Wednesday, 24 October 2012

ಕತ್ತಿಗೆ ಕಸದ ಬುಟ್ಟಿಯೇ ಲೇಸು

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕೆಂದು ಸುವರ್ಣ ವಿಧಾನಸೌಧ ಲೋಕಾರ್ಪಣೆ ಸಮಯದಲ್ಲಿ ಹೇಳಿದ್ದ ಕೃಷಿ ಸಚಿವ ಉಮೇಶ್ ಕತ್ತಿ ಮತ್ತೇ ಅದನ್ನೇ ಪುನರುಚ್ಚರಿಸಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.
ಪ್ರಾದೇಶಿಕ ಅಸಮಾನತೆ ಹೋಗಲಾಡಿಸುವ ನಿಟ್ಟಿನಲ್ಲಿ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಿಸಿದ ಬಳಿಕವೂ ಉಮೇಶ್ ಕತ್ತಿ ಒಡಕಿನ ಮಾತು ಆಡುತ್ತಿರುವುದು ವಿಪರ್ಯಾಸದ ವಿಷಯವಾಗಿದೆ.
ಅಖಂಡ ಕರ್ನಾಟಕದ ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರನ್ನು ಮರೆತು ಕೇವಲ ರಾಜಕೀಯ ದೃಷ್ಟಿಯಿಂದ ಹೇಳಿಕೆ ನೀಡುತ್ತಿರುವುದು ಜವಾಬ್ದಾರಿಯುತ ಸ್ಥಾನದಲ್ಲಿರುವ ಕತ್ತಿಯವರಿಗೆ ತಕ್ಕುದಲ್ಲ. ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ಹಿಂದುಳಿದಿದೆ ಎಂದ ಮಾತ್ರಕ್ಕೆ ಪ್ರತ್ಯೇಕ ರಾಜ್ಯವೇ ಪರಿಹಾರವಲ್ಲ ಎಂಬುದನ್ನು ಕುತ್ಸಿತ ಮನಸ್ಸಿನ ಕತ್ತಿಯವರು ಅರ್ಥಮಾಡಿಕೊಳ್ಳಬೇಕಾಗಿದೆ.
ಕರ್ನಾಟಕದ ಅವಿಭಾಜ್ಯ ಅಂಗವಾಗಿರುವ ಬೆಳಗಾವಿಯನ್ನೇ ನಮ್ಮದು ಎಂದು ಅಬ್ಬರಿಸುತ್ತಿರುವ ಮರಾಠಿಗರ ಬಗ್ಗೆ ಸೊಲ್ಲೆತ್ತದೆ ಕುತ್ಸಿತ ಮನಸ್ಸಿನ ಕತ್ತಿಯವರು ಕನ್ನಡ ನಾಡನ್ನು ಹೊಡೆಯಲು ಮುಂದಾಗಿದ್ದಾರಲ್ಲ. ಮಾತೆತ್ತಿದರೆ ಬೆಳಗಾವಿ ನಮ್ಮದು ಎಂದು ಬೊಬ್ಬೆ ಹಾಕುತ್ತಿರುವ ಮರಾಠಿಗರ ವಿರುದ್ಧ ಸೆಟೆದು ನೊಲ್ಲಬೇಕಾದ ಕತ್ತಿಯವರು ಕನ್ನಡಿಗರ ವಿರುದ್ದ ನಿಂತಿರುವುದರ ಹಿಂದಿನ ಮರ್ಮವೇನು ಎಂಬುದು ಸಂಶೋಧನೆ ಮಾಡಿ ಹೇಳಬೇಕಾಗಿಲ್ಲ.
