Thursday, 21 November 2013

ಕುತ್ಸಿತ ಮನಸ್ಸಿನ ಕತ್ತಿಗೇನು ಗೊತ್ತು ಏಕೀಕರಣದ ಇತಿಹಾಸ

ಕಬ್ಬು ಬೆಳೆಗಾರರ ಪ್ರತಿಭಟನೆ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿರಬಹುದು. ಅದನ್ನು ನಿವಾರಣೆ ಮಾಡುವತ್ತ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಆದರೆ ಸರ್ಕಾರ ಘೋಷಿಸಿದ ಬೆಂಬಲ ಬೆಲೆ ಈ ಕಾರ್ಖಾನೆಗಳು ನೀಡುತ್ತ ವೆಯೇ ಒಂದು ವೇಳೆ ಬೆಂಬಲ ಬೆಲೆ ನೀಡದೆ ಹೋದರೆ ಅಂತಹ ಕಾರ್ಖಾನೆಗಳನ್ನು ಮುಚ್ಚಿಸುವ ಅಥವಾ ತನ್ನ ಸುಪರ್ದಿಗೆ ತೆಗೆದುಕೊಳ್ಳುವ ದಿಟ್ಟತನವನ್ನು ಮುಖ್ಯಮಂತ್ರಿಗಳು ತೆಗೆದುಕೊಳ್ಳುತ್ತಾರಾ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ.
ರಾಜ್ಯದಲ್ಲಿ ಬಹುತೇಕ ಕಾರ್ಖಾನೆಗಳು ರಾಜಕೀಯ ನಾಯಕರ ಕೈವಶದಲ್ಲಿವೆ. ಬಂಡವಾಳಶಾಹಿ ರಾಜಕೀಯ ನಾಯಕರು ಸರ್ಕಾರ ಘೋಷಣೆ ಮಾಡಿದ ಬೆಲೆ ಯಾವುದೇ ಕಾರಣಕ್ಕೂ ನೀಡಲು ಸಾಧ್ಯವಿಲ್ಲ ಎಂದು ಈಗಾಗಲೇ ಘೋಷಿಸಿದ್ದಾರೆ.
ಸಕ್ಕರೆ ಖಾತೆ ನಿರ್ವಹಣೆ ಮಾಡುತ್ತಿರುವ ಸಚಿವ ಪ್ರಕಾಶ್ ಹುಕ್ಕೇರಿಯವರ ಒಡೆತನದಲ್ಲಿಯೂ ಹಲವು ಕಾರ್ಖಾನೆಗಳಿವೆ. ಇಲ್ಲಿ ಖಾತೆ ನಿರ್ವಹಣೆ ಮಾಡುವುದಕ್ಕಿಂತ ಮುಖ್ಯವಾಗಿ ಕಾರ್ಖಾನೆ ಉಳಿಸಿಕೊಳ್ಳುವಲ್ಲಿಯೇ ತಮ್ಮ ಚಾಣಾಕ್ಷತನ ತೋರಿಸಬೇಕಾದ ಅನಿವಾರ್ಯತೆ ಹುಕ್ಕೇರಿಯವರಿಗಿದೆ. 
ಈ ಪ್ರಭಾವಿ ರಾಜಕಾರಣಿಗಳ ಹಿಡಿತದಲ್ಲಿ ಕಾರ್ಖಾನೆಗಳಿರುವುದರಿಂದ ‘ಶುಗರ್ ಲಾಬಿ’ ಹೆಚ್ಚಾಗಿದೆ. ಕಬ್ಬು ದರ ನಿಗದಿ ವಿಚಾರ ಬಿಕ್ಕಟ್ಟು ಸೃಷ್ಟಿಸಿದೆ. ಜತೆಗೆ ಕಬ್ಬಿನ ಸಮಸ್ಯೆ ಹೆಚ್ಚಾದಷ್ಟು ರಾಜಕೀಯ ದಾಳವಾಗಿ ಬಳಸಿಕೊಳ್ಳಲು ಪ್ರತಿಪಕ್ಷಗಳು ಮತ್ತು ರೈತ ನಾಯಕರು ಹವಣಿಸುತ್ತಿದ್ದಾರೆ. ಸರ್ಕಾರ ಮತ್ತು ಕಾರ್ಖಾನೆಗಳ ಮಧ್ಯೆ ನಡೆದ ಈ ಶೀತಲ ಸಮರದಿಂದ ರೈತರು ಮತ್ತೆ ಪ್ರತಿಭಟನೆಯ ದಾರಿ ಹಿಡಿಯದೆ ವಿಧಿಯಿಲ್ಲ. 
ಸರ್ಕಾರದಿಂದ ಎಲ್ಲಾ ರೀತಿಯ ಮೂಲಸೌಕರ್ಯಗಳನ್ನು ಸದುಪಯೋಗಪಡಿಸಿ ಕೊಂಡು ಸೂಚಿಸಿದ ಬೆಂಬಲ ಬೆಲೆ ನೀಡುವುದಿಲ್ಲ ಎಂದರೆ ಈ ಬಂಡವಾಳಶಾಹಿಗಳ ಕಪಿಮುಷ್ಟಿಯಲ್ಲಿ ಸರ್ಕಾರ ನಡೆಯುತ್ತಿದೆ ಎಂದೇ ಸ್ಪಷ್ಟ. ಹಾಗಾದರೆ ಈ ಸರ್ಕಾರ ಅಂತಹ ಕಾರ್ಖಾನೆಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳಬಾರದೇಕೆ? ಅಥವಾ ಸರ್ಕಾರ ಘೋಷಿಸಿದ ಬೆಂಬಲ ಬೆಲೆ ನೀಡದೆ ಇದ್ದ ಕಂಪೆನಿಗಳನ್ನು ಸೂಪರ್‌ಸೀಡ್ ಮಾಡಬಾರದೆ? ಒಂದು ವೇಳೆ ಸರ್ಕಾರ ಅಂತಹ ನಿರ್ಧಾರ ತೆಗೆದುಕೊಳ್ಳಲು ಮುಂದಾದರೆ ಜೇನುಗೂಡಿಗೆ ಕೈಹಾಕಿದಂತೆ. ಆಡಳಿತ ಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ತಿರುಗಿ ಬೀಳುವುದರಲ್ಲಿ ಸಂಶಯವೇ ಇಲ್ಲ. ಈಗಾಗಲೇ ಕೆಲವು ಸಚಿವರ ಕಾರ್ಯವೈಖರಿಗೆ ಬೇಸತ್ತ ಶಾಸಕರು ಹೈಕಮಾಂಡ್‌ಗೆ ಕಿವಿ ಊದಿದ್ದಾರೆ. ಇದನ್ನು ಅರಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾಣನಡೆ ಇಟ್ಟಿದ್ದಾರೆ. ಸಚಿವರ ಬಗ್ಗೆ ಕ್ರಮಕೈಗೊಂಡರೆ ನಾನು ಅದಕ್ಕೆ ಹೊಣೆಯಲ್ಲ ಎಂದು ಈಗಾಗಲೇ ಬಿಸಿ ಮುಟ್ಟಿಸಿದ್ದಾರೆ. ಒಂದೆಡೆ ರಾಜ್ಯಪಾಲರು ಸಚಿವರ ಕಾರ್ಯವೈಖರಿಗೆ ಛಾಟೀ ಬೀಸಿದರೆ ಮತ್ತೊಂದಡೆ ಅತೃಪ್ತ ಶಾಸಕರು ಒಳಗೊಳಗೆ ಕತ್ತಿ ಮಸೆಯುತ್ತಿದ್ದಾರೆ. 

