Wednesday, 22 August 2012

ಶಾಲೆಗಳ ವಿಲೀನ ಮಕ್ಕಳ ಭವಿಷ್ಯ ಹಾಳಾಗದಿರಲಿ

ಕನಿಷ್ಟ ಹಾಜರಾತಿ ಇರುವ ಕನ್ನಡ ಶಾಲೆಗಳನ್ನು ಮುಚ್ಚಲು ನೀಡಿದ್ದ ಸರಕಾರದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ರೀಟ್‌ನ್ನು ಕೋರ್ಟ್ ತಳ್ಳಿ ಹಾಕಿದೆ. ಈ ತೀರ್ಪಿನಿಂದ ಸರ್ಕಾರಕ್ಕೆ ಆನೆ ಬಲ ಬಂದಂತಾಗಿದೆ.
ಕನ್ನಡ ಶಾಲೆಗಳನ್ನು ಮುಚ್ಚಲು ಹೈಕೋರ್ಟ್ ಆದೇಶ ನೀಡಿರುವುದರಿಂದ ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದೆ. ಕಡ್ಡಾಯ ಶಿಕ್ಷಣ ಎನ್ನುವ ಘೋಷ ವಾಕ್ಯ ಒಂದಡೆಯಾದರೆ ಶಾಲೆಗಳನ್ನು ಮುಚ್ಚುವ ಸರ್ಕಾರದ ಆದೇಶ ಇನ್ನೊಂದಡೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನತೆಗೆ ಮಾಡುವ ಮೋಸವಲ್ಲವೇ?
ಸ್ಥಳೀಯವಾಗಿ ಇದ್ದ ಶಾಲೆಗಳನ್ನು ಮುಚ್ಚಿ ಸಮೀಪದ ಶಾಲೆಗಳಿಗೆ ವಿಲೀನ ಮಾಡಿರುವುದರಿಂದ ಆ ಮಕ್ಕಳು ಶಾಲೆಯಿಂದ ವಂಚಿತರಾಗುತ್ತವೆ ವಿನಃ ವಿಲೀನವಾದ ಶಾಲೆಗಳಿಗೆ ಮಕ್ಕಳು ವಿಲೀನವಾಗುತ್ತಾರೇಯೇ ಎಂಬ ಪ್ರಶ್ನೆ ಉದ್ಬವವಾಗುತ್ತದೆ. ಪಾಲಕರು ಕೂಡ ಚಿಕ್ಕ ಮಕ್ಕಳನ್ನು ಶಾಲೆಗೆ ಕಳಿಸಬೇಕಾದರೆ ಇಂದುಮುಂದು ನೋಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಗ್ರಾಮೀಣರು ಮಕ್ಕಳನ್ನು ದೂರದ ಶಾಲೆಗಳಿಗೆ ಕಳಿಸದೇ ಮನೆಯಲ್ಲಿ ಸಣ್ಣಪುಟ್ಟ ಕೆಲಸ ಮಾಡಿದರೆ ಸಾಕು ಎಂಬ ಮನೋಭಾವನೆ ಬೆಳೆಯುತ್ತದೆ.

ಆರೇಳು ವರ್ಷದ ಹಸುಗೂಸುಗಳು ನಡೆದು ಶಾಲೆಗೆ ಹೋಗುವುದು ಪ್ರಯಾಸವಾಗುತ್ತದೆ. ಇದನ್ನು ಮರೆತ ಸರ್ಕಾರ ನ್ಯಾಯಾಲಯಕ್ಕೆ ಸರಿಯಾದ ಮಾಹಿತಿ ನೀಡದೆ ಕೇವಲ ಆರ್ಥಿಕ ಹೊರೆಯನ್ನು ತಗ್ಗಿಸುವ ದೃಷ್ಟಿಯಿಂದ ಶಾಲೆಗಳ ವಿಲೀನ ಕಾರ್ಯಕ್ಕೆ ಮುಂದಾಗಿದೆ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತದೆ.
ಸರ್ಕಾರ ನ್ಯಾಯಾಲಯಕ್ಕೆ ಸೂಕ್ತ ಮಾಹಿತಿ ನೀಡದೆ ತನಗೆ ತೋಚಿದಂತೆ, ಸಂದರ್ಭಕ್ಕನುಗುಣವಾಗಿ ಉಪಯೋಗವಾಗುವ ಹಾಗೇ ಮಾಹಿತಿ ನೀಡಿದ್ದೇ ಇಂತಹ ತೀರ್ಪು ಬರಲು ಕಾರಣವಾಗಿದೆ.
