Sunday 27 January 2013

ಗಾಂಧಿ ಕೊಂದ ಗೋಡ್ಸೆ ಓದಿದ್ದು ಎಲ್ಲಿ...

ಮೈಸೂರು ಹುಲಿ ಟಿಪ್ಪು ಸುಲ್ತಾನ್ ವಿವಿಯನ್ನು ರಾಜ್ಯದಲ್ಲಿ ಸ್ಥಾಪನೆ ಮಾಡುವುದಾಗಿ ಕೇಂದ್ರ ಸಚಿವ ರಹೆಮಾನ್ ಖಾನ್ ಘೋಷಿಸುತ್ತಿದ್ದಂತೆ ಪರವಿರೋಧ ಚರ್ಚೆಗಳು ವ್ಯಾಪಕವಾಗಿ ನಡೆದಿವೆ. ರಾಜ್ಯದಲ್ಲಿ ಟಿಪ್ಪು ವಿವಿ ಸ್ಥಾಪಿಸಿದರೆ ಅದು ಉಗ್ರರ ತಾಣವಾಗುತ್ತದೆ ಎಂದೆಲ್ಲ ವ್ಯಾಖ್ಯಾನಿಸಲಾಗತ್ತಿದೆ. ವಿವಿ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ ಎಂದು ರಾಜ್ಯಾದ್ಯಂತ ಹಿಂದೂಪರ ಸಂಘಟನೆಗಳಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿದೆ.
ಈ ಸಂಘಟನೆಗಳು ಜಾತಿ ಮತ್ತು ಧರ್ಮಾಧಾರಿತ ವಿವಿಯನ್ನು ವಿರೋಧಿಸಲಿ ಆದರೆ ವಿವಿಗೆ ಟಿಪ್ಪು ಹೆಸರು ವಿರೋಧಿಸುವುದು ಪೂರ್ವಾಗ್ರಹ ಪೀಡಿತರಾಗಿದ್ದಾರೆ ಎಂಬುದು ಮೇಲ್ನೋಟಕ್ಕೆ ತೋರುತ್ತದೆ. ಇವರು ಕೊಡುವ ಕಾರಣಗಳು ನೋಡಿದರೆ ವೀರ ಸೇನಾನಿಗೆ ಅವಮಾನ ಮಾಡುತ್ತಿದ್ದಾರೆ. ಅದೇ ಟಿಪ್ಪು ಸುಲ್ತಾನ್ ಒಬ್ಬ ಹಿಂದೂವಾಗಿದ್ದರೆ ಅವನೊಬ್ಬ ಮಹಾನ್ ಸೇನಾನಿ ಎಂದು ಜಂಭ ಕೊಚ್ಚಿಕೊಂಡು ಅದೇ ಹೆಸರಿನಲ್ಲಿ ವಿವಿ ಸ್ಥಾಪನೆ ಮಾಡುವಂತೆ ಒತ್ತಾಯಿಸುತ್ತಿದ್ದರು ಎನ್ನುವುದರಲ್ಲಿ ಸಂಶಯವೇ ಬೇಡ ಎಂದೆನಿಸುತ್ತದೆ ಅಲ್ಲವೇ.
ಟಿಪ್ಪು ವಿವಿಯನ್ನು ವಿರೋಧಿಸುವ ಎಲ್ಲಾ ಹೋರಾಟಗಾರರು ಟಿಪ್ಪುವಿನ ನೈಜ ಇತಿಹಾಸ ಅರಿತವರಲ್ಲ. ಇತಿಹಾಸ ಎಂದರೆ ಚಿದಾನಂದ ಮೂರ್ತಿ, ಎಸ್.ಎಲ್. ಭೈರಪ್ಪ ಬರೆದ ಪುಸ್ತಕಗಳೆಂದೇ ಇವರು ಭಾವಿಸಿದಂತಿದೆ. ಅದಕ್ಕಾಗಿ ಟಿಪ್ಪುವಿನ ಹೆಸರನ್ನು ವಿರೋಧಿಸು ತ್ತಿದ್ದಾರೆ. ಟಿಪ್ಪು ಅಲ್ಪಸಂಖ್ಯಾತ ಜನಾಂಗಕ್ಕೆ ಸೇರಿದವರು ಎನ್ನುವ ಒಂದೇ ಕಾರಣಕ್ಕಲ್ಲವೇ?