ಸಾಮಾನ್ಯ ಜ್ಞಾನ ಇದ್ದರೂ ಸಾಕು ಅವರ ಒಳ ಮರ್ಮವನ್ನು ಅರಿಯಲು. ತಿಳಿದುಕೊಳ್ಳದೆ ಮಹಾರಾಷ್ಟ್ರದ ಕೊಲ್ಲಾಪುರ, ಮತ್ತು ಗೋವಾ ರಾಜ್ಯದ ಜಿಲ್ಲೆಗಳನ್ನು ಸೇರಿಸಿಕೊಂಡು ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಟ್ಟಿರುವ ಕತ್ತಿಯವರಿಗೆ ಸಾಮಾನ್ಯ ಜ್ಞಾನ ಬೇಡವೇ?  ಇದಕ್ಕೆ ಸಮರ್ಥನೆ ನೀಡುತ್ತಿರುವ ದಾರಿ ನೋಡಿದರೆ ಎಂಥವರಿಗೂ ನಗು ಬಾರದೆ ಇರದು. ಬೀದರ್, ಗುಲ್ಬರ್ಗ ಸೇರಿದಂತೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕು. ೨೦೨೦ರ ವೇಳೆಗೆ ಜನಸಂಖ್ಯೆ ಆಧಾರದ ಮೇಲೆ ಇನ್ನು ೫೦ ರಾಜ್ಯಗಳನ್ನು ರಚಿಸಬೇಕಾಗಬಹುದು. ಆ ಸಂದರ್ಭಕ್ಕೆ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವಾಗಿ ಘೋಷಿಸಬೇಕು ಎಂದು ಬೆಳಗಾವಿಯಲ್ಲಿ ಸುವರ್ಣವಿಧಾನಸೌಧ ಉದ್ಘಾಟನೆ ಸಂದರ್ಭದಲ್ಲಿ ಹೇಳಿ ವೇದಿಕೆಯಲ್ಲಿಯೇ ಛೀ ಮಾರಿ ಹಾಕಿಸಿಕೊಂಡಿದ್ದರು ಅದನ್ನೇ ಮತ್ತೇ ಪುನರುಚ್ಚರಿಸಿದ್ದಾರೆ. ಯಾವ ಪುರುಷಾರ್ಥಕ್ಕಾಗಿ ಮತ್ತು ಯಾರನ್ನು ಸಂತಸಲು ಈ ಹೇಳಿಕೆ ನೀಡುತ್ತಿದ್ದಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ.
ಹೇಳಿಕೆ ನೀಡಿ ವಿವಾದಕ್ಕಿಡಾಗಿರುವ ಕತ್ತಿ ಮಾತ್ರ ಇದು ನನ್ನ ಅನಿಸಿಕೆ ಅಲ್ಲ. ದೇಶದ ಬುದ್ಧಿಜೀವಿಗಳು ಹೇಳಿರುವ ಮಾತು. ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.  ಉತ್ತರ ಕರ್ನಾಟಕವನ್ನು ಪತ್ಯೇಕ ರಾಜ್ಯ ಮಾಡಬೇಕೆಂದು ಹೇಳಿಕೆ ನೀಡಿರುವ ಕೃಷಿ ಸಚಿವ ಉಮೇಶ್ ಕತ್ತಿ ಹೇಳಿಕೆಗೆ ಸಚಿವ ಸಂಪುಟದ ಸಹದ್ಯೋಗಿಗಳೇ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಅಖಂಡ ಕರ್ನಾಟಕ ಒಂದು ಶಕ್ತಿಯಾಗಿದ್ದು, ಇದರಲ್ಲಿ ಉತ್ತರ, ದಕ್ಷಿಣ ಕರ್ನಾಟಕ ಎಂಬ ಭೇದಭಾವ ತೊರೆಯಬೇಕೆಂದು ಹೇಳಿದ್ದಾರೆ. ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿ ಎಂದು ಉಮೇಶ್ ಕತ್ತಿ ನೀಡಿರುವ ಹೇಳಿಕೆ ಸರಿಯಲ್ಲ. ಮೊದಲು ಇಂತಹ ಹೇಳಿಕೆಗಳನ್ನು ಮನಸ್ಸಿನಿಂದಲೇ ಕಿತ್ತೊಗೆಯಬೇಕು. ತಾವು ಇಂತಹ ರಾಜಕೀಯ ಭಾವನೆಗಳನ್ನು ಬೆಂಬಲಿಸುವುದಿಲ್ಲ ಎಂದು ಹಲವು ಶಾಸಕರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು ಸಮಾಧಾನದ ಸಂಗತಿಯಾಗಿದೆ.
ಗುಲ್ಬರ್ಗಾ, ಬೆಳಗಾವಿ, ಬೀದರ್, ಕೊಲ್ಹಾಪುರ, ಗೋವಾ ಒಳಗೊಂಡಂತೆ ಈ ಭಾಗವನ್ನು ಪ್ರತ್ಯೇಕಗೊಳಿಸಿ ಹೊಸ ರಾಜ್ಯ ರಚನೆಯಾಗುವ ಸೂಚನೆಗಳು ಕಂಡು ಬಂದ ಹಿನ್ನೆಲೆಯಲ್ಲಿ ತಾವು ಹೇಳಿಕೆ ನೀಡಿದ್ದೇ ಹೊರತು ಇದರಲ್ಲಿ ನನ್ನ ವೈಯಕ್ತಿಕ ಹಿತಾಸಕ್ತಿ ಏನೂ ಇಲ್ಲ ಎಂದು ಮಾತು ಬದಲಿಸಿದ್ದಾರೆ. ಹಾಗೆಂದ ಮಾತ್ರಕ್ಕೆ ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯ ಹೋರಾಟಕ್ಕೆ ನೇತೃತ್ವ ವಹಿಸಿಕೊಳ್ಳುವುದಾಗಿ ನಾನು ಹೇಳಿಕೆ ನೀಡಿಲ್ಲ. ಆದರೆ, ಆ ಭಾಗದ ಸಮಗ್ರ ಅಭಿವೃದ್ದಿಗಾಗಿ ಪ್ರತ್ಯೇಕ ರಾಜ್ಯದ ಅಗತ್ಯತೆಯನ್ನು ಪ್ರತಿಪಾದಿಸಿರುವುದು ನಿಜ ಎಂದು ಹೇಳುತ್ತಿದ್ದಾರೆ.  ಈ ಹಿಂದೆ ಹೈದರಾಬಾದ್-ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಕೂಗಿನ ಧ್ವನಿ ಎದ್ದಿತ್ತು. ಸರ್ಕಾರ ಈ ಭಾಗದಲ್ಲಿ ಕೈಗೊಂಡಿರುವ ಭಾರಿ ಅಭಿವೃದ್ದಿ ಕೆಲಸಗಳಿಂದ ಪ್ರತ್ಯೇಕತೆಯ ಕೂಗು ಕ್ಷೀಣಿಸಿದೆ. ಅದೇ ರೀತಿ ಉತ್ತರ ಕರ್ನಾಟಕ ಭಾಗದಲ್ಲು ಹೆಚ್ಚಿನ ಅಭಿವೃದ್ದಿ ಯೋಜನೆಗಳು ಜಾರಿಯಾಗಬೇಕಿದೆ. ಅಖಂಡ ಕರ್ನಾಟಕ ಒಂದೇ ಎಂಬ ಭಾವನೆ ನಮ್ಮಲ್ಲಿ ಮೂಡಬೇಕು. ಉತ್ತರ ಕರ್ನಾಟಕ-ಹೈದರಾಬಾದ್ ಕರ್ನಾಟಕ ಎಂಬ ಭೇದ ಭಾವಗಳು ದೂರವಾಗಬೇಕು. ಸಮಗ್ರ ಕರ್ನಾಟಕದ ಅಭಿವೃದ್ಧಿಯಾಗಬೇಕು.

No comments:

Post a Comment