ಕಬ್ಬು ಬೆಳೆಗಾರರ ಪ್ರತಿಭಟನೆ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿರಬಹುದು. ಅದನ್ನು ನಿವಾರಣೆ ಮಾಡುವತ್ತ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಆದರೆ ಸರ್ಕಾರ ಘೋಷಿಸಿದ ಬೆಂಬಲ ಬೆಲೆ ಈ ಕಾರ್ಖಾನೆಗಳು ನೀಡುತ್ತ ವೆಯೇ ಒಂದು ವೇಳೆ ಬೆಂಬಲ ಬೆಲೆ ನೀಡದೆ ಹೋದರೆ ಅಂತಹ ಕಾರ್ಖಾನೆಗಳನ್ನು ಮುಚ್ಚಿಸುವ ಅಥವಾ ತನ್ನ ಸುಪರ್ದಿಗೆ ತೆಗೆದುಕೊಳ್ಳುವ ದಿಟ್ಟತನವನ್ನು ಮುಖ್ಯಮಂತ್ರಿಗಳು ತೆಗೆದುಕೊಳ್ಳುತ್ತಾರಾ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ.
ರಾಜ್ಯದಲ್ಲಿ ಬಹುತೇಕ ಕಾರ್ಖಾನೆಗಳು ರಾಜಕೀಯ ನಾಯಕರ ಕೈವಶದಲ್ಲಿವೆ. ಬಂಡವಾಳಶಾಹಿ ರಾಜಕೀಯ ನಾಯಕರು ಸರ್ಕಾರ ಘೋಷಣೆ ಮಾಡಿದ ಬೆಲೆ ಯಾವುದೇ ಕಾರಣಕ್ಕೂ ನೀಡಲು ಸಾಧ್ಯವಿಲ್ಲ ಎಂದು ಈಗಾಗಲೇ ಘೋಷಿಸಿದ್ದಾರೆ.
ಸಕ್ಕರೆ ಖಾತೆ ನಿರ್ವಹಣೆ ಮಾಡುತ್ತಿರುವ ಸಚಿವ ಪ್ರಕಾಶ್ ಹುಕ್ಕೇರಿಯವರ ಒಡೆತನದಲ್ಲಿಯೂ ಹಲವು ಕಾರ್ಖಾನೆಗಳಿವೆ. ಇಲ್ಲಿ ಖಾತೆ ನಿರ್ವಹಣೆ ಮಾಡುವುದಕ್ಕಿಂತ ಮುಖ್ಯವಾಗಿ ಕಾರ್ಖಾನೆ ಉಳಿಸಿಕೊಳ್ಳುವಲ್ಲಿಯೇ ತಮ್ಮ ಚಾಣಾಕ್ಷತನ ತೋರಿಸಬೇಕಾದ ಅನಿವಾರ್ಯತೆ ಹುಕ್ಕೇರಿಯವರಿಗಿದೆ.
ಈ ಪ್ರಭಾವಿ ರಾಜಕಾರಣಿಗಳ ಹಿಡಿತದಲ್ಲಿ ಕಾರ್ಖಾನೆಗಳಿರುವುದರಿಂದ ‘ಶುಗರ್ ಲಾಬಿ’ ಹೆಚ್ಚಾಗಿದೆ. ಕಬ್ಬು ದರ ನಿಗದಿ ವಿಚಾರ ಬಿಕ್ಕಟ್ಟು ಸೃಷ್ಟಿಸಿದೆ. ಜತೆಗೆ ಕಬ್ಬಿನ ಸಮಸ್ಯೆ ಹೆಚ್ಚಾದಷ್ಟು ರಾಜಕೀಯ ದಾಳವಾಗಿ ಬಳಸಿಕೊಳ್ಳಲು ಪ್ರತಿಪಕ್ಷಗಳು ಮತ್ತು ರೈತ ನಾಯಕರು ಹವಣಿಸುತ್ತಿದ್ದಾರೆ. ಸರ್ಕಾರ ಮತ್ತು ಕಾರ್ಖಾನೆಗಳ ಮಧ್ಯೆ ನಡೆದ ಈ ಶೀತಲ ಸಮರದಿಂದ ರೈತರು ಮತ್ತೆ ಪ್ರತಿಭಟನೆಯ ದಾರಿ ಹಿಡಿಯದೆ ವಿಧಿಯಿಲ್ಲ.
