ರಾಜ್ಯದ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಕೊನೆಗೂ ಉತ್ತರ ದಕ್ಕಿದೆ. ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ನಾಯಕ ಸಿಎಂ ರೇಸ್‌ನಲ್ಲಿ ಕೊನೆವರೆಗೂ ಸತತ ಪ್ರಯತ್ನ ಮಾಡಿ ವಿಫಲರಾದ ಖರ್ಗೆಯವರಿಗೆ ಕಾಂಗ್ರೆಸ್ ಹೈಕಮಾಂಡ್ ಕೈಕೊಡುವುದರ ಮೂಲಕ ತನ್ನ ಹಳೇ ಛಾಳಿ ಮುಂದುವರಿಸಿದೆ.
ಸಿ.ಎಂ. ರೇಸ್‌ನಲ್ಲಿsದ್ದ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರಲ್ಲಿ ಒಬ್ಬರಿಗಾದರೂ ಕಾಂಗ್ರೆಸ್ ಗುರುತ್ತಿಸುತ್ತದೆ ಎಂಬ ಸಮುದಾಯದ ಮಹದಾಸೆ ಹುಸಿಯಾಗಿದೆ. ದಲಿತ ಸಮುದಾಯ ಕಂಡಿದ್ದ ಕನಸು ನುಚ್ಚು ನೂರಾಗಿದೆ.
ಆ ಸಂದರ್ಭದ ರಾಜಕೀಯದ ಜಿದ್ದಾಜಿದ್ದಿನಲ್ಲಿ ಹುಟ್ಟಿಕೊಂಡಿದ್ದ ಪ್ರಶ್ನೆಗಳಿಗೆ ದಲಿತ ಸಮುದಾಯವನ್ನು ವಂಚಿಸುವ ಮೂಲಕ ಐತಿಹಾಸಿಕ ಪ್ರಶ್ನೆಯಾಗಿದ್ದ ಪ್ರಶ್ನೆ ಮುಂದುವರಿದಿದೆ. ಗುಡುಗು ಹಾಕುವ ಫ್ಯೂಡಲ್ ನಾಯಕರಿಗೆ ಕಾಂಗ್ರೆಸ್ ಹೈಕಮಾಂಡ್ ಮಂಡಿಯೂರಿದೆ. ಇಲ್ಲಿ ಸೋತಿರುವುದು ಮಲ್ಲಿಕಾರ್ಜುನ ಖರ್ಗೆಯವರು ಅಲ್ಲ ಬದಲಾಗಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಎಂಬುದನ್ನು ರಾಜಕೀಯ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.
ಸತತ 9 ಬಾರಿ ವಿಧಾನಸಭೆಗೆ ಆಯ್ಕೆಯಾಗಿ ಪಕ್ಷ ನಿಷ್ಠ ರಾಜಕೀಯ ಮಾಡಿದ ಖರ್ಗೆಯವರಿಗೆ ಒಂದು ಅವಕಾಶ ನೀಡಿದರೆ ಕಾಂಗ್ರೆಸ್ ತಾನು ಪ್ರತಿಪಾದಿಸುತ್ತಿದ್ದ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದಂತ್ತಾಗುತ್ತಿತ್ತು. ಆದರೆ ದಿಲ್ಲಿಯಲ್ಲಿ ಕುಳಿತ ಸೋನಿಯಾ ಯಾವ ಆಧಾರದ ಮೇಲೆ ಮುಖ್ಯಮಂತ್ರಿ ಪಟ್ಟವನ್ನು ಮೂಲ ಕಾಂಗ್ರೆಸ್ಸಿಗರಲ್ಲದವರಿಗೆ ಮಣೆ ಹಾಕಿದರು ಎಂಬುದು ಕಾಂಗ್ರೆಸ್ ಪಕ್ಷದ ಹಿರಿಯಾಳುಗಳಲ್ಲಿ ಪ್ರಶ್ನೆಯಾಗಿಯೇ ಮುಂದುವರಿಯುತ್ತಿದೆ.
ನಾವು ಮುಖ್ಯಮಂತ್ರಿ ಆಕಾಂಕ್ಷಿಗಳು ಎಂದು ಹೇಳಿಕೊಳ್ಳುತ್ತಿದ್ದ ಘಟಾನುಘಟಿ ನಾಯಕರು, ಹೈಕಮಾಂಡ್ ಎಂಬ ಬೇಲಿಗೆ ಮಂಡಿಯೂರಿದರು. ಆತ್ಮ ವಂಚನೆ ಮಾಡಿಕೊಂಡು ವರಿಷ್ಠರ ಆದೇಶಕ್ಕೆ ತಲೆಬಾಗಿದರು.
