Tuesday 11 February 2014

ಭ್ರಷ್ಟ ಅಧಿಕಾರಿಗಳ ಸಮರ್ಥನೆ ಸ್ವಾಮೀಜಿಗೆ ತಕ್ಕುದ್ದಲ್ಲ

ದಲಿತವರ್ಗ ಮತಾಂತರದಿಂದ ದುರ್ಬಲವಾಗುತ್ತಿದೆ. ಆಮಿಷ ಅಥವಾ ಬಲವಂತದ ಮತಾಂತರ ಎಂದಿಗೂ ಸಲ್ಲದು ಹಿಂದೂ ಧರ್ಮವನ್ನು ಒಗ್ಗೂಡಿಸಲು ಅರ್ಥಪೂರ್ಣವಾದ ‘ಸಾಮರಸ್ಯ ನಡಿಗೆ’ ಅವಶ್ಯಕ ಎಂದು ಹಿಂದೂ ಸಮಾಜದಲ್ಲಿನ ಜಾತಿ ಆಧಾರಿತ ಭೇದಭಾವವನ್ನು ಹೊಸಕಿ ಹಾಕುವುದಕ್ಕಾಗಿ ಈ ಹಿಂದೆ ಉಡುಪಿ ಮಠದ ಪೇಜಾವರ ಶ್ರೀಗಳು ದಲಿತ ಕೇರಿಯಲ್ಲಿ ಪಾದಯಾತ್ರೆ ನಡೆಸಿದ್ದು ಜನಮಾನಸದಲ್ಲಿ ಅಚ್ಚಾಗಿ ಉಳಿದಿದೆ.
     ಇದರಿಂದ ಪ್ರಭಾವಿತರಾದ ಚಿತ್ರದುರ್ಗದ ಮಾದಾರಚೆನ್ನಯ್ಯ ಗುರುಪೀಠದ ಮಾದಾರ ಚನ್ನಯ್ಯ ಸ್ವಾಮೀಜಿಗಳು ಅದೇ ಮೂಸೂರಿನ ಕೃಷ್ಣಮೂರ್ತಿಪುರಂನ ಬ್ರಾಹ್ಮಣರ ಕೇರಿಯಲ್ಲಿ ಸಾಮರಸ್ಯ ನಡಿಗೆ ಮಾಡುವ ಮೂಲಕ ಹೊಸ ಇತಿಹಾಸ ನಿರ್ಮಾಣಕ್ಕೆ ಕೈಹಾಕಿದ್ದರು.
ಒಂದು ಸಾಮಾಜಿಕಮುಖಿ ಕಾರ್ಯಕ್ರಮ ಎಂದ ಕೂಡಲೇ ಪರ-ವಿರೋಧ ಇದ್ದೇ ಇರುತ್ತವೆ. ಆದರೆ ಅಂದಿನ ಸಂದರ್ಭದಲ್ಲಿ ಸ್ವಾಮೀಜಿಗಳು ಮಾಡುವ ಸಾಮರಸ್ಯದ ನಡಿಗೆಗೆ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿತ್ತು. ದಲಿತ ಸಮುದಾಯವನ್ನು   ಬಲವಂತದ ಮತಾಂತರದಿಂದ ತಪ್ಪಿಸುವ ಉದ್ದೇಶದಿಂದ ಪೇಜಾವರ ಶ್ರೀಗಳು ಹಾಗೂ ಮಾದಾರ ಚನ್ನಯ್ಯ ಸ್ವಾಮಿಗಳು ಜಂಟಿ ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ದಲಿತಪರ ಚಿಂತಕರು ಟೀಕಿಸಿದ್ದೂ ಉಂಟು.ತುಳಿತಕ್ಕೆ ಒಳಗಾಗಿರುವ ಶೋಷಿತ ಸಮುದಾಯವನ್ನು ಕನಿಷ್ಠ  ಮಾನವೀಯ ದೃಷ್ಟಿ ಕೋನದಲ್ಲಿ ಕಾಣದ ಮೇಲ್ವರ್ಗದವರು, ಈ ಹೊಲೆಯ ಮಾದಿಗರು ಮತಾಂತರ ಹೊಂದಿ ಸನಾತನ ಸಂಸ್ಕೃತಿನ್ನು ನಾಶ ಮಾಡುತ್ತಾರೆ. ಅಥವಾ ಹಿಂದು ಧರ್ಮವೇ ಅಲ್ಪಸಂಖ್ಯಾತವಾಗಿ ಬಿಡುತ್ತದೆಯೋ ಎಂಬ ಭೀತಿಯಿಂದ ಈ ಕುತಂತ್ರ ರೂಪಿ ಸಲಾಗಿದೆ ಎಂಬ ವಾದವನ್ನೂ ಕೂಡ ದಲಿತಪರ ಸಾಹಿತಿಗಳು ಮತ್ತು ಸಂಘಟನೆಗಳು ಮುಂದಿಟ್ಟಿದ್ದರು. ಹೊಲೆಯ ಮಾದಿಗ ಸಮುದಾಯದ ನಡುವೆ ಕಂದಕ ಸೃಷ್ಟಿಸಲು ಮಾದಾರಚನ್ನಯ್ಯ ಸ್ವಾಮೀಜಿಯನ್ನು ಹರಕೆಯ ಕುರಿಯನ್ನಾಗಿ ಮಾಡಲಾಗುತ್ತಿದೆ ಎಂದು ಆಕ್ರೋಶ ಕೂಡ ವ್ಯಕ್ತಪಡಿಸಲಾಗಿತ್ತು.