ಇತಿಹಾಸ ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು ಎಂಬ ಅಂಬೇಡ್ಕರ್ ವಾಣಿಯಂತೆ ಪೂರ್ವಗ್ರಹ ಪೀಡಿತ ಮನಸ್ಸುಳ್ಳ ಸಂಶೋಧಕರು ಇತಿಹಾಸಕಾರರಾಗುವುದಿಲ್ಲ. ಅವರು ಸಂಶೋಧಕರಾಗಿಯೇ ಉಳಿಯುತ್ತಾರೆ.
ಕ್ರಿ.ಶ.೧೭೨೧ರಿಂದ ೧೭೮೨ರವರೆಗೆ ಟಿಪ್ಪು ಓರ್ವ ಸೈನಿಕನಾಗಿ ಮೈಸೂರ ಅರಸರ ಅರಮನೆ ಸೇರಿ ಇಮ್ಮಡಿ ಚಿಕ್ಕಕೃಷ್ಣರಾಜ ಒಡೆಯರ ಮಂತ್ರಿಯಾದ ನಂಜರಾಜ ಅರಸರ ವಿಶ್ವಾಸವನ್ನು ಗಳಿಸಿದ್ದನು.
ದಿಂಡಿಗಲ್ ಮೇಲೆ ದಾಳಿ ಮಾಡಿದ ನಂತರ ಪೌಜುದಾರ್ ಪಟ್ಟವನ್ನು ಗಳಿಸಿದ ಸಮಯಾನುಸಾರ ಬಂದ ಎಡರು ತೊಡರು ಗಳನ್ನು ಎದುರಿಸಿ ೧೭೬೨ರ ಸುಮಾರಿಗೆ ಮೈಸೂರ ಅರಸರನ್ನು ನಿಮಿತ್ತ ಮಾತ್ರ ರಾಜರಾಗಿರಿಸುವುದರಲ್ಲಿ ಯಶಸ್ವಿಯಾಗಿದ್ದ.
ಟಿಪ್ಪು ಆಡಳಿತ ಅವಧಿಯಲ್ಲಿ ಕೊಡಗಿನಲ್ಲಿ ೭೧ ಸಾವಿರ ಹಿಂದೂಗಳನ್ನು ಮತಾಂತರ ಮಾಡಿದ್ದ ಎಂಬ ಊಹಾಪೋಹವನ್ನು ಇಂದಿನ ಸಂಶೋಧಕರು ಮಾಡುತ್ತಿದ್ದಾರೆ. ಸತ್ಯವನ್ನು ಅರಿಯದ ಸಂಶೋಧಕರಿಂದ ಏನು ತಿಳಿಯಲು ಸಾಧ್ಯ? ಅಂದಿನ ಸಂದರ್ಭದಲ್ಲಿ ಅಂದರೆ ೧೭೯೨ರಲ್ಲಿ ಕೊಡಗಿನಲ್ಲಿ ಅಷ್ಟು ಜನಸಂಖ್ಯೆಯೇ ಇರಲಿಲ್ಲ. ೧.೨೪ ಸಾವಿರದಷ್ಟಿತ್ತು ಎಂದು ದಾಖಲೆಗಳು ಹೇಳುತ್ತಿವೆ. ಇದಕ್ಕೆ ಪುಷ್ಠಿ ಎಂಬಂತೆ ೭೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕೊ. ಚನ್ನಬಸಪ್ಪನವರು ಸಂಶೋಧನೆಯಿಂದ ಸಾಬೀತುಪಡಿಸಿದ್ದಾರೆ.
