ ಅಧಿವೇಶನಕ್ಕೆ ಹಾಜರಾಗದಂತೆ ನೋಡಿಕೊಂಡ ಸಭಾಧ್ಯಕ್ಷರು ಬಿಜೆಪಿ ಸರ್ಕಾರ ಉಳಿಸುವಲ್ಲಿ ಮೇಲುಗೈ ಸಾಧಿಸಿದರು. ಪಕ್ಷದಿಂದ ಆಯ್ಕೆಯಾದ  ಸದಸ್ಯರನ್ನು ಅನರ್ಹಗೊಳಿಸಿದ ಕ್ರಮ ನ್ಯಾಯೋಚಿತವಾಗಿತ್ತೇ ಇಲ್ಲವೋ ? ಅದು ಬೇರೆ ವಿಷಯ. ಆದರೆ ಪಕ್ಷೇತರರ ವಿಷಯದಲ್ಲಿ ಇದೇ ಮಾನದಂಡ ಅನುಸರಿಸಿದ್ದು ಮಾತ್ರ ಟೀಕೆಗೆ ಗುರಿಯಾಯಿತು. ಪಕ್ಷೇತರರು ಸರ್ಕಾರದಲ್ಲಿ ಅಧಿಕಾರ ಪಡೆದಾಕ್ಷಣ ಆಡಳಿತ ಪಕ್ಷದ ಸದಸ್ಯರಾಗುವುದಿಲ್ಲ ಅವರು ಬೇಕಾದಾಗ ತಮ್ಮ ಬೆಂಬಲವನ್ನು ಹಿಂದೆಗೆದುಕೊಳ್ಳಲು ಸಂಪೂರ್ಣ ಸ್ವತಂತ್ರರು. ಆದರೆ ಆ ಸ್ವಾತಂತ್ರ್ಯವನ್ನು ಕಸಿದುಕೊಂಡ ಸಭಾಧ್ಯಕ್ಷರು ೬ ತಿಂಗಳು ವನವಾಸಕ್ಕೆ ಅಟ್ಟಿದರು. ನೈಸರ್ಗಿಕ ನ್ಯಾಯವನ್ನು ಎತ್ತಿ ಹಿಡಿಯಬೇಕಾದ ಸ್ಪೀಕರ್ ಪಕ್ಷಪಾತ ನಿರ್ಣಯ ತೆಗೆದುಕೊಂಡರು.  ಪಕ್ಷೇತರರೂ ಸೇರಿದಂತೆ ೧೧ ಅನರ್ಹ ಶಾಸಕರು ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದಾಗ ಸ್ಪೀಕರ್ ಪಕ್ಷಪಾತ ಮತ್ತು ನೈಸರ್ಗಿಕ ನ್ಯಾಯ ಪಾಲಿಸಿಲ್ಲ ಎಂದು ಗಂಭೀರವಾಗಿ ಪರಿಗಣಿಸಿದ ಕೋರ್ಟ್ ಸಭಾಧ್ಯಕ್ಷರನ್ನು ತರಾಟೆಗೆ ತೆಗೆದುಕೊಡಿತು. ಸಭಾಧ್ಯಕ್ಷರು ಸಂವಿಧಾನ ವಿರೋಧಿ ನಿಲುವು ತೆಗೆದುಕೊಂಡಿದ್ದು ಇದೇ ಮೊದಲೇನಲ್ಲ. ೨೦೦೪ರಲ್ಲಿ ಎನ್. ಧರ್ಮಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ ಜೆಡಿಸ್ ಕಾರ್ಯಾಧ್ಯಕ್ಷರಾಗಿದ್ದ ಎಚ್.ಡಿ. ಕುಮಾರಸ್ವಾಮಿಯವರೊಂದಿಗೆ ೪೦ ಶಾಸಕರು ಬೆಂಬಲ ಹಿಂತೆಗೆದುಕೊಂಡು  ಬಿಜೆಪಿಯೊಂದಿಗೆ ಸಮ್ಮಿಶ್ರ ಸರ್ಕಾರ ರಚಿಸಲು ಹೊರಟಾಗ ಇಂಥದೆ ಪರಿಸ್ಥಿತಿ ಉದ್ಭವಿಸಿತ್ತು ಜೆಡಿಎಸ್ ಅಧ್ಯಕ್ಷರಾರಾಗಿದ್ದ ಎಂ.