Friday 4 November 2011

ನೋಡಿ ಸ್ವಾಮಿ ಜಾತ್ಯಾತೀತ ಭಾರತದಲ್ಲಿ ಜಾತೀಯ ಸೊಂಕು

ನೋಡಿ ಸ್ವಾಮಿ ನಾವಿರುವುದೇ ಹೀಗೆ ಸಮಾಜದಲ್ಲಿ ನಡೆದುಕೊಂಡು ಪದ್ದತಿಗಳನ್ನು ಬಿಟ್ಟು ಬದುಕೊಕ್ಕಾಗುತ್ತಾ ಸಮಾನತೆ ಅಂತ ಅಸ್ಪೃಶ್ಯರಿಗೆ ರತ್ನಗಂಬಳಿ ಹಾಕಿ ಊಟ ಹಾಕಬೇಕಾ? ಹಾಗಂತ ಎಲ್ಲರು ಸಮಾನರು ಎನ್ನುವುದಾರೆ ಮನುಷ್ಯನ ಬೆರಳುಗಳು ಏಕೆ ಸಮಾನವಾಗಿಲ್ಲ ಎಂದು ಪ್ರಶ್ನಿಸುವುದು ಹಳ್ಳಿಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ದೃಶ್ಯ. ಈ ಮಾತು ಏಕೆ ಹೇಳುತ್ತಾರೆ ಎಂದು ನೀವು ಪ್ರಶ್ನಿಸಬಹುದು ಜಾತಿ ಎಂಬ ಭೂತ ಇದೆಯಲ್ಲ ಅದರ ಮೂಲ ನೆಲೆಯನ್ನು ಮತ್ತು ಜಾತಿ ಪದ್ದತಿಯನ್ನು ಸಮರ್ಥಿಸಿಕೊಳ್ಳಲು ಇರುವ ಮಾನದಂಡ. ಇದು ಮಾನವೀಯತೆ ಇಲ್ಲದ ಮಾನವರಿಗೆ ತೋರಿದ ದಾರಿ ಹೇಗಿದೆ ನೋಡಿ ಸ್ವಾಮಿ ಜ್ಯಾತ್ಯತೀತ ಭಾರತದಲ್ಲಿ ಜಾತೀಯ ಸೊಂಕು.
ಆಧುನಿಕ ಭಾರತ ಎಷ್ಟೆ ಮುಂದುವರಿದಿದೆ ಎಂದರು ಮೂಡನಂಬಿಕೆ ಮಾತ್ರ ತಂತ್ರಜ್ಞಾನದಿಂದ ಮತ್ತು ಜಾಗತೀಕರಣದಿಂದ ದೂರವಾಗುತ್ತಿಲ್ಲ ಎಂದರೆ ಇದರ ಮೂಲ ಬೇರು ಎಷ್ಟು ಆಳಕ್ಕೊಗಿರಬಹುದು ನೀವೇ ಊಹಿಸಿ?
ದೇಶದ ಅಭಿವೃದ್ಧಿಗೆ ಜಾತಿ ಎಂಬ ಪೆಡಂಭೂತ ಮಾರಕವಾಗಿದೆ ಎಂದರೆ ತಪ್ಪಾಗಲಾರದು ಇಡೀ ಜಗತ್ತಿನಲ್ಲಿ ಇರದಷ್ಟು ಜಾತಿ ಮತ ಪಂಥಗಳು ಭಾರತದಲ್ಲಿವೇ ಒಂದು ಸಂಶೋಧನೆ ಪ್ರಕಾರ ದೇಶದಲ್ಲಿ ಸುಮಾರು ೪೬೦೦ ಜಾತಿ ಉಪ ಜಾತಿಗಳು ಅಸ್ಥಿತ್ವದಲ್ಲಿವೆ ಎಂದು ತಿಳಿಸಿದೆ.  ಇವು ಒಂದು ಸಮುದಾಯದವರನ್ನು ಕಂಡರೆ ಇನ್ನೊಬ್ಬರಿಗಾಗದು ಆದರೂ ಜ್ಯಾತ್ಯಾತೀತ, ಭಾವೈಕ್ಯತೆ ಎಂಬ ಪದ ಮಾತ್ರ ನಮ್ಮ ರಾಜಕೀಯ ನಾಯಕರು ಬಿಡುತ್ತಿಲ್ಲ.
