Wednesday, 22 August 2012

ಪ್ರವಾಸದ ಮೋಜಿನಲ್ಲಿ ಮೈಮರೆಯುತ್ತಿರುವ ಶಾಸಕರು

ನಮ್ಮ ಶಾಸಕರಿಗೆ ಯಾಕೋ ವಿದೇಶ ನೋಡುವ ಆಸೆ ಸ್ವದೇಶದಲ್ಲಿ ಜನರು ಸತ್ತರು ಪರವಾಗಿಲ್ಲ. ಅದೇ ಅವರಿಗೆ ಅಧ್ಯಯನಕ್ಕೆ ವಸ್ತು ವಿಷಯವಾದಿತು. ಎಷ್ಟೇ ಪ್ರತಿರೋಧ ವ್ಯಕ್ತವಾದರೂ ಕೂಡ ವಿದೇಶ ಪ್ರವಾಸದಿಂದ ಹಿಂದೆ ಸರಿಯದೇ ತಮ್ಮ ಮೂಗಿನ ನೇರಕ್ಕೆ ಸೂಕ್ತವಾದ ಉತ್ತರಗಳನ್ನು ನೀಡುವುದರ ಮೂಲಕ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.
ವಿದೇಶ ಪ್ರವಾಸ ಮಾಡಬಾರದು ಎಂದೇನು ಇಲ್ಲ ಆದರೆ ಪರಿಸ್ಥಿತಿ ಹೇಳಿಕೊಳ್ಳುವಷ್ಟು ಸುಧಾರಣೆ ಇಲ್ಲ್ಲದಿರುವುದಕ್ಕೆ ಸಾಮಾನ್ಯವಾಗಿ ಪ್ರತಿರೋಧ ವ್ಯಕ್ತವಾಗುತ್ತಿದೆ. ಯಾವುದೇ ಅಧ್ಯಯನ ವಸ್ತು ಸ್ಥಿತಿಗೆ ಪೂರಕವಾಗಿರಬೇಕು. ಒತ್ತಡ ಹಾಗೂ ರಾಜ್ಯ ಕಷ್ಟದಲ್ಲಿ ಇದ್ದಾಗ ಹೋಗುವುದು ಸಮಂಜಸವಲ್ಲ. ಜನ ಜಾನುವಾರುಗಳು ಕುಡಿಯುವ ನೀರು, ಮೇವಿಗಾಗಿ ಹಾಹಾಕಾರ ಪಡುತ್ತಿರಬೇಕಾದರೆ ಅಧ್ಯಯನದ ನೆಪದಲ್ಲಿ ಮೋಜಿಗಾಗಿ ವಿದೇಶಕ್ಕೆ ಹೋಗುವುದು ಯಾವ ಪುರುಷಾರ್ಥಕ್ಕಾಗಿ? ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ರೈತರ ಹೊಲಗಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಳ್ಳಲಿ ಸಂದರ್ಭದಲ್ಲಿ ತಮ್ಮ ಕ್ಷೇತ್ರಗಳಲ್ಲಿ ಇದ್ದು ಅಭಿವೃದ್ಧಿ ಕಾರ್ಯಗಳಿಗೆ ವೇಗ ಹೆಚ್ಚಿಸುವುದು ಉತ್ತಮವಾದೀತು. ಬರದ ಕರಿ ಛಾಯೆಯಿಂದ ಬರಡಾದ ರೈತರಿಗೆ ಆತ್ಮ ವಿಶ್ವಾಸ ತುಂಬುವ ಕೆಲಸ ಮಾಡುವುದು ಬಿಟ್ಟು ವಿದೇಶ ಪ್ರವಾಸದ ಮೋಜಿನಲ್ಲಿ ಮೈಮರೆಯುತ್ತಿರುವುದು ನೋಡಿದರೆ ಶಾಸಕರಿಗೆ ರೈತಪರ ಕಾಳಜಿ ಎಷ್ಟಿದೆ ಎಂದು ಗೊತ್ತಾಗುತ್ತಿದೆ.
ರಾಜ್ಯದ ಜನತೆಗೆ ನೈತಿಕ ಶಕ್ತಿ ತುಂಬುವತ್ತ ಕೆಲಸ ಮಾಡಬೇಕಾದ ಶಾಸಕರು ಸಾರ್ವಜನಿಕರ ಹಣ ಎಂದ ಕೂಡಲೇ ವಿದೇಶ ಯಾತ್ರೆ ಕೈಗೊಳ್ಳುವುದೇ? ವಾಸ್ತವ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಕಷ್ಟದ ಸಂದರ್ಭದಲ್ಲಿ ನಮ್ಮ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ ಎಂದ ಮೇಲೆ ಇಂತ ಜನಪ್ರತಿನಿಧಿಗಳಿಂದ ಏನು ನಿರೀಕ್ಷಿಸಲು ಸಾಧ್ಯವಿಲ್ಲ. ಸಾರ್ವಜನಿಕರು ಈಗಾಗಲೇ ಜನಪ್ರತಿನಿಧಿಗಳಿಗೆ ಕಿಂಚಿತ್ತೂ ಗೌರವ ಕೊಡುವುದಿಲ್ಲ. ಮುಂದೆ ಮತ್ತಷ್ಟು ಕಠಿಣವಾಗಿ ನಡೆದುಕೊಳ್ಳುತ್ತಾರೆ. ಬರ ಹಾಗೂ ಪ್ರವಾಹದಂತಹ ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ಜನರ ಜತೆ ಇದ್ದು ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕಾದದ್ದು ಅವರ ಆದ್ಯ ಕರ್ತವ್ಯ.
ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಗೋಶಾಲೆಗಳನ್ನು ತೆರೆಯಲಾಗಿದೆ ಎಂದು ಹೇಳಿಕೊಳ್ಳುವ ಸರ್ಕಾರ ಗೋಶಾಲೆಗಳಿಗೆ ಮೇವು ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಹೆಸರಿಗೆ ಮಾತ್ರ ತೆರೆಯಲಾದ ಗೋಶಾಲೆಗಳಲ್ಲಿಯೂ ರಾಜಕೀಯ ನುಸುಳಿದೆ ಎಂಬುವುದು ವಿಪರ್ಯಾಸ. ಆಯಾ ಕ್ಷೇತ್ರದ ಶಾಸಕರ ಹಿಂದಿರುವ ಪುಡಿ ರಾಜಕೀಯ ನಾಯಕರು ತಮ್ಮ ಬೆಂಬಲಿಗ ರೈತರಿಗಷ್ಟೇ ಮೇವು ನೀಡಿ ತಾರತಮ್ಯ ಎಸಗುತ್ತಿದ್ದಾರೆ ಎಂದು ದೂರುಗಳು ಕೇಳಿಬರುತ್ತಿವೆ. ಸರ್ಕಾರ ನಿಜವಾದ ಫಲಾನುಭವಿಗಳಿಗೆ ಸಮರ್ಪಕವಾಗಿ ವಿತರಣೆಯಾಗುವಂತೆ ನೋಡಿಕೊಳ್ಳುವತ್ತ ಕ್ರಮಕೈಗೊಳ್ಳಲಿ.

No comments:

Post a Comment