ಪಿ ಪ್ರಕಾಶ ಪಕ್ಷದಿಂದ ಹೊರಹೋದ ಶಾಸಕರನ್ನು ಉಚ್ಛಾಟಿಸಲಾಗಿದೆ ಮತ್ತು ಅವರು ಜೆಡಿಎಸ್ ಸದಸ್ಯರಲ್ಲ ಎಂದು ರಾಜ್ಯಪಾಲರಿಗೆ ಪತ್ರ ಬರೆದರು. ಆದರೆ ಆ ಪತ್ರ ನ್ಯಾಯವಾಗಿ ವಿಧಾನಸಭಾಧ್ಯಕ್ಷರಿಗೆ ಹೋಗಬೇಕಾಗಿತ್ತು. ಪ್ರತಿಪಕ್ಷ ಕಾಂಗ್ರೆಸ್ ವಿಧಾನಸಭೆಯಲ್ಲಿ ಕುಮಾರಸ್ವಾಮಿ ನೇತೃತ್ವದ ಗುಂಪಿನ ಸ್ಥಾನಮಾನ ಏನು ಎಂದು ಪ್ರಶ್ನಿಸಿತ್ತು. ಪರಿಶೀಲಿಸಿ ಉತ್ತರ ನೀಡುವುದಾಗಿ ಹೇಳಿದ ವಿಧಾನಸಭಾಧ್ಯಕ್ಷ ಕೆ.ಆರ್ ಕೃಷ್ಣ ಅವರು, ಕೊನೆವರೆಗೂ ಅಂದರೆ ಅಪವಿತ್ರ ಮೈತ್ರಿಯ ಸರ್ಕಾರ ಅಧಿಕಾರದಿಂದ ಇಳಿಯುವರೆಗೂ ಕೃಷ್ಣ ಅವರು ತೀರ್ಪು ನೀಡಲೇ ಇಲ್ಲ.
ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ ದೇವೆಗೌಡರು ೪೦ ಶಾಸಕರು ತಮ್ಮ ಪಕ್ಷದ ಸದಸ್ಯರೇ ಅಲ್ಲ ಅವರನ್ನು ಅನರ್ಹಗೊಳಿಸುವಂತೆ ರಾಜ್ಯಪಾಲರಿಗೆ ಪತ್ರ ನೀಡಿಲಾಗಿದೆ ಎಂದು ಹೇಳುವ ಮೂಲಕ ಒಂದು ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಉರುಳಿಸಿದರು. ಒಂದು, ಎಚ್.ಡಿ. ಕುಮಾರ ಸ್ವಾಮಿಯವರು ಮುಖ್ಯಮಂತ್ರಿಯಾಗಿ ಎರಡನೆಯದಾಗಿ, ಕೋಮುವಾದಿ ಬಿಜೆಪಿಯೊಂದಿಗೆ ಕೈಜೋಡಿಸಿ ರಾಷ್ಟ್ರ ಮಟ್ಟದಲ್ಲಿ  ಟೀಕೆಗೆ ಗುರಿಯಾಗುವ ಅಪಾಯ ಹಾಗೂ ತಾವು ಜಾತ್ಯತೀತ ನಿಲುವಿಗೆ ಬದ್ಧ ಎಂದು ತೋರಿಸಿಕೊಳ್ಳಲು ಉಚ್ಛಾಟನೆಯ ನಾಟಕವಾಡಿದರು. ಅಂದಿನ ಸಭಾಧ್ಯಕ್ಷರು ಯಾವುದೇ ಕ್ರಮತೆಗೆದುಕೊಳ್ಳದೆ ಸಂವಿಧಾನಕ್ಕೆ ಅಪಚಾರವೆಸಗಿದರು. ಪಕ್ಷದ ಕೈಗೊಂಬೆಯಾಗಿ ಕೆಲಸ ಮಾಡಿದರು. ಇಲ್ಲಿಯೂ ನೈಸರ್ಗಿಕ ನ್ಯಾಯ ಎಂಬುದು ಮರಿಚಿಕೆಯಾಯಿತು. ಸರ್ಕಾರವೇ  ವಿಸರ್ಜನೆಯಾಗಿ ಹೋದ ಪರಿಣಾಮ ಈ ಶಾಸಕರ ವಿರುದ್ಧ ಯಾವುದೇ ಕ್ರಮಕೈಗೊಳ್ಳಲಿಲ್ಲ. ಅದೇ ಹಾದಿಯನ್ನು ಇಂದಿನ ಸಭಾಧ್ಯಕ್ಷರು ಅನುಸರಿಸುತ್ತಿದ್ದಾರೆ.  ಬಿಜೆಪಿ ಎಂದರೆ ಹಿಂದುತ್ವದ ಬಗ್ಗೆ ಗಟ್ಟಿ ನಿಲುವು. ರಾಷ್ಟ್ರ ಪ್ರೇಮದ ಪಾಠ ಈ ಪಕ್ಷದ ತಿರುಳಾಗಿತ್ತು.  ದೇಶ ಸೇವೆಗೆ ಕಳಕಳಿ, ಶ್ರದ್ಧಾಮನೋಭಾವನೆ ಇತ್ತು. ಭಾರತೀಯ ಸಂಸ್ಕತಿಯ ಪ್ರತೀಕ ಎಂಬ ಮಾತು ಕೇಳಿ ಬರುತ್ತಿತ್ತು. ದೇಶದ ಸಂಸ್ಕೃತಿಯನ್ನು ಗುತ್ತಿಗೆ ಪಡೆದವರಂತೆ ಮಾತನಾಡುತ್ತಿದ್ದ ಕೆಲವು ಪಕ್ಷದ ಘೋಷಿತ ನಾಯಕರ ಮುಖವಾಡ ಕಳಚಿ ಬಿದ್ದಿದೆ. ಯಾವ ಹುಡುಗಿಯರೊಂದಿಗೆ ಮಾತನಾಡಬೇಕೆಂದು ಕಟ್ಟಪ್ಪಣೆ ಮಾಡುತ್ತಾರೆ. ಸಂಸ್ಕೃತಿಯ ಹೆಸರಿನಲ್ಲಿ ಪಬ್ ಮೇಲೆ ದಾಳಿ ಮಾಡುತ್ತಾರೆ. ಅರೆಬರೆ ಬಟ್ಟೆ ಧರಿಸುವುದೇ ಅತ್ಯಾಚಾರಕ್ಕೆ ಕಾರಣವೆಂದು ವ್ಯಾಖ್ಯಾನಿಸುತ್ತಾರೆ.
ಆದರೆ! ಆದರೆ!!
ಹಿಂದೂ ಸಂಸ್ಕೃತಿ ವಕ್ತಾರಂತೆ ಶ್ರೀರಾಮನ ಪಾದುಕೆಗಳನ್ನು ಹೊತ್ತುಕೊಂಡು ರಾಮನಾಮ ಜಪಿಸುವ ಈ ಜನರು ಬೆತ್ತಲಾಗುತ್ತಿದ್ದಾರೆ. ಅವೆಲ್ಲಾ ತತ್ವ ಸಿದ್ಧಾಂತಗಳಿಗೆ ತಿಲಾಂಜಲಿ ನೀಡಲಾಗಿದೆ. ಇವೆಲ್ಲವನ್ನೂ ನೋಡಿದಾಗ ಸಂಸ್ಕೃತಿಯ ಬಗೆಗಿನ ನಿಲುವು ಗೊತ್ತಾಗುತ್ತದೆ. ಆಚರಿಸುತ್ತಿರುವುದು ಸಂಸ್ಕೃತಿ ಅಲ್ಲ ವಿಕೃತಿ ಎಂದು. ಬಹುಮತ ಇದೆ ಎಂಬ ಕಾರಣಕ್ಕೆ ಆನೆ ನಡೆದಿದ್ದೇ ಹಾದಿ ಎಂಬಂತೆ ಬ್ಲೂಜೆಪಿಗರು ನಡೆದರು ಅದರ ಪ್ರತಿಫಲವಾಗಿ ಇಂದು ನಾಡಿನ ಜನತೆ ಹಿಡಿಶಾಪ ಹಾಕುತ್ತಿದ್ದಾರೆ. 