ಸರ್ಕಾರದಿಂದ ಎಲ್ಲಾ ರೀತಿಯ ಮೂಲಸೌಕರ್ಯಗಳನ್ನು ಸದುಪಯೋಗಪಡಿಸಿ ಕೊಂಡು ಸೂಚಿಸಿದ ಬೆಂಬಲ ಬೆಲೆ ನೀಡುವುದಿಲ್ಲ ಎಂದರೆ ಈ ಬಂಡವಾಳಶಾಹಿಗಳ ಕಪಿಮುಷ್ಟಿಯಲ್ಲಿ ಸರ್ಕಾರ ನಡೆಯುತ್ತಿದೆ ಎಂದೇ ಸ್ಪಷ್ಟ. ಹಾಗಾದರೆ ಈ ಸರ್ಕಾರ ಅಂತಹ ಕಾರ್ಖಾನೆಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳಬಾರದೇಕೆ? ಅಥವಾ ಸರ್ಕಾರ ಘೋಷಿಸಿದ ಬೆಂಬಲ ಬೆಲೆ ನೀಡದೆ ಇದ್ದ ಕಂಪೆನಿಗಳನ್ನು ಸೂಪರ್‌ಸೀಡ್ ಮಾಡಬಾರದೆ? ಒಂದು ವೇಳೆ ಸರ್ಕಾರ ಅಂತಹ ನಿರ್ಧಾರ ತೆಗೆದುಕೊಳ್ಳಲು ಮುಂದಾದರೆ ಜೇನುಗೂಡಿಗೆ ಕೈಹಾಕಿದಂತೆ. ಆಡಳಿತ ಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ತಿರುಗಿ ಬೀಳುವುದರಲ್ಲಿ ಸಂಶಯವೇ ಇಲ್ಲ. ಈಗಾಗಲೇ ಕೆಲವು ಸಚಿವರ ಕಾರ್ಯವೈಖರಿಗೆ ಬೇಸತ್ತ ಶಾಸಕರು ಹೈಕಮಾಂಡ್‌ಗೆ ಕಿವಿ ಊದಿದ್ದಾರೆ. ಇದನ್ನು ಅರಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾಣನಡೆ ಇಟ್ಟಿದ್ದಾರೆ. ಸಚಿವರ ಬಗ್ಗೆ ಕ್ರಮಕೈಗೊಂಡರೆ ನಾನು ಅದಕ್ಕೆ ಹೊಣೆಯಲ್ಲ ಎಂದು ಈಗಾಗಲೇ ಬಿಸಿ ಮುಟ್ಟಿಸಿದ್ದಾರೆ. ಒಂದೆಡೆ ರಾಜ್ಯಪಾಲರು ಸಚಿವರ ಕಾರ್ಯವೈಖರಿಗೆ ಛಾಟೀ ಬೀಸಿದರೆ ಮತ್ತೊಂದಡೆ ಅತೃಪ್ತ ಶಾಸಕರು ಒಳಗೊಳಗೆ ಕತ್ತಿ ಮಸೆಯುತ್ತಿದ್ದಾರೆ.
ಸರ್ಕಾರ ಅಂದ ಮೇಲೆ ಅತೃಪ್ತ, ಆಂತರಿಕ ಸಮಸ್ಯೆ ಇದ್ದೇ ಇರುತ್ತವೆ ಬಿಡಿ, ಅದು ಹೋಗಲಿ ಈ ಶಾಸಕ ಕತ್ತಿಗೇನು ಬಂದಿದೆಯೋ ಗೊತ್ತಿಲ್ಲ. ಹಿಂದೇ ಸುವರ್ಣಸೌಧ ಲೋಕಾರ್ಪಣೆ ಸಂದರ್ಭದಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕೆಂದು ಇಂತದ್ದೇ ಹೇಳಿಕೆ ನೀಡಿ ನಾಡಿನ ಜನರ ಆಕ್ರೋಶಕ್ಕೆ ಗುರಿಯಾಗಿದ್ದರು. ಪ್ರಾದೇಶಿಕ ಅಸಮಾನತೆ ಹೋಗ ಲಾಡಿಸುವ ನಿಟ್ಟಿನಲ್ಲಿ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಿಸಿದ ಬಳಿಕವೂ ಉಮೇಶ್ ಕತ್ತಿ ಒಡಕಿನ ಮಾತು ಆಡಿದ್ದರು. ಅಖಂಡ ಕರ್ನಾಟಕದ ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರನ್ನು ಮರೆತು ಕೇವಲ ರಾಜಕೀಯ ದೃಷ್ಟಿಯಿಂದ ಹೇಳಿಕೆ ನೀಡುತ್ತಿರುವುದು ಜವಾಬ್ದಾರಿಯುತ ಸ್ಥಾನದಲ್ಲಿರುವ ಕತ್ತಿಯವರಿಗೆ ತಕ್ಕುದಲ್ಲ.
