Tuesday, 7 January 2014

ಸಿಎಂ ಅನುಕೂಲಸಿಂಧು ರಾಜಕೀಯಕ್ಕೆ ಅಂಟಿಕೊಂಡರೆ?

ಕಳಂಕರಹಿತ ಸರ್ಕಾರ ನಡೆಸುತ್ತೇವೆ ಎಂದು ಶಪಥ ಮಾಡಿದ್ದ ಮುಖ್ಯಮಂತ್ರಿಗಳು ಮಾತಿಗೆ ತಪ್ಪಿದ್ದಾರೆ. ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ ಎಂಬ ಗಂಭೀರ ಆರೋಪಕ್ಕಾಗಿ ಸಚಿವರಾಗಿದ್ದ ಕಲಘಟಗಿ ಶಾಸಕ ಸಂತೋಷ್ ಲಾಡ್‌ರ ತಲೆದಂಡ ಪಡೆದು ಸರ್ಕಾರದಲ್ಲಿ ಭ್ರಷ್ಟರಿಗೆ ರಕ್ಷಣೆ ಇಲ್ಲ ಎಂಬ ಖಡಕ್ ಸಂದೇಶ ನೀಡಿದ್ದ ಸಿ.ಎಂ. ಆ ವಿಶ್ವಾಸ ಉಳಿಸಿಕೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡೆ ಕೂಡ ಸಂಶಯಕ್ಕೆ ಎಡೆ ಮಾಡಿ ಕೊಡುತ್ತಿದೆ. 
    ಯಾವ ಆರೋಪಕ್ಕಾಗಿ ಸಂತೋಷ್ ಲಾಡ್‌ರ ರಾಜೀನಾಮೆ ಪಡೆಯಲಾಗಿತ್ತೋ ಅಂತದ್ದೇ ಗಂಭೀರ ಆರೋಪ ಎದುರಿಸುತ್ತಿರುವ ಕನಕಪುರ ಶಾಸಕ ಡಿ.ಕೆ. ಶಿವಕುಮಾರ್, ಶಿವಾಜಿನಗರ ಕ್ಷೇತ್ರದ ಶಾಸಕ ಆರ್. ರೋಷನ್ ಬೇಗ್ ಅವರನ್ನು   ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ನಾಯಕರು ಈಗಾಗಲೇ ತೀವ್ರ ಅಸಮಾಧಾನಗೊಂಡಿದ್ದಾರೆ. ಕಳೆದ ಏಳು ತಿಂಗಳುಗಳಿಂದ ಸಿದ್ದರಾಮಯ್ಯನವರು ಯಾವ ನಾಯಕರೊಂದಿಗೂ ಸಂಪುಟ ವಿಸ್ತರಣೆಯ ಕುರಿತು ಚರ್ಚಿಸದೆ ಮೌನವಾಗಿದ್ದರೂ ಕೂಡ ಹೈಕಮಾಂಡ್ ಸೂಚನೆಗೆ ಮಣಿದು ಸಚಿವ ಸಂಪುಟ ವಿಸ್ತರಣೆ ಮಾಡಬೇಕಾದ ಅನಿವಾರ್ಯ ಸೃಷ್ಟಿಯಾಯಿತು. 