ಸರ್ಕಾರದ ಈ ಮಾಹಿತಿಯನ್ನು ಕೋರ್ಟ್ ಮಾನ್ಯ ಮಾಡದೇ ಪುನಃ ಪರಿಶೀಲಿಸಿ ಮತ್ತು ಶಾಲೆಗಳನ್ನು ವಿಲೀನಗೊಳಿಸುವ ಪ್ರದೇಶದ ಜನರ ಅಭಿಪ್ರಾಯವನ್ನು ಪಡೆಯುವಂತೆ ಕೋರ್ಟ್ ನಿರ್ದೇಶನ ನೀಡಬಹುದಿತ್ತು. ಆದರೆ ನ್ಯಾಯಮೂರ್ತಿಗಳು ಅದ್ಯಾವುದನ್ನು ಪರಿಗಣಿಸದೇ ತೀರ್ಪನ್ನು ನೀಡಿದ್ದು ಕನ್ನಡಪರ ಹೋರಾಟಗಾರರಿಗೆ ಕಗ್ಗಂಟಾಗಿ ಪರಿಣಮಿಸಿದೆ. ನ್ಯಾಯಾಲಯ ಇಂತಹ ತೀರ್ಪನ್ನು ಯಾವ ಆಧಾರದ ಮೇಲೆ ನೀಡಿದೇಯೋ ಗೊತ್ತಾಗುತ್ತಿಲ್ಲ.
ಐದಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ನೆರೆಯ ಶಾಲೆಗಳೊಂದಿಗೆ ವಿಲೀನಗೊಳಿಸಲು ರಾಜ್ಯ ಸರ್ಕಾರ ಕಳೆದ ವರ್ಷ (ಸೆ.೨೪, ೨೦೧೧) ಸುತ್ತೋಲೆ ಹೊರಡಿಸಿತ್ತು. ಸರ್ಕಾರದ ಈ ನಿರ್ಧಾರದ ವಿರುದ್ಧ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಯು.ಆರ್. ಅನಂತಮೂರ್ತಿ, ಡಾ. ಗಿರೀಶ್ ಕಾರ್ನಾಡ್, ಡಾ. ಚಂದ್ರಶೇಖರ ಕಂಬಾರ, ಮತ್ತಿತರ ಸಾಹಿತಿಗಳು ಹಾಗೂ ಕನ್ನಡಪರ ಹೋರಾಟಗಾರರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಮತ್ತು ನಾಯಮೂರ್ತಿ ಬಿ.ವಿ. ನಾಗರತ್ನ, ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ರಾಜ್ಯದ ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಶೇ.೨೫ರಷ್ಟು ಸೀಟುಗಳನ್ನು ಮೀಸಲಿಡಬೇಕು. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳನ್ನು ನೆರೆಯ ಶಾಲೆಗಳಿಗೆ ದಾಖಲಿಸಿ ಗುಣಮಟ್ಟದ ಶಿಕ್ಷಣ ನೀಡುವತ್ತ ಸರ್ಕಾರ ಗಮನಹರಿಸಿದರೆ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಬೆಳೆಯಲು ಸಾಧ್ಯವಾಗುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಇದರಿಂದಾಗಿ ರಾಜ್ಯದಲ್ಲಿರುವ ಒಟ್ಟು ೩,೧೭೪ ಶಾಲೆಗಳು ನೆರೆಯ ಶಾಲೆಗಳೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆಗೆ ಇದ್ದ ಅಡ್ಡಿ ನಿವಾರಣೆಯಾಗಿದೆ. ಹಾಗೆಯೇ ಐದಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ೫೯೦ ಪ್ರಾಥಮಿಕ, ೨೭ ಮಾಧ್ಯಮಿಕ ಶಾಲೆಗಳು, ಹತ್ತಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ೨,೪೮೩ ಪ್ರಾಥಮಿಕ ಹಾಗೂ ೭೪ ಮಾಧ್ಯಮಿಕ ಶಾಲೆಗಳು ಸಮೀಪದ ಇತರ ಶಾಲೆಗಳಲ್ಲಿ ವಿಲೀನವಾಗಲಿವೆ.