ಆದರೆ ಹಿರಿಯರಾದ ಚಿದಾನಂದಮೂರ್ತಿಯಂತಹ ಸಂಶೋ ಧಕರು ಏಕೆ ಸುಳ್ಳು ಸೃಷ್ಟಿಸುತ್ತಿದ್ದಾರೆ? ಇದು ಮುಸ್ಲಿಂ ಧರ್ಮದ ಮತ್ತು ಟಿಪ್ಪು ಮೇಲಿರುವ ದ್ವೇಷವಲ್ಲದೇ ಮತ್ತೇನು?  ಟಿಪ್ಪು ದೇಶ ಕಂಡ ಅಪ್ರತಿಮ ದೇಶಪ್ರೇಮಿ ಯುದ್ದ ಮಾಡುತ್ತಲೇ ವೀರಮರಣ ಅಪ್ಪಿದ ಮಹಾನ್ ಸೇನಾನಿ. ಆತ ಬದುಕಿದ್ದ ಸಂದರ್ಭದಲ್ಲಿ ಈ ನಾಡಿನ ಹಿಂದೂಗಳನ್ನು ಪ್ರೀತಿಯಿಂದ ಕಾಣುತ್ತಿದ್ದ. ಟಿಪ್ಪು ಧರ್ಮ ಸಂಹಿಷ್ಣು ಆಗಿದ್ದರು ಎಂಬುದಕ್ಕೆ ಐತಿಹಾಸಿಕ ಹಲವು ದಾಖಲೆಗಳು ಸಿಗುತ್ತವೆ. ಫ್ರಾನ್ಸ್ ಜತೆ ಟಿಪ್ಪು ನಡೆಸಿದ ಪತ್ರ ವ್ಯವಹಾರ ಅವರ ಧರ್ಮ ಸಂಹಿಷ್ಣುತೆ ಸಾಬೀತುಪಡಿಸಿದೆ. ಟಿಪ್ಪು ಸುಲ್ತಾನ್ ಟಿ. ನರಸೀಪುರದಲ್ಲಿ ದೇಗುಲವೊಂದಕ್ಕೆ ನರಸಿಂಹ ದೇವರ ವಿಗ್ರಹ ಹಾಗೂ ಶಿವಲಿಂಗ ನೀಡಿದ್ದಾನೆ. ಅದು ಇಂದಿಗೂ ಕೂಡ ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ನೋಡಬಹುದಾಗಿದೆ.
ಶೃಂಗೇರಿ ಮಠದ ಶ್ರೀ ಚಿದಾನಂದ ಭಾರತೀಸ್ವಾಮಿಗಳು ಆಶ್ರಯ ಕೇಳಿದಾಗ ಟಿಪ್ಪು ಅವರಿಗೆ ಬಟ್ಟೆ ಚಿನ್ನ ನೀಡಿದ ಎಂಬ ಉಲ್ಲೇಖವಿಲ್ಲವೇ? ಅದನ್ನು ಏಕೆ ಮರೆತು ಬಿಡುತ್ತಾರೆ. ಟಿಪ್ಪು ಶ್ರೀರಂಗಪಟ್ಟಣದಲ್ಲಿ ನಿರ್ಮಿಸಿದ ಶ್ರೀರಂಗನಾಥ್ ಸ್ವಾಮಿ ದೇವಸ್ಥಾನ ಇಂದಿಗೂ ಇದೆ. ಹಲವು ಸಂಸ್ಥಾನಗಳೊಂದಿಗೆ ಸೆಣಸಿ ಕನ್ನಡ ನಾಡನ್ನು ವಿಸ್ತರಿಸಿದ, ಸತ್ತ ನಂತರವೂ ಅವರ ಸಮಾಧಿಯ ಮೇಲೆ ಕರ್ನಾಟಕ ಎಂದೇ ಬರೆದ ಹಲವು ದಾಖಲೆಗಳು ಈ ಸಂಶೋಧಕರಿಗೆ ಏಕೆ ಕಾಣುವುದಿಲ್ಲ?
