Tuesday 11 February 2014

ಭ್ರಷ್ಟ ಅಧಿಕಾರಿಗಳ ಸಮರ್ಥನೆ ಸ್ವಾಮೀಜಿಗೆ ತಕ್ಕುದ್ದಲ್ಲ

ದಲಿತವರ್ಗ ಮತಾಂತರದಿಂದ ದುರ್ಬಲವಾಗುತ್ತಿದೆ. ಆಮಿಷ ಅಥವಾ ಬಲವಂತದ ಮತಾಂತರ ಎಂದಿಗೂ ಸಲ್ಲದು ಹಿಂದೂ ಧರ್ಮವನ್ನು ಒಗ್ಗೂಡಿಸಲು ಅರ್ಥಪೂರ್ಣವಾದ ‘ಸಾಮರಸ್ಯ ನಡಿಗೆ’ ಅವಶ್ಯಕ ಎಂದು ಹಿಂದೂ ಸಮಾಜದಲ್ಲಿನ ಜಾತಿ ಆಧಾರಿತ ಭೇದಭಾವವನ್ನು ಹೊಸಕಿ ಹಾಕುವುದಕ್ಕಾಗಿ ಈ ಹಿಂದೆ ಉಡುಪಿ ಮಠದ ಪೇಜಾವರ ಶ್ರೀಗಳು ದಲಿತ ಕೇರಿಯಲ್ಲಿ ಪಾದಯಾತ್ರೆ ನಡೆಸಿದ್ದು ಜನಮಾನಸದಲ್ಲಿ ಅಚ್ಚಾಗಿ ಉಳಿದಿದೆ.
     ಇದರಿಂದ ಪ್ರಭಾವಿತರಾದ ಚಿತ್ರದುರ್ಗದ ಮಾದಾರಚೆನ್ನಯ್ಯ ಗುರುಪೀಠದ ಮಾದಾರ ಚನ್ನಯ್ಯ ಸ್ವಾಮೀಜಿಗಳು ಅದೇ ಮೂಸೂರಿನ ಕೃಷ್ಣಮೂರ್ತಿಪುರಂನ ಬ್ರಾಹ್ಮಣರ ಕೇರಿಯಲ್ಲಿ ಸಾಮರಸ್ಯ ನಡಿಗೆ ಮಾಡುವ ಮೂಲಕ ಹೊಸ ಇತಿಹಾಸ ನಿರ್ಮಾಣಕ್ಕೆ ಕೈಹಾಕಿದ್ದರು.
ಒಂದು ಸಾಮಾಜಿಕಮುಖಿ ಕಾರ್ಯಕ್ರಮ ಎಂದ ಕೂಡಲೇ ಪರ-ವಿರೋಧ ಇದ್ದೇ ಇರುತ್ತವೆ. ಆದರೆ ಅಂದಿನ ಸಂದರ್ಭದಲ್ಲಿ ಸ್ವಾಮೀಜಿಗಳು ಮಾಡುವ ಸಾಮರಸ್ಯದ ನಡಿಗೆಗೆ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿತ್ತು. ದಲಿತ ಸಮುದಾಯವನ್ನು   ಬಲವಂತದ ಮತಾಂತರದಿಂದ ತಪ್ಪಿಸುವ ಉದ್ದೇಶದಿಂದ ಪೇಜಾವರ ಶ್ರೀಗಳು ಹಾಗೂ ಮಾದಾರ ಚನ್ನಯ್ಯ ಸ್ವಾಮಿಗಳು ಜಂಟಿ ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ದಲಿತಪರ ಚಿಂತಕರು ಟೀಕಿಸಿದ್ದೂ ಉಂಟು.ತುಳಿತಕ್ಕೆ ಒಳಗಾಗಿರುವ ಶೋಷಿತ ಸಮುದಾಯವನ್ನು ಕನಿಷ್ಠ  ಮಾನವೀಯ ದೃಷ್ಟಿ ಕೋನದಲ್ಲಿ ಕಾಣದ ಮೇಲ್ವರ್ಗದವರು, ಈ ಹೊಲೆಯ ಮಾದಿಗರು ಮತಾಂತರ ಹೊಂದಿ ಸನಾತನ ಸಂಸ್ಕೃತಿನ್ನು ನಾಶ ಮಾಡುತ್ತಾರೆ. ಅಥವಾ ಹಿಂದು ಧರ್ಮವೇ ಅಲ್ಪಸಂಖ್ಯಾತವಾಗಿ ಬಿಡುತ್ತದೆಯೋ ಎಂಬ ಭೀತಿಯಿಂದ ಈ ಕುತಂತ್ರ ರೂಪಿ ಸಲಾಗಿದೆ ಎಂಬ ವಾದವನ್ನೂ ಕೂಡ ದಲಿತಪರ ಸಾಹಿತಿಗಳು ಮತ್ತು ಸಂಘಟನೆಗಳು ಮುಂದಿಟ್ಟಿದ್ದರು. ಹೊಲೆಯ ಮಾದಿಗ ಸಮುದಾಯದ ನಡುವೆ ಕಂದಕ ಸೃಷ್ಟಿಸಲು ಮಾದಾರಚನ್ನಯ್ಯ ಸ್ವಾಮೀಜಿಯನ್ನು ಹರಕೆಯ ಕುರಿಯನ್ನಾಗಿ ಮಾಡಲಾಗುತ್ತಿದೆ ಎಂದು ಆಕ್ರೋಶ ಕೂಡ ವ್ಯಕ್ತಪಡಿಸಲಾಗಿತ್ತು.