ರಾಜ್ಯದಲ್ಲಿ ಅದೆಷ್ಟೋ ಸರ್ಕಾರಿ ಮತ್ತು ಮಾಧ್ಯಮಿಕ ಶಾಲೆಗಳು ವಿದ್ಯಾರ್ಥಿಗಳು ಇಲ್ಲದೆ ಸೊರಗುತ್ತವೆ ಎನ್ನುವುದನ್ನು ಮುಂದಿಟ್ಟುಕೊಂಡು ಕನ್ನಡ ಮಾಧ್ಯಮ ಶಾಲೆಗಳಿಗೆ ಬೀಗ ಹಾಕುತ್ತಿದ್ದ ಸರ್ಕಾರ ಪ್ರಸ್ತುತ ಸಂದರ್ಭದಲ್ಲಿ ಅಂತಹ ಕೆಲಸಕ್ಕೆ ಕೈ ಹಾಕದೆ. ಸಮೀಪದ ಶಾಲೆಗಳಲ್ಲಿ ವಿಲೀನ ಮಾಡಲು ಮುಂದಾ ಗಿರುವುದು ಸ್ವಾಗತಾರ್ಹವಾದರೂ ಮೇಲಿನ ವಾಸ್ತವ ಸ್ಥಿತಿಯತ್ತ ಗಮನ ಹರಿಸಿದಾಗ ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣದ ಹಕ್ಕು ಮತ್ತು ಅವಕಾಶಗಳನ್ನು ಕಸಿದುಕೊಳ್ಳುತ್ತದೆ ಎಂಬ ಶಂಕೆ ವ್ಯಕ್ತವಾಗದೇ ಇರದು. ಸರ್ಕಾರದ ಶಿಕ್ಷಣ ನೀತಿ ಗ್ರಾಮೀಣ ಪ್ರದೇಶದ ಶಾಲೆಗಳನ್ನು ಮುಚ್ಚುವಂತಹ ಕೆಟ್ಟ ಪದ್ಧತಿಗೆ ಮುನ್ನುಡಿಯಾಗದೆ ಇದ್ದರೇ ಅದೇ ನಮ್ಮ ದೈವ. ಆರ್ಥಿಕ ಹೊರೆ, ವಿದ್ಯಾರ್ಥಿಗಳ ಸಂಖ್ಯೆ ಆಧಾರದ ಮೇಲೆ ಸರ್ಕಾರ ಶಾಲೆಗಳನ್ನೇ ಮುಚ್ಚಲು ಮುಂದಾಗಿರುವುದರಿಂದ ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶದ ಶಾಲಾ ಮಕ್ಕಳಿಗೆ ದಾಖಲಾತಿ ಸಮಸ್ಯೆ ಒಂದು ಕಡೆಯಾದರೆ ಸಂಚಾರ ಸಮಸ್ಯೆ ಇನ್ನೊಂದು ಕಡೆ ಉಂಟಾಗುತ್ತದೆ. ಮತ್ತು ಮಕ್ಕಳ ಮೂಲಭೂತ ಹಕ್ಕಿಗೂ ಚ್ಯುತಿಯಾಗುತ್ತದೆ.
ವಿಲೀನಗೊಳಿಸುವ ಸರ್ಕಾರಿ ಶಾಲೆ ಮೂರು ಕಿ.ಮೀ. ವ್ಯಾಪ್ತಿಯಲ್ಲಿರಬೇಕು ಒಂದು ವೇಳೆ ಅಂತರ ದೂರಾದರೆ ಸರ್ಕಾರ ಸಾರಿಗೆ ವ್ಯವಸ್ಥೆ ಮಾಡಬೇಕು, ಒಂದು ವೇಳೇ ಕೋರ್ಟ್ ಆದೇಶ  ಉಲ್ಲಂಘಿಸಿ ಮಕ್ಕಳನ್ನು ಸಾರಿಗೆ ಸೌಲಭ್ಯದಿಂದ ವಂಚಿತರಾಗಿ ಮಾಡಿದರೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆ ನ್ಯಾಯಪೀಠ ಅರ್ಜಿದಾರಿಗೆ ಅನುಮತಿ ನೀಡಿದ್ದು ಸಮಾಧಾನ ತರುವ ವೀಷಯವಾದರೂ ತ್ವರೀತ ಗತಿಯಲ್ಲಿ ಆ ಮಕ್ಕಳಿಗೆ ಮತ್ತು ಪೋಷಕರಿಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಇದೇಯೇ?
ಸರ್ಕಾರವೇ ಸಾರಿಗೆ ವ್ಯವಸ್ಥೆ ಒದಗಿಸಬೇಕು ಎಂಬ ಭರವಸೆ ಕೋರ್ಟ್ ನೀಡಿದೆಯಾದರೂ ಇಂದಿಗೂ ಮೂಲಭೂತ ಸೌಲಭ್ಯ ಕಾಣದ ಗ್ರಾಮಗಳ ಶಾಲೆಗಳನ್ನು ಮುಚ್ಚಿದರೆ ವಿದ್ಯಾರ್ಥಿಗಳ ಪಾಡೇನು? ಹಸುಗೂಸುಗಳನ್ನು ದೂರದ ಶಾಲೆಗಳಿಗೆ ಕಳಿಸುವ ಪಾಲಕರ ಆತಂಕ ನಿವಾರಣೆ ಮಾಡುವವರು ಯಾರು? 
ಭಾರತೀಯ ಸಂವಿಧಾನದ ಪ್ರಕಾರ ಶಿಕ್ಷಣ ಪಡೆಯುವುದು ಮೂಲಭೂತ ಹಕ್ಕು ಎಂದು ಸ್ಪಷ್ಟವಾಗಿ ಹೇಳಿದೆ. ಆದರೆ ಶಿಕ್ಷಣ ಪಡೆಯುವ ದೇಗುಲವೇ ಸ್ಥಳಾಂತರ ಮಾಡುವ ಮೂಲಕ ಸಂವಿಧಾನದ ನೀತಿ ನಿಯಮಗಳನ್ನು ಉಲ್ಲಂಘಿಸಿದಂತೆ ಅಲ್ಲವೇ? ಸರ್ಕಾರಿ ಶಾಲೆಗಳನ್ನು ಮುಚ್ಚುವುದರಿಂದ ಮಕ್ಕಳ ಮೂಲಭೂತ ಹಕ್ಕಿಗೆ ಧಕ್ಕೆ ಉಂಟಾಗುವುದಿಲ್ಲವೇ?
ಕಳೆದ ವರ್ಷ ಎರಡು ಸಾವಿರ ಕನ್ನಡ ಶಾಲೆಗಳನ್ನು ಮುಚ್ಚುವ ನಿರ್ಧಾರ ತೆಗೆದುಕೊಂಡಿದ್ದ ಸರ್ಕಾರದ ವಿರುದ್ಧ ಕನ್ನಡಪರ ಹೋರಾಟಗಾರರು ಮತ್ತು ಸಾಹಿತಿಗಳು ಒಮ್ಮತದ ನಿರ್ಣಯ ತೆಗೆದುಕೊಂಡು ಹೋರಾಟ ಮಾಡಿದ ಫಲವಾಗಿ ಅಂತಹ ನಿರ್ಧಾರದಿಂದ ಹಿಂದೆ ಸರಿದಿದ್ದ ಸರ್ಕಾರ ಅವೇ ಶಾಲೆಗಳನ್ನು ವಿಲೀನಿಕರಣದ ಹೆಸರಿನಲ್ಲಿ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲು ಮುಂದಾಗಿದೆ. ಶಿಕ್ಷಣದ ದ್ವಂದ್ವ ನೀತಿಯಿಂದಾಗಿ ಪೋಷಕರು ಆತಂಕಕ್ಕೆ ಒಳಗಾಗುತ್ತಾರೆಯೇ ವಿನಃ ಸರ್ಕಾರದ ಈ ನಿರ್ಧಾರದಿಂದ ನೆಮ್ಮದಿಯ ನಿಟ್ಟುಸಿರು ಬಿಡಲು ಸಾಧ್ಯವೇ?
ಶಾಲೆಗಳ ವಿಲೀನಿಕರಣ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವರವಾಗಿ ಪರಿಣಮಿಸುತ್ತದೆ. ಹಳ್ಳಿಗಳಲ್ಲಿಯೂ ಖಾಸಗಿ ಶಾಲೆಗಳು ತಲೆ ಎತ್ತುತ್ತವೆ. ಶಾಲೆ ವಿಲೀನಿಕರಣ ಮಾಡಿದ ಸರ್ಕಾರದಿಂದಲೇ ಖಾಸಗಿ ಶಾಲೆಗಳನ್ನು ತೆರೆಯಲು ಅನುಮತಿ ಪಡೆದುಕೊಂಡು ಉತ್ತಮ ಶಿಕ್ಷಣದ (ಇಂಗ್ಲಿಷ್) ಹೆಸರಿನಲ್ಲಿ ಬಡ ಗ್ರಾಮೀಣರನ್ನು ಸುಲಿಗೆ ಮಾಡಲು ಈ ಖಾಸಗಿ ಶಿಕ್ಷಣ ಸಂಸ್ಥೆಗಳು ಮುಂದಾಗುತ್ತವೆ. ನಗರ ಶಿಕ್ಷಣಕ್ಕೆ ಸೀಮಿತವಾಗಿದ್ದ ಡೋನೇಷನ್ ಹಾವಳಿ ಗ್ರಾಮೀಣ ಪ್ರದೇಶಕ್ಕೂ ವ್ಯಾಪಿಸಿ ಬಡ ಪೋಷಕರಿಗೆ ಜೀವ ಹಿಂಡುತ್ತವೆ. ಖಾಸಗಿ ಶಾಲೆಗಳ ಹಾವಳಿ ಮತ್ತು ಪೋಷಕರ ವ್ಯಾಮೋಹಕ್ಕೆ ಕತ್ತರಿ ಹಾಕಬೇಕಾದರೆ ಸರ್ಕಾರಿ ಶಾಲೆಗಳಲ್ಲಿಯೂ ಇಂಗ್ಲಿಷ್ ಭಾಷೆಯನ್ನು ಒಂದು ಮಾಧ್ಯಮವಾಗಿ ಬೋಧಿಸಬೇಕು.
ಈಗಾಗಲೇ ಕನ್ನಡ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಕಡ್ಡಾಯ ಮಾಡಿ ಆದೇಶ ಹೊರಡಿಸಿದ ಸರ್ಕಾರದ ನಿರ್ಧಾರ ಸ್ವಾಗತಾರ್ಹವಾಗಿದೆ. ಆದರೆ ಕನ್ನಡಪರ ಹೋರಾಟಗಾರರು ಮಾಧ್ಯಮದ ಹೆಸರಿನಲ್ಲಿ ಇಂಗ್ಲಿಷ್ ಬೋಧನೆಯನ್ನು ವಿರೋಧಿಸುತ್ತಿರುವುದು ಸಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳ ಹಾವಳಿ ಮಟ್ಟ ಹಾಕಬೇಕಾದರೆ ೬ನೇ ತರಗತಿಯಿಂದಲೇ ಇಂಗ್ಲಿಷ್ ಬೋಧನೆ ಅಗತ್ಯವಾಗಿದೆ.
ಕನ್ನಡಪರ ಮಾತನಾಡುವವರು ಮಾತೃ ಭಾಷೆ ಹಿರಿಯರು ಬಿಟ್ಟು ಹೋದ ಆಸ್ತಿ ಅದನ್ನು ಸಂರಕ್ಷಣೆ ಮಾಡುವುದು ಇಂದಿನ ಅಗತ್ಯ ಎಂದು ಸಮರ್ಥಿಸುತ್ತಿದ್ದಾರೆ. ಇದು ಸತ್ಯವಾದರೂ ಮಾತೃಭಾಷೆಯ ಜೊತೆಗೆ ಜಾಗತೀಕ ಭಾಷೆಗೂ ಸ್ಥಾನಮಾನ ನೀಡೋಣ.
ಇಂದಿನ ಸ್ವರ್ಧಾತ್ಮಕ ಜಗತ್ತಿನಲ್ಲಿ ಕನ್ನಡ ಇಂಗಿಷ್ ಎಂದು ಭೇದ ಭಾವ ಮಾಡದೇ ಒಂದು ಭಾಷೆಗೆ ಅಂಟಿಕೊಂಡು ಕೌಶಲ್ಯ, ಗುಣಮಟ್ಟ ಇಲ್ಲದೇ ಹೋದರೆ ಪ್ರಯೋಜನವಿಲ್ಲ ಮಾನವ ಸಂಪನ್ಮೂಲವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕಾದರೆ ಉತ್ತಮ ಶಿಕ್ಷಣದ ಅವಶ್ಯಕತೆ ಇದೆ. ಇದ್ದ ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನೇ ಮುಚ್ಚುತ್ತಾ ಹೋದರೆ ಖಾಸಗಿ ಶಾಲೆಗಳ ಎಲ್ಲೇ ಮೆರೆ ಮೀರುತ್ತದೆ. 
ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸಾಹಿತಿಗಳು, ಚಿಂತಕರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಹೈಕೋರ್ಟ್‌ನಲ್ಲಿ ಸೋಲಾಗಿರಬಹುದು ಆದರೆ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸುವ ಹಕ್ಕು ಇದೆಯಲ್ಲ. ಅದರತ್ತ ಕನ್ನಡಪರ ಹೋರಾಟಗಾರರು ಹೆಜ್ಜೆ ಇಡಲಿ. ತೀರ್ಪು ಕನ್ನಡಿಗರ ಹಿತಾಸಕ್ತಿಗೆ ಪೂರಕವಾಗಿಯೇ ಇರುತ್ತದೆ.

No comments:

Post a Comment