ವರಸೆ ಬದಲಿಸಿದ 'ನರ' ಮೋದಿ

ಗುಜರಾತಿನಲ್ಲಿ ಮಾಡಿದ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಸಂಘ ಪರಿವಾರದವರು, ಮೋದಿಯನ್ನು ಪ್ರಧಾನಿ ಪಟ್ಟಕ್ಕೆ ಘೋಷಣೆ ಮಾಡಲಾಗಿದೆ. ಬಿಜೆಪಿಯ ಹಿರಿಯ ನಾಯಕರ ಹತಾಶೆಯಿಂದ ಬೇಸತ್ತ ಸಂಘಪರಿವಾರ ಮೋದಿಗೆ ಬಹುಪರಾಕ್ ಎನ್ನುತ್ತಿದ್ದಾರೆ. ಅಂದಹಾಗೇ ನರೇಂದ್ರ ಮೋದಿ ಅಭಿವೃದ್ಧಿ ಹರಿಕಾರನೇ? ಈ ದೇಶದ ಪ್ರಧಾನಿಯಾಗಲು ಅರ್ಹನೇ? ಎಂಬ ಪ್ರಶ್ನೆಗಳು ನಮ್ಮನ್ನು ಕಾಡುತ್ತಿವೆ.

ಪ್ರಧಾನಿ ಪಟ್ಟಕ್ಕೆ ಅರ್ಹನೋ ಅನರ್ಹನೋ ಎಂಬುದನ್ನು ಈ ದೇಶದ ಜನ ತೀರ್ಮಾ ನಿಸುತ್ತಾರೆ.
ದೇಶದ ಪ್ರಧಾನಿ ಪಟ್ಟಕ್ಕೆ ಅರ್ಹರೆಂಬಂತೆ ಕೆಲವು ಮಾಧ್ಯಮಗಳು ಹೆಚ್ಚಿನ ಪ್ರಚಾರ ನೀಡಿ ದ್ದರಿಂದ ಮೋದಿ ರಾಷ್ಟ್ರೀಯ ನಾಯಕ ರಾಗಿ ಹೊರಹೊಮ್ಮಿದರು ಎಂಬುದು ಸರ್ವ ವಿಧಿತ. 
ಸಾಮಾಜಿಕ ಜಾಲತಾಣಗಳು ಅದರಲ್ಲೂ ಈ ಜಾಲ ತಾಣಗಳಲ್ಲಿ ಉಸಿರಾಡುವ ಕಾರ್ಪೋ ರೇಟ್ ವಲಯದ ಜನ ನರೇಂದ್ರ ಮೋದಿ ಯವರನ್ನು ಹೆಚ್ಚಿನ ರೀತಿಯಲ್ಲಿ ವೈಭವೀಕರಿಸಿ ಪ್ರಚಾರ ಕೊಡುತ್ತಿವೆ. ಕೊಡುತ್ತಲೇ ಇವೆ. ಇದರಿಂದಾಗಿ ಮೋದಿ ಎಂಬ ನರಹಂತಕನ ಹೆಸರು ಎಲ್ಲೆಡೆ ಪಸರಿಸುತ್ತಿದೆ.