    ಆದರೆ ಇದ್ಯಾವುದನ್ನು ಗಮನಕ್ಕೆ ತೆಗೆದುಕೊಳ್ಳದ ಚನ್ನಯ್ಯಸ್ವಾಮೀಜಿಗಳು ತಾವು ಹೇಳಿದಂತೆ ಬ್ರಾಹ್ಮಣರ ಹೊಣೆಯಲ್ಲಿ ಪಾದಯಾತ್ರೆ ಮಾಡಿದ್ದರು. ಇದರ ಫಲಿತಾಂಶ ಏನೇ ಆಗಲಿ ಆದರೆ ಅಂಥದ್ದೊಂದು ಸಾಮಾಜಿಕ ಸಮಸ್ಯೆ ವಿರುದ್ಧ ತನ್ನನ್ನು ತಾನು ತೊಡಗಿಸಿಕೊಂಡಿದ್ದರಿಂದ ಅವರನ್ನು ಮೆಚ್ಚಲೇಬೇಕಾಗಿತ್ತು. ಆದರೆ ನಾನು ಹೇಳಲು ಹೊರಟಿರುವ ವಿಷಯ ಅದಲ್ಲ.
ಇತ್ತೀಚೆಗೆ ರಾಜ್ಯದ ರಾಜ್ಯಧಾನಿ ಬೆಂಗಳೂರಿನಲ್ಲಿ ಎಸ್ಸಿ, ಎಸ್ಟಿ ನೌಕಕರ ಸಂಘದಿಂದ ನಡೆದ ಕಾರ್ಯಕ್ರಮವೊಂದರಲ್ಲಿ ಮಾದಾರ ಚನ್ನಯ್ಯ ಗುರುಪೀಠದ ಮಾದಾರ ಚನ್ನಯ್ಯ ಸ್ವಾಮೀಜಿಗಳು ಅಚ್ಚರಿ ಹೇಳಿಕೆಯೊಂದು ನೀಡಿಬಿಟ್ಟರು. ಅದು ಜಾತಿ ಸ್ವಾಭಿಮಾನೋ ಅಥವಾ ಕಳಕಳಿಯೋ ಗೊತ್ತಿಲ್ಲ. ಅಂಥದ್ದೊಂದು ಹೇಳಿಕೆಯ ಅವಶ್ಯಕತೆ ಇತ್ತಾ? ಎಂಬ ಕುರಿತು ಇಂದು ಚರ್ಚೆಯ ವಿಷಯವಾಗುತ್ತಿದೆ.
ಕೆಪಿಎಸ್ಸಿ ನೇಮಕ ವಿವಾದಲ್ಲಿ ಸಿಲುಕಿ ಜೈಲುದರ್ಶನ ಮಾಡಿ ಬಂದಿರುವ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಗೋನಾಳ ಭೀಮಪ್ಪ ಹಾಗೂ ಸದಸ್ಯೆ ಮಂಗಳಾ ಶ್ರೀಧರ ವಿರುದ್ಧ ಸರ್ಕಾರ ಕ್ರಮಕ್ಕೆ ಮುಂದಾಗಿರುವುದು ಬೇಸರದ ಸಂಗತಿ. ಅವರು ಮಾಡಿರುವುದು ೫/% ಭ್ರಷ್ಟಾಚಾರ ಮಾತ್ರ ಎಂಬ ಅರ್ಥದಲ್ಲಿ ಹೇಳಿದರು. ಅಂದ್ರೆ ಕೋಟ್ಯಂತರ ರೂ. ಅವ್ಯವಹಾರ ಮಾಡಿದ್ರೆ ಮಾತ್ರ ಭ್ರಷ್ಟಾಷಾರವಗುತ್ತಿತ್ತೇ? ಎಂಬ ಪ್ರಶ್ನೆ ಸಹಜವಾಗಿ ಉದ್ಬವಿಸುತ್ತದೆ.
