Wednesday, 22 August 2012

ಸ್ವಾರ್ಥ ಸಾಧನೆಗೆ ಬಲಿಯಾಗುತ್ತಿರುವ ಸಂಘಟನೆಗಳು

ರಾಜ್ಯದಲ್ಲಿ ದಿನಕ್ಕೊಂದು ಸಂಘಟನೆಗಳು ಹುಟ್ಟಿಕೊಳ್ಳುತ್ತವೆ. ಸಂಘಟನೆಗಳನ್ನು ಹುಟ್ಟು ಹಾಕುವ ನಾಯಕರ ವಾಂಛೆ ಧ್ವನಿ ಇಲ್ಲದ ಧ್ವನಿಯಾಗಿ ಮತ್ತು ಶೋಷಿತರ ಹಕ್ಕುಗಳನ್ನು ಒದಗಿಸಿ ಕೊಡುವಲ್ಲಿ ರಚನಾತ್ಮಕ ಹೋರಾಟ ಮಾಡುವುದೇ ಮೂಲ ಗುರಿ ಎಂದು ಅಬ್ಬರಿಸುತ್ತಾರೆ.
ಯಾವುದೇ ಸ್ವಾರ್ಥ, ಪ್ರತಿಷ್ಠೆ, ಅಹಂಕಾರ, ಅಧಿಕಾರದ ದಾಹ ಎವೆಲ್ಲವನ್ನು ಮೀರಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಶೋಷಿತರಿಗೆ ನ್ಯಾಯ ಒದಗಿಸಿ ಕೊಡಲು ಸಾಧ್ಯ ಆದರೆ ಮೂಲ ಉದ್ದೇಶವನ್ನು ಬಿಟ್ಟು ಸ್ವಾರ್ಥ ಸಾಧನೆಗೆ ಸಂಘಟನೆಗಳನ್ನು ಬಲಿ ಕೊಡುತ್ತಾ ನಡೆದಿರುವುದರಿಂದ ಸಂಘಟನೆಗಳ ಸಂಖ್ಯೆ ಹೆಚ್ಚುತ್ತಲೆ ಇದೆ ಹೊರತು ಸಮಾಜಿಕ ನ್ಯಾಯ ಮರೀಚಿಕೆಯಾಗಿದೆ.
ಇದಕ್ಕೆ ಸೂಕ್ತ ಉದಾಹರಣೆ ಎಂದರೆ ೧೯೭೦ರ ದಶಕದಲ್ಲಿ ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿ ಹುಟ್ಟಿದಾಗ ಆ ಸಮುದಾಯದ ಏಳೆಗೆಗಾಗಿ ಕೆಲಸ ಮಾಡಿತು.
ಸಮಾಜದಲ್ಲಿನ ಅನಿಷ್ಠ ಪದ್ಧತಿಗಳ ವಿರುದ್ಧ ವೈಜ್ಞಾನಿಕ ಪ್ರಜ್ಞೆ ಮೂಡಿಸುವಲ್ಲಿ ಮತ್ತು ಸರ್ಕಾರದ ಮೇಲೆ ಒತ್ತಡ ಹಾಕಿದ ಫಲವಾಗಿ ಮಲ ಹೊರುವ ಪದ್ಧತಿ ನಿಷೇಧವಾಯಿತು. ಹಾಗೇಯೆ ರೈತ ಸಂಘ ಕೂಡ ರೈತರ ಏಳಿಗೆಗಾಗಿ ಅವಿರತ ಶ್ರಮಿಸಿತು. ಈ ಎರಡು ಸಂಘಟನೆಗಳು ಚಳುವಳಿಗೆ ಧುಮುಕಿದರೆ ವಿಧಾನಸೌಧದಲ್ಲಿರುವ ಮುಖ್ಯಸ್ಥರು ಉಸಿರು ಬಿಗಿಹಿಡಿದುಕೊಂಡೆ ಕುಳಿತುಕೊಳ್ಳಬೇಕಾಗಿತ್ತು ಅಷ್ಟೊಂದು ಅಂದಿನ ಹೋರಾಟದಲ್ಲಿ ಗಟ್ಟಿತನವಿತ್ತು. ಆದರೆ ಇಂದಿನ ಸಂದರ್ಭದಲ್ಲಿ ಸಂಘಟನೆಗಳು ಒಡೆದು ಹೋಗಿದ್ದಲ್ಲದೆ ಮನಸ್ಸುಗಳು ಕೂಡ ಒಡೆದು ಹೋಗಿರುವುದರಿಂದ ರಚನಾತ್ಮಕ ಹೋರಾಟ ಎಂಬುದು ಪುಸ್ತಕದಲ್ಲಿ ಓದಿ ತಿಳಿಯುವ ಸನ್ನಿವೇಶ ಸೃಷ್ಟಿಯಾಗಿದೆ.