ಅಭಿವೃದ್ಧಿ ಎಂದರೆ ಏನು ಎಂಬುದೇ ಅರ್ಥವಿಲ್ಲದೆ, ಈ ಮಹಾಶಯರು ಗುಜರಾತಿನಲ್ಲಿ ನಿರ್ಮಾಣವಾದ ಚತುಷ್ಪುಥ ರಸ್ತೆ ನಾಲ್ಕಾರು ಮೇಲ್ಸೇತುವೆಗಳನ್ನೇ ಮುಂದಿಟ್ಟುಕೊಂಡು ಅದನ್ನೇ ಅಭಿವೃದ್ಧಿಯೆಂದು ಅಪಾರ್ಥ ಮಾಡಿಕೊಂಡಿರುವ ಕಾರ್ಪೋ ರೇಟ್ ವಲಯ ಮತ್ತು ಸಂಘಪರಿವಾರ ವಿಧಿ ಯಿಲ್ಲದೆ ಅಪ್ಪಿಕೊಂಡಿದೆ.

Saturday, 19 October 2013

ಸಂಪ್ರದಾಯ ಸಮರ್ಥಿಸಿಕೊಳ್ಳುತ್ತಿರುವ ಜಾತಿ ಜಂಗಮರು

ಭಾರತ ಆಧುನಿಕವಾಗಿ ಎಷ್ಟೇ ಮುಂದುವರಿದರೂ ಮೂಢನಂಬಿಕೆಗಳು ಮಾತ್ರ ಸಮಾಜದಿಂದ ದೂರವಾಗುತ್ತಿಲ್ಲ. ದೂರವಾಗುವುದು ಇಲ್ಲ ಎಂದು ತೋರುತ್ತಿದೆ. ಸಂಪ್ರದಾಯಗಳು ಕೂಡ ಹೊಸತನ ಮೇಳೈಸಿಕೊಂಡು ಮುಂದುವರಿಯುತ್ತಿವೆ. ಇಂತಹ ಆಚರಣಿಗಳಿಗೆ ನಮ್ಮ ಮಾಧ್ಯಮಗಳು ಪುಷ್ಟಿ ನೀಡುತ್ತಿವೆ. 
ಪ್ರಸ್ತುತ ಸಂದರ್ಭದಲ್ಲಿಯೂ ಕೂಡ ಸಂಪ್ರದಾಯಗಳನ್ನು ಸಮರ್ಥಿಸಿಕೊಳ್ಳುತ್ತಿರುವ ಜಾತಿ ಜಂಗಮರು ಹೆಚ್ಚಾಗುತ್ತಿದ್ದಾರೆ ಇದರಿಂದಾಗಿ ಸನಾತನವಾದಿಗಳ ಕೈಮೇಲಾಗುತ್ತಿದೆ. ಇತ್ತೀಚೆಗೆ ರಾಜ್ಯದ ಗುಲಬರ್ಗಾ ಜಿಲ್ಲೆಯ ಜೇವರ್ಗಿ ತಾಲೂಕಿನಲ್ಲಿನಡೆದ ಅಡ್ಡಪಲ್ಲಕ್ಕಿ ಉತ್ಸವ ದಕ್ಕೆ ಜ್ವಲಂತ ಸಾಕ್ಷಿಯಾಗಿದೆ.
ಕಾಯಕಯೋಗಿ ಅಣ್ಣ ಬಸವಣ್ಣನವರ ಹೆಸರೇಳಿಕೊಂಡು ಮಾಡಬಾರದ ಆಚಾರಗಳನ್ನು ಮಾಡುತ್ತಾ ವೀರ ಶೈವ ಧರ್ಮಕ್ಕೆ ಕಳಂಕ ತರುತ್ತಿರುವುದು ವಿಷಾದನೀಯ. ವೈಚಾರಿಕತೆಯ ನೆಲೆಗಟ್ಟಿನಲ್ಲಿ ಭಕ್ತರನ್ನು ಸೃಷ್ಟಿ ಮಾಡಬೇಕಾದ ಮಠಾಧೀಶರು, ಅಂಧಕಾರದಲ್ಲಿಯೇ ಮುಂದುವರಿ ಯಲು ಪ್ರೋತ್ಸಾಹಿಸುತ್ತಿದ್ದಾರೆ. 
ಮಠಾಧೀಶರು ತಮ್ಮತನವನ್ನು ಮರೆತು ದಸರಾ ದರ್ಬಾರ್ ಹೆಸರಿನಲ್ಲಿ ವೈಭವಪೇತವಾಗಿ ಅಡ್ಡಪಲ್ಲಕ್ಕಿಯಲ್ಲಿ ಆಸೀನರಾಗುವ ಚಪಲ ಈ ಸನ್ಯಾಸಿಗಳಿಗೆ ಏಕೆಬೇಕು? ಧಾರ್ಮಿಕ ನಂಬಿಕೆಗಳ ಹೆಸರಿನಲ್ಲಿ ದಸರಾ ದರ್ಬಾರ್ ನಡೆಸುತ್ತಿರುವುದು ಸ್ಪಷ್ಟ ಕಾನೂನು ಉಲ್ಲಂಘನೆ ಎಂದು ಬೇರೆ ಹೇಳಬೇಕಾಗಿಲ್ಲ.?