ಅರವತ್ತು ವರ್ಷ ಆಡಳಿತ ನಡೆಸಿದ ಪಕ್ಷಗಳಿಗಿಂತ ವಿಭಿನ್ನ ಆಡಳಿತ ನೀಡುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿಗರು ತಮ್ಮ ಮೂಲ ಸಿದ್ಧಾಂತವನ್ನು ಮರೆತು ಮನಬಂದಂತೆ ಕುಣಿಯತೊಡಗಿದರು. ೬೦ ವರ್ಷದಲ್ಲಿ ಮಾಡಲಾರದ ಹಗರಣಗಳನ್ನು ಕೇವಲ ಮೂರು ವರ್ಷದಲ್ಲಿ ಮಾಡಿ ಮುಗಿಸಿದರು. ಗ್ರಾಮೀಣ ಪ್ರದೇಶದಲ್ಲಿ ಚಿನ್ನಿದಾಂಡು ಆಡುವ ಮಕ್ಕಳಂತೆ ತಾವೂ ಮಾಡಿದ ತಪ್ಪಿನ ಅರಿವಿಲ್ಲದೆ ಹೇಳಿ ಬಿಡುವ ನಮ್ಮ ಸಚಿವತ್ರಯರು ನಾನೇನು ಹೆಚ್ಚು ನೋಡಲಿಲ್ಲ ಎರಡು ಸೆಕಂಡ್ ಮಾತ್ರ ನೋಡಿದೆ ಅದೇನು ಮಹಾತಪ್ಪಲ್ಲ ಎಂದು ಸಮರ್ಥಿಸಿಕೊಳ್ಳುವ ರೀತಿ ನೋಡಿದ್ರೆ ಇವರಿಗೇನಾದರೂ ಮಾನ ಮರ್ಯಾದೆ ಎಂಬ ಪದದ ಅರ್ಥವಾದರೂ ಗೊತ್ತಿದೆಯಾ? ರಾಜ್ಯದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ವೇದಿಕೆಯಾದ ವಿಧಾನಸೌಧ ಪವಿತ್ರ ದೇವಸ್ಥಾನ, ಈ ದೇವಸ್ಥಾನದ ಮೇಲಿನ ನಂಬಿಕೆ ಅಪಾರವಾದದು ಆದರೆ ಅದರ ಪಾವಿತ್ರ್ಯವನ್ನು ಹರಾಜು ಹಾಕುತ್ತಿರುವ ಭಟ್ಟಂಗಿಗಳಿಗೆ ಯಾವ ಶಿಕ್ಷೆ ಕೊಡಬೇಕು?
ವಿಧಾನಸಭೆ ದೇವಸ್ಥಾನವಾದರೆ ಅಲ್ಲಿರುವ ಜನಪ್ರತಿನಿಧಿಗಳನ್ನು ಪೂಜಾರಿಗಳೆಂದು ತಿಳಿದುಕೊಂಡಿದ್ದಾರೆ. ಆದರೆ ಈ ಪೂಜಾರಿಗಳೇ ಹಾದಿ ತಪ್ಪಿ ಬೀದಿ ಹಿಡಿದಾಗ ಏನಾಗುತ್ತದೆ ಎಂಬುದಕ್ಕೆ ಸಚಿವತ್ರಯರ ಕಾಮಚಪಲವೇ ಸಾಕ್ಷಿಯಾಗಿದೆ.