ಶಿಕ್ಷಣದಿಂದ ಜಾತಿ ಪದ್ದತಿಯನ್ನು ಅಳಿಸಿ ಹಾಕಬಹದು ಎಂದು ನಂಬಿದ್ದ ಅನೇಕ ಧಾರ್ಮಿಕ ನಾಯಕರಿಗೆ, ಸಾಮಾಜ ಸುಧಾರಕರಿಗೆ ಇಂದು ತಿರುಗುಬಾಣವಾಗಿ ಪರಿಣಮಿಸಿದೆ. ಜಾತಿಯ ಭಾಷಣವನ್ನು ಮಾಡಿ ಸೋತು ಹೋಗಿದ್ದಾರೆ. ಇವರು ಧ್ವನಿ ಎತ್ತುವುದು ಮತ್ತೆ ದಲಿತರ ಮೇಲೆ ದೌರ್ಜನ್ಯ ನಡೆದಾಗಲೇ ಮತ್ತೆ  ಅದೇ ಮಾತು ಅದೇ ಕತೆ. ಸಮಾಜ ಸುಧಾರಕರು ಎಡವಿದೆಲ್ಲಿ ಯಾಕೆ ಇವರ ವಿಚಾರಗಳು ಸಮಾಜಕ್ಕೆ ನಾಟಲಿಲ್ಲ ಅಂದ್ರೆ ಡಾಂಬಿಕ ಸುಧಾರಕರೇ? ಅಥವಾ ಹತ್ತರಲ್ಲಿ ನಾನೊಬ್ಬ ಎಂಬ ಉದಾರವಾದಿ ಹೋರಾಟಗಾರರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಹೆಚ್ಚು ಹೆಚ್ಚು ಶಿಕ್ಷಣ ಪಡೆದವರು ಸಮಾಜದ ಅಭಿವೃದ್ಧಿಗೆ ತಮ್ಮ ಅಳಿಲು ಸೇವೆ ಮಾಡುವುದು ಬಿಟ್ಟು ಸಮುದಾಯ ಜಾತಿಯ ಸಂಘಟನೆಗಳನ್ನು ಕಟ್ಟಿ ಶಕ್ತಿ ಪ್ರದರ್ಶನ ಮಾಡುತ್ತಿರುವುದು ಶೋಚನೀಯ ವಿಷಯವಾಗಿದೆ. ಹಾಗಾದರೇ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಎಡವಿದ್ದೆಲ್ಲಿ ನೈತಿಕ ಮೌಲ್ಯಗಳ ಕೊರತೆಯೇ? ಅಥವಾ ಶಿಕ್ಷಣದ ಗುಣಮಟ್ಟ ಸುಧಾರಿಸಬೇಕೆ ? ಹಾಗಾದರೆ ಇದ್ದ ಶಿಕ್ಷಣವನ್ನು ಪಡೆದುಕೊಂಡ ಇಂದಿನ ಯುವಕರು ದಾರಿ ತಪ್ಪುತ್ತಿರುವುದು ಯಾಕೇ? ಶಿಕ್ಷಣದಿಂದ ಮಾತ್ರ ಎಲ್ಲವನ್ನು ಸುಧಾರಿಸಲು ಸಾಧ್ಯವೆ ಹಾಗಾದಾರೆ ಹಿಂದಿಗಿಂತಲೂ ಇಂದು ಜಾತಿ ತನ್ನ ಕಬಂಧ ಬಾಹು ವಿಸ್ತರಿಸಿಕೊಳ್ಳುತ್ತಾ ನಡೆದಿರುವುದಕ್ಕೆ ಕಾರಣ ಏನು ? ವಿಶ್ವವಿದ್ಯಾಲಯದಲ್ಲಿ ಒಂದೆ ವಸತಿ ನಿಲಯದಲ್ಲಿ ಇರುವ ವಿದ್ಯಾರ್ಥಿಗಳು
ದಿನ ಬೆಳಗಾದರೆ ಒಂದಿಲ್ಲೊಂದು ದೌರ್ಜನ್ಯಗಳು ದಲಿತರ ಮೇಲೆ ನಡೆದಿರುವುದು ಪತ್ರಿಕೆಗಳಲ್ಲಿ ವರದಿಯಾಗುತ್ತಲೆ ಇರುತ್ತವೆ ಹೊರತು ಕಡಿಮೆಯಾಗುತ್ತಿಲ್ಲ ಎಂದರೆ ಎಷ್ಟರ ಮಟ್ಟಿಗೆ ಕಾನೂನು ಕಾಯ್ದೆಗಳು ಜಾರಿಯಾಗಿವೆ ಜಾರಿಯಾದರೂ ದೌರ್ಜನ್ಯ ಮಾಡಿದ ಅಪರಾಧಿಗಳಿಗೆ ಯಾವ ಶಿಕ್ಷೆಯಾಗಿದೆ. ಕಠಿಣ ಕಾನೂನಿದ್ದರೂ ಮತ್ತೆ ಮತ್ತೆ ದೌರ್ಜನ್ಯ ದಬ್ಬಾಳಿಕೆಗಳು ನಡೆಯುತ್ತವೆ ಎಂದರೆ ಕಾನೂನು ಜಾರಿ ಮಾಡುವ ಅಧಿಕಾರಿಗಳು ಇದರಲ್ಲಿ ಪಾಲುದಾರರಾಗಿದ್ದಾರಯೇ?
ಅರಬ್ ರಾಷ್ಟ್ರಗಳಲ್ಲಿ ಯಾವುದೇ ವ್ಯಕ್ತಿ ಅಪರಾಧವೊಂದರಲ್ಲಿ ಭಾಗಿಯಾಗಿದ್ದಾನೆ ಎಂದರೆ ಯಾವ ರೀತಿ ಅಪರಾಧವೆಸಗಿದ್ದಾನೆ ಎಂದು ತಿಳಿದು ಅದೇ ಶಿಕ್ಷೆಯನ್ನು ಅಲ್ಲಿನ ಆಡಳಿತ ನೀಡುತ್ತದೆ ಮತ್ತು ಸಂಪ್ರದಾಯವಾಗಿ ಬಂದಿದೆ. ಅದೇ ರೀತಿಯ ಕಠಿಣ ಶಿಕ್ಷೆಯನ್ನು ಜಾತಿ ದೌರ್ಜನ್ಯ ಮಾಡಿದ ಪುಂಡರಿಗೆ ನೀಡಿದರೆ ಅಪರಾದ ಮಾಡುವುದು ಬೇಡ ಕನಸಿನಲ್ಲಿಯೂ ಅಂತಹ ಕನಸನ್ನು ಕಾಣಲಾರರು.
ಇದರಲ್ಲಿ ದಲಿತ ನಾಯಕರೆಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವ ಮರಿ ನಾಯಕರು ದೌರ್ಜನ್ಯ ಖಂಡಿಸಿ ಪ್ರತಿಭಟನೆ ನಡೆಸಿದಾಗ  ಯಾವ ಮೂಲದಿಂದಾದರೂ ಬರಲಿ ತಮಗೆ ಮಾಮೂಲು ಬಂದರೆ ಸಾಕು ಹೋರಾಟದ ರೂಪರೇಷೆಯೇ ಬದಲಾಗಿ ಹೋಗುತ್ತದೆ. ದಲಿತರೇ ದಲಿತರ ಮೇಲೆ ದೌರ್ಜನ್ಯವೆಸಗಲು ಹೆಸುವುದಿಲ್ಲ ಆ ಹೋರಾಟ ಹಾದಿ ತಪ್ಪಿ ಬೀದಿ ಹಿಡಿದಿರುತ್ತದೆ.
ಸರ್ಕಾರದ ಸೌಲತ್ತು ಎಂಬ ಪ್ರಶ್ನೆ ಬಂದಾಗ, ಜಾತಿ ಮೀಸಲಾತಿ ಎಲ್ಲವನ್ನು ಅಳೆದು ತೂಗಿ ಮಾಪನ ಮಾಡುವ ಸರ್ಕಾರಗಳು ಒಂದು ಕಡೆಯಾದರೆ ಜಾತಿ ನಿರ್ಮೂಲನೆ ಮಾಡುತ್ತೇವೆ ಎಂದು ಸರ್ಕಾರಿ ಜಾಹಿರಾತು ಕೊಟ್ಟು ಫೋಸ್ ಕೊಡುವ ರಾಜಕೀಯ ನಾಯಕರು ಇನ್ನೊಂದು ಕಡೆ ಇವೆಲ್ಲವುಗಳ ನಡುವೆ ನಮ್ಮ ವಿಧಿ ಹಣೆ ಬರಹ ಎಂದು ಜೀವನ ಸಾಗಿಸುತ್ತಿರುವ ದಲಿತರು ಇನ್ನೊಂದು ಕಡೆ, ನೋಡಿ ಹೇಗಿದೆ ಪ್ರಕಾಶಿಸುತ್ತಿರುವ ಭವ್ಯ ಭಾರತದ ಪರಿಸ್ಥಿತಿ.