ರಾಜ್ಯದಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿರುವುದು ಸಿದ್ದರಾಮಯ್ಯನವರ ನಾಯಕತ್ವಕ್ಕೆ ಎಂಬಂತೆ ನಡೆದುಕೊಂಡ ಸೋನಿಯಾ ನಿರ್ಧಾರದ ಹಿಂದೆ ಕಾಣದ ಕೈಗಳ ನಿರ್ದೇಶನವಿದೆ. ರಾಜ್ಯದ ಬಹುತೇಕ ಸಂಸದರು ಕೂಡ ಖರ್ಗೆ ಸಿಎಂ ಆಗಲು ಒಲವು ವ್ಯಕ್ತಪಡಿಸಲಿಲ್ಲ. ಸಿಎಂ ಸ್ಥಾನಕ್ಕೆ ಸಿದ್ದು ಸೂಕ್ತ ವ್ಯಕ್ತಿ ಎಂದು ಸೋನಿಯಾ ಮೆಡಂಗೆ ಕಿವಿಯೂದಿದರು ಎಂಬುದು ಅಷ್ಟೇ ಸತ್ಯ.
ಕಾಂಗ್ರೆಸ್ ಹೈಕಮಾಂಡ್ ಹಿಂದಿನಿಂದಲೂ ನಡೆಸಿಕೊಂಡ ಬಂದ ಸಂಪ್ರದಾಯವನ್ನು ಮುರಿದು ಶಾಸಕರ ಒತ್ತಡಕ್ಕೆ ಮಣಿದ ವೀಕ್ಷಕರು, ಗುಪ್ತ ಮತದಾನಕ್ಕೆ ಅನುವು ಮಾಡಿಕೊಟ್ಟಿದ್ದರ ಹಿಂದಿರುವ ಮರ್ಮವೇನು ಎಂಬುದನ್ನು ತಿಳಿದುಕೊಳ್ಳದಷ್ಟು ದಡ್ಡರು ದಲಿತರಲ್ಲ ಎಂಬುದನ್ನು ಹೈಕಮಾಂಡ್ ಮನಗಾಣಬೇಕಿದೆ.
1999ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಸಿಎಂ ರೇಸ್‌ನಲ್ಲಿದ್ದ ಎಸ್.ಎಂ ಕೃಷ್ಣರನ್ನು ಗುಪ್ತ ಮತದಾನದ ಮೂಲಕ ಆಯ್ಕೆ ಮಾಡಲಿಲ್ಲ. ಒಂದು ವೇಳೆ ಆಯ್ಕೆಯಾದರೂ ಹೈಕಮಾಂಡ್ ತನ್ನ ನಿಷ್ಠರಿಗೆ ಮಣೆ ಹಾಕುವ ಮೂಲಕ ಆಯ್ಕೆ ಮಾಡಿತ್ತು. ಆದರೆ ಮೊನ್ನೆ ನಡೆದ ಸಿಎಂ ಆಯ್ಕೆ ವಿಚಾರದಲ್ಲಿ ಖರ್ಗೆಯವರು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತಿದ್ದಂತೆ ಶಾಸಕರ ವರಸೆ ಬದಲಾಗಿ ಹೋಯಿತು. ಕಾಂಗ್ರೆಸ್‌ನ ನಿಷ್ಠಾವಂತ ಘಟಾನುಘಟಿ ನಾಯಕರು ತುಟಿಪಿಟಕ್ಕಅನ್ನದೆ ತಮ್ಮ ಸಮ್ಮತಿ ಸೂಚಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಯಕನ ಆಯ್ಕೆ ನಡೆಯಿತು ಎಂದು ಮಾಧ್ಯಮಗಳು ಬಿಂಬಿಸಿದವು. ಆದರೆ ಅಲ್ಲಿ ನಡೆದದ್ದೇ ಬೇರೆ.
ನಾನೊಬ್ಬ ದಲಿತ ಎಂಬ ಕಾರಣಕ್ಕೆ ಸಿಎಂ ಆಗುವುದು ಬೇಡ ಕಾಂಗ್ರೆಸ್ ಜಾತಿಯವನೆಂಬ ಕಾರಣದಿಂದ ಆ ಹುದ್ದೆಯನ್ನು ಕೇಳುತ್ತಿದ್ದೇನೆ ಎಂಬ ಖರ್ಗೆಯವರ ಮಾತು ರಾಜ್ಯದ ಜನಪ್ರತಿನಿಧಿಗಳು ಮತ್ತು ಜಾತ್ಯತೀತ ನಾಯಕರ ಮನತಟ್ಟಲಿಲ್ಲ ಎಂಬುವುದು ವಿಷಾದನೀಯವಾಗಿದೆ.
ಆದರೆ ಈ ಜಾತಿಯೆಂಬ ಅವಮಾನ ಇಂದು ನಿನ್ನೆಯದಲ್ಲ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರಿಗೂ ಕೂಡ ಇಂತದ್ದೇ ಅವಮಾನವಾಗಿತ್ತು. ಆ ಅವಮಾನ ಇಂದು ಮುಂದುವರಿದಿದೆ. ಅಂದು ಮಹಾತ್ಮ ಗಾಂಧಿಯಿಂದ ಅನ್ಯಾಯ ಇಂದು ರಾಷ್ಟ್ರದ ಎಐಸಿಸಿ ಅಧ್ಯಕ್ಷೆ ಸೋನಿಯಾ, ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಂದಾಗಿದೆ. ತನ್ನ ಗುರಿ ಮತ್ತು ಅಂದುಕೊಂಡ ಎಲ್ಲಾ ಆಸೆಗಳು ಈಡೇರಬೇಕಾದರೆ ದಲಿತ ನಾಯಕರಿಗೆ ಕೆಪಿಸಿಸಿ ಪಟ್ಟ ಕಟ್ಟಬೇಕು ಎಂದುಕೊಂಡ ಕಾಂಗ್ರೆಸ್ ಡಾ.ಜಿ.ಪರಮೇಶ್ವರ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿತ್ತು. ಆ ಪಟ್ಟಕ್ಕೆ ಕಟ್ಟುಬಿದ್ದ ಪರಮೇಶ್ವರ್ ತಾನು ಒಬ್ಬ ಸಿಎಂ ಆಕಾಂಕ್ಷಿ ಎಂದು ಹೇಳಿಕೊಳ್ಳುತ್ತಲೆ ರಾಜ್ಯ ಪ್ರವಾಸ ಮಾಡಿ ಸ್ವಂತ ಕ್ಷೇತ್ರವನ್ನು ಕಡೆಗಣೆಸಿ ದುಡಿದರು.
ರಾಜ್ಯದ ಜವಾಬ್ದಾರಿ ಅಧ್ಯಕ್ಷರ ಮೇಲಿರುವುದರಿಂದ ಸ್ವಂತ ಕ್ಷೇತ್ರದತ್ತ ಗಮನಹರಿಸದೆ ಸೋಲಬೇಕಾಯಿತು. ಪರಮೇಶ್ವರ ಸೋಲಿಗೆ ಅದೇ ಕಾರಣವಂತೂ ಅಲ್ಲ ಎಂಬುದನ್ನು ಸಾಮಾನ್ಯ ಮತದಾರರು ಕೂಡ ಒಪ್ಪಲೇಬೇಕಾದ ವಿಷಯ.
ಕೆಪಿಸಿಸಿ ಅಧ್ಯಕ್ಷರ ಸೋಲಿನ ಹಿಂದೆ ಕಾಂಗ್ರೆಸ್ ಘಟಾನುಘಟಿ ನಾಯಕರ ಕೈವಾಡವಿದೆ ಎಂಬ ಮಾಹಿತಿ ಗುಟ್ಟಾಗೇನೂ ಉಳಿದಿಲ್ಲ. ಯುದ್ದಕ್ಕೆ ಮುನ್ನವೇ ಒಂದು ವಿಕೆಟ್ ಪತನವಾದರೆ ಇನ್ನೊಂದು ವಿಕೆಟ್ ಪತನ ಮಾಡುವುದು ಜತಿವಾದಿ ನಾಯಕರಿಗೆ ಕಷ್ಟದ ಕೆಲಸವೇನು ಆಗಲಿಲ್ಲ. ಗುಪ್ತ ಮತದಾನದ ಹೆಸರಿನಲ್ಲಿ ಆ ಒಬ್ಬ ದಲಿತ ನಾಯಕನನ್ನು ಸಿಎಂ ಹುದ್ದೆಯಿಂದ ವಂಚಿಸಿದರು.
ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಲು ಸಹಕರಿಸಿದ ಸಮುದಾಯಕ್ಕೆ ಅಥವಾ ಮುಖಂಡರಿಗೆ ಸಿ.ಎಂ. ಗದ್ದುಗೆ ನೀಡಲು ಕಾಂಗ್ರೆಸ್ ಏಕೆ ಸಮ್ಮತಿಸಲಿಲ್ಲ ಎಂದು ಇತಿಹಾಸ ಕೆದಕಿದಾಗ ಉತ್ತರ ಬಹಳ ದಯನೀಯವಾಗಿ ತೋರುತ್ತದೆ.
1999 ಕೃಷ್ಣ ಪಾಂಚಜನ್ಯ ಮೊಳಗಿಸಿದಾಗ ಸಿಎಂ ರೇಸ್‌ನಲ್ಲಿದ್ದರೂ ಖರ್ಗೆಯವರ ಕೈತಪ್ಪಿತು. 2004ರಲ್ಲಿ ಜೆಡಿಎಸ್ ಜೊತೆ ಮೈತ್ರಿಯಾದಾಗ ಕೆಪಿಸಿಸಿ ಅಧ್ಯಕ್ಷರಾಗಿ ಮತ್ತು ವಿಪಕ್ಷ ನಾಯಕನಾಗಿ ಬಹುತೇಕ ಸಿಎಂ ಹುದ್ದೆಯ ಸನಿಹವೇ ಇದ್ದ ಖರ್ಗೆಯವರನ್ನು ನಿರ್ಲಕ್ಷಿಸಿ, ಅವರ ಪಕ್ಕ ಇದ್ದ ಧರ್ಮಸಿಂಗ್‌ಗೆ ಮುಖ್ಯಮಂತ್ರಿ ಹುದ್ದೆ ದಯಪಾಲಿಸಿ ತನ್ನ ಧೋರಣೆಯನ್ನು ಮುಂದುವರಿಸಿತು. ಬೃಹತ್ ಜನಸಂಖ್ಯೆ ಹೊಂದಿರುವ ಒಂದು ಪ್ರಬಲ ಶೋಷಿತ ಸಮುದಾಯವನ್ನು ನಿರ್ಲಕ್ಷಿಸಿ ದಲಿತ ಸಮುದಾಯವನ್ನು ವಂಚಿಸುವ ಮೂಲಕ ಭಾರೀ ಅನ್ಯಾಯ ಮಾಡಿದೆ.
ಮುಖ್ಯಮತ್ರಿಯಾಗಿ ಆಯ್ಕೆಯಾಗಿರುವ ಹಿಂದುಳಿದ ವರ್ಗದ ನಾಯಕ ಸಿದ್ದರಾಮಯ್ಯ ಸಿಎಂ ಆಗಬಾರದು ಎಂದೆನಿಲ್ಲ. ಆದರೆ ಖರ್ಗೆ ಅಥವಾ ಪರಮೇಶ್ವರ್‌ರವರ ದಶಕಗಳ ಕಾಂಗ್ರೆಸ್ ನಿಷ್ಠೆಯ ಮುಂದೆ ಜನತಾ ಪರಿವಾರದಿಂದ ಬಂದ ಸಿದ್ದರಾಮಯ್ಯನವರ ಪಕ್ಷನಿಷ್ಠೆ ಮತದಾರರಲ್ಲಿಯೂ ಪ್ರಶ್ನಾರ್ಹವಲ್ಲವೇ?
ಮುಂಬರುವ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ವರಿಷ್ಠರು ಹೆಚ್ಚಿನ ಸ್ಥಾನ ಗೆಲ್ಲಬೇಕಾದರೆ ಸಿದ್ದರಾಮಯ್ಯನವರೇ ಉತ್ತಮ ಆಯ್ಕೆ ಎಂಬ ಸಂಸದರ ವಾದವೂ ಎಡಬಿಡಂಗಿತನದಿಂದ ಕೂಡಿದ್ದಲ್ಲವೇ? ಸಿದ್ದರಾಮಯ್ಯ ಎಲ್ಲಾ ಸಮುದಾಯದ ಪ್ರಶ್ನಾತೀತ ನಾಯಕ ಎಂದು ಹೇಳಲು ಹೇಗೆ ಸಾಧ್ಯ? ಲೋಕಸಭೆಯಲ್ಲಿ ದಲಿತ ಸಮುದಾಯದ ವೋಟ್ ಎಷ್ಟರ ಮಟ್ಟಿಗೆ ಪಡೆಯಬಲ್ಲರು ಎಂಬುದನ್ನು ಸಿದ್ದರಾಮಯ್ಯನವರಿಗೆ ಈಗಾಗಲೇ ಮನವರಿಕೆಯಾಗಿರಬಹುದು? ಬೀದರ್‌ದಿಂದ ಹಿಡಿದು ಚಾಮರಾಜನಗರದವರೆಗೆ ಪ್ರವಾಸ ಮಾಡಿದರೂ ಕಾಂಗ್ರೆಸ್‌ಗೆ ವೋಟ್ ಮಾಡುತ್ತೇನೆ ಎಂದು ಹೇಳುವ ದಲಿತ ಇಂದು ಕಾಣುತ್ತಿಲ್ಲ. ಇದಕ್ಕೆ ಕಾರಣ ನಮ್ಮ ಸಮುದಾಯದ ನಾಯಕನೊಬ್ಬನಿಗೆ ಜಾತಿ ಆಧಾರದ ಮೇಲೆ ವಂಚಿಸಲಾಗಿದೆ ಎಂಬುದು ಸಾಮಾನ್ಯ ಉತ್ತರವಾಗಿದೆ.
ಖರ್ಗೆ ಅಥವಾ ಪರಮೇಶ್ವರ್‌ರವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದ್ದರೆ ಕೇವಲ ರಾಜ್ಯದಲ್ಲಿ ಮಾತ್ರವಲ್ಲದೆ ರಾಷ್ಟ್ರ ಮಟ್ಟದಲ್ಲಿ ದೊಡ್ಡಮಟ್ಟದ ಲಾಭವಾಗುತ್ತಿತ್ತು. ದಲಿತ ನಾಯಕನನ್ನು ಮುಖ್ಯಮಂತ್ರಿ ಮಾಡಿದ ಗರಿಯನ್ನು ಕಾಂಗ್ರೆಸ್‌ಗೆ ಸಿಗುತ್ತಿತ್ತು. ಅಷ್ಟೇ ಅಲ್ಲದೆ ರಾಜ್ಯದಲ್ಲಿ ವಿಪಕ್ಷಗಳ ಬಾಯಿ ಮುಚ್ಚಿಸಲು ಒಂದು ಅಸ್ತ್ರವಾಗುತ್ತಿತ್ತು. ರಾಷ್ಟ್ರದ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುವ ಉತ್ತರ ಪ್ರದೇಶದಂತ ರಾಜ್ಯದಲ್ಲಿ ಹೆಚ್ಚಿನ ಸ್ಥಾನ ಗಳಿಸಲು ಸಾಧ್ಯವಿತ್ತು.
ಉತ್ತರಪ್ರದೇಶದಲ್ಲಿ ಬಿಎಸ್‌ಪಿ ಕಸಿಯುವ ದಲಿತ ಮತಬ್ಯಾಂಕ್‌ನ್ನು ಛಿದ್ರ ಮಾಡಬೇಕಾಗಿದ್ದರೆ ದಲಿತ ನಾಯಕರು ಮುಖ್ಯಮಂತ್ರಿಯಾಗುವುದು ಅನಿವಾರ್ಯವಾಗಿತ್ತು. ಆದರೆ ಕಾಂಗ್ರೆಸ್ ಯಾವ ಆಧಾರದ ಮೇಲೆ ನಾಯಕನನ್ನು ಆಯ್ಕೆ ಮಾಡಿತು ಎಂಬುದು ಪ್ರಶ್ನೆಯಾದರೂ ರಾಜ್ಯದ ಶೋಷಿತ ಸಮುದಾಯಗಳ ದಶಕಗಳ ಕನಸನ್ನು ನುಚ್ಚುನೂರು ಮಾಡಿ, ಕಾಂಗ್ರೆಸ್ ಪಕ್ಷ ಆ ಸಮುದಾಯದ ಆಕ್ರೋಶಕ್ಕೆ ಗುರಿಯಾದಂತೂ ಸತ್ಯ. ಮತ್ತೊಮ್ಮೆ ದಲಿತ ನಾಯಕರು ಮತ್ತು ಸಮುದಾಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಇದರ ಫಲಿತಾಂಶ ಮುಂದಿನ ಲೋಕಸಭೆಯಲ್ಲಿ ಅನುಭವಿಸಲಿದೆ.

No comments:
Post a Comment