ಸರ್ಕಾರದ ಕ್ರಮದ ವಿರುದ್ಧ ಸ್ವಾಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದು ಏಕೆ? ಸ್ವಜಾತಿ ಎಂಬುದನ್ನು ಬಿಟ್ಟರೆ ಇಲ್ಲಿ ಯಾವ ಮಾನದಂಡವನ್ನು ಪ್ರಯೋಗಿಸಿ ಮಾತನಾಡಿದ್ದಾರೆ? ಭ್ರಷ್ಟಾಚಾರ ಹೊತ್ತ ದೊಡ್ಡ ಕುಳಗಳಿಗೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ದಲಿತ ಅಧಿಕಾರಿಗಳ ವಿರುದ್ಧ ಮಾತ್ರ ಕ್ರಮತೆಗೆದುಕೊಳ್ಳಲು ಮುಂದಾಗಿದ್ದಾರೆ ಎಂಬುದೇನೋ ಸರಿಯಿರಬಹುದು. ಆದರೆ ಈ ಜಾತಿ ಸ್ವಾಭಿಮಾನ ಇದೆಯಲ್ಲ ಇದು ಸರ್ವಥಾ ಯಾರು ಒಪ್ಪಲಾರರು.
ಈ ಹೇಳಿಕೆ ಯಾವುದೋ ಸಾಮಾನ್ಯನ ಅಭಿಪ್ರಾಯವಾಗಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ. ಆದರೆ ಗುರುಪೀಠದ ಸ್ಥಾನದಲ್ಲಿ ಕುಳಿತು ಸಮಾಜಕ್ಕೆ ಉತ್ತಮ ಮಾರ್ಗದರ್ಶನ ಮಾಡಬೇಕಾದ ಸ್ವಾಮೀಜಿ, ಭ್ರಷ್ಟ ಅಧಿಕಾರಿಯನ್ನು ಸಮರ್ಥಿಸಿಕೊಳ್ಳುತ್ತಿರುವುದು ಮತ್ತು ಸರ್ಕಾರದ ವಿರುದ್ಧ ದಲಿತ ಸಂಘಟನೆಗಳು ಧ್ವನಿ ಎತ್ತದೆ ಇರುವುದು ವಿಪರ್ಯಾಸ ಎಂದು ಖೇದವ್ಯಕ್ತಪಡಿಸಿದ್ದು ಸಖೇದಾಶ್ಚರ್ಯ!
ಇಲ್ಲಿ ಕೇವಲ ಸ್ವಾಮೀಜಿಯವರನ್ನು ಮಾತ್ರ ಟೀಕಿಸಿದರೆ ಯಾವುದೇ ಪ್ರಯೋಜನವಿಲ್ಲ. ಏಕೆಂದರೆ ಹಿಂದಿನ ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ಕೃಷ್ಣ ಅವರೂ ಕೂಡ ಭ್ರಷ್ಟಾಚಾರಿ ಎಂದು ಸಾಬೀತಾಗಿ ಜೈಲಿಗೂ ಸಹ ಹೋಗಿ ಬಂದರು. ಇದನ್ನೇ ಮಾಜಿ ಮುಖ್ಯಮಂತ್ರಿ ಜೆಡಿಎಸ್‌ನ ಕುಮಾರಸ್ವಾಮಿಯರವರು ತಮ್ಮ ರಾಜಕೀಯ ದಾಳವಾಗಿ ಬಳಸಿಕೊಂಡು ಅಂದಿನ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಇದಕ್ಕೇ ಕಾರಣ ಏನಿತ್ತು ಎಂದು ಬೇರೆ ಹೇಳಬೇಕಾಗಿಲ್ಲ. ಅದು ಕೂಡ ಜಾತಿ ಸ್ವಾಭಿಮಾನಕ್ಕಾಗಿಯೇ ಎಂದು ಬಿಡಿಸಿ ಹೇಳಬೇಕಾಗಿಲ್ಲ. 
    ಇದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಮಾತ್ರ ಸೀಮಿತವಾಗಿದೆ ಎಂದರೆ ತಪ್ಪಾದೀತು. ಭ್ರಷ್ಟಾಚಾರ ಆರೋಪದಲ್ಲಿ ಸಿಲುಕಿದ್ದ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಿ ಬಂದಾಗ ಅವರ ಪರ ರಾಜ್ಯದ ಬಹುತೇಕ ಲಿಂಗಾಯಿತ ಮಠಾಧೀಶರು ಬೀದಿಗಿಳಿದು ತಮ್ಮ ಶಕ್ತಿಪ್ರದರ್ಶನ ಮಾಡಿದ್ದು, ಅದೇ ರೀತಿ ಮುಖ್ಯ ಮಂತ್ರಿಯಾಗಿದ್ದ ಡಿ.ವಿ ಸದಾನಂದಗೌಡರನ್ನು ಅಧಿಕಾರದಿಂದ ಕಳಗಿಳಿಸಿದಾಗ ಒಕ್ಕಲಿಗ ಮಠಾಧೀಶರು ಕೂಡ ಶಕ್ತಿಪ್ರದರ್ಶನ ಮಾಡಿದ್ದರು ಇದೆಲ್ಲ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಅಲ್ಲ. ಅದು ಕೂಡ ಜಾತಿ ಸ್ವಾಭಿಮಾನಕ್ಕಾಗಿ. 
ಅಂದ ಹಾಗೇ ರಾಜ್ಯ ಸರ್ಕಾರ ಕೇವಲ ಭೀಮಪ್ಪ ಅವರ ಮೇಲೆ ಮಾತ್ರ ಸಿಐಡಿ ತನಿಖೆ ಕೈಗೊಳ್ಳಲಿಲ್ಲ. ಅವರ ಅವಧಿಯಲ್ಲಿ ಏನೆಲ್ಲ ನಡೆದಿದೆ ಎಂಬ ಹಗರಣಗಳನ್ನು ಹೊರಹಾಕಿದೆ. ಉದ್ಯೋಗಾಕಾಂಕ್ಷಿಗಳಿಗೆ ಒಡ್ಡಿದ ಆಮಿಷಗಳೇನು ಎಂಬುದು ಸಹ ಸಿಐಡಿ ತನಿಖೆ ನಡೆಸಿದೆ. ಅದರಲ್ಲಿ ಯಾರು ಏನೂ ಕೇಳಿದ್ದಾರೆ ಎಂಬುದು ಕೂಡ ಗುಟ್ಟಾಗಿ ಉಳಿದ ವಿಷಯವೇನೂ ಅಲ್ಲ.
ಇಷ್ಟಾದರೂ ನಮ್ಮ ಸ್ವಾಮೀಜಿಯವರು ಏಕೆ ಈ ಕಳಂಕಿತರನ್ನು ಸಮರ್ಥಿಸಿಕೊಳ್ಳುತ್ತಾರೋ ಎಂಬುದು ಸೋಜಿಗದ ವಿಷಯವಲ್ಲವೇ? ಪ್ರಗತಿಪರ ಚಿಂತನೆ ಮೂಲಕ ಸ್ಫೂರ್ತಿಯಾಗಿದ್ದ ಚನ್ನಯ್ಯ ಶ್ರೀಗಳು, ಕಳಂಕಿತರ ಬೆನ್ನಿಗೆ ನಿಲ್ಲುವುದು ಸ್ವಾಮಿಗಳಿಗೆ ಶೋಭೆ ತರುವಂತದ್ದಲ್ಲ.