ಸಂವಿಧಾನದ ಪ್ರಕಾರ ಪ್ರತಿಯೊಬ್ಬರಿಗೂ ಧಾರ್ಮಿಕ ಹಕ್ಕು ಇದೆ. ಆದರೆ ಹಕ್ಕನ್ನು ಉಪಯೋಗಿಸುವಕೊಳ್ಳುವ ಮಾರ್ಗ ಕೆಟ್ಟದ್ದಾಗಿದೆ. ಹಿಂದಿನಿಂದಲೂ ನಡೆದುಕೊಂಡ ಬಂದ ಸಂಪ್ರದಾಯಗಳು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ ಎಂದು ಸಮರ್ಥಿಸಿಕೊಳ್ಳುತ್ತಿರುವ ಮಠಾಧೀಶರ ಮಾತು ಒಪ್ಪಲು ಹೇಗೆ ಸಾಧ್ಯ.? 

Wednesday, 11 September 2013

ಆಚರಣೆಯಲ್ಲಿ ಅಸ್ಪೃಶ್ಯತೆಯೇ?

ಭಾರತೀಯ ಪರಂಪರೆಯಲ್ಲಿ ಗುರುವಿಗೆ ತನ್ನದೆಯಾದ ಮಹತ್ವವಿದೆ. ಅದಕ್ಕಾಗಿಯೇ ನಮ್ಮ ಗುರು-ಹಿರಿಯರು ಗುರುಬ್ರಹ್ಮ ಗುರು ವಿಷ್ಣು ಗುರುದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಎಂದು ಹೇಳಿರುವುದು. ಇನ್ನೊಂದು ಕಡೆ ಗುರುವಿನ ಗುಲಾಮನಾಗುವತನಕ ದೊರೆಯದು ಮುಕುತಿ ಎಂಬ ಮಾತಿನಲ್ಲಿಯೂ ಕೂಡ ಗುರುವಿನ ಬಗ್ಗೆ ಮತ್ತು ಗುರುವಿನ ಸ್ಥಾನಕ್ಕಿರುವ ಮಹತ್ವವನ್ನು ಸಾರಿ ಹೇಳುತ್ತದೆ.
ಆದರೆ, ಭಾರತೀಯ ಇತಿಹಾಸದಲ್ಲಿ ದಲಿತರು, ಸಮಾಜದ ಶೋಷಿತವರ್ಗ ಅಕ್ಷರ ಕಲಿಯುವುದೇ ಅಪರಾಧ ಎಂಬಂತ ಕಾಲದಲ್ಲಿ ತಮಗಾದ ಅವಮಾನಗಳನ್ನು ಸಹಿಸಿಕೊಂಡು ಶೋಷಿತರಿಗೂ ಅಕ್ಷರಜ್ಞಾನ ನೀಡಿ ಅಂಧಕಾರದಿಂದ ಬೆಳಕಿನಡೆಗೆ ತಂದ ಶೋಷಿತ ಸಮುದಾಯದ ಧೃವತಾರೆ ಸಾವಿತ್ರಿಬಾಯಿ ಫುಲೆಯವರ ಹೆಸರಿನಲ್ಲಿ ಶಿಕ್ಷಕರ ದಿನಾಚರಣೆ ಆಚರಣೆಯಾಗ ಬೇಕು ಎಂಬುದು ಶೋಷಿತರ ಆಸೆಯೂ ಕೂಡ ಆಗಿರಬಹದು. 
ಆದರೆ ಈ ದೇಶದ ಇತಿಹಾಸ ಅರಿಯದ ಮನುವಾದಿಗಳು, ಶಿಕ್ಷಕರ ಬಗ್ಗೆ ಗಂಟೆಗಟ್ಟಲೆ ಮಾತನಾಡುತ್ತಾರೆ ಹೊರತು ಸಾವಿತ್ರಿ ಬಗ್ಗೆ ಅಪ್ಪಿತಪ್ಪಿಯೂ ಪ್ರಸ್ತಾಪ ಮಾಡುವುದಿಲ್ಲ. ಮಾಡಿದರೆ ಅದರ ಮೂಲ ಏನೆಂಬುದು ಸಮಾಜಕ್ಕೆ ಗೊತ್ತಾಗುತ್ತದೆ ಎಂಬ ಭಯವೊ? ಅಥವಾ ಈಗಾಗಲೇ ಶಿಕ್ಷಕರ ಹೆಸರಿನಲ್ಲಿ ಆಚರಣೆ ಮಾಡುತ್ತಿರುವ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರ ಬಗ್ಗೆ ಇರುವ ಗೌರವ ಕಡಿಮಮೆಯಾಗುತ್ತದೆ ಎಂಬ ಆತಂಕವೋ ಗೊತ್ತಾಗುತ್ತಿಲ್ಲ?
ಅಸ್ಪೃಶ್ಯತೆಯ ಹೆಸರಿನಲ್ಲಿ ಅಕ್ಷರ ಜ್ಞಾನದಿಂದ ದೂರ ಇಟ್ಟಿದ್ದ ಬಹುಜನರ ನೋವನ್ನು ಅರಿತುಕೊಂಡ ಜ್ಯೋತಿಭಾ ಫುಲೆ ದೇಶದ ಶೋಷಿತರ ಪ್ರಗತಿಗಾಗಿ ಶಿಕ್ಷಣ ‘ಅಸ್ತ ಎಂಬುದನ್ನು ಅರಿತುಕೊಂಡು ಮಹಾರಾಷ್ಟ್ರ ರಾಜ್ಯದ ಜಿಲ್ಲೆಯೊಂದರಲ್ಲಿ ಶಿಕ್ಷಣ ಸಂಸ್ಥೆ ಯೊಂದು ಹುಟ್ಟು ಹಾಕುವ ಮೂಲಕ ದಲಿತ ವಿರೋಧಿಗಳಿಗೆ ಸಿಂಹಸ್ವಪ್ನವಾದರು. 
ತಾನು ಹುಟ್ಟು ಹಾಕಿದ ವಿದ್ಯಾ ಸಂಸ್ಥೆಗೆ ಶಿಕ್ಷಕರಾಗಿ ಬರಬೇಕೇ ಎಂದು ಗೇಲಿ ಮಾಡಿ ಹೀಯಾಳಿಸಿದ ಮೇಲ್ವರ್ಗದ ಬಗ್ಗೆ ತಲೆ ಕೆಡಿಸಿಕೊಳ್ಳದೆ ದೇಶದ ಮನುವಾದಿಗಳ ವಿರುದ್ಧ ಗಟ್ಟಿ ಮನಸ್ಸು ಮಾಡಿ ತಾನು ಕಟ್ಟಿದ ಸಂಸ್ಥೆಗೆ ತನ್ನ ಧರ್ಮ ಪತ್ನಿಯನ್ನೇ ಶಿಕ್ಷಕಿಯನ್ನಾಗಿ ನೇಮಿಸಿ ವಿರೋಧಿಗಳಿಗೆ ನಡುಕ ಹುಟ್ಟಿಸಿದರು. 
