Wednesday 11 September 2013

ಆಚರಣೆಯಲ್ಲಿ ಅಸ್ಪೃಶ್ಯತೆಯೇ?

ಭಾರತೀಯ ಪರಂಪರೆಯಲ್ಲಿ ಗುರುವಿಗೆ ತನ್ನದೆಯಾದ ಮಹತ್ವವಿದೆ. ಅದಕ್ಕಾಗಿಯೇ ನಮ್ಮ ಗುರು-ಹಿರಿಯರು ಗುರುಬ್ರಹ್ಮ ಗುರು ವಿಷ್ಣು ಗುರುದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಎಂದು ಹೇಳಿರುವುದು. ಇನ್ನೊಂದು ಕಡೆ ಗುರುವಿನ ಗುಲಾಮನಾಗುವತನಕ ದೊರೆಯದು ಮುಕುತಿ ಎಂಬ ಮಾತಿನಲ್ಲಿಯೂ ಕೂಡ ಗುರುವಿನ ಬಗ್ಗೆ ಮತ್ತು ಗುರುವಿನ ಸ್ಥಾನಕ್ಕಿರುವ ಮಹತ್ವವನ್ನು ಸಾರಿ ಹೇಳುತ್ತದೆ.
ಆದರೆ, ಭಾರತೀಯ ಇತಿಹಾಸದಲ್ಲಿ ದಲಿತರು, ಸಮಾಜದ ಶೋಷಿತವರ್ಗ ಅಕ್ಷರ ಕಲಿಯುವುದೇ ಅಪರಾಧ ಎಂಬಂತ ಕಾಲದಲ್ಲಿ ತಮಗಾದ ಅವಮಾನಗಳನ್ನು ಸಹಿಸಿಕೊಂಡು ಶೋಷಿತರಿಗೂ ಅಕ್ಷರಜ್ಞಾನ ನೀಡಿ ಅಂಧಕಾರದಿಂದ ಬೆಳಕಿನಡೆಗೆ ತಂದ ಶೋಷಿತ ಸಮುದಾಯದ ಧೃವತಾರೆ ಸಾವಿತ್ರಿಬಾಯಿ ಫುಲೆಯವರ ಹೆಸರಿನಲ್ಲಿ ಶಿಕ್ಷಕರ ದಿನಾಚರಣೆ ಆಚರಣೆಯಾಗ ಬೇಕು ಎಂಬುದು ಶೋಷಿತರ ಆಸೆಯೂ ಕೂಡ ಆಗಿರಬಹದು. 
ಆದರೆ ಈ ದೇಶದ ಇತಿಹಾಸ ಅರಿಯದ ಮನುವಾದಿಗಳು, ಶಿಕ್ಷಕರ ಬಗ್ಗೆ ಗಂಟೆಗಟ್ಟಲೆ ಮಾತನಾಡುತ್ತಾರೆ ಹೊರತು ಸಾವಿತ್ರಿ ಬಗ್ಗೆ ಅಪ್ಪಿತಪ್ಪಿಯೂ ಪ್ರಸ್ತಾಪ ಮಾಡುವುದಿಲ್ಲ. ಮಾಡಿದರೆ ಅದರ ಮೂಲ ಏನೆಂಬುದು ಸಮಾಜಕ್ಕೆ ಗೊತ್ತಾಗುತ್ತದೆ ಎಂಬ ಭಯವೊ? ಅಥವಾ ಈಗಾಗಲೇ ಶಿಕ್ಷಕರ ಹೆಸರಿನಲ್ಲಿ ಆಚರಣೆ ಮಾಡುತ್ತಿರುವ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರ ಬಗ್ಗೆ ಇರುವ ಗೌರವ ಕಡಿಮಮೆಯಾಗುತ್ತದೆ ಎಂಬ ಆತಂಕವೋ ಗೊತ್ತಾಗುತ್ತಿಲ್ಲ?
ಅಸ್ಪೃಶ್ಯತೆಯ ಹೆಸರಿನಲ್ಲಿ ಅಕ್ಷರ ಜ್ಞಾನದಿಂದ ದೂರ ಇಟ್ಟಿದ್ದ ಬಹುಜನರ ನೋವನ್ನು ಅರಿತುಕೊಂಡ ಜ್ಯೋತಿಭಾ ಫುಲೆ ದೇಶದ ಶೋಷಿತರ ಪ್ರಗತಿಗಾಗಿ ಶಿಕ್ಷಣ ‘ಅಸ್ತ ಎಂಬುದನ್ನು ಅರಿತುಕೊಂಡು ಮಹಾರಾಷ್ಟ್ರ ರಾಜ್ಯದ ಜಿಲ್ಲೆಯೊಂದರಲ್ಲಿ ಶಿಕ್ಷಣ ಸಂಸ್ಥೆ ಯೊಂದು ಹುಟ್ಟು ಹಾಕುವ ಮೂಲಕ ದಲಿತ ವಿರೋಧಿಗಳಿಗೆ ಸಿಂಹಸ್ವಪ್ನವಾದರು. 
ತಾನು ಹುಟ್ಟು ಹಾಕಿದ ವಿದ್ಯಾ ಸಂಸ್ಥೆಗೆ ಶಿಕ್ಷಕರಾಗಿ ಬರಬೇಕೇ ಎಂದು ಗೇಲಿ ಮಾಡಿ ಹೀಯಾಳಿಸಿದ ಮೇಲ್ವರ್ಗದ ಬಗ್ಗೆ ತಲೆ ಕೆಡಿಸಿಕೊಳ್ಳದೆ ದೇಶದ ಮನುವಾದಿಗಳ ವಿರುದ್ಧ ಗಟ್ಟಿ ಮನಸ್ಸು ಮಾಡಿ ತಾನು ಕಟ್ಟಿದ ಸಂಸ್ಥೆಗೆ ತನ್ನ ಧರ್ಮ ಪತ್ನಿಯನ್ನೇ ಶಿಕ್ಷಕಿಯನ್ನಾಗಿ ನೇಮಿಸಿ ವಿರೋಧಿಗಳಿಗೆ ನಡುಕ ಹುಟ್ಟಿಸಿದರು. 
ಜ್ಯೋತಿ ಭಾ ಫುಲೆಯವರ ದಿಟ್ಟ ಕ್ರಮ ಕಟ್ಟಾ ಮನುವಾದಿಗಳಿಗೆ ಸಹಿಸಿಕೊಳ್ಳಲಾಗಲಿಲ್ಲ. ಮನುವಾದಿಗಳು ಮಾಡುವ ಎಲ್ಲಾ ಅವಮಾನಗಳನ್ನು ಬಹುಮಾನವೆಂದುಕೊಂಡ ಫುಲೆ, ಸಹಿಸದ ಶಕ್ತಿಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ತನ್ನ ಧರ್ಮಪತ್ನಿಯನ್ನೇ ಶಿಕ್ಷಕಿಯಾಗಿ ಪಾಠ ಮಾಡಲು ಸಜ್ಜುಗೊಳಿಸಿದರು. 
ಫುಲೆಯವರ ಮನದಾಳದ ನೋವು ಮತ್ತು ಕಾಳಜಿ ಏನೆಂಬುದು ಸಾವಿತ್ರಿಗೆ ಅರ್ಥವಾಗಿದ್ದರಿಂದ ಒಪ್ಪಿಕೊಂಡರು. ಒಪ್ಪಿಕೊಂಡ ವೃತ್ತಿ ಒಳ್ಳೆಯದಾದರೂ ಕೂಡ ದಟ್ಟ ಕಾನನವಾಗಿತ್ತು. ಕಾನನದಲ್ಲಿ ಕೂನ ಉಳಿಸಬೇಕು ಎಂದು ಶಪಥ ಮಾಡಿದ ಸಾವಿತ್ರಿಗೆ ಬರೀ ಅಪಮಾನಗಳ ಸರಮಾಲೆ.
ಶಿಕ್ಷಕಿಯಾಗಿ ಶಾಲೆಗೆ ಹೋಗುವುದನ್ನು ನೋಡಿದ ಮನುವಾದಿಗಳ ಮನಸ್ಸು ಒಪ್ಪಲೇ ಇಲ್ಲ. ಮಾತ್ರೋಶ್ರೀ ಸಾವಿತ್ರಿ ಅವರು ಹೋಗುವುದನ್ನು ಕಂಡ ಸಹಿಸದ ಕುತ್ಸಿತ ಮನಸ್ಸುಗಳು ಅವಳ ಮೇಲೆ ಮೊಟ್ಟೆಯಿಂದ ಹೊಡೆದು ಅವಮಾನಿಸಿದರು. ಅಲ್ಲದೆ ಸಗಣೆ ತೆಗೆದುಕೊಂಡು ಹೊಡೆದರು. ಇದನ್ನೆಲ್ಲಾ ಸಹಿಸಿಕೊಂಡ ಮಹಾತಾಯಿ, ಕುತ್ಸಿತ ಮನಸ್ಸುಗಳ ಕೈ ಮೇಲಾದಾಗ ಮರಮರ ಮರಿಗಿದ್ದು ಇಲ್ಲದ್ದಿಲ್ಲ. ಇದ್ದ ಒಂದು ಸೀರೆಗೆ ಸಗಣೆ ಮೆತ್ತಿಕೊಂಡಾಗ ಶಾಲೆಗೆ ಹೋಗುವುದನ್ನೇ ನಿರಾಕರಿಸಿದ ಸಾವಿತ್ರಿಗೆ ಜ್ಯೋತಿಭಾ ಫುಲೆಯವರ ಸಾಂತ್ವನದ ಮಾತು.
ಇದ್ದ ಒಂದು ಸೀರೆಗೆ ದುಷ್ಟರು ಹೊಡೆದ ಸೆಗಣೆ ಮೆತ್ತಿಕೊಂಡಿದೆ ಎಂದು ಗಂಡನಿಗೆ ತೋರಿಸುತ್ತ ಶಾಲೆಗೆ ಹೋಗಲು ನಿರಾಕರಿಸಿದ ಸಾವಿತ್ರಿಗೆ ನಿನ್ನ ಸೀರೆ ಮಾತ್ರ ಕೆಡುತ್ತೇ ಆದರೆ ನೀವು ಹೋಗದಿದ್ದರೆ ಅಲ್ಲಿ ಮಕ್ಕಳ ಬಾಳು ಹಾಳಾಗುತ್ತೇ. ಕತ್ತಲೆ ಬದುಕು ಹಸನಾಗಬೇಕಾದರೆ ನೀನು ಹೋಗಿ ಪಾಠ ಮಾಡಬೇಕು ಎಂದು ಧೈರ್ಯ ತುಂಬಿದ ಫುಲೆಯವರು ಈ ಸಮಾಜಕ್ಕೆ ಮಾದರಿಯಾಗುವುದಿಲ್ಲವೇ? ಆ ಸಂದರ್ಭದಲ್ಲಿ ಜಾತಿಯನ್ನು ಮೀರಿ ಬಲಿಷ್ಠರನ್ನು ಎದುರು ಹಾಕಿಕೊಂಡು ದುರ್ಬಲರಿಗೆ ಅಕ್ಷರ ಜ್ಞಾನ ನೀಡಿದ ಆ ತಾಯಿ ನಿಜವಾದ ಗುರುವಲ್ಲವೇ? 
ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಸಾವಿತ್ರಿಬಾಯಿ ಫುಲೆಯವರನ್ನು ನೆನೆಯದಿರುವುದು ವಿಷಾದನೀಯವಲ್ಲವೇ? ಒಂದಕ್ಷರ ಕಲಿಸಿದವರು ಗುರುವೆಂದು ಹೇಳುವ ಗಾದೆ ನಂಬುವ ನಾವುಗಳು, ಕಲಿಯಲು ಅರ್ಹರಲ್ಲ ಎಂದೇ ದೂರ ಇಟ್ಟಿದ ದುರ್ಬಲ ಸಮಾಜಕ್ಕೆ ಅಕ್ಷರ ಜ್ಞಾನ ನೀಡಿದ ಸಾವಿತ್ರಿ ಬಾಯಿ ಫುಲೆಯವರು ನಿಜವಾದ ಗುರುವಲ್ಲವೇ?