      ಅಷ್ಟಕ್ಕೂ ಅಧಿಕಾರದಲ್ಲಿದ್ದಾಗ ಆ ಸಮುದಾಯಕ್ಕೆ ಅವರ ಕೊಡುಗೆ ಏನು ಎಂಬುದು ಇಡೀ ರಾಜ್ಯದ ದಲಿತರಿಗೆ ಗೊತ್ತಿದೆ. ಹಲವು ಹಗರಣಳಲ್ಲಿ ಭಾಗಿಯಾಗಿರುವ ಭ್ರಷ್ಟ ಅಧಿಕಾರಿಗಳ ಬೆಂಬಲಕ್ಕೆ ದಲಿತರಪರ ಸಂಘಟನೆಗಳು ನಿಲ್ಲಬೇಕೆ? ಯಾವ ಪುರುಷಾರ್ಥಕ್ಕಾಗಿ ಬೆಂಬಲಕ್ಕೆ ನಿಲ್ಲಬೇಕು.? ಗೋನಾಳ ಭೀಮಪ್ಪನವರು ರಾಜ್ಯದಲ್ಲಿ ಉನ್ನತ ಅಧಿಕಾರಿಯಾಗಿದ್ದವರು ಅವರ ಹುಟ್ಟೂರಾದ ಸುರಪುರ ತಾಲ್ಲೂಕಿನ ದೇವರಗೋನಾಲದಲ್ಲಿ ಇನ್ನೂ ಯಾವುದೇ ಹೋಟೆಲ್‌ಗಳಲ್ಲಿ ದಲಿತರಿಗೆ ಪ್ರವೇಶವಿಲ್ಲ. ಈ ವಿಷಯ ಕುರಿತು ಸ್ವಾಮೀಜಿಗಳು ಈ ಭೀಮಪ್ಪನವರೊಂದಿಗೆ ಎಂದಾದರೂ ಚರ್ಚಿಸಿದ್ದಾರಾ?
ಆ ಗ್ರಾಮದ ಹೋಟೆಲ್‌ಗಳಲ್ಲಿ ದಲಿತರಿಗೆ ಪ್ರತ್ಯೇಕವಾಗಿ ಪೊರಕೆಯಿಂದ ನೇಯ್ದ ಆಟಿಕೆಯೊಂದರಲ್ಲಿ ಚಹಾ ಕಪ್‌ಗಳನ್ನು ಇಡಲಾಗಿದೆ. ಇನ್ನು ಕ್ಷೌರ ಮಾಡಿಸಿಕೊಳ್ಳಲು ಹೋದರಂತೂ ದಲಿತರು ಊರು ಬಿಡುವ ಪರಿಸ್ಥಿತಿ ಇದೆ. ಇದನ್ನು ವಿರೋಧಿಸಿ ಹಲವು ದಲಿತಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದಾಗ ಈ ಅಧಿಕಾರಿ ಆ ಘಟನೆಯನ್ನು ಕುರಿತು ಒಂದೇ ಒಂದು ಹೇಳಿಕೆ ನೀಡಲಿಲ್ಲ! ಎಂದರೆ ಇವರ ದಲಿತಪರ ಕಾಳಜಿ ಎಷ್ಟಿತ್ತೆಂಬುದು ಎಲ್ಲರಿಗೂ ತಿಳಿದ ವಿಷಯ.
ಹಿಂದು ಮುಸ್ಲಿಂರಿಗೆ ಭಾವೈಕ್ಯತೆ ಸಾರಿದ ಪ್ರಸಿದ್ಧ ದಾರ್ಶನಿಕಗುರು ತಿಂಥಣಿಯ ಮೌನೇಶ್ವರ್‌ರ ನೆಲೆವಿಡು ಇದೇ ದೇವರಗೋನಾಲ. ಈ ದೇವಸ್ಥಾನದಲ್ಲಿಯೂ ಕೂಡ ದಲಿತರಿಗೆ ಪ್ರವೇಶವಿಲ್ಲ ಎಂಬುದು ಈ ಸ್ವಾಮೀಜಿಗಳು ಆ ಅಧಿಕಾರಿಯನ್ನು ಒಮ್ಮೆಯಾದರೂ ಪ್ರಶ್ನಿಸಿದ್ದಾರೆಯೇ? ಉನ್ನತ ಅಧಿಕಾರದಲ್ಲಿದ್ದರೂ ಆ ಸಮುದಾಯಕ್ಕೆ ಇವರ ಕೊಡುಗೆ ಶೂನ್ಯ ಎಂಬುದು ಈ ಸ್ವಾಮೀಜಿಯವರು ತಿಳಿದುಕೊಳ್ಳಬೇಕು. ಇಲ್ಲದಿದ್ದರೆ ದಲಿತರೇ ನಿಮ್ಮ ವಿರುದ್ದ ತಿರುಗಿ ಬಿದ್ದರೂ ಅಚ್ಚರಿಯಿಲ್ಲ. 


No comments:

Post a Comment