‘ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ಹಿಂದುಳಿದಿದೆ ಎಂದ ಮಾತ್ರಕ್ಕೆ ಪ್ರತ್ಯೇಕ ರಾಜ್ಯವೇ ಪರಿಹಾರವಲ್ಲ ಎಂಬುದನ್ನು ಕುತ್ಸಿತ ಮನಸ್ಸಿನ ಕತ್ತಿಯವರು ಅರ್ಥ ಮಾಡಿಕೊಳ್ಳಬೇಳ್ಳದೆ ತಮ್ಮದೆಯಾದ ವಿತಂಡ ವಾದ ಮುಂದಿಡುತ್ತ ಸಮರ್ಥಿಸಿಕೊಳ್ಳುತ್ತಿರುವುದು ನೋಡಿದರೆ ಈ ನಾಯಕನಿಗೆ ನಾಡಿನ ಬದ್ಧತೆ ಎಲ್ಲಿ ಬಂದೀತು.
ಕರ್ನಾಟಕದ ಅವಿಭಾಜ್ಯ ಅಂಗವಾಗಿರುವ ಬೆಳಗಾವಿಯನ್ನೇ ನಮ್ಮದು ಎಂದು ಅಬ್ಬರಿಸುತ್ತಿರುವ ಮರಾಠಿಗರ ಬಗ್ಗೆ ಸೊಲ್ಲೆತ್ತದೆ ಕುತ್ಸಿತ ಮನಸ್ಸಿನ ಕತ್ತಿಯವರು ಕನ್ನಡ ನಾಡನ್ನು ಒಡೆಯಲು ಮುಂದಾಗಿದ್ದಾರಲ್ಲ. ಮಾತೆತ್ತಿದರೆ ಬೆಳಗಾವಿ ನಮ್ಮದು ಎಂದು ಬೊಬ್ಬೆ ಹಾಕುತ್ತಿರುವ ಮರಾಠಿಗರ ವಿರುದ್ಧ ಸೆಟೆದು ನಿಲ್ಲಬೇಕಾದ ಕತ್ತಿಯವರು ಕನ್ನಡಿಗರ ವಿರುದ್ಧ ನಿಂತಿರುವುದರ ಹಿಂದಿನ ಮರ್ಮವೇನು ಎಂಬುದು ಸಂಶೋಧನೆ ಮಾಡಿ ಹೇಳಬೇಕಾಗಿಲ್ಲ.
ಮಹಾರಾಷ್ಟ್ರದ ಕೊಲ್ಲಾಪುರ, ಮತ್ತು ಗೋವಾ ರಾಜ್ಯದ ಜಿಲ್ಲೆಗಳನ್ನು ಸೇರಿಸಿಕೊಂಡು ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಟ್ಟಿರುವ ಕತ್ತಿಯವರಿಗೆ ಸಾಮಾನ್ಯ ಜ್ಞಾನ ಬೇಡವೇ? ಇದಕ್ಕೆ ಸಮರ್ಥನೆ ನೀಡುತ್ತಿರುವ ದಾರಿ ನೋಡಿದರೆ ಎಂಥವರಿಗೂ ನಗು ಬಾರದೆ ಇರದು. ಬೀದರ್, ಗುಲ್ಬರ್ಗ ಸೇರಿದಂತೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕು. ೨೦೨೦ರ ವೇಳೆಗೆ ಜನಸಂಖ್ಯೆ ಆಧಾರದ ಮೇಲೆ ಇನ್ನು ೫೦ ರಾಜ್ಯಗಳನ್ನು ರಚಿಸಬೇಕಾಗಬಹುದು.
ಆ ಸಂದರ್ಭಕ್ಕೆ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವಾಗಿ ಘೋಷಿಸಬೇಕು ಎಂದು ಬೆಳಗಾವಿಯಲ್ಲಿ ಸುವರ್ಣಸೌಧ ಉದ್ಘಾ ಟನೆ ಸಂದರ್ಭದಲ್ಲಿ ಹೇಳಿ ವೇದಿಕೆಯಲ್ಲಿಯೇ ಛೀಮಾರಿ ಹಾಕಿಸಿಕೊಂಡಿದ್ದರು.
ಅದನ್ನೇ ಮತ್ತೆ ಪುನರುಚ್ಚರಿಸಿದ್ದಾರೆ. ಯಾವ ಪುರುಷಾರ್ಥಕ್ಕಾಗಿ ಮತ್ತು ಯಾರನ್ನು ಸಂತೈಸಲು ಈ ಹೇಳಿಕೆ ನೀಡುತ್ತಿದ್ದಾರೋ ಗೊತ್ತಿಲ್ಲ. ನಾಡ ದ್ರೋಹಿಯಂತೆ ಮಾತನಾಡುವ ಕತ್ತಿ ಪ್ರತ್ಯೇಕತೆಯೇ ತಮ್ಮ ಉದ್ದೇಶವಾಗಿದ್ದರೆ ತಾನು ಪ್ರತಿನಿಧಿಸುವ ಪಕ್ಷದ ಮೂಲಕ ಹೇಳಿಸಿದರೆ ಬದ್ಧತೆಯಾದರೂ ಇರುತ್ತೆ. ಈ ಹೇಳಿಕೆಗೆ ಕತ್ತಿ ಪ್ರತಿನಿಧಿಸುವ ಪಕ್ಷ ಇವತ್ತಿಗೂ ಕೂಡ ಯಾವುದೇ ಸ್ಪಷ್ಟನೆ ನೀಡಿಲ್ಲ ಎಂದರೆ ಬಿಜೆಪಿಯ ಉದ್ದೇಶವೂ ಅದೇ ಇರಬಹುದೇನೊ?
ಪ್ರತ್ಯೇಕತೆಯಲ್ಲಿ ನಂಬಿಕೆ ಇರಿಸಿಕೊಂಡಿರುವ ಕತ್ತಿಯವರು ತನ್ನದೇ ಸಮರ್ಥನೆ ನೀಡುತ್ತಿದ್ದಾರೆಯೇ ವಿನಹ ನಾನು ಹೇಳುತ್ತಿರುವುದು ತಪ್ಪೆಂದು ಅವರಿಗೆ ಅನಿಸುತ್ತಲೇ ಇಲ್ಲ ಎಂದ ಮೇಲೆ ಕತ್ತಿಯ ಹೇಳಿಕೆ ಕಸದ ಬುಟ್ಟಿಯೇ ಲೇಸೆನಿಸುತ್ತಿದೆ. ಯಾವುದೋ ಸಾಮಾನ್ಯ ಮನುಷ್ಯ ಹೇಳಿಕೆ ನೀಡಿದ್ದರೆ ಮಹತ್ವ ಕೊಡುವ ಅಗತ್ಯವಿರಲಿಲ್ಲ. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ರಾಜ್ಯ ಒಡೆಯುವ ಹೇಳಿಕೆ ನೀಡುತ್ತಿರುವುದರಿಂದ ಮಹತ್ವ ಪಡೆದುಕೊಂಡಿದೆ.
ಈ ಕತ್ತಿಯವರ ಹೇಳಿಕೆ ಗಮನಿಸಿದರೆ ಮಾನ್ಯ ಶಾಸಕರಿಗೆ ಕರ್ನಾಟಕ ಏಕೀಕರಣ ಇತಿಹಾಸದ ಅರಿವಿಲ್ಲ ಎಂದೇ ತೋರುತ್ತಿದೆ. ಹಾಗೇ ಚಿಕ್ಕ ರಾಜ್ಯಗಳ ಸಮಸ್ಯೆಗಳ ಬಗ್ಗೆಯೂ ತಿಳಿದುಕೊಂಡಿಲ್ಲ. ನಾಡಿನ ಐಕ್ಯತೆಗೆ ಮಾರಕವಾದ ಕತ್ತಿ ಹೇಳಿಕೆ ಕಬ್ಬಿಗೆ ಸಂಬಂಧಿಸಿದ್ದಲ್ಲ. ಆದರೂ ಈ ಹೇಳಿಕೆ ಏಕೆ ನೀಡುತ್ತಾರೆ ಎಂಬುದು ಅರ್ಥವಾಗುತ್ತಿಲ್ಲ.
ಕೇವಲ ಕಬ್ಬಿಗೆ ಬೆಂಬಲ ಬೆಲೆ ನೀಡಿ ಎಂದು ಸರ್ಕಾರ ಸೂಚಿಸಿದ ಕೂಡಲೇ ಕಾರ್ಖಾನೆ ಮಾಲೀಕರು ಇಂತಹ ಹೇಳಿಕೆ ನೀಡಿದರೆ ರಾಜ್ಯದಲ್ಲಿ ಬಗೆಹರಿಯದ ಜಟಿಲ ಸಮಸ್ಯೆಗಳಿವೆ. ದಿನನಿತ್ಯ ಪ್ರತಿಭಟನೆಗಳು ನಡೆಯುತ್ತಲೇ ಇರುತ್ತವೆ. ತಮ್ಮ ಸಮಸ್ಯೆ ಬಗೆಹರಿಯುತ್ತಿಲ್ಲ ಎಂದುಕೊಂಡವರು ಪ್ರತ್ಯೇಕತೆಯ ಕೂಗು ಎಬ್ಬಿಸಿದರೆ ಪ್ರತಿಭಟನೆ ನಡೆಸುವವರಿಗೆಲ್ಲ ರಾಜ್ಯ ಮಾಡುತ್ತಾ ಹೋಗಬೇಕಾದ ಸಮಸ್ಯೆ ಎದುರಾದರೆ ಆಶ್ಚರ್ಯವಿಲ್ಲ.
ಈ ಹಿಂದೆ ಹೈದರಾಬಾದ್-ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಕೂಗಿನ ಧ್ವನಿ ಎದ್ದಿತ್ತು. ಆ ಭಾಗದ ಹೋರಾಟಗಾರರ ನ್ಯಾಯಯುತ ಬೇಡಿಕೆಗೆ ಸ್ಪಂದಿಸಿದ ಕೇಂದ್ರ ಸರ್ಕಾರ ಕಲಂ ೩೭೧(ಜೆ)ಗೆ ತಿದ್ದುಪಡಿ ಮಾಡಿರುವುದರಿಂದ ಭಾರೀ ಅಭಿವೃದ್ಧಿ ಕೆಲಸಗಳಿಂದ ಪ್ರತ್ಯೇಕತೆಯ ಕೂಗು ಕ್ಷೀಣಿಸಿದೆ. ಅದೇ ರೀತಿ ಉತ್ತರ ಕರ್ನಾಟಕ ಭಾಗದಲ್ಲೂ ಹೆಚ್ಚಿನ ಅಭಿವೃದ್ಧಿ ಯೋಜನೆಗಳು ಜಾರಿಯಾದರೆ ಪ್ರತ್ಯೇಕತೆಯ ಕನಸು ಕಾಣುವ ಕತ್ತಿಯವರಂತ ಮನಸ್ಸುಗಳ ಧ್ವನಿ ಕ್ಷೀಣಿಸಬಹುದು.
ಅಖಂಡ ಕರ್ನಾಟಕ ಒಂದೇ ಎಂಬ ಭಾವನೆ ನಮ್ಮಲ್ಲಿ ಮೂಡಬೇಕು. ಉತ್ತರ ಕರ್ನಾಟಕ-ಹೈದರಾಬಾದ್ ಕರ್ನಾಟಕ ಎಂಬ ಭೇದಭಾವಗಳು ದೂರವಾಗಬೇಕು. ಸಮಗ್ರ ಕರ್ನಾಟಕದ ಅಭಿವೃದ್ಧಿಯಾಗಬೇಕು. ಒಟ್ಟಾರೆ ರಾಜ್ಯ ಕಲ್ಯಾಣ ಕರ್ನಾಟಕವಾಗಬೇಕೆ ಹೊರತು ಪ್ರತ್ಯೇಕ ರಾಜ್ಯವಲ್ಲ.



No comments:
Post a Comment