Wednesday, 20 June 2012

ಕನ್ನಡ ವರ್ಸಸ್ ಇಂಗ್ಲಿಷ್ ಯಾವುದು ಸರಿ...

ಕನ್ನಡ ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತಿದಂತೆ ನಮ್ಮ ಸರ್ಕಾರ ಮತ್ತು ಕನ್ನಡ ಪರ ಸಂಘಟನೆ ಮತ್ತು ಸಾಹಿತಿಗಳು ಏಕಾಏಕಿ ಜಾಗೃತರಾಗಿದ್ದಾರೆ. ಸರ್ಕಾರದ ಎಡಬಿಡಂಗಿ ಆದೇಶಗಳು ಒಂದು ಕಡೆಯಾದರೆ ಇದನ್ನು ವಿರೋಧಿಸುವ ಸ್ವಯಂ ಘೋಷಿತ ಸಾಹಿತಿಗಳು ಇನ್ನೊಂದು ಕಡೆ.
ಸರ್ಕಾರಿ ಶಾಲೆಗಳನ್ನು ಮುಚ್ಚಬೇಕೆಂದು ಆದೇಶ ನೀಡಿದ್ದ ಸರ್ಕಾರ ಕನ್ನಡಪರ ಸಂಘಟನೆಗಳು ಮತ್ತು ಸಾಹಿತಿಗಳ ವಿರೋಧದಿಂದಾಗಿ ಕೈಬಿಟ್ಟಿತ್ತಾದರೂ ಇಂಗ್ಲಿಷ್ ಮಾಧ್ಯಮ ಜಾರಿಗೆ ತರುವ ಮೂಲಕ ಈಡೇರಿಸಿಕೊಳ್ಳಲು ಹೊರಟಿದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ. ೬ನೇ ತರಗತಿಯಿಂದ ಸರ್ಕಾರ ಇಂಗ್ಲಿಷ್ ಮಾಧ್ಯಮ ಜಾರಿಗೆ ತರುವುದು ಎಂದರೇ ಕನ್ನಡದ ಮೇಲೆ ಸವಾರಿ ಮಾಡಿದಂತೆ. ಇಂಥ ಆದೇಶವನ್ನು ಹಿಂಪಡೆಯದಿದ್ದರೆ ಕನ್ನಡ ಪರ ಚಳುವಳಿಗಾರರೊಂದಿಗೆ ಗೋಕಾಕ್ ಮಾದರಿಯಲ್ಲಿ ಹೋರಾಟ ನಡೆಸುವುದಾಗಿ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಪುಂಡಲಿಕ್ ಹಾಲಂಬಿ ಘೋಷಿಸಿದ್ದಾರೆ. ಇದಕ್ಕೆ ಪ್ರಗತಿಪರ ಚಿಂತಕರಾದ ಡಾ.ಮರುಳಸಿದ್ದಪ್ಪ, ಪ್ರೊ.ಚಂದ್ರಶೇಖರ್ ಪಾಟೀಲ್ ಚಂಪ, ಪ್ರೊ.ಬರಗೂರು ರಾಮಚಂದ್ರಪ್ಪ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ.

ಗುಂಪಿನಲ್ಲಿ ಗೋವಿಂದ ಎನ್ನುವ ಈ ಸಾಹಿತಿಗಳು ತಮ್ಮ ಮಕ್ಕಳನ್ನು ಯಾವ ಮಾಧ್ಯಮದಲ್ಲಿ ಕಲಿಸುತ್ತಿದ್ದಾರೆ ಎಂಬುದು ಆತ್ಮ ವಿಮರ್ಶೆ ಮಾಡಿಕೊಳ್ಳಲಿ? ಸರ್ಕಾರದ ವಿರುದ್ಧ ಸೆಟೆದು ನಿಲುವ ಮುನ್ನ ನಾವು ಹೇಗಿದ್ದೇವೆ ಎಂಬುದನ್ನು ಸ್ವವಿಮರ್ಶೆ ಮಾಡಿಕೊಳ್ಳಬೇಕು ಅದೆಲ್ಲವನ್ನು ಮರೆತು ಯಾವ ಸರ್ಕಾರಿ ಶಾಲೆ ಚೆನ್ನಾಗಿದೆ ರೀ ಸೇರಿಸೋದಕ್ಕೆ? ಎಂಬ ಊಡಾಫೇಯ ಮಾತು ಸಹಜವಾಗಿ ಆಡಿಬಿಡುತ್ತಾರೆ. ತಮ್ಮ ಮಕ್ಕಳು, ಮೊಮ್ಮಕ್ಕಳು ಸಂಬಂಧಿಗಳು ಉನ್ನತ ಮಟ್ಟದ ಖಾಸಗಿ ಶಾಲೆಗಳಲ್ಲಿ ಓದಲಿ ಅದೆಲ್ಲ್ಲ ಕೇಳಬಾರದು ಅಂದರೇ ಸರ್ಕಾರದ ವಿರುದ್ಧ ಹೋರಾಟ ಮಾಡುವ ಹಕ್ಕು ಇವರಿಗಿದೆಯ? ಯಾವ ನೈತಿಕತೆ ಇಟ್ಟ್ಟುಕೊಂಡು ಹೋರಾಟ ಮಾಡುತ್ತಾರೆ?
ಇಂಥ ಹೇಳಿಕೆಗಳಿಂದ ಸಿಟ್ಟಾದ ಸಿ.ಎಂ.ಸದಾನಂದ ಗೌಡರು ಇಂಗ್ಲಿಷ್ ಮಾಧ್ಯಮ ವಿರೋಧಿಸುವ ಸಾಹಿತಿಗಳ ಮಕ್ಕಳು ಎಲ್ಲಿ ಕಲಿಯುತ್ತಿದ್ದಾರೆ ಎಂಬುದ್ದನು ಪಟ್ಟಿ ತೆಗೆಸುವುದಾಗಿ ಗುಡುಗಿದ್ದಾರೆ. ಇದು ಸಾಹಿತಿಗಳ ಧೋರಣೆಗೆ ಹಿಡಿದ ಕನ್ನಡಿ. ಒಂದು ಭಾಷೆಯನ್ನು ಮಾಧ್ಯಮವಾಗಿ ಕಲಿಸಲು ವಿರೋಧಿಸುವುದು ಸಲ್ಲ. ಆಂಗ್ಲ ಭಾಷೆಯನ್ನು ವಿರೋಧಿಸುವ ಸಾಹಿತಿಗಳ ಮಕ್ಕಳು ವಿದೇಶದಲ್ಲಿದ್ದಾರೆ. ಅವರೇನು ಕನ್ನಡ ಓದುತ್ತಿದ್ದಾರೆಯೇ ಎಂಬ ಪ್ರಶ್ನೆ ಸಹಜವಾಗಿ ಹುಟ್ಟುತ್ತದೆ.
ನಮ್ಮ ಸಾಹಿತಿಗಳು ವಿರೋಧಿಸಬೇಕಾದ ವಿಷಯವನ್ನು ಮರೆತು ಕೇವಲ ಇಂಗ್ಲಿಷ್ ಭಾಷೆಯನ್ನು ವಿರೋಧಿಸುತ್ತಿದ್ದಾರೆ. ಇಂಗ್ಲಿಷ್ ಶಾಲೆಯಲ್ಲಿ ಕನ್ನಡ ಕಲಿಕೆಗೆ ಒತ್ತಾಯಿಸಬೇಕಾದ ಇವರು ಮೂಲ ಪ್ರಶ್ನೆಯನ್ನು ಮರೆತು ವಿರೋಧಕ್ಕಾಗಿ ವಿರೋಧಿಸುತ್ತಿದ್ದಾರೆ. ಇದು ಕನ್ನಡದ ಮೇಲಿರುವ ಕಾಳಜಿಯ ಫಲಶೃತಿ ಎಂದು ಒಪ್ಪಲಾಗದು. ಒಂದು ಭಾಷೆಯನ್ನು ಅಧ್ಯಯನ ಮಾಡಲು ಮಾಧ್ಯಮ ಅಡ್ಡಿಯಾಗಬಾರದು. ಮಾಧ್ಯಮದ ಹೆಸರಿನಲ್ಲಿ ಅದನ್ನು ವಿರೋಧಿಸಲುಬಾರದು. ಇಂದು ಇಂಗ್ಲಿಷ್ ಜಗತ್ತಿನ ಪ್ರಭಾವಿ ಭಾಷೆ. ತನ್ನದೆ ಆದ ಚಾಪನ್ನು ಮೂಡಿಸಿಕೊಂಡಿರುವ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳನ್ನು ಬೆಸೆಯುವಲ್ಲಿ ತನ್ನದೆ ಆದ ಮಹತ್ವದ ಪಾತ್ರ ವಹಿಸುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಅಷ್ಟೇ ಅಲ್ಲ ಹಸಿದವನಿಗೆ ಅನ್ನ ಕೊಡುವ ಭಾಷೆಯಾಗಿದೆ ಎಂದರು ತಪ್ಪಾಗಲಾರದು. ಆದರೆ ಕನ್ನಡಕ್ಕೆ ಈ ಮಾತು ಅನ್ವಯಿಸುವುದು ಕಷ್ಟ. ಕನ್ನಡ ಅನ್ನ ಕೊಡುವ ಭಾಷೆಯಾಗದೆ ನಿರುದ್ಯೋಗಿಗಳನ್ನು ಸೃಷ್ಟಿ ಮಾಡುವ ಕೇಂದ್ರವಾಗುತ್ತಿದೆ ಇದಕ್ಕೆ ಕಾರಣ ಯಾರು? ಕರ್ನಾಟಕದಲ್ಲಿಯೇ ಕನ್ನಡಕ್ಕೆ ಸ್ಥಾನಮಾನ ಇಲ್ಲ ಎಂದರೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪೈಪೋಟಿ ಎದುರಿಸಲು ಸಾಧ್ಯವೇ?
ಇದು ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದವರಿಗೆ ಮಾತ್ರ ಈ ಸಮಸ್ಯೆಯಾಗುತ್ತದೆ ಎನ್ನುವುದು  ಸುಳ್ಳು ಇದು ಭಾರತದ ಎಲ್ಲಾ ಮಾತೃ ಭಾಷೆಗಳಿಗೆ ಕಾಡುತ್ತಿರುವ ಪ್ರಶ್ನೆಯಾಗಿದೆ. ಇದಕ್ಕೆ ಹಲವಾರು ಕಾರಣಗಳಿರಬಹುದು. ಇದನ್ನು ಹೋಗಲಾಡಿಸಬೇಕಾದರೆ ಕನ್ನಡದಲ್ಲಿ ಕಲಿತವರಿಗೆ ಸರ್ಕಾರಿ ನೌಕರಿಯಲ್ಲಿ ಹೆಚ್ಚು ಹೆಚ್ಚು ಅವಕಾಶಗಳನ್ನು ನೀಡಬೇಕು. ಅಲ್ಲದೆ ಯಾವುದೇ ಖಾಸಗಿ ಕಂಪನಿಗಳಿಗೆ ಹೋದರು ಅಲ್ಲಿ ಕನ್ನಡಿಗರಿಗೆ ಸ್ಥಾನಮಾನಗಳಿಲ್ಲ. ಅಂತ ಕಂಪನಿಗಳಲ್ಲಿ ಕನ್ನಡಿಗರಿಗಾಗಿಯೇ ಕೆಲವು ಸ್ಥಾನಗಳಲ್ಲಿ ತುಂಬಿ ಕೊಳ್ಳುವಂತಹ ವ್ಯವಸ್ಥೆ ಜಾರಿಯಾಗಬೇಕು ಇದರ ಬಗ್ಗೆ ಸೊಲ್ಲೆತ್ತದ ಸಾಹಿತಿಗಳು ಕೇವಲ ಇಂಗ್ಲಿಷ್ ವಿರೋಧಿಸಿದರೆ ಎಲ್ಲವೂ ಪರಿಹಾರ ಎಂಬಂತೆ ಚಿಂತನೆ ಮಾಡುತ್ತಾರೆ ಏಕೆ?  ಇಂಗ್ಲಿಷ್ ಬೋಧನೆಯಿಂದ ಕನ್ನಡ ನಾಶವಾಗಿ ಬಿಡುತ್ತದೆ ಎನ್ನುವುದು ಎಷ್ಟರ ಮಟ್ಟಿಗೆ ಸರಿ ಇರಬಹುದು.  ಕನ್ನಡ ಮಾತೃ ಭಾಷೆ ಯಾದರೆ ಇಂಗ್ಲಿಷ್ ವ್ಯವಹಾರ ಜ್ಞಾನಕ್ಕಾಗಿ ಕಲಿಯಲೇಬೇಕಾದ ಭಾಷೆ. ಇಂದಿನ ಸಂದರ್ಭದಲ್ಲಿ ಯಾವುದೇ ಖಾಸಗಿ ಕಂಪನಿಗಳಿಗೆ ಹೋದರೆ ಅಲ್ಲಿ ಮಾತನಾಡುವುದು ಇಂಗ್ಲಿಷ್ ನಾವು ಕನ್ನಡದಲ್ಲಿ ಮಾತನಾಡಲು ಪ್ರಾರಂಭಿಸಿದರೆ ಸಾಕು ನಮ್ಮ ವ್ಯಕ್ತಿತ್ವವನ್ನು ಒರೆಗಲ್ಲಿಗೆ ಹಚ್ಚಿಬಿಡುತ್ತಾರೆ.  ಇದು ಸಾಮಾನ್ಯ ವಿದ್ಯಾರ್ಥಿಯ ಪ್ರಶ್ನೆಯಲ್ಲ ಸಂಶೋಧನಾ ವಿದ್ಯಾರ್ಥಿಗಳಿಗೂ ಅನುಭವಕ್ಕೆ ಬಂದ ವಿಚಾರ.
ಆಂಗ್ಲ ಮಾಧ್ಯಮ ವಿಷಯಕ್ಕೇ ಬಂದರೆ, ಆಂಗ್ಲ ಶಾಲೆಗಳನ್ನು ತೆರೆಯುವುದಕ್ಕೂ, ಆಂಗ್ಲ ಭಾಷೆಯನ್ನು ಕಲಿಸುವುದಕ್ಕೂ ತುಂಬಾ ವ್ಯತ್ಯಾಸವಿದೆ. ಬದುಕಿಗೆ ಬೇಕಾದ ವಿಷಯಗಳ ಕಲಿಕೆಗೆ ಭಾಷೆ ಬೇಡ ಎನ್ನುವುದು ಸಾಹಿತಿಗಳ ಬಾಯಿಂದ ಬರುತ್ತಿರುವುದು ಸಾಮಾನ್ಯ
ಒಂದನೇ ತರಗತಿಯಿಂದಲೇ ಇಂಗ್ಲಿಷನ್ನು ಅತ್ಯಂತ ವೈಜ್ಞಾನಿಕವಾಗಿ ಕಲಿಸುವ ವ್ಯವಸ್ಥೆ ಜಾರಿಯಾಗಬೇಕು ಇಂಥ ಆರಂಭಿಕ ಇಂಗ್ಲಿಷ್ ಕಲಿಕೆಗೆ ಸರ್ಕಾರವು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನು ತುಂಬಿಕೊಳ್ಳುವ ಚಿಂತನೆ ನಡೆಸಬೇಕು. ಆಂಗ್ಲ ಪಠ್ಯಗಳನ್ನು ಬೋಧಿಸುವ, ಮಕ್ಕಳನ್ನು ಇನ್ನಷ್ಟು ತಪ್ಪು ಹಾದಿಗೆ ಎಳೆಯುವ ದೃಶ್ಯವನ್ನು ಕಂಡಿದ್ದೇವೆ.

ಕೇವಲ ಇಂಗ್ಲಿಷ್ ಮಾಧ್ಯಮ ಜಾರಿಗೆ ತಂದರೆ ಎಲ್ಲವೂ ಸರಿ ಹೋಗುತ್ತದೆ ಎಂಬುದು ಮಿತ್ಯವಾದರೂ  ನೈತಿಕ ಶಿಕ್ಷಣ ಮತ್ತು ಗುಣಮಟ್ಟದ ಪಠ್ಯಕ್ರಮವನ್ನು ಸಜ್ಜುಗೊಳಿಸಬೇಕು.  ಕನ್ನಡ ಮಾಧ್ಯಮದ ಶಾಲೆಗಳಿಗೆ ಸಂಪನ್ಮೂಲ ವ್ಯಕ್ತಿಗಳ ಕೊರತೆ ಎದ್ದು ಕಾಣುತ್ತಿರುವಾಗ ಇನ್ನೂ ಇಂಗ್ಲಿಷ್ ಮಾಧ್ಯಮ ಜಾರಿಗೆ ತಂದರೆ ಎಂಥ ಶಿಕ್ಷಣ ನಮ್ಮ ಮಕ್ಕಳಿಗೆ ತುಂಬಬಹುದು ಎಂದು ನಾವು ಗ್ರಹಿಸಿಕೊಳ್ಳಬೇಕಾಗಿದೆ. ಭಾಷೆಯೇ ಗೊತ್ತಿಲ್ಲದವರು ಶಿಕ್ಷಕರಾಗಿ, ಕನ್ನಡವನ್ನೇ ಸರಿಯಾಗಿ ಕಲಿಸದ ಶಾಲೆಗಳಿರುವಾಗ ಇಂಗ್ಲಿಷ್ ಮಾಧ್ಯಮದ ಶಾಲೆಗಳಿಂದ ಮಕ್ಕಳು ಕಲಿಯವುದಾದರೂ ಏನು ಎಂಬ ಪ್ರಶ್ನೆ ಸಹಜವಾಗಿ ಹುಟ್ಟುತ್ತದೆ.
ಕನ್ನಡ ಶಾಲೆಗಳನ್ನೇ ಸರಿಯಾಗಿ ನಡೆಸದ ಪ್ರಸ್ತುತ ವ್ಯವಸ್ಥೆಯಲ್ಲಿ ಗುಣಮಟ್ಟದ ಇಂಗ್ಲಿಷ್ ಶಾಲೆ ಸಿಗುತ್ತದೆ, ಅಲ್ಲಿ ಉತ್ತಮ ಶಿಕ್ಷಣ ಸಿಗುತ್ತದೆ ಎಂದು ನಿರೀಕ್ಷಿಸಬಹುದೆ? ಎಂಬುದು ಕೂಡ ವಿಚಾರಿಸಲೇಬೇಕಾದ ವಿಷಯ.
ಭಾಷೆಯ ಮೇಲೆ ಹಿಡಿತ ಬಂದರೆ ತಾನೆ, ಆ ಮಾಧ್ಯಮದ ಇತರೆ ವಿಷಯಗಳು ಅರ್ಥವಾಗುವುದು? ಕನ್ನಡ ಮಾಧ್ಯಮದಲ್ಲಿ ಕಲಿಸಬೇಕಾದ್ದು ಕೇವಲ ಭಾಷೆಗಾಗಿ ಮಾತ್ರವಲ್ಲ; ಕನ್ನಡದ ಬದುಕನ್ನು, ನಾವು ಹುಟ್ಟಿ ಬೆಳೆದ ಪರಿಸರ, ಸಮಾಜವನ್ನು ಅರ್ಥಮಾಡಿಕೊಳ್ಳಲು. ಸಾಮಾಜಿಕ ಅಸಮಾನತೆ, ಆಯಾ ಪ್ರದೇಶಗಳ ನುಡಿಗಟ್ಟುಗಳಲ್ಲಿ ಹೇಳಿದರೇ ಮನಸ್ಸಿಗೆ ನಾಟುತ್ತದೆ ಎಂಬುದು ಸತ್ಯ. ಅದನ್ನೇ ಇಂಗ್ಲಿಷ್‌ನಲ್ಲಿ ಹೇಳಿದಾಗಲೂ ಅಂಥದ್ದೇ ಭಾವನೆ ಬರುವಂತ ಶಿಕ್ಷಣದ ಅಗತ್ಯವಿದೆ. ಇಂಗ್ಲಿಷ್‌ನಲ್ಲೂ ಕನ್ನಡದ, ನಮ್ಮ ಸಮುದಾಯಗಳ ಕಂಪನ್ನು ಉಳಿಸಿಕೊಂಡು ಆಂಗ್ಲ ಮಾಧ್ಯಮ ಶಾಲೆಗಳನ್ನು ನಡೆಸಬಹುದು ಎಂಬ ವಿಶ್ವಾಸ ತುಂಬುವ ಕೆಲಸವಾಗಬೇಕಿದೆ.
ಈ ಇಂದಿನ ಪರಿಸ್ಥಿತಿಯಲ್ಲಿ ಆಂಗ್ಲ ಮಾಧ್ಯಮ ಶಾಲೆಗಳ ಪರವಾಗಿಯೂ ಇಲ್ಲ ಕೇವಲ ಕನ್ನಡವೊಂದೇ ಇರಲಿ ಎಂಬ ಬಿಗುಮಾನವನ್ನೂ ಹೊಂದಿಲ್ಲ. ಭಾಷೆಯ ಆಧಾರದಲ್ಲಿ ಚರ್ಚೆ ಮಾಡುವ ಬದಲು ಬದುಕಿನ ಆಧಾರದಲ್ಲಿ ಚರ್ಚೆ ಮಾಡಿದರೆ, ಮಾಧ್ಯಮದ ಆಯ್ಕೆಗಿಂತ ಗಂಭೀರವಾದ ಸಮಸ್ಯೆಗಳತ್ತಲೂ ನಾವು ಗಮನ ಹರಿಸಬಹುದು. ಉತ್ತಮ ಶಿಕ್ಷಕರಿಲ್ಲದ, ಸಂಪನ್ಮೂಲಗಳು ಸೋರಿ ಹೋಗುತ್ತಿರುವ, ನೈತಿಕ ಮೌಲ್ಯಗಳು   ಪಠ್ಯದಲ್ಲಿರದ, ಸಮಕಾಲೀನ ಬದುಕಿಗೆ ಸ್ಪಂದಿಸದ ಶಿಕ್ಷಣ ರಂಗವು ಇಂಗ್ಲಿಷ್ ಮಾಧ್ಯಮ ಶಾಲೆ ತೆರೆಯುವುದರಿಂದ ಹಿಂದೆಂದೂ ಕಂಡರಿಯದ ಮಹಾನ್ ಕ್ರಾಂತಿ ಆಗಲಿದೆ ಎಂಬ ಭ್ರಮೆಯಲ್ಲಿ ನಮ್ಮ ಸರ್ಕಾರದ ಪ್ರತಿನಿಧಿಗಳು ಇದ್ದಾರೆ.
ಪ್ರಸ್ತುತ ಸಂದರ್ಭದಲ್ಲಿ ಖಂಡಿತ ಇಂಗ್ಲಿಷ್ ಅನಿವಾರ್ಯ ಬೇರೆ ಮಾತಿಲ್ಲ, ಆದರೆ ಕನಿಷ್ಟ ಏಳನೇ ತರಗತಿಯವರೆಗಾದರೂ ಆ ರಾಜ್ಯದ ಆಡಳಿತ ಭಾಷೆಯೇ ಆಗಿರಬೇಕೆಂದು ಪ್ರತಿಯೊಬ್ಬ ಕನ್ನಡಿಗರ ಅಭಿಪ್ರಾಯ. ಇನ್ನು ಈಗಲೇ ಸರಿಯಾದ ಶಿಕ್ಷಕರಿಲ್ಲದೆ ನರಳುತ್ತಿರುವ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಏನು ಕಲಿಸಿಯಾರು ಎಂಬ ಶಂಕೆ ವ್ಯಕ್ತವಾಗುತ್ತದೆ. ನಾವೆಲ್ಲ ಒತ್ತಾಯಿಸಬೇಕಾದದ್ದು ಮೊದಲನೆಯದಾಗಿ ದೇಶಾದ್ಯಂತ ಸಮಾನ ಶಿಕ್ಷಣ ವ್ಯವಸ್ತೆ ಜಾರಿಗೊಳಿಸುವ ಬಗ್ಗೆ, ಹಾಗೇ ಪ್ರಾಥಮಿಕ ಹಂತದಿಂದಲೇ ಇಂಗ್ಲಿಷನ್ನು ಒಂದು ಭಾಷೆಯಾಗಿ ಚೆನ್ನಾಗಿ ಕಲಿಸುವ ಬಗ್ಗೆ. ಕನ್ನಡ ಮಾಧ್ಯಮದ ಸರ್ಕಾರೀ ಶಾಲೆಗಳನ್ನು ಬಿಟ್ಟು ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಆಂಗ್ಲ ಮಧ್ಯಮ ಶಾಲೆಗಳಿಗೆ ಸೇರಿಸುವುದರಿಂದ ಸರ್ಕಾರೀ ಶಾಲೆಗಳಿಗೆ ಮಕ್ಕಳ ಕೊರತೆ ಆಗಿ ಅವುಗಳನ್ನು ಮುಚ್ಚುವ ಪರಿಸ್ಥಿತಿ ಬರುವುದು ಮಾತ್ರ ಸತ್ಯ.
ಇಂದು ಹಳ್ಳಿಯ ಪೋಷಕರ ತಲೆಯಲ್ಲಿಯೂ ಆಂಗ್ಲ ಮಾಧ್ಯಮದ ವ್ಯಾಮೋಹ ಹೆಚ್ಚುತ್ತಿದೆ. ಕೇವಲ ಏಳನೆಯ ತರಗತಿ ಅಲ್ಲ ಅಂಗನವಾಡಿಯಿಂದಲೇ ಆಂಗ್ಲ ಮಾಧ್ಯಮದಲ್ಲಿ ಬೋಧಿಸುವ ವ್ಯವಸ್ಥೆ ಜಾರಿಯಾಗಬೇಕು ಎಂಬ ಕೂಗು ಕೇಳಿ ಬರುತ್ತಿರುವಾಗ ನಮ್ಮ ಸಾಹಿತಿಗಳು ಇಂಗ್ಲಿಷ್ ಮಾಧ್ಯಮವಾಗಿ ಬೇಡ ಭಾಷೆಯಾಗಿ ಕಲಿಯಲಿ ಎಂದು ಹೇಳುವುದು ನೋಡಿದರೆ ಏನು ಅರ್ಥವಾಗುತ್ತಿಲ್ಲ.

No comments:

Post a Comment