Tuesday 7 January 2014

ಸಿಎಂ ಅನುಕೂಲಸಿಂಧು ರಾಜಕೀಯಕ್ಕೆ ಅಂಟಿಕೊಂಡರೆ?

ಕಳಂಕರಹಿತ ಸರ್ಕಾರ ನಡೆಸುತ್ತೇವೆ ಎಂದು ಶಪಥ ಮಾಡಿದ್ದ ಮುಖ್ಯಮಂತ್ರಿಗಳು ಮಾತಿಗೆ ತಪ್ಪಿದ್ದಾರೆ. ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ ಎಂಬ ಗಂಭೀರ ಆರೋಪಕ್ಕಾಗಿ ಸಚಿವರಾಗಿದ್ದ ಕಲಘಟಗಿ ಶಾಸಕ ಸಂತೋಷ್ ಲಾಡ್‌ರ ತಲೆದಂಡ ಪಡೆದು ಸರ್ಕಾರದಲ್ಲಿ ಭ್ರಷ್ಟರಿಗೆ ರಕ್ಷಣೆ ಇಲ್ಲ ಎಂಬ ಖಡಕ್ ಸಂದೇಶ ನೀಡಿದ್ದ ಸಿ.ಎಂ. ಆ ವಿಶ್ವಾಸ ಉಳಿಸಿಕೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡೆ ಕೂಡ ಸಂಶಯಕ್ಕೆ ಎಡೆ ಮಾಡಿ ಕೊಡುತ್ತಿದೆ. 
    ಯಾವ ಆರೋಪಕ್ಕಾಗಿ ಸಂತೋಷ್ ಲಾಡ್‌ರ ರಾಜೀನಾಮೆ ಪಡೆಯಲಾಗಿತ್ತೋ ಅಂತದ್ದೇ ಗಂಭೀರ ಆರೋಪ ಎದುರಿಸುತ್ತಿರುವ ಕನಕಪುರ ಶಾಸಕ ಡಿ.ಕೆ. ಶಿವಕುಮಾರ್, ಶಿವಾಜಿನಗರ ಕ್ಷೇತ್ರದ ಶಾಸಕ ಆರ್. ರೋಷನ್ ಬೇಗ್ ಅವರನ್ನು   ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ನಾಯಕರು ಈಗಾಗಲೇ ತೀವ್ರ ಅಸಮಾಧಾನಗೊಂಡಿದ್ದಾರೆ. ಕಳೆದ ಏಳು ತಿಂಗಳುಗಳಿಂದ ಸಿದ್ದರಾಮಯ್ಯನವರು ಯಾವ ನಾಯಕರೊಂದಿಗೂ ಸಂಪುಟ ವಿಸ್ತರಣೆಯ ಕುರಿತು ಚರ್ಚಿಸದೆ ಮೌನವಾಗಿದ್ದರೂ ಕೂಡ ಹೈಕಮಾಂಡ್ ಸೂಚನೆಗೆ ಮಣಿದು ಸಚಿವ ಸಂಪುಟ ವಿಸ್ತರಣೆ ಮಾಡಬೇಕಾದ ಅನಿವಾರ್ಯ ಸೃಷ್ಟಿಯಾಯಿತು. 
ಡಿ.ಕೆ.ಶಿವಕುಮಾರ್ ಮತ್ತು ರೋಷನ್ ಬೇಗ್‌ರನ್ನು ಬಿಟ್ಟು ಕ್ಲಿನ್ ಇಮೇಜ್ ಹೊಂದಿರುವ ಶಾಸಕರನ್ನು ಸಂಪುಟಕ್ಕೆ  ಸೇರಿ ಸಿಕೊಳ್ಳಲು ಸಾಧ್ಯವೇ ಎಂಬ ಪರ್ಯಾಯ ಕ್ರಮಗಳ ಕುರಿತು ತೀವ್ರ ಚರ್ಚೆ ನಡೆಸಿದರೂ, ಮುಖ್ಯಂತ್ರಿಗಳ ಕಸರತ್ತು  ಕೈಗೂಡಲಿಲ. ಇದಕ್ಕೆ ಕಾರಣ ಮುಖ್ಯಮಂತ್ರಿಗಳು ಯಾರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಮಗೆ ತೋಚಿದಂತೆ ನಿರ್ಣಯ   ಕೈಗೊಳ್ಳುತ್ತಾರೆ ಎಂಬ ರಾಜ್ಯ ನಾಯಕರ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ ಹೈಕಮಾಂಡ್ ವರಿಷ್ಠರು ಮುಖ್ಯ ಮಂತ್ರಿಗಳ ಸಲಹೆ ಸೂಚನೆಗೆ ಕ್ಯಾರೆ ಎನ್ನದೆ ಸಚಿವರನ್ನಾಗಿಸಲು ಹಸಿರು ನಿಶಾನೆ ತೋರಿಸಿದ್ದಾರೆ ಎಂಬುದು ಸರ್ವವಿಧಿತ.
ಹೈಕಮಾಂಡ್ ಸೂಚನೆಗೆ ಮಣಿದು, ಮುಖ್ಯಮಂತ್ರಿಗಳು ಸಂಪುಟ ವಿಸ್ತರಣೆಗೆ ಮುಂದಾಗುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಅದು ಇನ್ನೂ ನಿಂತಿಲ್ಲ. ಪಕ್ಷದಲ್ಲಿ ಹಿರಿಯ ಶಾಸಕರು ಬಹಿರಂಗ ಹೇಳಿಕೆಗಳ ಮೂಲಕ ಮುಖ್ಯಮಂತ್ರಿ ಸಿದ್ದ ರಾಮಯ್ಯ ಹಾಗೂ ಹೈಕಮಾಂಡ್ ನಡೆಯನ್ನೇ ಪ್ರಶ್ನಿಸುತ್ತಿದ್ದಾರೆ. ಅದರಲ್ಲೂ ಲಿಂಗಾಯಿತ ಸಮುದಾಯದ ಹಿರಿಯ ಶಾಸಕರಾದ ಬಸವರಾಜ ರಾಯರೆಡ್ಡಿ, ಕೆ.ಬಿ.ಕೋಳಿವಾಡ, ಎ.ಬಿ.ಮಾಲಕರೆಡ್ಡಿ ನೇರವಾಗಿ ತಮ್ಮ ಅಸಮಾಧಾಮವನ್ನು ಹೊರಹಾಕುತ್ತಿದ್ದಾರೆ. ನಮ್ಮನ್ನು ನಿರ್ಲಕ್ಷಿಸಿರುವುದರ ಪರಿಣಾಮ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರತಿಕೂಲ ಪರಿಣಾಮ ಎದುರಿಸಲಿದೆ ಎಂದು ಎಚ್ಚರಿಕೆಯ ಘಂಟೆಯನ್ನು ಭಾರಿಸಿದ್ದಾರೆ. ಬಲಿಜಿಗ ಸಮುದಾಯಕ್ಕೆ ಅವಕಾಶ ನೀಡುವಂತೆ ಶಾಸಕ ಮನೋಹರ ತಹಶೀಲ್ದಾರರ ಮನವಿಗೂ ಸಿಎಂ ಕ್ಯಾರೆ ಅನ್ನಲಿಲ್ಲ.  
ಇತ್ತ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಲು ತುಮಕೂರು ಜಿಲ್ಲೆಯ ಮಧುಗಿರಿ ಶಾಸಕ ಕೆ.ಎನ್. ರಾಜಣ್ಣನವರೇ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಸೋಲುವವರಿಗೆ ಟಿಕೆಟ್ ಕೊಟ್ಟು ನಿರೀಕ್ಷಿತ ಸ್ಥಾನ ಬರೆದೇ ಇದ್ದರೇ ಮುಖ್ಯಮಂತ್ರಿಗಳ ತಲೆದಂಡ ಗ್ಯಾರಂಟಿ ಎಂಬುದು ಸಿಎಂ ಸಿದ್ದರಾಮಯ್ಯ ಅವರ ಬೆಂಬಲಿಗರಲ್ಲಿ ಆತಂಕ ಮನೆ ಮಾಡಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಯಾಗುತ್ತಿದೆ. ಇದರಿಂದಾಗಿಯೇ ನಮಗೆ ಸಚಿವ ಸ್ಥಾನ ಸಿಗದಿದ್ದರೂ ಪರವಾಗಿಲ್ಲ. ಪರಮೇಶ್ವರ್ ಮಂತ್ರಿಯಾಗಬಾರದು ಎಂಬುದು ಸಿದ್ದು ಬೆಂಬಲಿಗರ ಆಸೆಯಾಗಿದೆ.