ಭಾರತದಲ್ಲಿ ಮಾಧ್ಯಮ ಸರ್ವವ್ಯಾಪಿಯಾಗಿ ಬೆಳೆದಿದೆ. ಆಧುನಿಕ ತಂತ್ರಜ್ಞಾನದ ಬದಲಾವಣೆ ಮಾಧ್ಯಮ ಬೆಳೆವಣಿಗೆಗೆ ಸಹಾಯಕವಾಗಿದೆ. ಜೊತೆಗೆ ಮಾಧ್ಯಮಗಳ ಸ್ವರೂಪ ಕಾಲಕ್ಕೆ ತಕ್ಕಂತೆ ಬದಲಾವಣಿಯಾಗುತ್ತಿದೆ. ಈ ಬೆಳವಣಿಗೆಗೆ ರಾಜಕೀಯ, ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ರಂಗಗಳಲ್ಲಿನ ಅಭಿವೃದ್ದಿ ಪ್ರಮುಖ ಕಾರಣವೆನ್ನಬಹುದು. ಸ್ವಾತಂತ್ರ್ಯ ನಂತರ ರಾಷ್ಟ್ರದ ಅಭಿವೃದ್ದಿಗಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದ ಮಾಧ್ಯಮ ನಂತರದ ದಿನಗಳಲ್ಲಿ ಉದ್ಯಮವಾಗಿ ಬೆಳೆದಿದೆ. ಈಗ ಇದು ಪ್ರಭಾವಶಾಲಿಯಾಗಿ ಬೆಳೆದಿದೆಯಲ್ಲದೆ. ಇವುಗಳ ಮೇಲೆ ಜನರ ಅವಲಂಬನೆ ಹೆಚ್ಚಿದೆ. ಇದರಿಂದಾಗಿಯೇ ಎನೂ ತೋರಿಸಿದರು ನೋಡುತ್ತಾರೆ ಎಂಬ ತಪ್ಪು ಕಲ್ಪನೆ ಇಂದು ಮಾಧ್ಯಮದಲ್ಲಿ ಇದ್ದಂತೆ ಕಂಡುಬರುತ್ತಿದೆ. ಮಾಹಿತಿ, ಮನೋರಂಜನೆ ಮತ್ತು ಶಿಕ್ಷಣ ಎಂಬ ಪಂಚ್‌ಲೈನ್ ಹಾಕಿಕೊಂಡು ಪ್ರಚಾರಕ್ಕೆ ಇಳಿದ ಮಾಧ್ಯಮಗಳು ಇಂದು ಈ ಗುರಿಗಳತ್ತ ಎಷ್ಟು ವೈಜ್ಞಾನಿಕವಾಗಿ ವೈಚಾರಿಕತೆಯ ಆಧಾರದ ಮೇಲೆ ಮತ್ತು ಪ್ರಾಮಾಣಿಕವಾಗಿ ಮಾಹಿತಿ ನೀಡುತ್ತವೆ ಎಂಬುದು ವಿಮರ್ಶಿಸಬೇಕಾಗಿದೆ.ವಿಜ್ಞಾನದ ಕೂಸಾದ ಮಾಧ್ಯಮ ಮೂಢನಂಬಿಕೆಯ ತಾಣವಾಗುತ್ತಿದೆಯೇ? ಎಂಬ ಮೂಲ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಪ್ರಜಾಪ್ರಭುತ್ವದ ನಾಲ್ಕನೆ ಸ್ಥಂಭವಾದ ಮಾಧ್ಯಮಕ್ಕೆ ಸಾಮಾಜಿಕ ಜವಾಬ್ದಾರಿ ಇದೆಯೇ? ಇತ್ತೀಚಿನ ದಿನಗಳಲ್ಲಿ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವುದು ಅವೈಜ್ಞಾನಿಕ ಮತ್ತು ಮೂಢನಂಬಿಕೆಗಳಿಗೆ ಉತ್ತೇಜನ ನೀಡುವಂತಹ ಕಾರ್ಯಕ್ರಮಗಳನ್ನು ವೈಭವಕರಿಸಿ ಪ್ರಸಾರ ಮಾಡುತ್ತಿರುವುದೆ ಇದಕ್ಕೆ ಕಾರಣವೆನ್ನಬಹುದು. ಕಳೆದ ವರ್ಷದಲ್ಲಿ ಕರ್ನಾಟಕ ಆಂಧ್ರಪ್ರದೇಶದಲ್ಲಿ ಆದ ಪ್ರಕೃತಿ ವಿಕೋಪಗಳನ್ನು ಯಥಾವತ್ ವರದಿ ಮಾಡಿ ಕೈ ತೊಳೆದುಕೊಂಡವೇ ಹೊರತು ಯಾವ ಮಾಧ್ಯಮಗಳು ಕೂಡ ಈ ವಿಕೋಪ ಯಾಕೇ ಆಗುತ್ತಿದೆ? ಇದಕ್ಕೆ ಕಾರಣಗಳೇನು? ಇದನ್ನು ತಡೆಗಟ್ಟುವುದು ಹೇಗೆ? ಜಾಗತಿಕ ತಾಪಮಾನ ಸೃಷ್ಟಿಸುತ್ತಿರುವ ಬಹುರಾಷ್ಟ್ರಿಯ ಕಂಪನಿಗಳ ಒಡೆಯರಾದ ಬಂಡವಾಳಶಾಹಿಗಳ ಬಗ್ಗೆ ಸೊಲ್ಲೆತ್ತಲಿಲ್ಲ. ಏಕೆಂದರೆ ಇದಕ್ಕೆ ಪ್ರಮುಖ ಕಾರಣ ಮಾಧ್ಯಮಗಳು ಬಂಡವಾಳಶಾಹಿಗಳ ಕೈಗೊಂಬೆಯಾಗಿರುವುದೆ ಎಂದು ಹೇಳಲಾಗುತ್ತಿದೆ.
ಪ್ರಸಕ್ತ ವರ್ಷದ ಜನೇವರಿ ೧೫ ರಂದು ಕಂಕಣ ಗ್ರಹಣ ಸಂಭವಿಸಿದಾಗ ದೃಶ್ಯ ಮಾಧ್ಯಮಗಳು ನೇರಪ್ರಸಾರ ಮಾಡಿದವು. ಒಂದು ವಾರವಿಡಿ ಗ್ರಹಣ ಕುರಿತು ಜ್ಯೋತಿಷಿಗಳ ಜೊತೆಗೆ ಮಾತುಕತೆ ನಡೆಸಿದವು. ಒಂದು ದೂರದರ್ಶನ ವಾಹಿನಿ ಖಗೋಳ ಶಾಸ್ತ್ರಜ್ಞನೊಬ್ಬನನ್ನು ಜೊತೆಗಿಟ್ಟುಕೊಂಡಿತು. ಆದರೂ ಗ್ರಹಣದ ಸಂದರ್ಭದಲ್ಲಿ ಮಹಿಳೆಯರು ಯಾವುದೇ ಕೆಲಸ ಮಾಡಬಾರದು ಅದರಲ್ಲಿಯೂ ಗರ್ಭಿಣಿಯರಿಗಂತು ಸೂರ್ಯನ ಕಿರಣಗಳು ಸಹ ಬಿಳಬಾರದು ಎಂಬ ಮೂಢನಂಬಿಕೆಗೆ ಪ್ರತ್ಯಕ್ಷವಾಗಿ ಅಲ್ಲದೆ ಇದ್ದರು ಪರೋಕ್ಷವಾಗಿ ಜ್ಯೋತಿಷಿಗಳ ವಾದಕ್ಕೆ ಮಣೆ ಹಾಕಿತು. ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ನಡೆದ ಸೂರ್ಯಗ್ರಹಣ ಸಂದರ್ಭದಲ್ಲಿ ಗುಲಬರ್ಗ ನಗರದಲ್ಲಿ ವಿಕಲಾಂಗ ಮಕ್ಕಳನ್ನು ಮಣ್ಣಲ್ಲಿ ಹೂತಿದ್ದನ್ನು ದೃಶ್ಯ ಮಾಧ್ಯಮಗಳು ಭಯಾನಕವಾಗಿ ಬಿತ್ತರಿಸಿದವೇ ವಿನಃ ಕನಿಷ್ಠ ವೈಚಾರಿಕತೆ ಮೂಡಿಸಲಿಲ್ಲ.
ಸಾಮಾಜಿಕ ಬದಲಾವಣೆಗೆ ಉತ್ತಮ ಮಾಧ್ಯಮವಾಗಬಹುದಾಗಿದ್ದ ಸಿನಿಮಾ, ಭಾರತದಲ್ಲಿ ಒಂದು ಮನರಂಜನೆ ಮಾರ್ಗವಾಗಿಯೇ ಬೆಳೆಯುತ್ತಿದೆ. ಕೆಲವೆ ಕೆಲವು ಸಿದ್ದ ಸೂತ್ರಗಳ ಗಂಭೀರ ಚಿತ್ರಗಳು ಬಂದರು ಜನರನ್ನು ತಲುಪುವಲ್ಲಿ ಅವು ವಿಫಲವಾಗುತ್ತಿವೆ. ಇಂದಿಗೂ ಅತಿರಂಜಿತ ಎನಿಸುವ ಚಿತ್ರಗಳೇ ಜನಪ್ರಿಯವಾಗಿದ್ದು ಕಂಡುಬರುತ್ತಿವೆ. ಹಾಗಾದರೆ ಸಿನಿಮಾ ತಯಾರಿಕೆಗೆ ಸಾಮಾಜಿಕ ಹೊಣೆಗಾರಿಕೆ ಅಪ್ರಸ್ತುತವೆ? ಮಾಧ್ಯಮ ಶೋತೃಗಳಿಗೆ ಒಂದು ಕಾರ್ಯಕ್ರಮ ಹಿಡಿಸಿದೆ ಎಂದ ಕೂಡಲೆ ಅವಾಸ್ತವಿಕವಾದುದನ್ನು ವೈಭವಿಕರಿಸಿ ಆ ಕಾರ್ಯಕ್ರಮಗಳನ್ನು ವಿಕ್ಷಕರ ಮೇಲೆ ಹೇರುವದು ಸರಿಯೇ? ಇದು ದೃಶ್ಯ ಮಾಧ್ಯಮದ ಒಂದು ಭಾಗವಾದರೆ ಮುದ್ರಣ ಮಾಧ್ಯಮದ ಮುಖವಾಡವೇ ಬೇರೆ.
ಸ್ಪರ್ಧೆಯ ಬರದಲ್ಲಿ ಮುದ್ರಣ ಮಾಧ್ಯಮಗಳು ಗುಣಮಟ್ಟ ಕಳೆದುಕೊಳ್ಳುತ್ತಿವೆ. ಪತ್ರಿಕೆಯಲ್ಲಿ ಸುದ್ದಿ ಪ್ರಸಾರವಾಗಬೇಕಾದರೆ ಜಾಹಿರಾತು ರೂಪದಲ್ಲಿ ಹಣಕ್ಕಾಗಿ ಸುದ್ದಿಗಳನ್ನು ಮಾರಾಟ ಮಾಡಲಾಗುತ್ತಿದೆ. ಕಳೆದ ಚುನಾವಣೆಯಲ್ಲಿ ಇದು ಸಾಬಿತಾಗಿದೆ. ಜಾಹಿರಾತು ನೀಡುವ ನೆಪದಲ್ಲಿ ಖಾಸು ಕೊಟ್ಟ ಬಾಸ್‌ಗಳು ತಮ್ಮ ಪರ ಸುದ್ದಿ ಬರೆಸುವದು ಇತ್ತಿಚಿಗೆ ಹೆಚ್ಚಾಗುತ್ತಿದೆ. ಮಾಧ್ಯಮಗಳ ಮೇಲೆ ನಂಬಿಕೆ ಇಟ್ಟ ಸಾಮಾನ್ಯ ನಾಗರಿಕನಿಗೂ ಸಂಶಯ ಪಡುವಂತೆ ಮಾಡಿದೆ.
ಸಮಾಜದ ವಿವಿಧ ಸ್ಥರದಲ್ಲಿ ನಡೆಯುವ ಭ್ರಷ್ಟಚಾರವನ್ನು ಬಯಲಿಗೆಳೆಯಬೇಕಾದ ಈ ಅಂಗ, ಭ್ರಷ್ಟಚಾರಕ್ಕೆ ಅಂಟಿಕೊಂಡರೆ ಬೇಲಿಯೆ ಎದ್ದು ಹೊಲ ಮೆಯ್ದಂತೆ ಆಗುವುದಿಲ್ಲವೆ? ಇಂತಹ ವಿವಾದಗಳು ನಮ್ಮ ಮಾಧಮ ಹೊಣೆಗಾರಿಕೆಯನ್ನು ಬುಡಮೇಲು ಮಾಡುತ್ತವೆ. ಪತ್ರಕರ್ತರೆ ತಮ್ಮ ವೃತ್ತಿ ಗೌರವಕ್ಕೆ ಕಳಂಕ ಕಟ್ಟಿಕೊಂಡಿರುವಾಗ ಪ್ರಜಾಪ್ರಭುತ್ವದ ಇತರ ಅಂಗಗಳ ಕೊಳಕನ್ನು ತೊಳೆಯಲು ಇವರಿಂದ ಸಾಧ್ಯವೇ ಎಂಬ ಪ್ರಶ್ನೆ ಸಾರ್ವಜನಿಕರದ್ದು. ಮಾಧ್ಯಮದವರು ಎಂದರೆ ತೋಚಿದ್ದನ್ನು ಗಿಚಿಕೊಂಡು ಹೊಗುವರು ಎಂಬ ಸತ್ಯ ಹೆಚ್ಚಾಗುತ್ತಿದೆ. ಮಾಧ್ಯಮಕ್ಕೆ ಎದುರಾಗಿರುವ ಸಾಂಸ್ಥಿಕ ಭ್ರಷ್ಟಚಾರದ ಸಮಸ್ಯೆಯನ್ನು ಹೊಗಲಾಡಿಸಬೇಕಾಗಿದೆ ಮಾತ್ರವಲ್ಲದೆ ಕಳೆದುಕೊಂಡ ನಂಬಿಕೆ ಪುನಃ ಪಡೆಯಬೇಕಾಗಿದೆ.
ಇಂದು ನಾಗರಿಕ ಸಮಾಜದಲ್ಲಿ ಮೌಲ್ಯಗಳ ಕುಸಿತ ಸಮಾಜ ಕಂಟಕವಾಗಿ ಪರಿಣಮಿಸಿವೆ. ಒಟ್ಟಾರೆ ಮಾಧ್ಯಮಗಳು ಕನಿಷ್ಠ ಮಟ್ಟದ ವೈಚಾರಿಕತೆಯನ್ನು ನಾಗರಿಕರಲ್ಲಿ ತುಂಬಲು ಪ್ರಯತ್ನಿಸುತ್ತಿಲ್ಲ. ಜನರ ದೌರ್ಬಲ್ಯವೆ ಬಂಡವಾಳ ಮಾಡಿಕೊಂಡು ಪರಸ್ಪರ ಸ್ವಾರ್ಥತೆಯಲ್ಲಿ ತೊಡಗಿವೆ. ಮೌಲ್ಯಗಳನ್ನು ಕಡೆಗಣಿಸಿ ಸಮಾಜದ ಸ್ವಾಸ್ಥವನ್ನು ಕೆಡಿಸುತ್ತಿರುವ ಇಂದಿನ ಮಾಧ್ಯಮಗಳಿಗೆ ಜನಪ್ರಿಯತೆಯ ಜೊತೆಗೆ ಹಣದ ಅಮಲೆರಿದೆಯಲ್ಲವೇ?
No comments:
Post a Comment