ಟಿಪ್ಪು ಸುಲ್ತಾನ ಕನ್ನಡಿಗರ ಸ್ವಾಭಿಮಾನದ ಪ್ರತೀಕವಾಗಿದ್ದ ನಾಡಿನ ಜನತೆಗಾಗಿ ತನ್ನ ಮಕ್ಕಳನ್ನೇ ಒತ್ತೇ ಇಟ್ಟ ಉದಾಹರಣೆ ವಿಶ್ವದಲ್ಲಿ ಎಲ್ಲಿಯಾದರೂ ಇದ್ದರೆ ಅದು ಕರ್ನಾಟಕದಲ್ಲಿ ಮಾತ್ರ. ಕಾವೇರಿ ಕಣಿವೆ ಭಾಗದಲ್ಲಿ ರೈತರ ಜೀವನಾಡಿಯಾಗಿರುವ ಕನ್ನಂಬಾಡೆ ಕಟ್ಟೆಗೆ ಶಂಕುಸ್ಥಾಪನೆ ನೆರವೇರಿಸಿದವರು ಯಾರು ಎನ್ನುವುದನ್ನು ಈ ಸಂಶೋಧಕರು ಏಕೆ ಮರೆ ಮಾಚುತ್ತಾರೆ.  ಟಿಪ್ಪು ಸುಲ್ತಾನ ಮುಸ್ಲಿಂ ದೊರೆ ಎಂಬ ಕಾರಣಕ್ಕೆ ಆತನನ್ನು ಸಂಕುಚಿತ ಮನಸ್ಸುಗಳು ಮತಾಂಧ, ಹಿಂದೂ ಧರ್ಮದ ವಿರೋಧಿ, ಕನ್ನಡ ವಿರೋಧಿ ಎಂಬ ಹಣಿಪಟ್ಟ ಕಟ್ಟಿ ಕೇವಲ ಮುಸ್ಲಿಂ ಸಮುದಾಯಕ್ಕೆ ಸೀಮಿತ ಮಾಡುತ್ತಿರುವುದು ಷಡ್ಯಂತ್ರವಲ್ಲದೆ ಮತ್ತೇನು? ಭಾರತ ದೇಶದಲ್ಲಿ ಹಿಂದೂ ದೇವರ ಮೂರ್ತಿಗಳ ಕೆಳಗೆ ವಜ್ರ, ಚಿನ್ನದಂತಹ ಸಂಪತ್ತನ್ನು ಇರಿಸಿ ದೇವಾಲಯ ನಿರ್ಮಿಸುತ್ತಿದ್ದ ಕಾರಣಕ್ಕೆ ಸಂಪತ್ತಿನ ದುರಾಸೆಗೆ ಅಂದಿನ ಬ್ರಿಟಿಷ್ ವ್ಯವಸ್ಥೆ ಇಂತಹ ಹೀನ ಕೃತ್ಯ ನಡೆಸುತ್ತಿತ್ತೇ ವಿನಹ ಮುಸ್ಲಿಂ ಆಳರಸರಿಂದ ಅಂತಹ ಯಾವುದೇ ಗುಡಿಗೋಪುರಗಳು ಧ್ವಂಸ ಮಾಡಿಲ್ಲ.
ಇಷ್ಟಕ್ಕೂ ಒಂದೇ ಒಂದು ಶೈವರ ಆರಾಧನಾ ಕೇಂದ್ರಗಳಲ್ಲಿ ಶಿವಲಿಂಗಗಳಿಗೆ ಧಕ್ಕೆ ಆಗಿಲ್ಲ ಎಂದರೆ ಇಸ್ಲಾಂ ಆಳರಸರಲ್ಲಿದ್ದ ಮತೀಯ ಸಂಹಿಷ್ಣುತೆಗೆ ಸಾಕ್ಷಿ. ಹೀಗಾಗಿ ಮತಿಹೀನರಂತೆ ಮಾತನಾಡುವ ಯಾರೋ ಒಂದಿಬ್ಬರ ಮಾತಿಗೆ ಯಾರೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಮಹಾರಾಷ್ಟ್ರದ ಮಾಲೇಗಾಂವ್ ಸ್ಫೋಟ್ ರಾಜ್ಯದ ಸಿಂದಗಿ ಪಾಕ್ ಧ್ವಜಾರೋಹಣ, ಬಾಗಲಕೋಟೆ ಆರ್‌ಎಸ್‌ಎಸ್ ಮೆರವಣಿಗೆ ಮೇಲೆ ಕಲ್ಲೂ ತೂರಿ, ವಾಹನಗಳಿಗೆ ಬೆಂಕಿ ಹಚ್ಚಿ ಮತೀಯ ಗಲಭೆ ಸೃಷ್ಟಿಸಿದವರು ಯಾರೆಂಬುದು ಸಂಶೋಧನೆ ಮಾಡಿ ತಿಳಿದುಕೊಳ್ಳಬೇಕಾದ ವಿಷಯವೇನಲ್ಲ.