ಇತ್ತೀಚಿನ ದಿನಗಳಲ್ಲಂತೂ ಸಂಘಟನೆಗಳು ತಮ್ಮ ಸ್ವಾರ್ಥ ಚಿಂತನೆಗಳತ್ತ ಮನಸ್ಸು ಮಾಡಿರುವುದರಿಂದ ಸಾಮಾಜಿಕ ಬದ್ಧತೆ ಬಗ್ಗೆ ಚಿಂತಿಸದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಾಮಾಣಿಕ ಕಾಳಜಿಯನ್ನು ಬದಿಗೊತ್ತಿದಾಗ ಸಂಘಟನೆಗಳು ಛಿದ್ರವಾಗಿ ಹೋಗುತ್ತವೆ ಎಂಬುದಕ್ಕೆ ಇಂದು ಹುಟ್ಟಿಕೊಳ್ಳುತ್ತಿರುವ ಸಂಘಟನೆಗಳ ಸಂಖ್ಯೆ ನೋಡಿದರೆ ಗೊತ್ತಾಗುತ್ತದೆ.
ಗೊತ್ತು ಗುರಿ ಇಲ್ಲದೆ ಹುಟ್ಟಿಕೊಳ್ಳುತ್ತಿರುವ ಸಂಘಟನೆಗಳಿಗೆ ಸ್ವಹಿತದ ಬಗ್ಗೆ ಹೆಚ್ಚಿನ ಕಾಳಜಿ ಇರುವುದರಿಂದ ಚಳವಳಿಗಳು   ನೀರ ಮೇಲಿನ ಗುಳ್ಳೆಯಂತಾಗಿವೆ. ಈ ಗುಳ್ಳೆ ಸಂಘಟನೆಗಳನ್ನು ನಮ್ಮ ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕೆ ಉಪ ಯೋಗಿಸಿಕೊಂಡು ಕೆಲಸ ಮುಗಿಸಿದ ಕೂಡಲೇ ಸಿಪ್ಪೆಯಂತೆ ಹೋಗೆದು ಬಿಡುತ್ತಾರೆ ಅವಾಗ ಮತ್ತೇ ಬೀದಿಗೆ ಬಂದ ನಾಯಕರು ಬೇಕೇ ಬೇಕು ನ್ಯಾಯ ಬೇಕು ಎಂದು ಕೂಗುವುದು ಮಾತ್ರ ಬಿಡುವುದಿಲ್ಲ. ಇಂಥ ಸಂಘಟನೆಗಳ ಬೆಂಬಲ ಪಡೆದ ನಮ್ಮ ರಾಜಕೀಯ ನಾಯಕರಿಂದ ಉತ್ತಮ ಪ್ರಜಾಪ್ರಭುತ್ವ ನಿರೀಕ್ಷಿಸಬಹುದೇ? ಸಂಘಟನೆಗಳು ಸಮಾಜದ ಆಸ್ತಿಯಾಗಬೇಕು ಆದರೆ ಅವುಗಳನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿರುವುದರಿಂದ ಸಂಘಟನೆಗಳ ನೈತಿಕ ಮೌಲ್ಯ ಕುಸಿಯುತ್ತಿದೆ.
ತತ್ವ ಸಿದ್ಧಾಂತಗಳೊಂದಿಗೆ ಜನ್ಮ ತಾಳುವ ಸಂಘಟನೆಗಳು ಸ್ವಾರ್ಥಪ್ರಜ್ಞೆ ಮೂಡಿದರೆ ಸಾಕು ಛಿದ್ರವಾಗುತ್ತವೆ ಎನ್ನುವುದಕ್ಕೆ ಇಂದಿನ ದಲಿತ ಸಂಘರ್ಷ ಸಮಿತಿಗಳು ಮತ್ತು ರೈತ ಸಂಘಗಳೇ ಜ್ವಲಂತ ಉದಾರಹಣೆ ನೀಡಬಹುದಾಗಿದೆ.
ಸಮುದಾಯದ ಅಭಿವ್ರದ್ದಿಗೆ ಯಾರು ಕೆಲಸ ಮಾಡದೆ ಹಿಂದುಳಿದ, ದಲಿತರನ್ನು ನಿರಂತರವಾಗಿ ತುಳಿಯುವ ಕೆಲಸ ನಡೆಯುತ್ತಿದೆ  ಎಂದು ಭಾಷಣ ಬಿಗಿಯುವ ಈ ನಾಯಕರಿಂದಲೇ ಅನ್ಯಾಯ ನಡೆಯುತ್ತಿದೆ. ಇಂತಹ ಕೆಲವೇ ನಾಯಕರನ್ನು ಉಪಯೋಗಿಸಿಕೊಂಡು ದುಷ್ಟ ಶಕ್ತಿಗಳು ತಾಂಡವ ನೃತ್ಯವಾಡುತ್ತಿದ್ದಾರೆ. ಸಮಾಜದಲ್ಲಿರುವ ಜನತೆ ಕಾಡು ಮೃಗಗಳಂತೆ        ವರ್ತಿಸುತ್ತಿದ್ದಾರೆ. ಮಾನವೀಯತೆ ಮರೆಯಾಗುತ್ತಿದೆ ನಾವು ನಮ್ಮವರು ಎನ್ನುವ ಭಾವನೆ ವಿನಾಶದ ಅಂಚಿನಲ್ಲಿದೆ.  
 

No comments:

Post a Comment