ಈ ಕಾಮಪಿಪಾಸುಗಳ ಘನಘೋರ ಅಪರಾಧ ಖಂಡಿಸಬೇಕಾದ ಆಡಳಿತ ಪಕ್ಷ ಯಾರೂ ಮಾಡದ್ದನ್ನೇನೂ ಅವರು ಮಾಡಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಿರುವುದು ಮಾತ್ರ ದುರಂತ. ಯಾರೂ ಮಾಡದೇ ಇರುವುದನ್ನು ಅವರು ಮಾಡಿಲ್ಲ ಎನ್ನುವದೇನೋ ಸರಿ. ಆದರೆ ಪ್ರಶ್ನೆ ಇರುವುದು ತಪ್ಪಿನ ಬಗ್ಗೆ ಅಲ್ಲ ಮಾಡಿದ ಜಾಗದ ಬಗ್ಗೆ. ಇಂಥ ಎಡಬಿಡಂಗಿ ಶಾಸಕರನ್ನು ಸಚಿವ ಸ್ಥಾನದಿಂದ ತೆಗೆದರೆ ಸಾಲದು ವಿಧಾನಸಭಾ ಸದಸ್ಯತ್ವವವನ್ನು ರದ್ದುಗೊಳಿಸಬೇಕು. ಜೊತೆಗೆ ಯಾವುದೇ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸದಂತೆ ಕಪ್ಪುಪಟ್ಟಿಯಲ್ಲಿ ಸೇರಿಸಬೇಕು. ಅಧಿಕಾರಿಗಳು ಫೋನಿನಲ್ಲಿ ಮಾತನಾಡಿದರೂ ಎನ್ನುವ ಕಾರಣಕ್ಕೆ ಅವರನ್ನು ಅಮಾನತು ಮಾಡುವ ಈ ಸಚಿವರು, ತಮ್ಮ ಸಹದ್ಯೋಗಿಗಳು ಮಾಡಿದ ಘನಂದಾರಿ ಕೆಲಸಕ್ಕೆ ಸಮರ್ಥನೆ ಬೇರೆ ಮಾಡಿಕೊಳ್ಳುತ್ತಿದ್ದಾಲ್ಲ ಯಾವ ಪುರುಷಾರ್ಥಕ್ಕಾಗಿ? ತಪ್ಪು ಸಮರ್ಥಿಸಿಕೊಳ್ಳುವುದು ಕೂಡ ತತ್ವ ಸಿದ್ಧಾಂತವೇ? ನೈತಿಕತೆ ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡುವವರೇ ಹಾಗಿದ್ದರೆ ಕಳಂಕಿತರನ್ನು ಸಮರ್ಥಿಸಿಕೊಳ್ಳದೆ ಆಡಳಿತ ಪಕ್ಷದ ಸದಸ್ಯರೇ ಛೀಮಾರಿ ಹಾಕಬಹುದಾಗಿತ್ತು. ಕ್ಷಣ ಮಾತ್ರವೂ ಪಕ್ಷದಲ್ಲಿ ಇಟ್ಟುಕೊಳ್ಳದೆ ಉಚ್ಛಾಟಿಸಬಹುದಿತ್ತು ಇದೆಲ್ಲವನ್ನು ಬಿಟ್ಟು ಯಾರೂ ಮಾಡಲಾರದ್ದೇನೂ ಮಾಡಿಲ್ಲ. ತಮ್ಮ ಮನಸಾಕ್ಷಿಯಾಗಿ ಹೇಳಿ ಎಂದು ಕಳಂಕಿತ ಶಾಸಕರನ್ನು ಸಮರ್ಥಿಸಿಕೊಳ್ಳಲು ಮುಂದಾಗಿರುವುದು ನೋಡಿದರೆ ಇವರಿಗೆ ಯಾವುದೇ ತತ್ವವೂ ಇಲ್ಲ ಸಿದ್ಧಾಂತ ಮೊದಲೇ ಗೊತ್ತಿಲ್ಲ.
ತನಿಖೆ ಏಕೆ? ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಮಾಜಿ ಸಚಿತ್ರಯರು ಮಾಡಿದ ಅಪರಾಧ ಇಡೀ ನಾಡಿನಾದ್ಯಂತ ನೋಡಿ ಹಿಡಿ ಶಾಪ ಹಾಕಿದ್ದಾರೆ ಇಷ್ಟೆಲ್ಲಾ ಸಾಕ್ಷ್ಯಾಧಾರಗಳು ಇದ್ದರೂ ಕೂಡ ಸದನ ಸಮಿತಿ ಎಂಬ ಕಣ್ಣೊರೆಸುವ ತಂತ್ರ ಮಾಡುತ್ತಿರುವುದು ಜನ ಸಹಿಸಲಾರರು. ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ವರ್ತಿಸುತ್ತಿರುವ ಆಡಳಿತ ಪಕ್ಷ ಯಾಕೆ ದಾರಿ ತಪ್ಪಿದೆ. ಅವರದ್ದೇನೂ ತಪ್ಪಿಲ್ಲ ಅಧಿಕಾರದ ಅಮಲು ದಾರಿ ತಪ್ಪಿಸುತ್ತದೆ. ಈ ತನಿಖಾ ಸಮಿತಿಯಿಂದ ತನಿಖೆ ಮಾಡಿಸುವುದಾದರೂ ಏನು? ತನಿಖೆ ಮಾಡುವಂತ ವಿಷಯವೆಲ್ಲಾ ಮೊದಲಿಗೆ ಬಹಿರಂಗವಾಗಿದೆ ಅಂದ ಮೇಲೆ ತನಿಖೆ ಎಂಬ ಪ್ರಶ್ನೆ ಉದ್ಬವಿಸದು. ಅವರು ಅಶ್ಲೀಲ ಚಿತ್ರಗಳನ್ನು ನೋಡಿಲ್ಲ ಎನ್ನುವುದಾದರೆ ರಾಜೀನಾಮೆ ನೀಡಿದ್ದಾರೂ ಯಾಕೆ?  ಈ ತನಿಖೆಯ ಸಾಕ್ಷಿಯಾಧಾರಗಳಿಗೆ ಮತ್ತೆ ಅದೇ ವೀಡಿಯೋ ಕ್ಲಿಪ್‌ಗಳನ್ನು ಅವಲಂಬಿಸಬೇಕಲ್ಲವೇ? ತನಿಖೆ ಎನ್ನುವುದಾದರೆ ನಿಷಕ್ಷಪಾತವಾಗಿ ನಡೆಯುತ್ತದೆಯೇ ಎಂಬುದೇ ಯಕ್ಷಪ್ರಶ್ನೆ ತನಿಖಾ ಸಮಿತಿಗೆ ಆಡಳಿತ ಪಕ್ಷದವರ ಅಧ್ಯಕ್ಷಗಿರಿ ಈ ಅಧ್ಯಕ್ಷರಿಂದ ಸತ್ಯಾಂಶ ಹೊರ ಬರುತ್ತದೆಯೇ? ತನಿಖಾ ಸಮಿತಿಗೆ ಅಂಟಿಕೊಂಡು ಕುಳಿತರೆ ಅಪರಾಧಿಗಳು ಶೇಪ್ ಎನ್ನುವುದು ಮಾತ್ರ ಸತ್ಯ. ತನಿಖೆ ಪಾರದರ್ಶಕವಾಗಬೇಕಾದರೆ ಹಾಗೂ ಕಳಂಕಿತರ ಅಪರಾಧ ಸಾಬೀತಾಗಬೇಕಾದರೆ ವಿಪಕ್ಷದ ಸದಸ್ಯರನ್ನು ಸಮಿತಿ ಮುಖ್ಯಸ್ಥರನ್ನಾಗಿ ನೇಮಿಸಬೇಕು ಇಲ್ಲವಾದರೆ ಪಕ್ಷೇತರ ಶಾಸಕರಿಗೆ ಈ ಜವಾಬ್ದಾರಿ ಕೊಡಬೇಕು ಅಂದಾಗ ಮಾತ್ರ ನಿಷ್ಪಕ್ಷಪಾತ ತನಿಖೆ ನಡೆಯುತ್ತದೆ ಇಲ್ಲವಾದರೆ ಹತ್ತರಲ್ಲಿ ಇದು ಒಂದು ಎನ್ನುವಂತಾಗುತ್ತದೆ.
ಅಭಿವೃದ್ಧಿ ಹೆಸರಿನಲ್ಲಿ ಹಗಲು ದರೋಡೆಗೆ ಇಳಿದಿರುವ ಈ ಸಚಿವರು ವಿಭಿನ್ನ ಆಡಳಿತದ ಪರಿಕಲ್ಪನೆ ಮುಂದಿ ಟ್ಟುಕೊಂಡು ಅಧಿಕಾರಕ್ಕೆ ಬಂದ ಈ ಸರ್ಕಾರದ ಅವಧಿಯಲ್ಲಿ ಹಿಂದೆಂದೂ ಕಂಡು ಕೇಳದಷ್ಟು ಅವ್ಯವಹಾರ ನಡೆಯುತ್ತಿದೆ. ಭ್ರಷ್ಟಾಚಾರ, ಸ್ವಜನಪಕ್ಷಪಾತ ಮೀತಿ ಮೀರಿದೆ. ಸ್ವತಃ ಮಾಜಿ ಮುಖ್ಯಮಂತ್ರಿಗಳೇ ನಾನಾ ಹಗರಣಗಳಲ್ಲಿ ಸಿಲುಕಿಕೊಂಡು ಅಧಿಕಾರ ಕಳೆದುಕೊಂಡಿದ್ದಾರೆ. ಸರ್ಕಾರದಲ್ಲಿ ಕಳ್ಳರು, ಸುಳ್ಳರು, ಬ್ಯಾಂಕ್ ವಂಚಕರು, ಭೂಗಳ್ಳರು, ಅತ್ಯಾಚಾರಿಗಳು, ಲಂಚಕೋರರು, ಕಳ್ಳ ಸಾಗಣೆದಾರರು ತುಂಬಿ ತುಳುಕುತಿದ್ದಾರೆ ಇವರೇನಾ? ವಿಭಿನ್ನ ಸರ್ಕಾರದ ಮಂತ್ರಿ ಮಹೋದಯರು? ಇಂಥಹ ಸರ್ಕಾರವನ್ನು ಸಮರ್ಥಿಸಿಕೊಳ್ಳಲು ಕೆಲವು ಢೋಂಗಿ  ಮಠಾಧೀಶರು ತಮ್ಮ ಕೈಚಳಕ ತೊರಿಸುತ್ತಿದ್ದದ್ದು ಒಂದು ಕಡೆಯಾದರೆ ಸರ್ಕಾರದಿಂದ ಉದಾರ ಅನುದಾನ ಪಡೆದು ರಾಜಕೀಯ ಮಿಶ್ರಿತ ಧಾರ್ಮಿಕ ನಾಯಕರಾಗಿ ಪೊಸು ಕೊಡುತ್ತಿದ್ದದ್ದು ಇನ್ನೊಂದು ಕಡೆ. ಪ್ರಜಾಪ್ರಭುತ್ವದ ಘನತೆಗೆ ಧಕ್ಕೆ ತಂದದ್ದಲ್ಲದೆ ಅಂಥ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ನೈತಿಕತೆಯನ್ನೇ ಮರೆತರು. ದಂಡನಾಯಕರೇ ಹೀಗಿರುವಾಗ ಸಂಪುಟದ ಸಚಿವರು ಹೇಗಿರಬಹುದು. ಇಂತಹ ಹಗರಣಗಳು ಈಗ ಸಕರಾತ್ಮಕವಾಗಿ ಕಂಡರೂ ಮುಂದಾಗುವ ಅತಂತ್ರ ಸ್ಥಿತಿಗೆ ಸರ್ಕಾರವೇ ಭವಿಷ್ಯವನ್ನು ಬರೆದುಕೊಳ್ಳುತ್ತಿದೆ. ಹಣ ಮತ್ತು ಅಧಿಕಾರದಿಂದ ಎಲ್ಲ ಹಗರಣಗಳನ್ನು ಮುಚ್ಚಿ ಹಾಕಬಹುದು ಎಂಬ ಅವರ ಭ್ರಮೆ  ಅವರಿಗೆ ಮುಳುವಾಗದೆ ಇರದು. ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುತ್ತಿದ್ದ ಬಿಜೆಪಿ ನಾಯಕರ ಧ್ವನಿ ಕ್ಷೀಣಿಸಿದೆ. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದು ಕೇವಲ ಹಗರಣಗಳ ಮೂಲಕವೇ ಜನಪ್ರಿಯವಾದ ಪಕ್ಷ ಎಂದರೆ ಬಿಜೆಪಿಯಾಗಿ ಹೊರಹೊಮ್ಮಿದೆ.