ಜ್ಯೋತಿ ಭಾ ಫುಲೆಯವರ ದಿಟ್ಟ ಕ್ರಮ ಕಟ್ಟಾ ಮನುವಾದಿಗಳಿಗೆ ಸಹಿಸಿಕೊಳ್ಳಲಾಗಲಿಲ್ಲ. ಮನುವಾದಿಗಳು ಮಾಡುವ ಎಲ್ಲಾ ಅವಮಾನಗಳನ್ನು ಬಹುಮಾನವೆಂದುಕೊಂಡ ಫುಲೆ, ಸಹಿಸದ ಶಕ್ತಿಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ತನ್ನ ಧರ್ಮಪತ್ನಿಯನ್ನೇ ಶಿಕ್ಷಕಿಯಾಗಿ ಪಾಠ ಮಾಡಲು ಸಜ್ಜುಗೊಳಿಸಿದರು. 
ಫುಲೆಯವರ ಮನದಾಳದ ನೋವು ಮತ್ತು ಕಾಳಜಿ ಏನೆಂಬುದು ಸಾವಿತ್ರಿಗೆ ಅರ್ಥವಾಗಿದ್ದರಿಂದ ಒಪ್ಪಿಕೊಂಡರು. ಒಪ್ಪಿಕೊಂಡ ವೃತ್ತಿ ಒಳ್ಳೆಯದಾದರೂ ಕೂಡ ದಟ್ಟ ಕಾನನವಾಗಿತ್ತು. ಕಾನನದಲ್ಲಿ ಕೂನ ಉಳಿಸಬೇಕು ಎಂದು ಶಪಥ ಮಾಡಿದ ಸಾವಿತ್ರಿಗೆ ಬರೀ ಅಪಮಾನಗಳ ಸರಮಾಲೆ.
ಶಿಕ್ಷಕಿಯಾಗಿ ಶಾಲೆಗೆ ಹೋಗುವುದನ್ನು ನೋಡಿದ ಮನುವಾದಿಗಳ ಮನಸ್ಸು ಒಪ್ಪಲೇ ಇಲ್ಲ. ಮಾತ್ರೋಶ್ರೀ ಸಾವಿತ್ರಿ ಅವರು ಹೋಗುವುದನ್ನು ಕಂಡ ಸಹಿಸದ ಕುತ್ಸಿತ ಮನಸ್ಸುಗಳು ಅವಳ ಮೇಲೆ ಮೊಟ್ಟೆಯಿಂದ ಹೊಡೆದು ಅವಮಾನಿಸಿದರು. ಅಲ್ಲದೆ ಸಗಣೆ ತೆಗೆದುಕೊಂಡು ಹೊಡೆದರು. ಇದನ್ನೆಲ್ಲಾ ಸಹಿಸಿಕೊಂಡ ಮಹಾತಾಯಿ, ಕುತ್ಸಿತ ಮನಸ್ಸುಗಳ ಕೈ ಮೇಲಾದಾಗ ಮರಮರ ಮರಿಗಿದ್ದು ಇಲ್ಲದ್ದಿಲ್ಲ. ಇದ್ದ ಒಂದು ಸೀರೆಗೆ ಸಗಣೆ ಮೆತ್ತಿಕೊಂಡಾಗ ಶಾಲೆಗೆ ಹೋಗುವುದನ್ನೇ ನಿರಾಕರಿಸಿದ ಸಾವಿತ್ರಿಗೆ ಜ್ಯೋತಿಭಾ ಫುಲೆಯವರ ಸಾಂತ್ವನದ ಮಾತು.
ಇದ್ದ ಒಂದು ಸೀರೆಗೆ ದುಷ್ಟರು ಹೊಡೆದ ಸೆಗಣೆ ಮೆತ್ತಿಕೊಂಡಿದೆ ಎಂದು ಗಂಡನಿಗೆ ತೋರಿಸುತ್ತ ಶಾಲೆಗೆ ಹೋಗಲು ನಿರಾಕರಿಸಿದ ಸಾವಿತ್ರಿಗೆ ನಿನ್ನ ಸೀರೆ ಮಾತ್ರ ಕೆಡುತ್ತೇ ಆದರೆ ನೀವು ಹೋಗದಿದ್ದರೆ ಅಲ್ಲಿ ಮಕ್ಕಳ ಬಾಳು ಹಾಳಾಗುತ್ತೇ. ಕತ್ತಲೆ ಬದುಕು ಹಸನಾಗಬೇಕಾದರೆ ನೀನು ಹೋಗಿ ಪಾಠ ಮಾಡಬೇಕು ಎಂದು ಧೈರ್ಯ ತುಂಬಿದ ಫುಲೆಯವರು ಈ ಸಮಾಜಕ್ಕೆ ಮಾದರಿಯಾಗುವುದಿಲ್ಲವೇ? ಆ ಸಂದರ್ಭದಲ್ಲಿ ಜಾತಿಯನ್ನು ಮೀರಿ ಬಲಿಷ್ಠರನ್ನು ಎದುರು ಹಾಕಿಕೊಂಡು ದುರ್ಬಲರಿಗೆ ಅಕ್ಷರ ಜ್ಞಾನ ನೀಡಿದ ಆ ತಾಯಿ ನಿಜವಾದ ಗುರುವಲ್ಲವೇ? 
ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಸಾವಿತ್ರಿಬಾಯಿ ಫುಲೆಯವರನ್ನು ನೆನೆಯದಿರುವುದು ವಿಷಾದನೀಯವಲ್ಲವೇ? ಒಂದಕ್ಷರ ಕಲಿಸಿದವರು ಗುರುವೆಂದು ಹೇಳುವ ಗಾದೆ ನಂಬುವ ನಾವುಗಳು, ಕಲಿಯಲು ಅರ್ಹರಲ್ಲ ಎಂದೇ ದೂರ ಇಟ್ಟಿದ ದುರ್ಬಲ ಸಮಾಜಕ್ಕೆ ಅಕ್ಷರ ಜ್ಞಾನ ನೀಡಿದ ಸಾವಿತ್ರಿ ಬಾಯಿ ಫುಲೆಯವರು ನಿಜವಾದ ಗುರುವಲ್ಲವೇ?



Tuesday, 6 August 2013

ಸಿದ್ದು ಸೇಡಿನ ರಾಜಕಾರಣ ಇತಿಹಾಸ ಕೆದಕಿ ಪಡೆದದ್ದು ಏನು?

ಕೇಂದ್ರ ಸರ್ಕಾರದ ಯುಪಿಎ ಅವಧಿ ಕೇವಲ ಒಂಭತ್ತು ತಿಂಗಳು ಇರುವಾಗಲೇ ಕೇಂದ್ರ ಚುನಾವಣಾ ಆಯೋಗ ಉಪ ಚುನಾವಣೆಗೆ ಅಧಿಸೂಚನೆ ಹೊರಡಿಸಿದೆ. ಒಲ್ಲದ ಮನಸ್ಸಿನಿಂದ ಚುನಾವಣಾ ಸಮರಕ್ಕೆ ಸಿದ್ಧವಾಗುತ್ತಿರುವ ಎಲ್ಲಾ ರಾಜಕೀಯ ಪಕ್ಷಗಳಿಗೆ ಇದು ಅಗ್ನಿ ಪರೀಕ್ಷೆಯೇ. ಯಾಕೆಂದರೆ ಈ ಉಪ ಚುನಾವಣೆ ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿ. 
ಕಳೆದ ಮೇನಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸಾಧಿಸಿದ ಅಭೂತಪೂರ್ವ ಗೆಲುವಿನಲ್ಲಿ ಮೈ ಮರೆಯುತ್ತಿ ರುವಾಗಲೇ ಧೂತ್ತನೆ ಚುನಾವಣೆ ಎದುರಾಗಿರುವುದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಪಾಲಿಗೆ ಅಗ್ನಿ ಪರೀಕ್ಷೆ.
ಯಾವುದೇ ಚುನಾವಣೆ ನಡೆದರೂ ಕೂಡ ಆ ಪಕ್ಷದ ಅಧ್ಯಕ್ಷರ ಮೇಲೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿರುವುದರಿಂದ ಚುನಾವಣೆಯ ಹೊಣೆಗಾರಿಕೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಮೇಲೂ ಇದೆ. ಈಗಾಗಲೇ ಸಚಿವ ಸ್ಥಾನ ಸಿಗದೆ ಇರುವ ಪಕ್ಷ ನಿಷ್ಠ ಮುಖಂಡರು ಒಳಗೊಳಗೆ ಸಿದ್ದು ಮೇಲೆ ಸಿಟ್ಟಿದೆ.
       ಹಲವು ನಾಯಕರು ಒಳಗೊಳಗೆ ಬುಸು ಗುಟ್ಟು ತ್ತಿದ್ದರೆ ಇನ್ನೂ ಕೆಲವರು ಬಹಿರಂಗವಾಗಿ ಕೋಪ ಪ್ರದರ್ಶಿಸುತ್ತಿದ್ದಾರೆ. ಇದು ಆಡಳಿತ ಪಕ್ಷದ ಆಂತರಿಕ ವಿಚಾರ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಒಕ್ಕಲಿಗ ಜಾತಿಯ ಅಧಿಕಾರಿಗಳನ್ನು ಗುರಿಯಾಗಿಟ್ಟುಕೊಂಡು ದೂರದ ಜಿಲ್ಲೆಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಎಚ್‌ಡಿಕೆ ಆ ಜನಾಂಗದ ಸಮಾವೇಶವೊಂದರಲ್ಲಿ ಗುಡುಗುತ್ತಾರೆ.

Monday, 27 May 2013

ಫ್ಯೂಡಲ್ ನಾಯಕನಿಗೆ ಮಂಡಿಯೂರಿತೆ ಹೈಕಮಾಂಡ್

ರಾಜ್ಯದ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಕೊನೆಗೂ ಉತ್ತರ ದಕ್ಕಿದೆ. ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ನಾಯಕ ಸಿಎಂ ರೇಸ್‌ನಲ್ಲಿ ಕೊನೆವರೆಗೂ ಸತತ ಪ್ರಯತ್ನ ಮಾಡಿ ವಿಫಲರಾದ ಖರ್ಗೆಯವರಿಗೆ ಕಾಂಗ್ರೆಸ್ ಹೈಕಮಾಂಡ್ ಕೈಕೊಡುವುದರ ಮೂಲಕ ತನ್ನ ಹಳೇ ಛಾಳಿ ಮುಂದುವರಿಸಿದೆ.
ಸಿ.ಎಂ. ರೇಸ್‌ನಲ್ಲಿsದ್ದ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರಲ್ಲಿ ಒಬ್ಬರಿಗಾದರೂ ಕಾಂಗ್ರೆಸ್ ಗುರುತ್ತಿಸುತ್ತದೆ ಎಂಬ ಸಮುದಾಯದ ಮಹದಾಸೆ ಹುಸಿಯಾಗಿದೆ. ದಲಿತ ಸಮುದಾಯ ಕಂಡಿದ್ದ ಕನಸು ನುಚ್ಚು ನೂರಾಗಿದೆ.
ಆ ಸಂದರ್ಭದ ರಾಜಕೀಯದ ಜಿದ್ದಾಜಿದ್ದಿನಲ್ಲಿ ಹುಟ್ಟಿಕೊಂಡಿದ್ದ ಪ್ರಶ್ನೆಗಳಿಗೆ ದಲಿತ ಸಮುದಾಯವನ್ನು ವಂಚಿಸುವ ಮೂಲಕ ಐತಿಹಾಸಿಕ ಪ್ರಶ್ನೆಯಾಗಿದ್ದ ಪ್ರಶ್ನೆ ಮುಂದುವರಿದಿದೆ. ಗುಡುಗು ಹಾಕುವ ಫ್ಯೂಡಲ್ ನಾಯಕರಿಗೆ ಕಾಂಗ್ರೆಸ್ ಹೈಕಮಾಂಡ್ ಮಂಡಿಯೂರಿದೆ. ಇಲ್ಲಿ ಸೋತಿರುವುದು ಮಲ್ಲಿಕಾರ್ಜುನ ಖರ್ಗೆಯವರು ಅಲ್ಲ ಬದಲಾಗಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಎಂಬುದನ್ನು ರಾಜಕೀಯ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.
ಸತತ 9 ಬಾರಿ ವಿಧಾನಸಭೆಗೆ ಆಯ್ಕೆಯಾಗಿ ಪಕ್ಷ ನಿಷ್ಠ ರಾಜಕೀಯ ಮಾಡಿದ ಖರ್ಗೆಯವರಿಗೆ ಒಂದು ಅವಕಾಶ ನೀಡಿದರೆ ಕಾಂಗ್ರೆಸ್ ತಾನು ಪ್ರತಿಪಾದಿಸುತ್ತಿದ್ದ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದಂತ್ತಾಗುತ್ತಿತ್ತು. ಆದರೆ ದಿಲ್ಲಿಯಲ್ಲಿ ಕುಳಿತ ಸೋನಿಯಾ ಯಾವ ಆಧಾರದ ಮೇಲೆ ಮುಖ್ಯಮಂತ್ರಿ ಪಟ್ಟವನ್ನು ಮೂಲ ಕಾಂಗ್ರೆಸ್ಸಿಗರಲ್ಲದವರಿಗೆ ಮಣೆ ಹಾಕಿದರು ಎಂಬುದು ಕಾಂಗ್ರೆಸ್ ಪಕ್ಷದ ಹಿರಿಯಾಳುಗಳಲ್ಲಿ ಪ್ರಶ್ನೆಯಾಗಿಯೇ ಮುಂದುವರಿಯುತ್ತಿದೆ.

Saturday, 2 March 2013

ಜಾತಿ ಮೀರಲು ನಾಗರಿಕ ಸಮಾಜವೇ ಅಡ್ಡಿ

ಜಾತಿವ್ಯವಸ್ಥೆ ನಾಶವಾಗಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಕನಸು ಕಂಡ ಮಹಾನ್ ವ್ಯಕ್ತಿಗಳು ದೇಶದಲ್ಲಿ ಬಹಳಷ್ಟು ಜನರಿದ್ದಾರೆ. ಅಂತವರ ಪಟ್ಟಿಯಲ್ಲಿ ಮೊದಲ ಹೆಸರು ಜ್ಯೋತಿಭಾ ಫುಲೆ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರದು. ಆದರೆ ಅವರ ಕನಸನ್ನು ನನಸು ಮಾಡಬೇಕಾದ ಆಧುನಿಕ ಶಿಕ್ಷಣವೂ ಇಂದು ಜಾತಿಯ ಕೇಂದ್ರೀಕೃತವಾಗಿಯೇ ಮುಂದುವರಿಯುತ್ತಿದೆ. ಆಧುನಿಕತೆ ಜಾತಿ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ. ಇಂದಿನ ವಿಶ್ವವಿದ್ಯಾಲಯಗಳು ಜಾತಿಯ ಕೇಂದ್ರಗಳಾಗಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿವೆ. ರಾಜ್ಯದ ಎಲ್ಲಾ ಭಾಗಗಳಲ್ಲಿ ಒಂದೊಂದು ಪ್ರಭಲ ಜಾತಿಯ ಕಪಿಮುಷ್ಟಿಯಲ್ಲಿ ವಿವಿಗಳಿವೆ.
ಗುಲಬರ್ಗಾದ ವಿವಿಯಲ್ಲಿ ದಲಿತರದೆ ಪ್ರಾಬಲ್ಯ, ಮೈಸೂರು ವಿವಿ ಒಕ್ಕಲಿಗರಿಗೆ ಮೀಸಲಾದಂತಿದೆ. ಹೀಗೆ ಅನೇಕ ಕಡೆ ಆಯಾ ಜಾತಿ ಪ್ರಾಭಲ್ಯಕ್ಕನುಗುಣವಾಗಿ ವಿವಿಗಳು ಕೂಡ ಒಗ್ಗಿಕೊಂಡಿವೆ. ಇದರಿಂದಾಗಿ ವಿವಿಗಳು ಜಾತಿಯ ಭೂತದಿಂದ ಹೊರಬರಲು ಸಾಧ್ಯವಾಗಿಲ್ಲ ಎಂದ ಮೇಲೆ ಜಾತ್ಯತೀತ ಶಿಕ್ಷಣ ನೀಡಲು ಹೇಗೆ ಸಾಧ್ಯ? ಜಾಗತೀಕರಣದಿಂದ ಸಂಸ್ಕೃತಿಗೆ ಧಕ್ಕೆಯಾಗಿದೆ ಎಂಬ ಮಾತುಗಳು ಅಪ್ಪಟ್ಟ ಸುಳ್ಳು, ಹಿಂದು ಧರ್ಮದ ಪ್ರಕಾರ ಸಂಸ್ಕೃತಿ ಎಂದರೆ ಜಾತಿ, ಮತ, ಪಂಥ ಉಚ್ಛ ನಿಚ ಬಡವ ಬಲ್ಲಿದ ಎಂಬದೇ ಆಗಿದೆ.

Monday, 18 February 2013

ಮಹಿಳಾ ಸ್ವಾತಂತ್ರ್ಯ ಘೋಷಣೆ : ನಿಂತಿಲ್ಲ ಶೋಷಣೆ

ಅನಾದಿ ಕಾಲದಿಂದ ಬಂದ ಆಚರಣೆಗಳಿಗೆ ತಲೆಬಾಗಬೇಕಾ? ಅಥವಾ ಬಯಸಿದ ರೀತಿಯಲ್ಲಿ ಬದುಕನ್ನು ರೂಪಿಸಿಕೊಳ್ಳಬೇಕಾ?  ಎನ್ನುವ ತ್ರಿಶಂಕು ಸ್ಥಿತಿಯಲ್ಲಿ ಇಂದಿನ ಮಹಿಳೆಯರು ಕೂಡ ಇದ್ದಾರೆ. ಸ್ವತಂತ್ರ ಭಾರತದಲ್ಲಿ ಮಹಿಳೆಯರು ಏನೆಲ್ಲಾ ಸಾಧಿಸಿದ್ದಾರೆ ಸಾಧಿ ಸುತ್ತಿದಾರೆ ಎಂದರೂ ಅವರ ಮೇಲೆ ನಡೆಯುತ್ತಿರುವ ದೌರ್ಜನ್ಯ ದಬ್ಬಾಳಿಕೆ ನಿರ್ಮೂಲನೆಯಾಗಿವೆಯೇ? ಕೂಲಂಕುಷವಾಗಿ ವಿಮರ್ಶೆ ಮಾಡಿದಾಗ ಮಹಿಳೆಯ ಬದುಕಿನಲ್ಲಿ ಅಂಥಹ ಬದಲಾವಣೆಯೇನೂ ಕಂಡು ಬರದೆ ಆಧುನಿಕ ಭಾರತದ ಮಹಿಳೆಯರು ದುರಂತಕ್ಕೆ ಕೊರಳೊಡ್ಡಿರುವ ನಿದರ್ಶನಗಳು ನಮ್ಮ ಕಣ್ಣಿಗೆ ರಾಚುತ್ತಲೇ ಇವೆ.
ಮಹಿಳೆ ಇಂದು ಮತದಾನದಂತಹ ಮೂಲಭೂತ ಹಕ್ಕಿನಿಂದ ಹಿಡಿದು ಕಾನೂನಿನ ರಕ್ಷಣೆ ಪಡೆಯುವ ಮಟ್ಟಕ್ಕೆ ಜಾಗೃತಳಾಗಿದ್ದರೂ ಕೂಡ ತನ್ನ ಮೇಲೆ ದ್ಯೌರ್ಜನ್ಯ, ಹಿಂಸಾ ಪ್ರಕರಣಗಳು ಜರುಗುತ್ತಲೇ ಇವೆ. ಮಹಿಳೆಯರ ಮೇಲಿನ ಹಿಂಸೆಗಳು ಸಮರ್ಥವಾಗಿ ತಡೆಯಲು ದೌರ್ಜನ್ಯ ತಡೆ ಕಾಯ್ದೆ ಇದ್ದರೂ ಅದರ ಫಲಿತಾಂಶ ಮಾತ್ರ ಗೌಣವೇ?