ಡಿ.ಕೆ.ಶಿವಕುಮಾರ್ ಮತ್ತು ರೋಷನ್ ಬೇಗ್‌ರನ್ನು ಬಿಟ್ಟು ಕ್ಲಿನ್ ಇಮೇಜ್ ಹೊಂದಿರುವ ಶಾಸಕರನ್ನು ಸಂಪುಟಕ್ಕೆ  ಸೇರಿ ಸಿಕೊಳ್ಳಲು ಸಾಧ್ಯವೇ ಎಂಬ ಪರ್ಯಾಯ ಕ್ರಮಗಳ ಕುರಿತು ತೀವ್ರ ಚರ್ಚೆ ನಡೆಸಿದರೂ, ಮುಖ್ಯಂತ್ರಿಗಳ ಕಸರತ್ತು  ಕೈಗೂಡಲಿಲ. ಇದಕ್ಕೆ ಕಾರಣ ಮುಖ್ಯಮಂತ್ರಿಗಳು ಯಾರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಮಗೆ ತೋಚಿದಂತೆ ನಿರ್ಣಯ   ಕೈಗೊಳ್ಳುತ್ತಾರೆ ಎಂಬ ರಾಜ್ಯ ನಾಯಕರ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ ಹೈಕಮಾಂಡ್ ವರಿಷ್ಠರು ಮುಖ್ಯ ಮಂತ್ರಿಗಳ ಸಲಹೆ ಸೂಚನೆಗೆ ಕ್ಯಾರೆ ಎನ್ನದೆ ಸಚಿವರನ್ನಾಗಿಸಲು ಹಸಿರು ನಿಶಾನೆ ತೋರಿಸಿದ್ದಾರೆ ಎಂಬುದು ಸರ್ವವಿಧಿತ.
ಹೈಕಮಾಂಡ್ ಸೂಚನೆಗೆ ಮಣಿದು, ಮುಖ್ಯಮಂತ್ರಿಗಳು ಸಂಪುಟ ವಿಸ್ತರಣೆಗೆ ಮುಂದಾಗುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಅದು ಇನ್ನೂ ನಿಂತಿಲ್ಲ. ಪಕ್ಷದಲ್ಲಿ ಹಿರಿಯ ಶಾಸಕರು ಬಹಿರಂಗ ಹೇಳಿಕೆಗಳ ಮೂಲಕ ಮುಖ್ಯಮಂತ್ರಿ ಸಿದ್ದ ರಾಮಯ್ಯ ಹಾಗೂ ಹೈಕಮಾಂಡ್ ನಡೆಯನ್ನೇ ಪ್ರಶ್ನಿಸುತ್ತಿದ್ದಾರೆ. ಅದರಲ್ಲೂ ಲಿಂಗಾಯಿತ ಸಮುದಾಯದ ಹಿರಿಯ ಶಾಸಕರಾದ ಬಸವರಾಜ ರಾಯರೆಡ್ಡಿ, ಕೆ.ಬಿ.ಕೋಳಿವಾಡ, ಎ.ಬಿ.ಮಾಲಕರೆಡ್ಡಿ ನೇರವಾಗಿ ತಮ್ಮ ಅಸಮಾಧಾಮವನ್ನು ಹೊರಹಾಕುತ್ತಿದ್ದಾರೆ. ನಮ್ಮನ್ನು ನಿರ್ಲಕ್ಷಿಸಿರುವುದರ ಪರಿಣಾಮ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರತಿಕೂಲ ಪರಿಣಾಮ ಎದುರಿಸಲಿದೆ ಎಂದು ಎಚ್ಚರಿಕೆಯ ಘಂಟೆಯನ್ನು ಭಾರಿಸಿದ್ದಾರೆ. ಬಲಿಜಿಗ ಸಮುದಾಯಕ್ಕೆ ಅವಕಾಶ ನೀಡುವಂತೆ ಶಾಸಕ ಮನೋಹರ ತಹಶೀಲ್ದಾರರ ಮನವಿಗೂ ಸಿಎಂ ಕ್ಯಾರೆ ಅನ್ನಲಿಲ್ಲ.  
ಇತ್ತ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಲು ತುಮಕೂರು ಜಿಲ್ಲೆಯ ಮಧುಗಿರಿ ಶಾಸಕ ಕೆ.ಎನ್. ರಾಜಣ್ಣನವರೇ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಸೋಲುವವರಿಗೆ ಟಿಕೆಟ್ ಕೊಟ್ಟು ನಿರೀಕ್ಷಿತ ಸ್ಥಾನ ಬರೆದೇ ಇದ್ದರೇ ಮುಖ್ಯಮಂತ್ರಿಗಳ ತಲೆದಂಡ ಗ್ಯಾರಂಟಿ ಎಂಬುದು ಸಿಎಂ ಸಿದ್ದರಾಮಯ್ಯ ಅವರ ಬೆಂಬಲಿಗರಲ್ಲಿ ಆತಂಕ ಮನೆ ಮಾಡಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಯಾಗುತ್ತಿದೆ. ಇದರಿಂದಾಗಿಯೇ ನಮಗೆ ಸಚಿವ ಸ್ಥಾನ ಸಿಗದಿದ್ದರೂ ಪರವಾಗಿಲ್ಲ. ಪರಮೇಶ್ವರ್ ಮಂತ್ರಿಯಾಗಬಾರದು ಎಂಬುದು ಸಿದ್ದು ಬೆಂಬಲಿಗರ ಆಸೆಯಾಗಿದೆ.