ಇನ್ನೂ ಅಲಿಘಡ ವಿವಿಯಲ್ಲಿ ಓದಿದವರೆಲ್ಲಾ ಉಗ್ರರಾಗುತ್ತಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ೧೮೭೫ರಲ್ಲಿ ಸ್ಥಾಪನೆಯಾದ ಮದರ್ ಉಲ್ ಉಲಮ್ ಮುಸಲ್ಮಾನ್ ಇ- ಹಿಂದ್ ವಿಶ್ವವಿದ್ಯಾಲಯ ಹಲವು ವರ್ಷಗಳ ನಂತರ (೧೯೨೦ರಲ್ಲಿ) ಅಲಿಘಡ್ ವಿವಿಯಾಗಿ ಮರುನಾಮಕರಣ ಪಡೆದಿದೆ. ಈ ವಿವಿಗಳಲ್ಲಿ ಓದಿದವರೆಲ್ಲ ಭಯೋತ್ಪಾದಕರಾಗುತ್ತಾರೆ ಎನ್ನುವುದಾದರೆ ರಾಷ್ಟ್ರಪೀತ ಮಹಾತ್ಮ ಗಾಂಧಿಜಿಯವರನ್ನು ಗುಂಡಿಟ್ಟು ಕೊಂದ ನಾಥುರಾಮ್ ಗೋಡ್ಸೆ ಯಾವ ವಿವಿಯಲ್ಲಿ ಓದಿದ. ಮೂಲ ಭೂತವಾದಿಗಳಿಗೆ ತಾವು ಹೇಳಿದ್ದೇ ಸತ್ಯ ತಾವು ಬರೆದಿದ್ದೇ ಸಂವಿಧಾನ. ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠ ಸಂವಿಧಾನವೆಂದು ಕರೆಯಲ್ಪಡುವ ಭಾರತೀಯ ಸಂವಿಧಾನವನ್ನೇ ಒಪ್ಪದ ಈ ಕುತ್ಸಿತ ಮನಸ್ಸುಗಳು ಹಿಂದೂ ಧರ್ಮದ ಗ್ರಂಥಗಳನ್ನು ಮಾತ್ರ ಶ್ರೇಷ್ಠ ಎಂದು ಬಿಂಬಿಸಿಕೊಳ್ಳುತ್ತಾರೆ.ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರು ಬರೆದ ಸಂವಿಧಾನ ಮಾನವ ಧರ್ಮದ ಪ್ರತೀಕವಾಗಿದೆ. ಇಂದಿನ ಧರ್ಮ ಗ್ರಂಥಗಳು ತಮ್ಮ ತಮ್ಮ ಧರ್ಮಗಳಿಗೆ ಮಾತ್ರ ಸೀಮಿತವಾಗಿವೆ. ಇವೆಲ್ಲ ಧರ್ಮಗ್ರಂಥಗಳನ್ನು ಮೀರಿದ ಶ್ರೇಷ್ಠ ಗ್ರಂಥ ಅದು ಭಾರತೀಯ ಸಂವಿಧಾನವಾಗಿದೆ. ಇದನ್ನೇ ಒಪ್ಪದ ಕೆಲ ಮನಸ್ಸುಗಳು ತಮ್ಮ ಗ್ರಂಥಗಳೇ ಶ್ರೇಷ್ಠವೆಂದು ಬೆನ್ನು ತಟ್ಟಿಕೊಳ್ಳುವುದರಲ್ಲಿಯೇ ಸುಖ ಕಾಣುತ್ತಿದ್ದಾರೆ. ಈ ಸಂಶೋಧನೆಯಲ್ಲಿ ತೊಡಗಿರುವ ಸಂಶೋಧಕರಿಗೆ ಈ ಪವಿತ್ರ ಗ್ರಂಥವನ್ನು ಓದುವುದಿರಲಿ, ಗಮನಹರಿಸಲು ಸಾಧ್ಯವಾಗುತ್ತಿಲ್ಲದಿರುವುದು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇದ್ದು ಸತ್ತಂತೆ ಅಲ್ಲವೇ? 
ದೇಶದ ಸ್ವಾತಂತ್ರ್ಯಕ್ಕಾಗಿ ಹಲವು ಮಹನೀಯರು ತಮ್ಮ ಪ್ರಾಣವನ್ನೆ ನೀಡಿದ್ದಾರೆ. ಆದರೆ ಟಿಪ್ಪು ತೋರಿದ ದಿಟ್ಟತನ ದೇಶದ ಉಳಿದ ರಾಜರು ತೋರಿದ್ದರೆ ಬ್ರಿಟಿಷರು ದೇಶದಲ್ಲಿ ತಲೆ ಎತ್ತಲು ಸಾಧ್ಯವಿರುತ್ತಿರಲಿಲ್ಲ. ದೇಶದ ಹಿತಾಸಕ್ತಿಗಾಗಿ ತನ್ನ ವೈಯಕ್ತಿಕ ಹಿತಾಸಕ್ತಿಯನ್ನು ಬಲಿಕೊಟ್ಟ ಹೋರಾಟಗಾರನಿಗೆ ಗೌರವ ಸಲ್ಲಿಸಬೇಕಾದ ನಾವುಗಳು ಮುಸ್ಲಿಂ-ಹಿಂದು, ಕ್ರೈಸ್ತ್ ಬೌದ್ಧ ಎಂಬ ಧರ್ಮಗಳ ಆಧಾರದ ಮೇಲೆ ವೀರ ಸೇನಾನಿಗಳನ್ನು ಸೀಮಿತ ಮಾಡುತ್ತಿದ್ದೇವೆ. ಇದಕ್ಕೆ ಹಿರಿಯ ಬುದ್ದಿ ಜೀವಿಗಳೇ ಬೆಂಬಲಕ್ಕೆ ನಿಂತಿರುವುದು ಹೇಸಿಗೆ ವಿಚಾರ. ಕಾನೂನು ಬದ್ಧವಾಗಿ ಸ್ಥಾಪನೆಯಾಗುತ್ತಿರುವ ಅಲ್ಪಸಂಖ್ಯಾತ ವಿವಿಗೆ ಟಿಪ್ಪು ಹೆಸರಿಟ್ಟರೆ ತಪ್ಪೇನು ಇಲ. ಘೋಷಿತ ಸಂಶೋಧಕರು, ಧರ್ಮದ ಬ್ರಾಂಡೆಡ್‌ಗಳು ಮತ್ತು ಆರ್‌ಎಸ್‌ಎಸ್ ಬಜರಂಗದಳದಂತಹ ಸಂಘಟನೆಗಳ ವಕ್ತಾರರಿಂದ ಬರುತ್ತಿರುವ ಅಣೆಮುತ್ತುಗಳಿಗೆ ಸರ್ಕಾರ ಎದುರಬೇಕಾದ ಅಗತ್ಯವೂ ಇಲ್ಲ. ಈ ಸಂಶೋಧಕರು ಇತಿಹಾಸ ತಿರುಚಲು ಹೊರಟಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಕೇಂದ್ರ ಸರ್ಕಾರ ರಾಜ್ಯದಲ್ಲಿ ಅಲ್ಪಸಂಖ್ಯಾತರ ಶೈಕ್ಷಣಿಕ ಅಭಿವೃದ್ಧಿಗೆ ಸ್ಥಾಪಿಸಲು ಉದ್ದೇಶಿಸಿರುವ ಟಿಪ್ಪು ವಿಶ್ವವಿದ್ಯಾಲಯ ಯಾವುದೇ ಕಾರಣಕ್ಕೂ ಕೈ ಬಿಡದೆ ಶೀಘ್ರ ಸ್ಥಾಪನೆಗೆ ಮುಂದಾಗಬೇಕಾಗಿದೆ.


3 comments: