ಭಾರತ ಆಧುನಿಕವಾಗಿ ಎಷ್ಟೇ ಮುಂದುವರಿದರೂ ಮೂಢನಂಬಿಕೆಗಳು ಮಾತ್ರ ಸಮಾಜದಿಂದ ದೂರವಾಗುತ್ತಿಲ್ಲ. ದೂರವಾಗುವುದು ಇಲ್ಲ ಎಂದು ತೋರುತ್ತಿದೆ. ಸಂಪ್ರದಾಯಗಳು ಕೂಡ ಹೊಸತನ ಮೇಳೈಸಿಕೊಂಡು ಮುಂದುವರಿಯುತ್ತಿವೆ. ಇಂತಹ ಆಚರಣಿಗಳಿಗೆ ನಮ್ಮ ಮಾಧ್ಯಮಗಳು ಪುಷ್ಟಿ ನೀಡುತ್ತಿವೆ.
ಪ್ರಸ್ತುತ ಸಂದರ್ಭದಲ್ಲಿಯೂ ಕೂಡ ಸಂಪ್ರದಾಯಗಳನ್ನು ಸಮರ್ಥಿಸಿಕೊಳ್ಳುತ್ತಿರುವ ಜಾತಿ ಜಂಗಮರು ಹೆಚ್ಚಾಗುತ್ತಿದ್ದಾರೆ ಇದರಿಂದಾಗಿ ಸನಾತನವಾದಿಗಳ ಕೈಮೇಲಾಗುತ್ತಿದೆ. ಇತ್ತೀಚೆಗೆ ರಾಜ್ಯದ ಗುಲಬರ್ಗಾ ಜಿಲ್ಲೆಯ ಜೇವರ್ಗಿ ತಾಲೂಕಿನಲ್ಲಿನಡೆದ ಅಡ್ಡಪಲ್ಲಕ್ಕಿ ಉತ್ಸವ ದಕ್ಕೆ ಜ್ವಲಂತ ಸಾಕ್ಷಿಯಾಗಿದೆ.
ಮಠಾಧೀಶರು ತಮ್ಮತನವನ್ನು ಮರೆತು ದಸರಾ ದರ್ಬಾರ್ ಹೆಸರಿನಲ್ಲಿ ವೈಭವಪೇತವಾಗಿ ಅಡ್ಡಪಲ್ಲಕ್ಕಿಯಲ್ಲಿ ಆಸೀನರಾಗುವ ಚಪಲ ಈ ಸನ್ಯಾಸಿಗಳಿಗೆ ಏಕೆಬೇಕು? ಧಾರ್ಮಿಕ ನಂಬಿಕೆಗಳ ಹೆಸರಿನಲ್ಲಿ ದಸರಾ ದರ್ಬಾರ್ ನಡೆಸುತ್ತಿರುವುದು ಸ್ಪಷ್ಟ ಕಾನೂನು ಉಲ್ಲಂಘನೆ ಎಂದು ಬೇರೆ ಹೇಳಬೇಕಾಗಿಲ್ಲ.?
ಸಂವಿಧಾನದ ಪ್ರಕಾರ ಪ್ರತಿಯೊಬ್ಬರಿಗೂ ಧಾರ್ಮಿಕ ಹಕ್ಕು ಇದೆ. ಆದರೆ ಹಕ್ಕನ್ನು ಉಪಯೋಗಿಸುವಕೊಳ್ಳುವ ಮಾರ್ಗ ಕೆಟ್ಟದ್ದಾಗಿದೆ. ಹಿಂದಿನಿಂದಲೂ ನಡೆದುಕೊಂಡ ಬಂದ ಸಂಪ್ರದಾಯಗಳು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ ಎಂದು ಸಮರ್ಥಿಸಿಕೊಳ್ಳುತ್ತಿರುವ ಮಠಾಧೀಶರ ಮಾತು ಒಪ್ಪಲು ಹೇಗೆ ಸಾಧ್ಯ.?
ವೀರಶೈವ ಧರ್ಮ ಹಿಂದೂ ಧರ್ಮದ ಒಂದು ಭಾಗ ಎಂಬಂತೆ ಸನಾತನ ಧರ್ಮದ ಆಚಾರಗಳನ್ನು ಪಾಲಿ ಸುತ್ತಿರುವುದು ನೋಡಿದರೆ ಬಸವಣ್ಣನವರು ಸಾರಿದ ಸಮಾನತೆ ಈ ಮಠಾಧೀಶರ ಪಾಲಿಗೆ ಪುರಾಣ ಪ್ರವಚನಗಳ ಭಾಷಣದಲ್ಲಿ ಮಾತ್ರ ಬಳಕೆ ಯಾಗುತ್ತಿದೆ. ಇದರಿಂದಾಗಿ ವೀರಶೈವರಲ್ಲಿಯೂ ಸನಾತನ ಧರ್ಮದ ಆಚರಣಿಗಳಿವೆ ಎಂಬುದನ್ನು ಎತ್ತಿ ತೋರಿಸುತ್ತಿದೆ.
ಪ್ರಸ್ತುತ ಸಂದರ್ಭದಲ್ಲಿ ಆ ಸಂಪ್ರದಾಯಗಳು ಮೌಲ್ಯ ಕಳೆದುಕೊಂಡಿವೆ. ಧರ್ಮ ವಿರೋಧಿ ಚಟುವಟಿಕೆಳಾಗಿವೆ. ಅಡ್ಡಪಲ್ಲಕ್ಕಿ ಎಂಬುದೇ ಧರ್ಮ ವಿರೋಧಿ ಆಚರಣೆ. ಇಂತಹ ಆಚರಣಿಗೆ ಪ್ರಗತಿಪರರಿಂದ ರಾಜ್ಯಾದ್ಯಂತ ತೀವ್ರ ಪ್ರತಿರೋಧ ವ್ಯಕ್ತವಾಯಿತು. ವಿರೋಧದ ನಡುವೆಯೂ ಅಡ್ಡಪಲ್ಲಕಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸ್ತು ಎಂದರು. ಪ್ರಗತಿಪರ ವಿರೋಧ ಮತ್ತಷ್ಟು ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಜಿಲ್ಲಾಡಳಿತ, ಮಂಟಪದಲ್ಲಿ ಮಾತ್ರ ಅಡ್ಡಪಲ್ಲಕಿ ಉತ್ಸವ ನಡೆಸುವಂತೆ ಜಿಲ್ಲಾಧಿಕಾರಿಗಳು ಅನುಮತಿ ನೀಡಿದರು. ಪ್ರಗತಿಪರ ಸಂಘಟನೆಗಳು ಮತ್ತು ದಲಿತ ಸಂಘರ್ಷ ಸಮಿತಿಗಳು ಶ್ವಾನಪಲ್ಲಕಿ ಮೆರವಣಿಗೆ ಮಾಡುವುದಾಗಿ ಘೋಷಿಸಿದವು.
ಜೆ.ಪಿ ಚಳುವಳಿಯಿಂದ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಡ್ಡಪಲ್ಲಕ್ಕಿ ಅವಾಂತರದ ಬಗ್ಗೆ ಕೂಲಂಕುಷವಾಗಿ ಚರ್ಚಿಸಬೇಕಾಗಿತ್ತು. ಆದರೆ ನಮ್ಮ ಮುಖ್ಯಮಂತ್ರಿಗಳಿಗೆ ಆ ವ್ಯವಧಾನವೇ ಇರಲಿಲ್ಲ. ಮಠಾಧೀಶರ ವಿರೋಧ ಕಟ್ಟಿಕೊಳ್ಳುವುದು ಬೇಡ ಎಂದು ಮಠಾಧೀಶರ ಒತ್ತಡಕ್ಕೆ ಮಣಿದು ಅನುಮತಿ ನೀಡಿದರು. ಆದರೆ ಅದರ ಹಿನ್ನೆಲೆ ಮಾತ್ರ ನೋಡಲೇ ಇಲ್ಲ. ಅನಾಗರಿಕ ರೀತಿಯಲ್ಲಿ ಒಬ್ಬ ವ್ಯಕ್ತಿಯನ್ನು ಕೂರಿಸಿಕೊಂಡು ಮೆರವಣಿಗೆ ಮಾಡುವುದು ಹೇಯ ಸಂಪ್ರದಾಯ. ಇಂತಹ ಸಂಪ್ರದಾಯವನ್ನು ಕೆಲವು ಮಠಾಧೀಶರು ಸಮರ್ಥಿಸಿಕೊಳ್ಳುತ್ತಿರುವುದು ವಿಷಾದದ ಸಂಗತಿ.
ಬಸವಣ್ಣನ ಅನುಯಾಯಿಗಳೆಂದು ಹೇಳಿಕೊಳ್ಳುತ್ತಿರುವ ಈ ಮಠಾಧೀಶರು ಬಸವಣ್ಣರ ಆಚಾರ ವಿಚಾರಗಳನ್ನು ಹೆಜ್ಜೆ ಹೆಜ್ಜೆಗೂ ಮಣ್ಣು ಪಾಲು ಮಾಡುತ್ತಿದ್ದಾರೆ. ದೇಹವೇ ದೇಗುಲ ಎಂದು ಸಾರಿದ ಬಸವಣ್ಣನವರ ಹೆಸರಿನಲ್ಲಿಯೇ ಇಂದು ದೇವಾಲಯವನ್ನು ನಿರ್ಮಾ ಮಾಡಲು ಹೋಗುತ್ತಿರುವುದು ವಿಪರ್ಯಾಸ.
ಭಾರತೀಯರನ್ನು ಕಾಡುತ್ತಿರುವ ಮೂಢನಂಬಿಕೆಗಳು, ನರಬಲಿ, ಪ್ರಾಣಿಬಲಿ, ದೇವಸ್ಥಾನಗಳಲ್ಲಿ ಪ್ರವೇಶ ನಿರಾಕರಣೆ, ಪಾದ ಪೂಜೆಯಂತಹ ಹೇಯ ಅನಿಷ್ಟ ಆಚರಣಿಗಳು ಜನಮಾನಸದಲ್ಲಿ ಮನೆ ಮಾಡಿವೆ. ಇದರಿಂದ ದುರ್ಬಲ ಮಾನವ ಹೊರಬರದ ಹಾಗೇ ಭಯದ ವಾತಾವರಣವನ್ನು ಸೃಷ್ಟಿಸಲಾಗಿದೆ. ಸಾಮಾನ್ಯ ಜನರನ್ನು ಮೌಢ್ಯತೆಯಿಂದ ವೈಜ್ಞಾನಿಕ ಚಿಂತನೆಗೆ ಹಚ್ಚ ಬೇಕಾದ ಮಠಾಧೀಶರೇ ಅಂಧಾಚರಣೆಗೆ ಶರಣು ಹೋದರೆ?
ಇಂತಹ ಕೆಟ್ಟ ಸಂಪ್ರದಾಯಗಳ ವಿರುದ್ಧ ಸಂಘ-ಸಂಸ್ಥೆಗಳು ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಇದೆ. ಇದು ಅಷ್ಟು ಸುಲಭವಾದ ಕಾರ್ಯವಲ್ಲ ಎಂಬುದನ್ನು ಇತಿಹಾಸದಿಂದ ಕಲಿಯಬೇಕಾದ ಅಗತ್ಯವೇನು ಇಲ್ಲ.
ಇತ್ತೀಚೆಗೆ ಹತ್ಯೆಯಾದ ನರೇಂದ್ರ ದಾಭೋಲ್ಕರ್‌ರೆ ಒಂದು ದೊಡ್ಡ ಉದಾಹರಣೆ, ಜೀವನ ಪರ್ಯಾಂತ ಮೂಢನಂಬಿಕೆ ವಿರುದ್ಧ ಸೆಟೆದು ನಿಂತ ದಿಟ್ಟ ಹೋರಾಟಗಾರ ನರೇಂದ್ರ ತನ್ನ ಪ್ರಾಣವನ್ನೇ ಕಳೆದುಕೊಳ್ಳಬೇಕಾಯಿತು. ಇದರ ಪರಿಣಾಮ ಮಹಾರಾಷ್ಟ್ರ ಸರ್ಕಾರ ಮೂಢನಂಬಿಕೆ ವಿರೋಧಿ ಕಾನೂನು ರಚನೆ ಮಾಡಿತು.
ಆದರೆ ಕಾನೂನಿನಿಂದ ಇಂತಹ ಅನಿಷ್ಟ ಪದ್ಧತಿಗಳನ್ನು ದೂರ ಮಾಡಬಹುದೇ ಎಂಬ ಪ್ರಶ್ನೆ ಸಹಜವಾಗಿ ಜ್ಯೋತಿಷ್ಯಗಳಿಂದ ತೂರಿ ಬರುತ್ತದೆ. ಅದೇ ಏನೇ ಇರಲಿ ಕಾನೂನು ಪರಿಪಾಲಕರಾದ ನಾವುಗಳು ಅಂತಹ ಆಚರಣಿಗಳಿಂದ ದೂರವಿದ್ದರೆ ಕಾನೂನಿನ ಅವಶ್ಯಕತೆ ಇರುವುದಿಲ್ಲ. ಆದರೆ ನಮ್ಮ ರಾಜ್ಯದಲ್ಲಿ ಆದಷ್ಟು ಶೀಘ್ರ ಅಂತಹ ಕಾನೂನು ರಚನೆಯಾಗುವ ಅವಶ್ಯಕತೆ ಇದೆ. ಇತ್ತ ಸರ್ಕಾರ ಅಂತಹ ಕಾನೂನು ಜಾರಿಗೆ ಮುಂದಾದರೆ ಸಂಪ್ರದಾಯವಾದಿಗಳ ವಿರೋಧ ಕಟ್ಟಿ ಕೊಳ್ಳಬೇಕಾಗುತ್ತದೆ. ಆ ವಿರೋಧ ಕಟ್ಟಿಕೊಳ್ಳುವ ತಾಕತ್ತು ಈ ಸರ್ಕಾರಕ್ಕಿದೆಯೇ ಎಂಬ ಪ್ರಶ್ನೆ ಧೂತ್ತನೆ ಎದ್ದು ನಿಲ್ಲುತ್ತದೆ.
ಸಂಖ್ಯೆಗಳಿಲ್ಲದ ಶೂನ್ಯಕ್ಕೆ ಹೇಗೆ ಬೆಲೆ ಇಲ್ಲವೋ ಹಾಗೆಯೇ ಭಕ್ತರಿಲ್ಲದ ಮಠಕ್ಕೂ ಬೆಲೆಯಿಲ್ಲ. ಬಸವಣ್ಣನವರ ವಚನ ಸಾಹಿತ್ಯವೇ ಮೂಲ ಅಂದುಕೊಂಡರೆ ಭಕ್ತರಿಗೆ ಜಂಗಮರ ಅವಶ್ಯಕತೆ ಇರುವುದಿಲ್ಲ.? ಭಕ್ತರಿಗೆ ಯಾಮಾರಿಸುತ್ತಿರುವ ಮಠಾಧೀಶರು ಪ್ರಾಪಂಚಿಕ ಜ್ಞಾನವಿಲ್ಲದೇ ಅಂಧಾಕಾರದಲ್ಲಿರುವ ಜನರನ್ನು ಭಯಭೀತರನ್ನಾಗಿಸಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವ ಸ್ವಾಮಿಗಳು ಮತ್ತು ಜ್ಯೋತಿಷ್ಯಿಗಳ ಕಡಿವಾಣಕ್ಕೆ ಕೊನೆ ಹಾಕಬೇಕಾದರೆ ರಾಜ್ಯ ಸರ್ಕಾರ ಕಠಿಣ ಕಾನೂನು ಜಾರಿ ಮಾಡ ಬೇಕಾದ ಅಗತ್ಯವಿದೆ.

No comments:
Post a Comment