ಆದರೂ ಮುಖ್ಯಮಂತ್ರಿಗಳ ಮೇಲೆ ಅತೃಪ್ತರ ಆರೋಪ ಹೆಚ್ಚುತ್ತಿದೆ. ಅವರನ್ನು ಸಮಾಧಾನಪಡಿಸಬೇಕಾದ ಅನಿವಾರ್ಯತೆ ಸಿಎಂಗಿದೆ. ಕಳಂಕಿತರನ್ನು ಸಮರ್ಥಿಸಿಕೊಳ್ಳಬೇಕಾದ ವಿಪ್ಲವ ಒಂದು ಕಡೆಯಾದರೆ ವಿಪಕ್ಷಗಳ ಆರೋಪಕ್ಕೆ ಗುರಿ ಯಾಗಬೇಕಾದದ್ದು ಇನ್ನೊಂದು ಕಡೆ. ಇವರೆಡರ ಮಧ್ಯೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್, ರೋಷನ್ ಬೇಗ್ ಅವರನ್ನೇ ಬಳಸಿಕೊಂಡು ಅಧಿಕ ಸ್ಥಾನ ಗೆಲ್ಲಿಸಿಕೊಂಡು ಬನ್ನಿ ಎಂದು ಹಿರಿಯ ಶಾಸಕ ಕೆ.ಬಿ.ಕೋಳಿವಾಡ ಅವರು ನೇರ ಮಾತಿನಲ್ಲಿ ತಿವಿದಿದ್ದಾರೆ. ಕಳಂಕಿತ ಎಂಬ ಅಪವಾದಕ್ಕಾಗಿಯೇ ಸಚಿವ ಸಂತೋಷ್‌ಲಾಡ್‌ನ್ನು ತಲೆದಂಡ ಮಾಡಲಾಗಿತ್ತು. ಈಗ ಡಿ.ಕೆ.ಶಿವಕುಮಾರ್ ಅವರನ್ನು ಸೇರಿಸಿಕೊಂಡಿರುವ ಮುಖ್ಯಮಂತ್ರಿಗಳು ಯಾವ ಸಂದೇಶ ನೀಡುತ್ತಾರೆ ಎಂಬುದು ರಾಜಕೀಯ ವಿಶ್ಲೇಷಕರ ಪ್ರಶ್ನೆಯಾಗಿದೆ.    
ಅಕ್ರಮಗಣಿ ದಂಧೆ ನಡೆಸಿದ್ದಾರೆ ಎಂಬ ಆರೋಪಕ್ಕಾಗಿಯೇ ವಾರ್ತಾ ಸಚಿವರಾಗಿದ್ದ ಕಲಘಟಗಿ ಶಾಸಕ ಸಂತೋಷ್ ಲಾಡ್ ಅವರನ್ನು ಸಚಿವ ಸಂಪುಟದಿಂದ ಕೈಬಿಡಲಾಯಿತು. ಆದರೆ ಅಂಥದ್ದೆ ಆರೋಪ ಎದುರಿಸುತ್ತಿರುವ ಇಬ್ಬರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿರುವುದರ ಔಚಿತ್ಯವೇನು? ಭ್ರಷ್ಟಾಚಾರ ನಿರ್ಮೂಲನೆ ಕಾಂಗ್ರೆಸ್ ಬದ್ಧ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಕಾಂಗ್ರೆಸ್ ಪಕ್ಷದ ವರಿಷ್ಠರ ನಡೆ ಸಂಶಯಕ್ಕೆ ಎಡೆಯಾಗುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಗಣಿಗಾರಿಕೆ ಮತ್ತು ಭ್ರಷ್ಟಚಾರದ ವಿರುದ್ಧ ಪ್ರತಿಪಕ್ಷದ ನಾಯಕರಾಗಿದ್ದ ಇಂದಿನ ಸಿಎಂ ತೊಡೆ ತಟ್ಟಿ ಕಳಂಕಿತ ಸಚಿವರನ್ನು ಕೈಬಿಡಲು ಹಲವು ಬಾರಿ ಆಗ್ರಹಿಸಿದ್ದರು. ಬೆಂಗಳೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ಮೂಲಕ ಕಳಂಕಿ ತರನ್ನು ಕೈಬಿಡಲು ಒತ್ತಾಯಿಸಿದ್ದರು. ಆದರೆ ಇಂದು ಸಿಎಂ ಮಾಡಿರುವುದೇನು? ಅಂದಹಾಗೇ ಮುಖ್ಯಮಂತ್ರಿಗಳು ಕೂಡ ಅನುಕೂಲಸಿಂಧೂ ರಾಜಕೀಯಕ್ಕೆ ಅಂಟಿಕೊಂಡರೆ? ಇಂತಹ ಕಳಂಕಿತ ಸಚಿವರನ್ನು ಸಂಪುಟದಲ್ಲಿಟ್ಟುಕೊಂಡು ಮುಖ್ಯಮಂತ್ರಿಗಳು ಹೇಗೆ ಸಮರ್ಥಿಸಿಕೊಳ್ಳಬಲ್ಲರು? ಡಿಕೆಶಿ, ಬೇಗ್ ಅವರ ಮೇಲೆ ಆರೋಪವಿದೆ ಆದರೆ ಅಪರಾಧಿಗಳಲ್ಲ ಎಂಬ ಸಿಎಂ ಸಮರ್ಥಿಸುವುದಾದರೆ ೬ ತಿಂಗಳ ಹಿಂದೆಯೇ ಸಂಪುಟಕ್ಕೆ ಸೇರಿಸಿಕೊಳ್ಳಬಹುದಿತ್ತಲ್ಲ? ಅಂದು ಕಳಂಕಿತರೆಂದೇ ದೂರವಿಟ್ಟಿದ್ದ ಸಿಎಂ ಇಂದು ಅವರನ್ನು ಸಮರ್ಥಿಸಿಕೊಳ್ಳುತ್ತಿರುವುದು ನೋಡಿದರೆ ಮುಖ್ಯಮಂತ್ರಿಗಳದು ‘ಅನುಕೂಲಸಿಂಧು ರಾಜಕಾರಣವಲ್ಲದೆ ಮತ್ತೇನು?
ಹೈಕಮಾಂಡ್ ಆದೇಶಕ್ಕೆ ಮಣಿದಿರುವುದರ ಹಿಂದೆ ಮುಖ್ಯಮಂತ್ರಿಗಳದು ಜಾಣನಡೆ ಇದೆ ಎಂದೇ ತೋರುತ್ತ್ತಿದೆ. ಲೋಕಸಭೆ ಮಹಾಸಮರ ಹೊಸ್ತಿಲಲ್ಲಿದೆ. ಪ್ರಮುಖ ಸಮುದಾಯದವರಿಗೆ ಪ್ರಾತಿನಿಧ್ಯ ನೀಡಿದರೆ ಅನುಕೂಲವಾದಿತು ಎಂಬ ದುರಾಲೋಚನೆ ಹೈಕಮಾಂಡ್ ವರಿಷ್ಠರಿಗೆ ಇರಬಹುದು. ಆದರೆ ಸಿದ್ದರಾಮಯ್ಯ ಅವರ ನಡೆಯೇ ಬೇರೆ ಇದೆ.
ಒಂದು ವೇಳೆ ಲೋಕಸಭೆಯಲ್ಲಿ ನಿರೀಕ್ಷಿಸಿದಷ್ಟು ಸ್ಥಾನಗಳು ಗೆಲ್ಲದೆ ಹೋದರೆ ಆವಾಗ ಸಿದ್ದರಾಮಯ್ಯ ಹೈಕಮಾಂಡ್ ವಿರುದ್ಧವೇ ತಿರುಗಿ ಬೀಳುವುದಂತೂ ಗ್ಯಾರಂಟಿ, ಸಚಿವ ಸಂಪುಟದಿಂದ ಕಳಂಕಿತರನ್ನು ಹೊರಗಿಟ್ಟು ಚುನಾವಣೆ ಎದುರಿಸಿದ್ದರೆ ನಿರೀಕ್ಷಿಸಿದಷ್ಟು ಸ್ಥಾನ ಗೆಲ್ಲಬಹುದಿತ್ತು ಎಂದು ಜವಾಬ್ದಾರಿಯಿಂದ ನುಣಿಚಿಕೊಂಡರೂ ಆಶ್ಚರ್ಯವೇನಿಲ್ಲ?. ಇದಾವುದನ್ನು ಲೆಕ್ಕಿಸದೆ ಹೈಕಮಾಂಡ್ ಕೇವಲ ಗುಪ್ತಚರ ದಳದ ವರದಿ ಆಧರಿಸಿ ಪ್ರಬಲ ಸಮುದಾಯಕ್ಕೆ ಮಣೆ ಹಾಕಿದೆ ಹೊರತು ಸಾಮಾಜಿಕ ನ್ಯಾಯಕ್ಕಾಗಿ ಅಲ್ಲ.
ಇತ್ತ ಬಿಜೆಪಿಯ ನಡೆಯೇನು ಭಿನ್ನವಾಗಿಲ್ಲ. ಅದುಕೂಡ ಅನೇಕ ಆರೋಪಗಳನ್ನು ಹೊತ್ತು ಜೈಲು ಪಾಲಾಗಿದ್ದ ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ರತ್ನಗಂಬಳಿ ಹಾಸಿ ಸ್ವಾಗತಿಸಲು ತಯಾರಾಗಿದೆ. ಇದನ್ನರಿತೇ ಮುಖ್ಯಮಂತ್ರಿ ಸಿದ್ದ ರಾಮಯ್ಯ ಕಳಂಕಿತ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಂಡಿರಬಹದು ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಭ್ರಷ್ಟರಿಗೆ ಸಿಂಹಸ್ವಪ್ನವಾಗಿ ಕಾಡುತ್ತಿರುವ ಎಸ್.ಆರ್ ಹಿರೆಮಠ ಅವರು ಸರ್ಕಾರದ ಬೆನ್ನು ಬೀಳಲಿದ್ದಾರೆ. ಲೋಕಸಭಾ ಚುನಾವಣೆ ಮುಂದಿರುವಾಗ ಇದು ಪ್ರತಿಕೂಲ ಪರಿಣಾಮ ಬೀರುವ ಎಲ್ಲಾ ಲಕ್ಷಣಗಳೂ ಇವೆ. 
ಒಂದಂತೂ ಸ್ಪಷ್ಟ ಕಳಂಕಿತರು ಮತ್ತು ಭ್ರಷ್ಟ ರಾಜಕಾರಣಿಗಳನ್ನು ಜನ ಸಹಿಸಿಕೊಳ್ಳುವುದಿಲ್ಲ ಎಂಬುದನ್ನು ಇತ್ತೀಚೆಗೆ ನಡೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ರುಜುವಾತುಪಡಿಸಿದ್ದಾರೆ. ಅಂತದ್ದೇ ವಾತಾವರಣ ರಾಜ್ಯದಲ್ಲಿಯೂ ಸೃಷ್ಠಿಯಾದರೆ ಕಾಂಗ್ರೆಸ್ ಕೈಹಿಸುಕಿಕೊಳ್ಳುತ್ತಾ ಕೂರಬೇಕಾದ ಸಂದರ್ಭ ಬಂದರೂ ಆಶ್ಚರ್ಯಪಡಬೇಕಾಗಿಲ್ಲ. 
  

1 comment: